ಶನಿವಾರ, ಜುಲೈ 2, 2022
25 °C
ಒಂದೆಡೆ ಶಸ್ತ್ರಾಸ್ತ್ರ ಪೂರೈಕೆ, ಇನ್ನೊಂದು ಬದಿಯಲ್ಲಿ ಶಾಂತಿಮಂತ್ರ ಅಸಾಧ್ಯ: ರಷ್ಯಾ

‘ಇಟಲಿಯ ಶಾಂತಿಮಂತ್ರ ಕಾಲ್ಪನಿಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೀವ್‌ / ಮಾಸ್ಕೊ(ಎಪಿ/ ರಾಯಿಟರ್ಸ್): ಉಕ್ರೇನ್‌ಗಾಗಿ ಇಟಲಿ ಪ್ರಸ್ತಾಪಿಸಿರುವ ಶಾಂತಿ ಮಾತುಕತೆಯ ಯೋಜನೆ ಕೇವಲ ‘ಕಾಲ್ಪನಿಕ’ವಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ ಬುಧವಾರ ಟೀಕಿಸಿದ್ದಾರೆ.

ಇಟಲಿ ಅನುಸರಿಸಿರುವ ಕ್ರಮವನ್ನು ಪ್ರಸ್ತಾಪಿಸಿ ಅವರು ‘ನೀವು ಒಂದು ಕೈಯಿಂದ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಮತ್ತು ಇನ್ನೊಂದು ಕೈಯಲ್ಲಿ ಶಾಂತಿ ಮಂತ್ರ ಜಪಿಸುವುದರಿಂದ ಸಂಘರ್ಷ ಶಮನ ಅಸಾಧ್ಯ’ ಎಂದು ಹೇಳಿದರು. 

ಕಳೆದ ವಾರ ಇಟಲಿಯ ವಿದೇಶಾಂಗ ಸಚಿವ ಲುಯಿಗಿ ಡಿ ಮಯೊ ಅವರು ನ್ಯೂಯಾರ್ಕ್ ಭೇಟಿಯ ಸಂದರ್ಭ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರೊಂದಿಗೆ ಚರ್ಚಿಸಿ, ಉಕ್ರೇನ್‌ ಬಿಕ್ಕಟ್ಟಿಗೆ ಶಾಂತಿಮಾತುಕತೆಯ ರೂಪರೇಷೆಗಳನ್ನು ವಿವರಿಸಲಾಗಿದೆ ಎಂದು ಹೇಳಿದ್ದರು.

ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿರುವುದು ಈವರೆಗೆ ಕಂಡಿಲ್ಲ. ಆದರೆ, ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಘರ್ಷ ಶಮನವಾಗುವ ನಿರೀಕ್ಷೆಯಲ್ಲಿ ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್‌ ಇದೆ ಎಂದು ಜಖರೋವಾ ಹೇಳಿದ್ದಾರೆ. 

ರಷ್ಯಾ ಶೆಲ್‌ ದಾಳಿ: 6 ನಾಗರಿಕರ ಸಾವು:

ಉಕ್ರೇನ್‌ ಮೇಲೆ ಸೇನಾ ಕಾರ್ಯಾಚರಣೆ ಮುಂದುವರಿಸಿರುವ ರಷ್ಯಾ ಪಡೆಗಳು, ಪೂರ್ವ ಉಕ್ರೇನಿನ ಸೀವೀಯರೊದೆನೆಸ್ಕ್‌ ನಗರದ ಮೇಲೆ ನಡೆಸಿದ ಶೆಲ್‌ ದಾಳಿಯಲ್ಲಿ ಆರು ನಾಗರಿಕರು ಮೃತಪಟ್ಟಿದ್ದಾರೆ.

ಕಳೆದ 24 ತಾಸುಗಳಲ್ಲಿ ನಡೆದ ಈ ದಾಳಿಯಲ್ಲಿ ಎಂಟು ನಾಗರಿಕರೂ ಗಾಯಗೊಂಡಿದ್ದಾರೆ. ರಷ್ಯಾ ಪಡೆಗಳು ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ ಎಂದು ಲುಹಾನ್‌ಸ್ಕ್‌ ಪ್ರಾದೇಶಿಕ ಗವರ್ನರ್‌ ಸೆರಿಹಿ ಹೈದೈ ಬುಧವಾರ ತಿಳಿಸಿದ್ದಾರೆ.

‘ಡಾನ್‌ಬಾಸ್‌ನಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ರಷ್ಯಾ ಸೈನಿಕರು ಡಾನ್‌ಬಾಸ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪೂರ್ಣ ನಾಶಪಡಿಸಲು ಯತ್ನಿಸುತ್ತಿದ್ದಾರೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಕಿಡಿಕಾರಿದ್ದಾರೆ.

ಉಕ್ರೇನ್‌ನ ಬಾಖ್ಮುತ್‌ ಶಾಲೆ ಮೇಲೆ ಬಾಂಬ್‌ ದಾಳಿ ನಡೆದಾಗಿನಿಂದ ಭೀತಿಗೊಂಡಿರುವ ಸ್ಥಳೀಯ ನಿವಾಸಿಗಳು ಒಬ್ಬೊಬ್ಬರಾಗಿ ಊರು ತೊರೆಯುತ್ತಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು