ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಅಣುಸ್ಥಾವರಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹ: ರಷ್ಯಾ

Last Updated 23 ಜನವರಿ 2023, 14:15 IST
ಅಕ್ಷರ ಗಾತ್ರ

ಕೀವ್‌/ಮಾಸ್ಕೊ (ರಾಯಿಟರ್ಸ್‌): ಪಾಶ್ಚಿಮಾತ್ಯ ರಾಷ್ಟ್ರಗಳು ಪೂರೈಸಿರುವ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ ದೇಶದಾದ್ಯಂತ ಅಣುಸ್ಥಾವರಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದೆ ಎಂದು ರಷ್ಯಾದ ವಿದೇಶಿ ಗುಪ್ತಚರ ಸೇವೆ (ಎಸ್‌ವಿಆರ್‌) ಸೋಮವಾರ ಹೇಳಿದೆ.

‘ಅಮೆರಿಕ ಪೂರೈಸಿರುವ ಹಿಮಾರ್ಸ್ ರಾಕೆಟ್ ಲಾಂಚರ್‌ಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಫಿರಂಗಿ, ಮದ್ದುಗುಂಡುಗಳನ್ನು ಉಕ್ರೇನ್‌ನ ವಾಯವ್ಯದ ರಿವ್ನೆ ಅಣು ವಿದ್ಯುತ್ ಸ್ಥಾವರದಲ್ಲಿ ಉಕ್ರೇನ್‌ ಸೇನೆ ಸಂಗ್ರಹಿಸಿಟ್ಟುಕೊಂಡಿದೆ. ಈ ಸ್ಥಾವರಕ್ಕೆ ಡಿಸೆಂಬರ್‌ ಕೊನೆಯ ವಾರದಲ್ಲಿ ಶಸ್ತ್ರಾಸ್ತ್ರ ಪೂರೈಕೆಯಾಗಿದೆ’ ಎಂದು ಎಸ್‌ವಿಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್‌ ಸಂಘರ್ಷದ ಪ್ರಾರಂಭದಿಂದಲೂ ದೇಶದ ಅಣು ಸ್ಥಾವರಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ರಷ್ಯಾ ಪಡೆಗಳು ಗಮನ ಕೇಂದ್ರೀಕರಿಸಿವೆ. ಆಕ್ರಮಣ ಆರಂಭಿಸಿದ 48 ಗಂಟೆಗಳ ನಂತರ ರಷ್ಯಾ ಪಡೆಗಳು ನಿಷ್ಕ್ರಿಯವಾಗಿರುವ ಚರ್ನೊಬಿಲ್ ಅಣು ವಿದ್ಯುತ್ ಸ್ಥಾವರ ವಶಪಡಿಸಿಕೊಂಡವು. ನಂತರದ ದಿನಗಳಲ್ಲಿ ಯುರೋಪಿನ ಅತಿದೊಡ್ಡ ಝಪೊರಿಝಿಯಾ ಅಣು ಸ್ಥಾವರವನ್ನು ಸಹ ರಷ್ಯಾ ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.

ಝಪೊರಿಝಿಯಾ ಅಣುಸ್ಥಾವರದ ಮೇಲೆ ಶೆಲ್‌ ದಾಳಿ ನಡೆದಿದೆ ಎಂದು ಉಭಯ ರಾಷ್ಟ್ರಗಳು ಪರಸ್ಪರ ಆರೋಪಿಸುತ್ತಿವೆ. ಈ ಅಣು ಸ್ಥಾವರವನ್ನು ರಷ್ಯಾ ಶಸ್ತ್ರಾಸ್ತ್ರಗಳ ಗೋದಾಮು ಮಾಡಿಕೊಂಡಿದೆ ಎನ್ನುವುದು ಉಕ್ರೇನ್‌ನ ಗಂಭೀರ ಆರೋಪ.

ವಿಶ್ವಸಂಸ್ಥೆಯ ಅಣುಶಕ್ತಿ ಕಾವಲು ಸಂಸ್ಥೆ ಐಎಇ, ಅಣು ಸ್ಥಾವರಗಳ ಮೇಲಿನ ದಾಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಣು ದುರಂತ ಅಪಾಯದ ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ. ಅಣು ಸ್ಥಾವರಗಳನ್ನು ನಿಶ್ಶಸ್ತ್ರೀಕರಣ ವಲಯವಾಗಿಸಲು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT