ಮಂಗಳವಾರ, ಜನವರಿ 19, 2021
25 °C
ಭಾರತದ ಮಾಹಿತಿ ತಂತ್ರಜ್ಞಾನ ವೃತ್ತಿಪರರ ಮೇಲೆ ಪರಿಣಾಮ

ಎಚ್‌–1ಬಿ ವೀಸಾಗೆ ವಿಧಿಸಿದ್ದ ನಿರ್ಬಂಧ ವಿಸ್ತರಿಸಿದ ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಎಚ್‌–1ಬಿ ವೀಸಾ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾರ್ಚ್‌ 31ರವರೆಗೆ ವಿಸ್ತರಿಸಿದ್ದಾರೆ.

ಅಮೆರಿಕದ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ. ಜತೆಗೆ, ನಿರ್ಬಂಧದ ಸಂದರ್ಭದಲ್ಲಿದ್ದ ಪರಿಸ್ಥಿತಿ ಮತ್ತು ಕಾರಣಗಳು ಬದಲಾಗಿಲ್ಲ ಎಂದು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ.

ಟ್ರಂಪ್‌ ಅವರ ನಿರ್ಧಾರದಿಂದ ಅಪಾರ ಸಂಖ್ಯೆಯಲ್ಲಿರುವ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರು ಹಾಗೂ ಅಮೆರಿಕ ಮತ್ತು ಭಾರತ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ. ಎಚ್‌–1ಬಿ ವೀಸಾ ನವೀಕರಣಕ್ಕೂ ತೊಂದರೆಯಾಗಲಿದೆ.

ವೀಸಾಗಳ ಮೇಲೆ ನಿರ್ಬಂಧ ವಿಧಿಸಿ ಕಳೆದ ವರ್ಷ ಏಪ್ರಿಲ್‌ 22 ಮತ್ತು ಜೂನ್‌ 22ರಂದು ಟ್ರಂಪ್‌ ಆದೇಶ ಹೊರಡಿಸಿದ್ದರು. ಡಿಸೆಂಬರ್‌ 31ರಂದು ಈ ಆದೇಶದ ಅವಧಿ ಮುಗಿದಿತ್ತು. ಹೀಗಾಗಿ, ಟ್ರಂಪ್‌ ಮಾರ್ಚ್‌ 30ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ವಿಶೇಷ ವೃತ್ತಿಗಳಿಗೆ ತಾಂತ್ರಿಕ ಪರಿಣತಿ ಹೊಂದಿರುವ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಎಚ್‌–1ಬಿ ವೀಸಾ ನೀಡಲಾಗುತ್ತಿದೆ. ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳ ಸಾವಿರಾರು ಕೆಲಸಗಾರರ ಮೇಲೆ ತಂತ್ರಜ್ಞಾನ ಕಂಪನಿಗಳು ಅವಲಂಬಿತವಾಗಿವೆ. ಟ್ರಂಪ್‌ ಅವರು ಈಗ ಕೈಗೊಂಡ ನಿರ್ಧಾರದಿಂದ ಭಾರತೀಯರು ಇನ್ನೂ ಮೂರು ತಿಂಗಳು ಕಾಯಬೇಕಾಗಿದೆ.

‘ಕೋವಿಡ್‌–19ನಿಂದ ಅಮೆರಿಕದ ಮೇಲೆ ಉಂಟಾಗಿರುವ ಪರಿಣಾಮಗಳು ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಕೋವಿಡ್‌–19 ಅಮೆರಿಕದ ಜನರ ಬದುಕಿನ ಮೇಲೆ ಅಪಾರ ಪರಿಣಾಮ ಬೀರಿದೆ. ನವೆಂಬರ್‌ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 6.7ರಷ್ಟಿತ್ತು’ ಎಂದು ಟ್ರಂಪ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು