ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ‘ಎಸ್‌–400’ ಕ್ಷಿಪಣಿ ವ್ಯವಸ್ಥೆ ಪೂರೈಕೆ: ಅಮೆರಿಕ ಕಳವಳ

Last Updated 16 ನವೆಂಬರ್ 2021, 12:17 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತಕ್ಕೆ ರಷ್ಯಾ ‘ಎಸ್‌–400’ ಕ್ಷಿಪಣಿ ವ್ಯವಸ್ಥೆಯನ್ನು ಪೂರೈಕೆ ಮಾಡುತ್ತಿರುವುದಕ್ಕೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಆದರೆ, ಉಭಯ ದೇಶಗಳ ನಡುವಿನ ಈ ವ್ಯವಹಾರಕ್ಕೆ ಸಂಬಂಧಿಸಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಮೂಲಗಳು ಹೇಳಿವೆ.

‘ರಷ್ಯಾದಿಂದ ಈ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುತ್ತಿರುವ ಕುರಿತು ನಮ್ಮ ಕಳವಳ ಏನು ಎಂಬುದನ್ನು ಭಾರತಕ್ಕೆ ಸ್ಪಷ್ಟವಾಗಿ ತಿಳಿಸಲಾಗಿದೆ’ ಎಂದು ಪೆಂಟಗನ್ ವಕ್ತಾರ ಜಾನ್‌ ಕಿರ್ಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಷ್ಯಾ ನಿರ್ಮಿತ ‘ಎಸ್‌–400’ ದೂರಗಾಮಿ ವಾಯುಪ್ರದೇಶ ರಕ್ಷಣಾ ವ್ಯವಸ್ಥೆಯಾಗಿದೆ. ಈ ಕ್ಷಿಪಣಿ ವ್ಯವಸ್ಥೆಯ 5 ಘಟಕಗಳ ಖರೀದಿಗೆ ಭಾರತ 2018ರ ಅಕ್ಟೋಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಖರೀದಿಯ ಅಂದಾಜು ವೆಚ್ಚ ₹ 37 ಸಾವಿರ ಕೋಟಿ ಆಗಲಿದೆ.

ಈ ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ಪೂರೈಕೆ ಮಾಡಲಾಗುತ್ತಿರುವ ಕುರಿತು ಭಾರತೀಯ ವಾಯುಪಡೆಯಿಂದ ಈ ವರೆಗೆ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಆದರೆ, ರಷ್ಯಾದ ಫೆಡರಲ್ ಸರ್ವೀಸ್ ಫಾರ್ ಮಿಲಿಟರಿ ಟೆಕ್ನಿಕಲ್ ಕೋ–ಆಪರೇಷನ್‌ನ (ಎಫ್‌ಎಸ್‌ಎಂಟಿಸಿ) ನಿರ್ದೇಶಕ ಡಿಮಿಟ್ರಿ ಶುಗಯೇವ್‌ ಅವರು, ‘ಯೋಜನೆಯಂತೆಯೇ ಈ ಕ್ಷಿಪಣಿ ವ್ಯವಸ್ಥೆಯ ಪೂರೈಕೆ ನಡೆಯಲಿದೆ’ ಎಂದು ಕಳೆದ ವಾರ ಹೇಳಿದ್ದಾರೆ.

2017ರಲ್ಲಿ ಅಮೆರಿಕ ‘ಸಿಎಎಟಿಎಸ್‌ಎ’ ಎಂಬ ಕಾನೂನು ಜಾರಿಗೆ ತಂದಿದೆ. ಇತರ ರಾಷ್ಟ್ರಗಳು ರಷ್ಯಾದಿಂದ ಮಿಲಿಟರಿ ಹಾರ್ಡ್‌ವೇರ್ ಖರೀದಿ ಮಾಡುವುದರ ಮೇಲೆ ಈ ಕಾನೂನು ನಿಷೇಧ ಹೇರುತ್ತದೆ. ರಷ್ಯಾದಿಂದ ಟರ್ಕಿ ಸಹ ಎಸ್‌–400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಿದೆ. ಈ ಕಾರಣಕ್ಕೆ ಟರ್ಕಿ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT