ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ‘ಕ್ಯಾಪಿಟಲ್‌’ಗೆ ಟ್ರಂಪ್‌ ಬೆಂಬಲಿಗರ ಲಗ್ಗೆ

ಅಮೆರಿಕದ ಇತಿಹಾಸದಲ್ಲಿಯೇ ಕರಾಳ ದಿನ: ಪ್ರಜಾಪ್ರಭುತ್ವದ ಮೇಲೆ ಆಕ್ರಮಣ
Last Updated 7 ಜನವರಿ 2021, 20:09 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಗತ್ತಿನ ಅತ್ಯಂತ ಪ್ರಭಾವಿ ಪ್ರಜಾಪ್ರಭುತ್ವವಾದ ಅಮೆರಿಕದ ಇತಿಹಾಸದಲ್ಲಿಯೇ ಬುಧವಾರವು ಕರಾಳ ದಿನವಾಗಿ ದಾಖಲಾಯಿತು.

ದೇಶದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರಿನಲ್ಲಿಯೇ ಅವರ ಬೆಂಬಲಿಗರು ಸಂಸತ್‌ ಭವನಕ್ಕೆ (ಕ್ಯಾಪಿಟಲ್‌) ಲಗ್ಗೆ ಹಾಕಿ ದಾಂದಲೆ ನಡೆಸಿದರು. ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರ ಕಚೇರಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಡಿದರು. ಕಿಟಕಿ ಗಾಜುಗಳನ್ನು ಒಡೆದು ಹಾಕಿದರು. ಕಲಾಕೃತಿಗಳನ್ನು ಹೊತ್ತೊಯ್ದರು. ಸ್ವಲ್ಪ ಸಮಯದ ಮಟ್ಟಿಗೆ ಸೆನೆಟ್‌ ಸಭಾಂಗಣವನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಸಭಾಧ್ಯಕ್ಷರ ಪೀಠದಲ್ಲಿ ನಿಂತು ಫೋಟೊ ತೆಗೆಸಿಕೊಂಡರು.

ಆಯುಧಧಾರಿಗಳಾದ ಸಾವಿರಾರು ಜನರು ಕ್ಯಾಪಿಟಲ್‌ಗೆ ನುಗ್ಗಿದಾಗ, ಆರಂಭದಲ್ಲಿ ಪೊಲೀಸರೇ ತಬ್ಬಿಬ್ಬಾಗಿದ್ದರು.ಮಾಸ್ಕ್‌ ಕೂಡ ಧರಿಸದೆ ನುಗ್ಗಿದ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಟ್ರಂಪ್‌ ಬೆಂಬಲಿಗರು ಪೊಲೀಸರ ಜತೆಗೆ ಸಂಘರ್ಷಕ್ಕಿಳಿದರು. ಈ ಜಟಾಪಟಿಯಲ್ಲಿ ಒಬ್ಬ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಮುಂದಿನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರ ಗೆಲುವಿಗೆ ಅಧಿಕೃತ ಮುದ್ರೆ ಒತ್ತುವ ಸಾಂವಿಧಾನಿಕ ಪ್ರಕ್ರಿಯೆಗೆ
ಅಡ್ಡಿಪಡಿಸುವುದು ದಾಂದಲೆ ನಡೆಸಿದ ಗುಂಪಿನ ಉದ್ದೇಶವಾಗಿತ್ತು. ‘ಪ್ರಜಾಪ್ರಭುತ್ವದ ಮೇಲಿನ ಈ ಆಕ್ರಮಣ’ವನ್ನು ಜಾಗತಿಕ ನಾಯಕರು ಖಂಡಿಸಿದ್ದಾರೆ.

ಈ ದಾಂದಲೆ ನಡೆದಾಗ ಕ್ಯಾಪಿಟಲ್‌ ನಲ್ಲಿ ಎಲೆಕ್ಟೋರಲ್‌ ಮತಗಳ ಎಣಿಕೆ ನಡೆಯುತ್ತಿತ್ತು. ತಕ್ಷಣವೇ ಅಮೆರಿಕ ಸಂಸತ್ತಿನ ಎರಡೂ ಸದನಗಳನ್ನು ಮುಚ್ಚಲಾಯಿತು. ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ದಾಂದಲೆ ನಡೆಸುತ್ತಿದ್ದ ಒಬ್ಬ ಮಹಿಳೆ ಪೊಲೀಸರ ಗುಂಡೇಟಿಗೆ ಕ್ಯಾಪಿಟಲ್‌ನ ಒಳಗೇ ಬಲಿಯಾದರು. ಇನ್ನೊಬ್ಬ ಮಹಿಳೆ ಮತ್ತು ಇಬ್ಬರು ಪುರುಷರು ‘ಪ್ರತ್ಯೇಕ ವೈದ್ಯಕೀಯ ಕಾರಣ’ಗಳಿಂದ ಮೃತಪಟ್ಟರು ಎಂದು ನಗರದ ಪೊಲೀಸ್‌ ಮುಖ್ಯಸ್ಥ ರಾಬರ್ಟ್‌ ಕಾಂಟಿ ಹೇಳಿದ್ದಾರೆ. ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಡೆಯುವುದಕ್ಕಾಗಿ ಕ್ಯಾಪಿಟಲ್‌ ಪ್ರದೇಶದಲ್ಲಿ ಕರ್ಫ್ಯೂ ಹೇರಲಾಯಿತು. ಟ್ರಂಪ್‌ ಬೆಂಬಲಿಗರನ್ನು ತೆರವುಗೊಳಿಸಲು ಸುಮಾರು ನಾಲ್ಕು ತಾಸು ಬೇಕಾಯಿತು. ಭಾರಿ ಶಸ್ತ್ರಾಸ್ತ್ರ ಹೊಂದಿದ್ದ ಪೊಲೀಸರನ್ನು ಅಲ್ಲಿ ನಿಯೋಜಿಸಲಾಗಿದೆ. ಹತ್ತಾರು ಮಂದಿಯನ್ನು ಬಂಧಿಸಲಾಗಿದೆ.

ಸೋಲೊಪ್ಪಿದ ಟ್ರಂಪ್‌: ಬೈಡನ್‌ ಗೆಲುವನ್ನು ಸಂಸತ್‌ ಅನುಮೋದಿಸಿದ ಬಳಿಕ ಟ್ರಂಪ್‌ ಅವರು ಕೊನೆಗೂ ಸೋಲೊಪ್ಪಿಕೊಂಡಿದ್ದಾರೆ. ಫಲಿತಾಂಶಕ್ಕೆ ತಮ್ಮ ಒಪ್ಪಿಗೆ ಇಲ್ಲದೇ ಇದ್ದರೂ ಜನವರಿ 20ರಂದು ಅಧಿಕಾರ ಹಸ್ತಾಂತರ ಸುಲಲಿತವಾಗಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಬೆಂಬಲಿಗರಿಗೆ ಟ್ರಂಪ್‌ ಕುಮ್ಮಕ್ಕು:

ಕ್ಯಾ‍ಪಿಟಲ್‌ಗೆ ದಾಳಿ ನಡೆಸುವಂತೆ ಟ್ರಂಪ್‌ ಅವರೇ ತಮ್ಮ ಬೆಂಬಲಿಗರಿಗೆ ಕುಮ್ಮಕ್ಕು ನೀಡಿದ್ದಾರೆ. ‘ನಾವು ಕೈಚೆಲ್ಲುವ ಪ್ರಶ್ನೆಯೇ ಇಲ್ಲ. ನಾವು ಯಾವತ್ತೂ ಸೋಲೊಪ್ಪಿಕೊಳ್ಳುವುದೂ ಇಲ್ಲ. ವಂಚನೆಯ ಗೆಲುವಿಗೆ ನೀವು ತಲೆಬಾಗಬಾರದು’ ಎಂದು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್‌ ಹೇಳಿದ್ದರು. ಕ್ಯಾಪಿಟಲ್‌ಗೆ ಮುತ್ತಿಗೆ ಹಾಕುವಂತೆಯೂ ಅವರು ಹೇಳಿದ್ದರು. ಆದರೆ, ಬೆಂಬಲಿಗರು ಶಾಂತಿಯುತವಾಗಿ ಮನೆಗೆ ಮರಳುವಂತೆ ಹಿಂಸಾಚಾರದ ಬಳಿಕ ಹೇಳಿದ್ದಾರೆ. ‘ಇದು ಮೋಸದ ಚುನಾವಣೆ. ಆದರೆ, ಅವರಿಗೆ ಅನುಕೂಲಕರವಾಗಿ ನಾವು ವರ್ತಿಸುವುದು ಬೇಡ, ನಮಗೆ ಶಾಂತಿ ಬೇಕಿದೆ’ ಎಂದು ಬೆಂಬಲಿಗರಿಗೆ ಹೇಳಿದ್ದಾರೆ.

ಟ್ವಿಟರ್‌, ಫೇಸ್‌ಬುಕ್‌ ಖಾತೆ ಸ್ಥಗಿತ:

ತಮ್ಮ ಬೆಂಬಲಿಗರ ಕೃತ್ಯವನ್ನು ಬೆಂಬಲಿಸಿ ಟ್ರಂಪ್‌ ಪ್ರಕಟಿಸಿದ ಕೆಲವು ವಿಡಿಯೊಗಳು ಮತ್ತು ಟ್ವೀಟ್‌ಗಳನ್ನು ಟ್ವಿಟರ್‌ ಅಳಿಸಿ ಹಾಕಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮತ್ತೆ ಟ್ವೀಟ್‌ ಮಾಡಿದ ಬಳಿಕ ಟ್ರಂಪ್‌ ಅವರ ಟ್ವಿಟರ್‌ ಖಾತೆಯನ್ನು 12 ತಾಸು ಸ್ಥಗಿತಗೊಳಿಸಿತು. ಜೋ ಬೈಡನ್‌ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ದಿನದವರೆಗೆ ಟ್ರಂಪ್‌ ಅವರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗಳು ಅಮಾನತಿನಲ್ಲಿ ಇರುತ್ತವೆ ಎಂದು ಫೇಸ್‌ಬುಕ್‌ನ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ.

ಬೈಡನ್‌ ಗೆಲುವಿಗೆ ಅಧಿಕೃತ ಮುದ್ರೆ:

ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್‌ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್‌ ಅವರ ಗೆಲುವನ್ನು ಕಾಂಗ್ರೆಸ್‌ ದೃಢೀಕರಿಸಿದೆ. ಎಲೆಕ್ಟೋರಲ್‌ ಮತ ಎಣಿಕೆ ಆರಂಭವಾದ ಸ್ವಲ್ಪ ಹೊತ್ತಿನಲ್ಲಿಯೇ ಟ್ರಂಪ್‌ ಬೆಂಬಲಿಗರ ಗುಂಪು ದಾಂದಲೆ ನಡೆಸಿತ್ತು. ಮತ ಎಣಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಟ್ರಂಪ್‌ ಬೆಂಬಲಿಗರನ್ನು ಹೊರಗಟ್ಟಿದ ಬಳಿಕ ರಾತ್ರಿಯಿಡೀ ಮತ ಎಣಿಕೆ ಮತ್ತು ದೃಢೀಕರಣ ಪ್ರಕ್ರಿಯೆ ನಡೆಯಿತು. ಬೈಡನ್‌‌–ಕಮಲಾ ಅವರಿಗೆ 306 ಮತ್ತು ಟ್ರಂಪ್‌–ಪೆನ್ಸ್‌ ಅವರಿಗೆ 232 ಮತಗಳು ದೊರೆತಿವೆ. ಬೈಡನ್‌ ಅವರು ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸೋಲೊಪ್ಪಿದ ಟ್ರಂಪ್‌:

ಬೈಡನ್‌ ಗೆಲುವನ್ನು ಸಂಸತ್‌ ಅನುಮೋದಿಸಿದ ಬಳಿಕ ಟ್ರಂಪ್‌ ಅವರು ಕೊನೆಗೂ ಸೋಲೊಪ್ಪಿಕೊಂಡಿದ್ದಾರೆ. ಫಲಿತಾಂಶಕ್ಕೆ ತಮ್ಮ ಒಪ್ಪಿಗೆ ಇಲ್ಲದೇ ಇದ್ದರೂ ಜನವರಿ 20ರಂದು ಅಧಿಕಾರ ಹಸ್ತಾಂತರ ಸುಲಲಿತವಾಗಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT