ಸೋಮವಾರ, ಸೆಪ್ಟೆಂಬರ್ 27, 2021
22 °C

ಪಂಜ್‌ಶೀರ್ ಕಣಿವೆಗೆ ಮುಗಿಬಿದ್ದ ತಾಲಿಬಾನ್: ಪ್ರತಿರೋಧ ಪಡೆಯಿಂದ ತೀವ್ರ ಹೋರಾಟ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್: ಅಫ್ಗಾನಿಸ್ತಾನದ ಪಂಜ್‌ಶೀರ್ ಕಣಿವೆಯಲ್ಲಿ ತಾಲಿಬಾನ್‌ ಉಗ್ರರು ಮತ್ತು ತಾಲಿಬಾನ್ ಪ್ರತಿರೋಧ ಹೋರಾಟಗಾರರ ನಡುವೆ ಭಾರೀ ಸಂಘರ್ಷ ನಡೆಯುತ್ತಿದೆ.

ಶುಕ್ರವಾರ ತಾಲಿಬಾನ್‌ ನಡೆಸುತ್ತಿರುವ ಭಾರೀ ದಾಳಿಯನ್ನು ಹಿಮ್ಮೆಟ್ಟಿಸಲು ಹೋರಾಡುತ್ತಿದ್ದೇವೆ ಎಂದು ಪ್ರತಿರೋಧ ಚಳವಳಿಯ ಹೋರಾಟಗಾರರು ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಹಿಡಿತದಲ್ಲಿಲ್ಲದ ಏಕೈಕ ಪ್ರಾಂತ್ಯ ಪಂಜ್‌ಶೀರ್. ಎರಡೂ ಕಡೆಯಿಂದ ನಡೆದ ಶಾಂತಿ ಒಪ್ಪಂದದ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಹೋರಾಟ ನಡೆಯುತ್ತಿವೆ.

ಕಳೆದ ತಿಂಗಳು ಮಿಂಚಿನ ಸೇನಾ ಕಾರ್ಯಾಚರಣೆಯಲ್ಲಿ ಅಫ್ಗಾನಿಸ್ತಾನದ ಬಹುತೇಕ ಭಾಗಗಳನ್ನು ವಶಕ್ಕೆ ಪಡೆದ ತಾಲಿಬಾನ್, ತನ್ನ ಹಿಡಿತಕ್ಕೆ ಸಿಗದ ಪಂಜ್‌ಶೀರ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಹರಸಾಹಸಪಡುತ್ತಿದೆ.

ಆದರೆ, ಈ ಹೋರಾಟದಲ್ಲಿ ‘ತಾಲಿಬಾನ್‌ಗೆ ಗಮನಾರ್ಹ ಪ್ರಯೋಜನವಿದೆ’ಎಂದು ಆಸ್ಟ್ರೇಲಿಯಾ ಮೂಲದ ಆಫ್ಗಾನ್ ವಿಶ್ಲೇಷಕ ನಿಶಾಂಕ್ ಮೋಟ್ವಾನಿ ಹೇಳಿದ್ದಾರೆ. ತಾಲಿಬಾನ್‌ಗಳು ತಮ್ಮ ಇತ್ತೀಚಿನ ವಿಜಯಗಳಿಂದ ಧೈರ್ಯ ಪಡೆದಿದ್ದಾರೆ. ಅವರ ಬಳಿ ಅತ್ಯುತ್ತಮ ಶಸ್ತ್ರಾಸ್ತ್ರಗಳಿವೆ. ಅಸ್ತಿತ್ವದಲ್ಲಿದ್ದ ಆಫ್ಗಾನ್ ಸರ್ಕಾರವನ್ನು ಸುಲಭವಾಗಿ ಪತನಗೊಳಿಸಿದ ಆತ್ಮವಿಶ್ವಾಸ ಅವರ ಬಳಿ ಇದೆ ಎಂದಿದ್ದಾರೆ.

ಜೊತೆಗೆ, ಅಮೆರಿಕವು ಅಫ್ಗಾನಿಸ್ತಾನ ಸರ್ಕಾರಕ್ಕೆ ನೀಡಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮಿಲಿಟರಿ ಸೌಲಭ್ಯ ಮತ್ತು ಜೈಲಿನಿಂದ ಬಿಡುಗಡೆ ಪಡೆದ ಕೈದಿಗಳ ಬಲ ಅವರ ಜೊತೆಗಿದೆ ಎಂದಿದ್ದಾರೆ.

‘ಆತ್ಮಹತ್ಯಾ ತಂತ್ರಗಳ ಬಳಕೆ ಸೇರಿದಂತೆ ತಾಲಿಬಾನ್‌ಗಳು ಹಲವು ಪಡೆಗಳನ್ನು ಹೊಂದಿವೆ’ ಎಂದು ಮೋಟ್ವಾನಿ ಹೇಳಿದ್ದಾರೆ.

ತಾಲಿಬಾನ್ ವಿರೋಧಿ ಸೇನಾ ಹೋರಾಟಗಾರರು ಮತ್ತು ಮಾಜಿ ಆಫ್ಗಾನ್ ಭದ್ರತಾ ಪಡೆಗಳಿಂದ ಕೂಡಿದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್‌ಆರ್‌ಎಫ್)ನ ಹೋರಾಟಗಾರರು, ಕಾಬೂಲ್‌ನ ಉತ್ತರಕ್ಕೆ 80 ಕಿಲೋಮೀಟರ್ (50 ಮೈಲಿ) ದೂರದಲ್ಲಿರುವ ಕಣಿವೆಯಲ್ಲಿ ಗಮನಾರ್ಹ ಶಸ್ತ್ರಾಸ್ತ್ರ ಸಂಗ್ರಹವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ, ಹಿರಿಯ ತಾಲಿಬಾನ್ ಅಧಿಕಾರಿ ಅಮೀರ್ ಖಾನ್ ಮುಟ್ಟಾಕಿ, ತಮ್ಮ ಪಡೆಗಳು ಕಣಿವೆಯನ್ನು ಸುತ್ತುವರೆದಿವೆ ಎಂದು ತಿಳಿಸಲು ಆಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದರು. ಪಂಜ್‌ಶೀರ್‌ನ ಜನರು ಹೋರಾಟಗಾರರಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಹೇಳಲು ಕರೆ ನೀಡಿದ್ದರು.

ಎಚ್ಚರಿಕೆ ನೀಡಿದ ಕೆಲವು ಗಂಟೆಗಳ ನಂತರ, ತಾಲಿಬಾನ್ ಪಡೆಗಳು ಪಂಜ್‌ಶೀರ್‌ನ ದಕ್ಷಿಣದ ಭಾಗ ಕಪಿಸಾದಿಂದ, ಖವಾಕ್ ಪಾಸ್‌ನಿಂದ ಕಣಿವೆಯ ಪಶ್ಚಿಮಕ್ಕೆ ಹೊಸ ದಾಳಿಗಳನ್ನು ಆರಂಭಿಸಿವೆ.

ಎರಡೂ ಕಡೆಯಲ್ಲೂ ಭಾರೀ ನಷ್ಟ ಸಂಭವಿಸಿದೆ ಎಂದು ವರದಿಯಾಗಿವೆ. ಕಣಿವೆಯಲ್ಲಿ ಸಂವಹನ ಅತ್ಯಂತ ದುಸ್ತರವಾಗಿದೆ.

‘ಶುಕ್ರವಾರ ರಾತ್ರೋರಾತ್ರಿ ತಾಲಿಬಾನ್ ಪಡೆಗಳಿಂದ ಭಾರೀ ದಾಳಿ ನಡೆದಿದೆ. ಪಂಜ್‌ಶೀರ್‌ನಲ್ಲಿ ಭಾರೀ ಹೋರಾಟ ನಡೆಯುತ್ತಿದೆ. ಮಸೂದ್ ಕಣಿವೆಯನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ’ ಎಂದುಎನ್‌ಆರ್‌ಎಫ್‌ನ ವಕ್ತಾರ ಅಲಿ ಮೈಸಮ್ ನಜಾರಿ ಹೇಳಿದ್ದಾರೆ.

ಹೋರಾಟದ ಪ್ರಮುಖ ನಾಯಕ ಅಹ್ಮದ್ ಮಸೂದ್ ಅವರ ಜೊತೆ ವಕ್ತಾರರು ನಿಕಟ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು