ಸೋಮವಾರ, ಸೆಪ್ಟೆಂಬರ್ 26, 2022
22 °C

ಚೀನಾದಲ್ಲಿ ಉಯಿಗರ್ ಮುಸ್ಲಿಮರಿಗೆ ಚಿತ್ರಹಿಂಸೆ, ಲೈಂಗಿಕ ಕಿರುಕುಳ: ವಿಶ್ವಸಂಸ್ಥೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಜಿನಿವಾ: ಚೀನಾದ ಷಿನ್‌ಜಿಯಾಂಗ್‌ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಮಿಚೆಲ್ ಬ್ಯಾಚೆಲೆಟ್ ಅವರು ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿ ಮುಗಿಯುವ 13 ನಿಮಿಷಗಳ ಮೊದಲು (ಬುಧವಾರ ರಾತ್ರಿ 11.47ಕ್ಕೆ) ಚೀನಾಗೆ ಸಂಬಂಧಿಸಿದ ವರದಿಯನ್ನು ಜಿನಿವಾದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ವರದಿಯನ್ನು ಕಳೆದ ಒಂದು ವರ್ಷದಿಂದ ತಯಾರಿಸಲಾಗಿದೆ.

ಚಿಲಿ ದೇಶದ ಮಾಜಿ ಅಧ್ಯಕ್ಷರೂ ಆಗಿರುವ ಮಿಚೆಲ್‌, ಬೀಜಿಂಗ್‌ನ ತೀವ್ರ ಒತ್ತಡದ ನಡುವೆಯೂ ವರದಿಯನ್ನು ಪ್ರಕಟಿಸಿದ್ದಾರೆ.

'ನಾನು ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ವರದಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆ. ಅದನ್ನು ಮಾಡಿದ್ದೇನೆ' ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

'ಇದು ಗಂಭೀರವಾದ ವಿಚಾರವಾಗಿದೆ. ಚೀನಾದ ಉನ್ನತ ಮತ್ತು ಪ್ರಾದೇಶಿಕ ಆಡಳಿತಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದೆ' ಎಂದು ಹೇಳಿದ್ದಾರೆ.

ಷಿನ್‌ಜಿಯಾಂಗ್‌ ಪ್ರದೇಶದಲ್ಲಿ ಉಯಿಗರ್‌ ಹಾಗೂ ಇತರ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 10 ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂಬ ಆರೋಪಗಳು ಕಳೆದ ಒಂದು ವರ್ಷದಿಂದಲೂ ಚೀನಾ ವಿರುದ್ಧ ಕೇಳಿಬಂದಿವೆ.

ಆದರೆ ಚೀನಾ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಬದಲಾಗಿ, ಉಗ್ರವಾದವನ್ನು ಹತ್ತಿಕ್ಕಲು ಷಿನ್‌ಜಿಯಾಂಗ್‌ನಲ್ಲಿ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವುದಾಗಿ ಪ್ರತಿಪಾದಿಸಿದೆ.

ಷಿನ್‌ಜಿಯಾಂಗ್‌ ಉಯಿಗರ್‌ ಸ್ವಾಯತ್ತ ಪ್ರದೇಶದಲ್ಲಿನ (ಎಕ್ಸ್‌ಯುಎಆರ್‌) ಪರಿಸ್ಥಿತಿ ಅವಲೋಕನದ ಸಲುವಾಗಿ ಸಂಪೂರ್ಣ ವರದಿ ಸಂಗ್ರಹಿಸಲು ಮಿಚೆಲ್‌ ನಿರ್ಧರಿಸಿದ್ದರು.

ಅದರಂತೆ ತಯಾರಿಸಲಾಗಿರುವ ವರದಿಯಲ್ಲಿ, ಸರ್ಕಾರವು ಭಯೋತ್ಪಾದನೆ ನಿಗ್ರಹ ಮತ್ತು ಉಗ್ರವಾದದ ವಿರುದ್ಧದ ಕಾರ್ಯಾಚರಣೆಗಳನ್ನು ಅನುಷ್ಠಾನಗೊಳಿಸುವ ವೇಳೆ ಎಕ್ಸ್‌ಯುಎಆರ್‌ನಲ್ಲಿ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಚೀನಾ ಹೇಳಿಕೊಳ್ಳುತ್ತಿರುವ 'ವೃತ್ತಿಪರ ತರಬೇತಿ ಕೇಂದ್ರ'ಗಳಲ್ಲಿ ಇರುವವರ ಚಿಕಿತ್ಸೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

'ಬಲವಂತವಾಗಿ ವೈದ್ಯಕೀಯ ಚಿಕಿತ್ಸೆಗಳು, ಚಿತ್ರ ಹಿಂಸೆ ನೀಡಲಾಗುತ್ತಿದೆ. ಲೈಂಗಿಕ ಕಿರುಕುಳ ಹಾಗೂ ಲಿಂಗಾಧಾರಿತ ದೌರ್ಜ್ಯವೂ ನಡೆಯುತ್ತಿದೆ ಎಂಬ ಆರೋಪಗಳು ವಿಶ್ವಾಸಾರ್ಹವಾಗಿವೆ' ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು