ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ಕೊನೆ: ಅಫ್ಗನ್‌ ಈಗ ಭೀತಿಯ ಮನೆ, ತಾಲಿಬಾನ್‌ ಕೈಗೆ ದೇಶದ ಚುಕ್ಕಾಣಿ

20 ವರ್ಷಗಳ ಸಮರ ಮುಗಿಸಿ ಮರಳಿದ ಅಮೆರಿಕ, ನ್ಯಾಟೊ ಪಡೆ
Last Updated 31 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಕಾಬೂಲ್‌: ಅಮೆರಿಕದ ಕೊನೆಯ ಯುದ್ಧ ವಿಮಾನವು ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವುದರೊಂದಿಗೆ ಎರಡು ದಶಕಗಳ ಯುದ್ಧವೊಂದು ಕೊನೆಗೊಂಡಿದೆ. ತಾಲಿಬಾನ್‌ ಸಂಘಟನೆಗೆ ಗೆಲುವಾಗಿದೆ ಮತ್ತು ಈ ಮೂಲಕ ಮತ್ತೊಂದು ಅವಧಿಯ ಅನಿಶ್ಚಿತ ಸ್ಥಿತಿಯು ಅಫ್ಗಾನಿಸ್ತಾನದ ಜನರಿಗೆ ಎದುರಾಗಿದೆ.

1996–2001ರ ಅವಧಿಯಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಳ್ವಿಕೆ ಇತ್ತು. ಆಗ ಜಾರಿಯಲ್ಲಿದ್ದ ಕಠಿಣ ನಿಯಮಗಳು, ತಾಲಿಬಾನ್‌ ವಿರೋಧಿಗಳು ಅನುಭವಿಸಬೇಕಾಗಿ ಬಂದಿದ್ದ ಕ್ರೌರ್ಯ, ಮಹಿಳೆಯರ ಹಕ್ಕುಗಳ ದಮನವನ್ನು ಜನರು ಈಗಲೂ ಮರೆತಿಲ್ಲ.

ಕೊನೆಗೂ ಯುದ್ಧ ನಿಂತಿತಲ್ಲ ಎಂದು ಅಫ್ಗನ್ನರು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ನಿರಾಳರಾಗಿರುವುದು ಹೌದು. ಆದರೆ, ಯುದ್ಧ ಮತ್ತು ಬರಗಾಲವು ಸೃಷ್ಟಿಸಿರುವ ಆರ್ಥಿಕ, ರಾಜಕೀಯ ಮತ್ತು ಭದ್ರತಾ ಸವಾಲುಗಳು ಜನರನ್ನು ದೀರ್ಘ ಕಾಲ ಕಾಡಲಿದೆ.

ಹೊಸ ಆಳ್ವಿಕೆಯು ಹಿಂದಿನಂತೆ ಇರುವುದಿಲ್ಲ ಎಂಬ ಭರವಸೆಯನ್ನು ತಾಲಿಬಾನ್‌ ನೀಡಿದೆ. ಆದರೆ, ನೀತಿಯ ಮಟ್ಟದ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಹಿಂದಿಗಿಂತ ಸೌಮ್ಯ ಆಳ್ವಿಕೆ, ವಿರೋಧಿಗಳಿಗೆ ಕ್ಷಮಾದಾನ, ಮಹಿಳೆಯರು ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಮುಂತಾದ ಭರವಸೆಗಳನ್ನು ತಾಲಿಬಾನ್‌ ನೀಡಿದೆ. ಅಫ್ಗಾನಿಸ್ತಾನವನ್ನು ಉಗ್ರರು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ, ತನಗೆ ಅಂತರರಾಷ್ಟ್ರೀಯ ಮನ್ನಣೆ ಬೇಕು ಎಂದೂ ತಾಲಿಬಾನ್‌ ಹೇಳಿದೆ. ಅಮೆರಿಕದ ತೆರವು ಕಾರ್ಯಾಚರಣೆ ಒಪ್ಪಂದದ ಪ್ರಮುಖ ಅಂಶ ಇದು ಎನ್ನಲಾಗಿದೆ.

ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸಲಾಗುವುದು. ಹಾಗಾಗಿ, ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಪಂಜ್‌ಶಿರ್‌ ಕಣಿವೆಯ ನಾಯಕರ ಜತೆಗೆ ಮಾತುಕತೆಗೆ ತಾಲಿಬಾನ್‌ ಮುಂದಾಗಿದೆ ಎನ್ನಲಾಗಿದೆ. ಹಝರಾ ಸಮುದಾಯದ ಜತೆಗೆ ಮಾತುಕತೆಗೂ ಪ್ರತಿನಿಧಿಗಳನ್ನು ಕಳುಹಿಸಲಾಗಿದೆ. ಮೊದಲ ಅವಧಿಯಲ್ಲಿ, ಶಿಯಾ ಪಂಗಡದ ಈ ಸಮುದಾಯದ ಜನರ ಹತ್ಯಾಕಾಂಡವನ್ನೇ ತಾಲಿಬಾನ್‌ ನಡೆಸಿತ್ತು. ಆದರೆ, ಈ ಭರವಸೆಗಳನ್ನು ಅಫ್ಗಾನಿಸ್ತಾನದ ಜನರು ನಂಬಿಲ್ಲ. ಜನರ ಮನದಲ್ಲಿರುವ ಭೀತಿ ಮರೆಯಾಗಿಲ್ಲ. ತಾಲಿಬಾನ್‌ ಆಳ್ವಿಕೆಯಿಂದ ತಪ್ಪಿಸಿಕೊಳ್ಳುವ ಯೋಚನೆಯಲ್ಲಿ ಸಾವಿರಾರು ಜನರು ಇದ್ದಾರೆ. ಮಹಿಳೆಯರಲ್ಲಿ ಅಪಾರ ಭೀತಿ ಮನೆ ಮಾಡಿದೆ.

ಪತ್ರಕರ್ತರು ಮತ್ತು ಮಾನವ ಹಕ್ಕು ಹೋರಾಟಗಾರರು ಸೇರಿದಂತೆ ಹಲವರು ಇನ್ನೂ ಅಫ್ಗಾನಿಸ್ತಾನದಲ್ಲಿ ಇದ್ದಾರೆ. ಇವರೆಲ್ಲರಲ್ಲಿಯೂ ಭೀತಿ ಇದೆ.

ತಾಲಿಬಾನ್‌ ಈಗ ಹೆಚ್ಚು ಶಕ್ತಿಶಾಲಿ
1996ರಲ್ಲಿ ಅಧಿಕಾರ ವಹಿಸಿಕೊಂಡ ಸ್ಥಿತಿಗೆ ಹೋಲಿಸಿದರೆ ತಾಲಿಬಾನ್‌ ಈಗ ಹೆಚ್ಚು ಪ್ರಬಲವಾಗಿದೆ. ಪ್ರಾದೇಶಿಕ ಮುಖಂಡರಾದ ಅಬ್ದುಲ್‌ ರಶೀದ್ ದೋಸ್ತಂ ಮತ್ತು‍ ಇಸ್ಮಾಯಿಲ್‌ ಖಾನ್‌ ಸೇರಿ, ತಾಲಿಬಾನ್‌ನ ಅತ್ಯಂತ ಕಟು ವಿರೋಧಿಗಳು ದೇಶ ತೊರೆದಿದ್ದಾರೆ ಅಥವಾ ಸೆರೆ ಸಿಕ್ಕಿದ್ದಾರೆ. ಪಂಜ್‌ಶಿರ್‌ ಪ್ರಾಂತ್ಯದಲ್ಲಿ ಭಾರಿ ಪ್ರತಿರೋಧ ಇದೆ. ಆದರೆ, ಇಲ್ಲಿನ ನಾಯಕರ ಜತೆಗೆ ಸಂಧಾನ ಸಾಧ್ಯವಾಗಬಹುದು ಎನ್ನಲಾಗಿದೆ.

ಇಸ್ಲಾಮಿಕ್‌ ಸ್ಟೇಟ್‌ನ ಅಫ್ಗಾನಿಸ್ತಾನ ಘಟಕವು ಮಾತ್ರ ತಾಲಿಬಾನ್‌ ವಿರುದ್ಧ ಸಮರಕ್ಕೆ ಸಜ್ಜಾಗಿದೆ. ಇದು ಇಡೀ ದೇಶಕ್ಕೆ ಮಾರಕವಾಗಿ ಪರಿಣಮಿಸಬಹುದು. ಉಗ್ರರ ಸ್ಥಳೀಯ ಗುಂಪುಗಳನ್ನು ಚೆನ್ನಾಗಿ ನೋಡಿಕೊಳ್ಳದೇ ಇದ್ದರೆ ಈ ಗುಂಪುಗಳು ತಾಲಿಬಾನ್‌ ಮೇಲೆ ತಿರುಗಿ ಬೀಳುವ ಸಾಧ್ಯತೆ ಇದೆ.

ಪಾಕ್‌, ಚೀನಾ ಜತೆ ಒಪ್ಪಂದ
ಈ ಪ್ರದೇಶದ ದೇಶಗಳಾದ ಪಾಕಿಸ್ತಾನ, ಇರಾನ್‌, ರಷ್ಯಾ ಮತ್ತು ಚೀನಾದ ಜತೆಗೆ ಕಾರ್ಯನಿರ್ವಹಣಾ ಒಪ್ಪಂದವನ್ನು ತಾಲಿಬಾನ್‌ ಮಾಡಿಕೊಂಡಿದೆ. ಆದರೆ, ಅಂತರರಾಷ್ಟ್ರೀಯ ಮಾನ್ಯತೆಯು ತಾಲಿಬಾನ್‌ ನೇತೃತ್ವದ ಸರ್ಕಾರಕ್ಕೆ ತಕ್ಷಣವೇ ಸಿಗುವ ಸಾಧ್ಯತೆ ಕಡಿಮೆ.

ತಾಲಿಬಾನ್‌ ತನ್ನ ಕೃತ್ಯಗಳ ಮೂಲಕ ಮಾನ್ಯತೆ ಪಡೆದುಕೊಳ್ಳಬೇಕು. ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳನ್ನು ಗೌರವಿಸಬೇಕು. ಅಫ್ಗಾನಿಸ್ತಾನದಿಂದ ಹೊರ ಹೋಗಲು ಬಯಸುವವರಿಗೆ ಅವಕಾಶ ಒದಗಿಸಬೇಕು ಎಂದು ಅಮೆರಿಕ ನೇತೃತ್ವದ ಪಶ್ಚಿಮದ ದೇಶಗಳ ಗುಂಪು ಹೇಳಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸೇರಿದಂತೆ ಜಾಗತಿಕ ಮಟ್ಟದ ಹಲವು ಸಂಸ್ಥೆಗಳು ಅಫ್ಗಾನಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ಸ್ಥಗಿತ ಮಾಡಿವೆ. ಅಫ್ಗಾನಿಸ್ತಾನವು ಅಮೆರಿಕದಲ್ಲಿ ಇರಿಸಿದ್ದ ಮೀಸಲು ನಿಧಿಯನ್ನು ಕೂಡ ಸ್ಥಗಿತ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT