ಬುಧವಾರ, ಮೇ 18, 2022
23 °C
ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್‌ ಪ್ರೈಸ್

ಭಾರತ–ಚೀನಾ ಗಡಿ ವಿವಾದ: ಶಾಂತಿಯುತ ಪ್ರಯತ್ನಕ್ಕೆ ಅಮೆರಿಕ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಭಾರತ ಮತ್ತು ಚೀನಾದ ಗಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್‌ ಪ್ರೈಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ ತನ್ನ ನೆರೆಹೊರೆಯವರನ್ನು ಬೆದರಿಸುವ ಪ್ರಯತ್ನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.

‘ಭಾರತ– ಚೀನಾ ಗಡಿಯಲ್ಲಿನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.  ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮಾತುಕತೆಗಳನ್ನೂ ಗಮನಿಸುತ್ತಿದ್ದು, ಗಡಿ ವಿವಾದಗಳನ್ನು ಬಗೆಹರಿಸಲು ನೇರ ಸಂವಾದದೊಂದಿಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗವನ್ನು ಬೆಂಬಲಿಸುತ್ತಿದ್ದೇವೆ‘ ಎಂದು ಹೇಳಿದರು.

ಕಳೆದ ವರ್ಷ ಮೇ ತಿಂಗಳ ಆರಂಭದಿಂದ ಭಾರತದ ಪೂರ್ವ ಲಡಾಕ್‌ನ ಗಡಿರೇಖೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಂಘರ್ಷ ಆರಂಭವಾಗಿದ್ದು, ಕೆಲ ತಿಂಗಳ ಕಾಲ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಪ್ರೈಸ್, ‘ತನ್ನ ನೆರೆ ರಾಷ್ಟ್ರಗಳನ್ನು ಬೆದರಿಸುವ ಚೀನಾದ ಪ್ರಯತ್ನಗಳ ಬಗ್ಗೆ ನಮಗೆ ಆತಂಕವಿದೆ. ಇಂಥ ಸಂದರ್ಭದಲ್ಲಿ ನಾವು ಯಾವಾಗಲೂ ಸ್ನೇಹಿತರೊಂದಿಗೆ, ಪಾಲುದಾರ ರಾಷ್ಟ್ರದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದರು.

ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ನಡೆದ ಒಂಬತ್ತನೇ ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ, ಭಾರತ ಮತ್ತು ಚೀನಾ ರಾಷ್ಟ್ರಗಳು ತಮ್ಮ ಸೇನೆಯನ್ನು ಗಡಿಯಿಂದ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿದ್ದು, ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದವು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು