ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಉಗಮದ ತನಿಖೆಗಾಗಿ ವುಹಾನ್‌ಗೆ ಬಂದ ಡಬ್ಲ್ಯುಎಚ್‌ಒ ತಜ್ಞರ ತಂಡ

Last Updated 14 ಜನವರಿ 2021, 14:07 IST
ಅಕ್ಷರ ಗಾತ್ರ

ವುಹಾನ್‌: ಕೊರೊನಾ ವೈರಾಣುವಿನ ಮೂಲ ಪತ್ತೆಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ರಚಿಸಿರುವ 13 ವಿಜ್ಞಾನಿಗಳನ್ನೊಳಗೊಂಡ ತಂಡ ಗುರುವಾರ ಚೀನಾದ ವುಹಾನ್‌ಗೆ ತಲುಪಿದೆ.

ತಂಡದ ಇಬ್ಬರು ಸದಸ್ಯರಲ್ಲಿ ಕೋವಿಡ್‌ ದೃಢಪಟ್ಟಿದ್ದರಿಂದ ಅವರನ್ನು ಸಿಂಗಪುರದಲ್ಲೇ ತಡೆಯಲಾಗಿದೆ.

ವುಹಾನ್‌ ತಲುಪಿರುವ ತಂಡದ ಸದಸ್ಯರು ಗುರುವಾರ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಜ್ಞಾನಿಗಳ ತಂಡಕ್ಕೆ ಹೋಟೆಲ್‌ವೊಂದರಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಎರಡು ವಾರ ಸ್ವಯಂ ಪ್ರತ್ಯೇಕವಾಸದಲ್ಲಿ ಇರಬೇಕಿದ್ದು, ಕ್ವಾರಂಟೈನ್‌ ಅವಧಿ ಪೂರ್ಣಗೊಂಡ ಬಳಿಕ ತನಿಖೆ ಆರಂಭಿಸಲಿದ್ದಾರೆ.

2019ರ ಅಂತ್ಯದಲ್ಲಿ ವುಹಾನ್‌ನಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಾಣು, ಬಳಿಕ ವಿಶ್ವದ ಇತರ ರಾಷ್ಟ್ರಗಳಿಗೂ ವ್ಯಾಪಿಸಿತ್ತು. ಇದುವರೆಗೂ 19.89 ಲಕ್ಷ ಮಂದಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ.

‘ಕೊರೊನಾ ವೈರಾಣು ಪ್ರಾಣಿಗಳಿಂದ ಮನುಷ್ಯರಿಗೆ ಹೇಗೆ ತಗುಲಿತು ಎಂಬುದನ್ನು ಅರಿಯುವುದು ಅತ್ಯವಶ್ಯ. ಭವಿಷ್ಯದಲ್ಲಿ ಇಂತಹ ಸಂದರ್ಭ ಮತ್ತೆ ಎದುರಾದರೆ ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಯಲು ಈ ತನಿಖೆ ಸಹಕಾರಿಯಾಗಲಿದೆ’ ಎಂದು ಡಬ್ಲ್ಯುಎಚ್‌ಒ ಹೇಳಿದೆ.

‘ತಂಡದಲ್ಲಿದ್ದ ಇಬ್ಬರು ಸದಸ್ಯರಿಗೆ ಕೋವಿಡ್‌ ದೃಢಪಟ್ಟಿದ್ದರಿಂದ ಅವರಿಗೆ ಸಿಂಗಪುರದಲ್ಲಿ ವಿಮಾನ ಹತ್ತಲು ಅವಕಾಶ ನಿರಾಕರಿಸಲಾಗಿದೆ. ಚೀನಾಕ್ಕೆ ಪ್ರಯಾಣ ಮಾಡುವ ಮುನ್ನ ತಂಡದ ಎಲ್ಲಾ ಸದಸ್ಯರೂ ತಮ್ಮ ದೇಶಗಳಲ್ಲಿ ಕೋವಿಡ್‌ ಪರೀಕ್ಷೆ ಎದುರಿಸಿದ್ದರು. ಅವರಿಗೆ ಸೋಂಕು ತಗುಲಿಲ್ಲ ಎಂಬುದು ವರದಿಯಿಂದ ಖಾತರಿಯಾಗಿತ್ತು’ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ಕೊರೊನಾ ವೈರಾಣು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಚೀನಾ, ಈ ವೈರಾಣುವಿನ ಪಸರಿಸುವಿಕೆಯನ್ನು ನಿಯಂತ್ರಿಸುವಲ್ಲಿ ಸಫಲವಾಗಿತ್ತು. ಗುರುವಾರ ಚೀನಾದಲ್ಲಿ ಹೊಸದಾಗಿ 138 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಹೋದ ವರ್ಷದ ಮಾರ್ಚ್‌ ಬಳಿಕ ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ.

‘ನಾವೀಗ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದೇವೆ. ಎರಡು ವಾರಗಳ ನಂತರ ಚೀನಾದ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಲಿದ್ದೇವೆ. ಈಗಾಗಲೇ ಕೆಲ ಪ್ರದೇಶಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದೇವೆ. ಆ ಸ್ಥಳಗಳಿಗೂ ಭೇಟಿ ನೀಡಿ ಮಾಹಿತಿ ಕಲೆಹಾಕಲಿದ್ದೇವೆ’ ಎಂದು ಡಬ್ಲ್ಯುಎಚ್‌ಒ ತಂಡದ ಮುಂದಾಳತ್ವ ವಹಿಸಿರುವ ಪೀಟರ್‌ ಬೆನ್‌ ಎಂಬಾರೆಕ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT