ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಗುಜರಾತ್‌ಗೆ ಬ್ರಿಟನ್ ಪ್ರಧಾನಿ; ರಷ್ಯಾ ಅವಲಂಬನೆ ತಗ್ಗಿಸಲು ಬೋರಿಸ್ ಸೂತ್ರ

Last Updated 21 ಏಪ್ರಿಲ್ 2022, 4:24 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಇಂದು ಗುಜರಾತ್‌ನ ಅಹಮದಾಬಾದ್‌ಗೆ ಭೇಟಿ ನೀಡಿದ್ದು, ಭಾರತವು ತೈಲ ಮತ್ತು ರಕ್ಷಣಾ ಸಲಕರಣೆಗಳಿಗಾಗಿ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ.

ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ ಹಾಗೂ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವ ಅತಿ ದೊಡ್ಡ ರಾಷ್ಟ್ರವಾಗಿದೆ. ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣದ ವಿರುದ್ಧ ಮಾತನಾಡುವಂತೆ ಬ್ರಿಟನ್‌ ಭಾರತವನ್ನು ಕೋರಿದೆ. ರಷ್ಯಾ ಮೇಲಿನ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಬ್ರಿಟನ್‌ ಹಲವು ಪ್ರಸ್ತಾಪಗಳನ್ನು ಮುಂದಿಡಲಿದೆ ಎಂದು ಬೋರಿಸ್‌ ಅವರ ವಕ್ತಾರರು ತಿಳಿಸಿದ್ದಾರೆ.

ರಷ್ಯಾ ಆಕ್ರಮಣ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತವು ಮತ ಹಾಕಿಲ್ಲ ಹಾಗೂ ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರುವುದರಿಂದ ಹಿಂದೆ ಸರಿದಿದೆ. ಆದರೆ, ಉಕ್ರೇನ್‌ನಲ್ಲಿ ನಾಗರಿಕರ ಹತ್ಯೆ ಕುರಿತು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದರು.

‌ಬೋರಿಸ್‌ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 2 ದಿನಗಳ ಪ್ರವಾಸದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದಾರೆ. ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟು, ಭದ್ರತಾ ಸಹಕಾರ, ಉಕ್ರೇನ್‌–ರಷ್ಯಾ ಯುದ್ಧ, ರಾಜತಾಂತ್ರಿಕತೆ ಮತ್ತು ಆರ್ಥಿಕತೆಯ ಪಾಲುದಾರಿಕೆ ಹಾಗೂ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಸಂಬಂಧಿತ ವಿಷಯಗಳು ಚರ್ಚೆಗೆ ಬರಲಿವೆ.

ರಷ್ಯಾದಿಂದ ಭಾರತ ಹೆಚ್ಚುವರಿ ತೈಲ ಖರೀದಿಸುತ್ತಿರುವ ಕುರಿತು ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಈ ಬಗ್ಗೆ ಬೋರಿಸ್‌ ಮೋದಿ ಅವರಿಗೆ ಉಪನ್ಯಾಸ ನೀಡುವುದಿಲ್ಲ ಎಂದಿದ್ದರು.

ಭಾರತಕ್ಕೆ ಅಗತ್ಯವಿರುವಷ್ಟು ತೈಲ ಅಥವಾ ಬೇಕಾಗಿರುವ ಸೇನಾ ಸಲಕರಣೆಗಳನ್ನು ಮಾರಾಟ ಮಾಡುವಷ್ಟು ಸಂಗ್ರಹವನ್ನು ಬ್ರಿಟನ್‌ ಹೊಂದಿಲ್ಲ ಎಂದು ಸೊಸೈಟಿ ಫಾರ್‌ ಪಾಲಿಸಿ ಸ್ಟಡೀಸ್‌ನ ನಿರ್ದೇಶಕ ಉದಯ್‌ ಭಾಸ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್‌ನೊಂದಿಗೆ ಭಾರತ ಸಂಬಂಧ ವೃದ್ಧಿಸಿದೆ. ಆದರೆ, ಭಾರತ ಗಡಿಭಾಗಗಳಲ್ಲಿ ಒಂದು ಕಡೆ ಚೀನಾ ಮತ್ತು ಮತ್ತೊಂದು ಕಡೆ ಪಾಕಿಸ್ತಾನದೊಂದಿಗೆ ಆಗಾಗ್ಗೆ ಸಂಘರ್ಷ ಉಂಟಾಗುತ್ತಿರುವುದರಿಂದ ಅಗತ್ಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಅವಶ್ಯವಾಗಿದೆ. ಭಾರತವು ಒಟ್ಟು ಶಸ್ತ್ರಾಸ್ತ್ರ ಅವಶ್ಯಕತೆಯ ಅರ್ಧಕ್ಕಿಂತ ಹೆಚ್ಚು ಪೂರೈಕೆಗಾಗಿ ರಷ್ಯಾ ಮೇಲೆ ಅವಲಂಬಿಸಿದೆ.

ಅಹಮದಾಬಾದ್‌ನಲ್ಲಿ ಬೋರಿಸ್‌ ಅವರು ಪ್ರಮುಖ ಉದ್ಯಮ ವಲಯಗಳಿಗೆ ಭೇಟಿ ನೀಡಲಿದ್ದು, ಎರಡೂ ರಾಷ್ಟ್ರಗಳ ನಡುವಿನ ವಾಣಿಜ್ಯ, ವ್ಯಾಪಾರ ಹಾಗೂ ಜನರ ಸಂಪರ್ಕಗಳ ಬಗ್ಗೆ ಚರ್ಚಿಸಲಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿನ ಸಹಕಾರಗಳ ಬಗ್ಗೆ ಪ್ರಕಟಣೆಯಾಗಲಿದೆ. ಬ್ರಿಟನ್‌ನಲ್ಲಿರುವ ಬ್ರಿಟಿಷ್‌–ಭಾರತೀಯರಲ್ಲಿ ಅರ್ಧದಷ್ಟು ಜನರ ಮೂಲ ಗುಜರಾತ್‌ ಆಗಿದೆ.

ಬ್ರಿಟನ್‌ ಮತ್ತು ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಭಾಗವಾಗಿ ಬ್ರಿಟನ್‌ನಲ್ಲಿ 530 ಮಿಲಿಯನ್‌ ಪೌಂಡ್‌ಗಳಷ್ಟು (ಸುಮಾರು ₹5,283 ಕೋಟಿ) ಹೂಡಿಕೆ ಮಾಡಲು ಎರಡೂ ರಾಷ್ಟ್ರಗಳ ಪ್ರಧಾನಿಗಳು ಕಳೆದ ವರ್ಷ ಸಮ್ಮತಿಸಿದ್ದರು.

ಸಾಫ್ಟ್‌ವೇರ್‌, ಎಂಜಿನಿಯರಿಂಗ್‌ನಿಂದ ಫಾರ್ಮಾ ವರೆಗಿನ ಹಲವು ವಲಯಗಳಲ್ಲಿ ಹೊಸ ಹೂಡಿಕೆ ಹಾಗೂ ಆಮದು ಒಪ್ಪಂದಗಳ ಬಗ್ಗೆ ಬೋರಿಸ್‌ ಪ್ರಕಟಿಸಲಿದ್ದಾರೆ.

ಬ್ರಿಟನ್‌ ಭಾರತದ ಮೂರನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿತ್ತು. ಈ ವರ್ಷ ಅದು 17ನೇ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ ಭಾರತವು ಅಮೆರಿಕ, ಚೀನಾ ಹಾಗೂ ಯುಎಇ ಜೊತೆಗೆ ಅತಿ ಹೆಚ್ಚು ವ್ಯಾಪಾರ–ವಹಿವಾಟು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT