ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘನ್‌ ಕುರಿತ ಟೀಕೆಗೆ ವ್ಯಾಪಕ ದೂರು: ಐಟಿವಿ ತೊರೆದ ನಿರೂಪಕ ಪಿಯರ್ಸ್‌ ಮೋರ್ಗನ್‌

Last Updated 10 ಮಾರ್ಚ್ 2021, 11:37 IST
ಅಕ್ಷರ ಗಾತ್ರ

ಲಂಡನ್‌: ಮೇಘನ್‌ ಮಾರ್ಕೆಲ್ ಕುರಿತ ತಮ್ಮ ಟೀಕೆಗಳಿಗೆ ವ್ಯಾಪಕ ಆಕ್ಷೇಪ ವ್ಯಕ್ತವಾದ ಕಾರಣ, ಬ್ರಿಟನ್‌ನ ಐಟಿವಿಯ ‘ಗುಡ್‌ ಮಾರ್ನಿಂಗ್‌ ಬ್ರಿಟನ್‌’ ಕಾರ್ಯಕ್ರಮದ ನಿರೂಪಕ ಪಿಯರ್ಸ್‌ ಮೋರ್ಗನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ಐಟಿವಿ ಆಡಳಿತದೊಂದಿಗೆ ಮೋರ್ಗನ್‌ ಚರ್ಚಿಸಿದ್ದು, ತಮ್ಮ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದಾರೆ. ಐಟಿವಿ ಅವರ ರಾಜೀನಾಮೆಯನ್ನು ಸ್ವೀಕರಿಸಿದೆ’ ಎಂದು ಸುದ್ದಿವಾಹಿನಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇಘನ್‌ ಅವರು ರಾಜಕುಮಾರ ಪ್ರಿನ್ಸ್‌ ಅವರನ್ನು ಭೇಟಿಯಾದ ನಂತರ, ಮೋರ್ಗನ್‌ ಅವರೊಂದಿಗಿನ ಸಂಪರ್ಕವನ್ನು ಕಡಿದುಕೊಂಡರು. ಈ ಕಾರಣಕ್ಕಾಗಿ ಮೇಘನ್‌ ಅವರನ್ನು ಮೋರ್ಗನ್‌ ಪದೇಪದೇ ಟೀಕಿಸುತ್ತಿದ್ದರು.

ಓಪ್ರಾ ವಿನ್‌ಫ್ರೆಗೆ ನೀಡಿದ ಸಂದರ್ಶನ ನೀಡಿದ ಮೇಘನ್‌, ‘ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಗಳು ನನ್ನನ್ನು ಕಾಡಿದ್ದವು’ ಎಂದು ಹೇಳಿದ್ದರು.

‘ಮೇಘನ್‌ ಅವರ ಈ ಮಾತನ್ನು ನಾನು ನಂಬುವುದಿಲ್ಲ’ ಎಂದು ಮೋರ್ಗನ್‌ ‘ಗುಡ್‌ ಮಾರ್ನಿಂಗ್‌ ಬ್ರಿಟನ್‌’ ಕಾರ್ಯಕ್ರಮದಲ್ಲಿ ಟೀಕಿಸಿದ್ದರು.

‘ಮೋರ್ಗನ್‌ ಅವರ ಈ ಹೇಳಿಕೆಯನ್ನು ಖಂಡಿಸಿ 41,000 ದೂರುಗಳನ್ನು ಸ್ವೀಕರಿಸಲಾಗಿದೆ’ ಎಂದು ಮಾಧ್ಯಮ ನಿಯಂತ್ರಕ ಸಂಸ್ಥೆ ಆಫ್‌ಕಾಮ್‌ ಹೇಳಿತ್ತು. ಇದರ ಬೆನ್ನಲ್ಲೇ ಮೋರ್ಗನ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

ಮೇಘನ್‌ ಕುರಿತು ಮೋರ್ಗನ್‌ ಮಾಡಿದ ಟೀಕೆಗಳಿಗೆ, ಸಹನಿರೂಪಕ ಅಲೆಕ್ಸ್‌ ಬೆರೇಸ್‌ಫೋರ್ಡ್‌ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಸಹ ಭಾರಿ ಚರ್ಚೆಗೆ ಕಾರಣವಾಗಿತ್ತು.

‘ನಿನಗೆ ಮೇಘನ್‌ ಜೊತೆ ಸಂಬಂಧ ಇತ್ತು. ಆಕೆ ನಿನ್ನೊಂದಿಗಿನ ಸಂಬಂಧವನ್ನು ಕಡಿದುಕೊಂಡಳು. ಸಂಬಂಧ ಕಡಿದುಕೊಳ್ಳುವ ಹಕ್ಕನ್ನೂ ಆಕೆ ಹೊಂದಿದ್ದಳು’ ಎಂದು ಮೋರ್ಗನ್‌ ಅವರನ್ನು ಅಲೆಕ್ಸ್‌ ಛೇಡಿಸಿದ್ದರು.

‘ನಿನ್ನೊಂದಿಗಿನ ಸಂಬಂಧ ಕಡಿದುಕೊಂಡ ನಂತರ ಮೇಘನ್‌ ನಿನ್ನ ಬಗ್ಗೆ ಏನಾದರೂ ಹೇಳಿದ್ದಾರಾ? ಆದರೆ, ನೀವು ಮಾತ್ರ ಆಕೆಯನ್ನು ಟೀಕಿಸುವುದನ್ನು ನಿಲ್ಲಿಸಲಿಲ್ಲ’ ಎಂದೂ ಅಲೆಕ್ಸ್‌ ವಾಗ್ದಾಳಿ ನಡೆಸಿದ್ದರು.

ಅಲೆಕ್ಸ್‌ ಅವರ ಈ ಮಾತುಗಳು ಸಹ ಮೋರ್ಗನ್‌ ಅವರು ಐಟಿವಿಯಿಂದ ನಿರ್ಗಮಿಸಲು ಕಾರಣವಾದವು ಎಂದು ಮೂಲಗಳು ಹೇಳುತ್ತವೆ.

ಮೋರ್ಗನ್‌ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಸದಾ ಒಂದಿಲ್ಲೊಂದು ಕಾರಣದಿಂದ ವಿವಾದಕ್ಕೆ ಕಾರಣವಾಗುತ್ತಿತ್ತು. ಕಳೆದ ವರ್ಷ ಕೋವಿಡ್‌–19 ಪಿಡುಗನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂದು ಮೋರ್ಗನ್‌ ಟೀಕಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT