ಸೋಮವಾರ, ಮೇ 23, 2022
28 °C

ಚೀನಾದಲ್ಲಿ ವಿಶ್ವಸಂಸ್ಥೆಯ ಮಹತ್ವದ ಹುದ್ದೆಗೇರಿದ ಸಿದ್ಧಾರ್ಥ್‌ ಚಟರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯಾಗಿರುವ ಭಾರತದ ಸಿದ್ಧಾರ್ಥ್‌ ಚಟರ್ಜಿ ಅವರು ಚೀನಾದಲ್ಲಿ ವಿಶ್ವಸಂಸ್ಥೆಯ ನಿವಾಸಿ ಸಮನ್ವಯಕಾರರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾದಲ್ಲಿ ವಿಶ್ವಸಂಸ್ಥೆಯ 27 ಏಜೆನ್ಸಿಗಳು, ನಿಧಿಗಳು ಮತ್ತು ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಮಹತ್ವದ ಹುದ್ದೆಗೆ ಚಟರ್ಜಿ ಏರಿದ್ದಾರೆ. ಇವರು ಕಳೆದ  24 ವರ್ಷಗಳಿಂದ ವಿಶ್ವಸಂಸ್ಥೆಯ ವಿವಿಧ ಶ್ರೇಣಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಗುಟೆರಸ್‌ ಅವರು ಚಟರ್ಜಿಯವರನ್ನು ಈ ಹುದ್ದೆಗೆ  ಸರ್ಕಾರದ ಅನುಮೋದನೆಯೊಂದಿಗೆ ನೇಮಿಸಿದ್ದರು. 

ಚಟರ್ಜಿಯವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಶೌರ್ಯಕ್ಕಾಗಿ ಇವರು 1995ರಲ್ಲಿ ರಾಷ್ಟ್ರಪತಿಯವರಿಂದ ಅಭಿನಂದನೆಗೆ ಪಾತ್ರರಾಗಿದ್ದರು. ಇವರು ಯುನೈಟೆಡ್ ಸ್ಟೇಟ್ಸ್‌ನ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಭಾರತದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

‘ಕಳೆದ ನಾಲ್ಕು ದಶಕಗಳಲ್ಲಿ, ಚೀನಾದಲ್ಲಿ ಘಟಿಸಿದ ಆರ್ಥಿಕ ಸುಧಾರಣೆ ಮತ್ತು ಸಾಮಾಜಿಕ ಪರಿವರ್ತನೆಗಳಿಗೆ ಇಡೀ ಜಗತ್ತು ಸಾಕ್ಷಿಯಾಗಿದೆ. ನೂರಾರು ದಶಲಕ್ಷ ಜನರನ್ನು ಆ ದೇಶ ಬಡತನದಿಂದ ಮೇಲೆತ್ತಿದೆ. ಚೀನಾ ಸಾಧಿಸಿರುವ ಈ ಪ್ರಗತಿಯನ್ನು ಕಾಪಾಡಲು ಮತ್ತು ವಿಶ್ವಸಂಸ್ಥೆಯ ದೇಶಗಳ ತಂಡದ ಭಾಗವಾಗಿ ಸರ್ಕಾರದೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ. ಜಾಗತಿಕ ಅಭಿವೃದ್ಧಿಯ ಸವಾಲುಗಳನ್ನು ನಿಭಾಯಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಚೀನಾದ ಅಪಾರ ಅನುಭವವನ್ನೂ ಹಂಚಿಕೊಳ್ಳಲಿದ್ದೇನೆ’ ಎಂದು ಚಟರ್ಜಿ ಪ್ರತಿಕ್ರಿಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು