ಬುಧವಾರ, ಮೇ 25, 2022
31 °C

ಶ್ರೀಲಂಕಾ: ಜನರ ಹೋರಾಟಕ್ಕೆ ಕ್ರಿಕೆಟಿಗರ ಬೆಂಬಲ

ಎಎಫ್‌‍ಪಿ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು, ಶ್ರೀಲಂಕಾ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿರುವ ಜನರಿಗೆ ಶ್ರೀಲಂಕಾದ ಹಲವು ಕ್ರಿಕೆಟಿಗರು ಬೆಂಬಲ ಘೋಷಿಸಿದ್ದಾರೆ. ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿರುವ ಮಾಜಿ ಮತ್ತು ಹಾಲಿ ಕ್ರಿಕೆಟಿಗರು, ಎಲ್ಲಾ ಸಂಸದರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಶ್ರೀಲಂಕಾವು 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಇದೇ ಮೊದಲ ಬಾರಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಕರ್ಫ್ಯೂ ಹೇರಿದೆ ಮತ್ತು ಜನರನ್ನು ನಿಯಂತ್ರಿಸಲು ಸೇನೆಯನ್ನು ನಿಯೋಜಿಸಿದೆ. ಹೀಗಿದ್ದೂ ಜನರು ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಕೋಚ್ ಆಗಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಅವರು, ‘ನಿಜವಾದ ನಾಯಕರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ.
ಸಂಕಷ್ಟವನ್ನು ಅನುಭವಿಸುತ್ತಿರುವ ದೇಶದ ಜನರನ್ನು ರಕ್ಷಿಸುವ ತುರ್ತು ಇದೆ. ಸಂಸದರು ರಾಜೀನಾಮೆ ನೀಡಿ, ಹೊಸ ತಂಡಕ್ಕೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಆಗಿರುವ ಶ್ರೀಲಂಕಾದ ಭಾನುಕಾ ರಾಜಪಕ್ಸೆ ಅವರು, ‘ನಮ್ಮ ನೆಲದಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ, ನಮ್ಮ ಜನರು ದಿನೇ ದಿನೇ ಅನುಭವಿಸುತ್ತಿರುವ ನೋವು ನಮಗೆ ಗೊತ್ತಾಗುತ್ತಿದೆ. ನಮ್ಮ ಜನರ ಆಕ್ರೋಶ ಗೊತ್ತಾಗುತ್ತಿದೆ’ ಎಂದು ಹೇಳಿದ್ದಾರೆ.

ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರ ಪತ್ನಿ ಯಾಹೆಲಿ ಅವರು ಕೊಲಂಬೊದಲ್ಲಿನ ಇಂಡಿಪೆಂಡೆನ್ಸ್ ಸ್ಕ್ವೇರ್‌ನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ‘ದೇಶದ ಇಂದಿನ ಆರ್ಥಿಕ ಬಿಕ್ಕಟ್ಟಿಗೆ 225 ಸಂಸದರೇ ಕಾರಣ. ದೇಶದ ಯುವಜನರ ಭವಿಷ್ಯವನ್ನು ಈ ಸಂಸದರು ಧ್ವಂಸ ಮಾಡಿದ್ದಾರೆ. ಯುವಜನರ ಪರವಾಗಿ ಹೋರಾಟ ನಡೆಸಲು ಇಲ್ಲಿಗೆ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಕುಮಾರ ಸಂಗಕ್ಕಾರ ಅವರೂ ಹೋರಾಟವನ್ನು ಬೆಂಬಲಿಸಿದ್ದಾರೆ. ‘ಪ್ರತಿದಿನವೂ ಜನರು ಪಡುತ್ತಿರುವ ಕಷ್ಟವನ್ನು ನೋಡಿದರೆ, ಹೃದಯ ಒಡೆದುಹೋಗುತ್ತದೆ. ಆದರೆ ಜನರ ಆಕ್ರೋಶಕ್ಕೆ, ಕೆಲವರು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನೂ ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರೀಯ ಬ್ಯಾಂಕ್‌ ಗವರ್ನರ್‌ ರಾಜೀನಾಮೆ

ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್‌ನ ಗವರ್ನರ್‌ ಅಜಿತ್‌ ನಿವಾರ್ಡ್ ಕಬ್ರಾಲ್‌ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಆರ್ಥಿಕ ಬಿಕ್ಕಟ್ಟಿನ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ತೀವ್ರವಾದ ನಡುವೆಯೇ ಈ ಬೆಳವಣಿಗೆ ನಡೆದಿದೆ. 

ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ಮಹಿಂದ ರಾಜಪಕ್ಸ ಹೊರತಾಗಿ ಶ್ರೀಲಂಕಾ ಸಂಪುಟದ ಎಲ್ಲಾ ಸದಸ್ಯರು ತಮ್ಮ ಸ್ಥಾನಗಳಿಗೆ ಭಾನುವಾರ ರಾಜೀನಾಮೆ ನೀಡಿದ ಬೆನ್ನಲ್ಲೇ ಅಜಿತ್‌ ಅವರೂ ರಾಜೀನಾಮೆ ನೀಡಿದ್ದಾರೆ. 

ಟ್ವೀಟ್‌ ಮೂಲಕ ಕಾಬ್ರಾಲ್‌ ಅವರು ರಾಜೀನಾಮೆಯನ್ನು ಘೋಷಿಸಿದ್ದಾರೆ. ‘ಸಂಪುಟದ ಎಲ್ಲಾ ಸಚಿವರು ರಾಜಿನಾಮೆ ನೀಡುತ್ತಿರುವ ಸಂದರ್ಭದಲ್ಲಿ, ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್‌ ಗವರ್ನರ್‌ ಹುದ್ದೆಗೆ ರಾಜೀನಾಮೆಯನ್ನು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಸಲ್ಲಿಸಿದ್ದೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಏಳು ತಿಂಗಳ ಹಿಂದಷ್ಟೇ ಅವರು ಈ ಹುದ್ದೆಗೇರಿದ್ದರು.

ಮಾಜಿ ಹಣಕಾಸು ಸಚಿವರೂ ಆಗಿರುವ ಕಬ್ರಾಲ್‌ ಅವರು 2006ರಿಂದ 2015ರ ಅವಧಿಗೆ ಗವರ್ನರ್‌ ಆಗಿದ್ದರು. 2021ರಲ್ಲಿ ಎರಡನೇ ಬಾರಿಗೆ ಗವರ್ನರ್‌ ಹುದ್ದೆಗೇರಿದ್ದರು. ಈ ಅವಧಿಯಲ್ಲಿ ಅವರು, ವಿದೇಶಿ ಸಾಲದ ಮೇಲೆ ಶ್ರೀಲಂಕಾಕ್ಕೆ ಇರುವ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದರು ಮತ್ತು ಶ್ರೀಲಂಕಾದ ಆರ್ಥಿಕತೆ ಕುಸಿತದ ನಡುವೆಯೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್‌) ಆರ್ಥಿಕ ನೆರವು ಪಡೆಯಲು ನಿರಾಕರಿಸಿದ್ದರು.

***

ಈ ದೇಶದ ಆರ್ಥಿಕತೆಯನ್ನು ನಿಯಂತ್ರಿಸುತ್ತಿರುವ ಕೆಲವೇ ಮಂದಿ, ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅಂತಹವರು ಅಧಿಕಾರದಿಂದ ಕೆಳಗಿಳಿಯಬೇಕು.

– ಮಹೇಲಾ ಜಯವರ್ಧನೆ, ಶ್ರೀಲಂಕಾ ಟೆಸ್ಟ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು