ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲವೇ ವಿಶ್ವಸಂಸ್ಥೆ ಮುಚ್ಚಿ: ಝೆಲೆನ್‌ಸ್ಕಿ

Last Updated 6 ಏಪ್ರಿಲ್ 2022, 3:05 IST
ಅಕ್ಷರ ಗಾತ್ರ

ಕೀವ್: ನಮ್ಮ ದೇಶದ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ ಅಥವಾ ನಿಮ್ಮ ಸಂಸ್ಥೆಯನ್ನು ಮುಚ್ಚಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸವಾಲು ಹಾಕಿದ್ದಾರೆ. ಮಕ್ಕಳೂ ಸೇರಿದಂತೆ ಜನರನ್ನು ಕ್ರೂರವಾಗಿ ಕೊಂದಿರುವ ಮೃತದೇಹಗಳ ವಿಡಿಯೊವನ್ನು ಅವರು ಹಂಚಿಕೊಂಡರು.

15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬುಕಾದಲ್ಲಿ ರಷ್ಯಾ ಸೇನೆ ನಡೆಸಿದ ನರಮೇಧವನ್ನು ಇಸ್ಲಾಮಿಕ್ ಸ್ಟೇಟ್ ಗುಂಪಿನಂತಹ ಭಯೋತ್ಪಾದಕ ಕೃತ್ಯಕ್ಕೆ ಹೋಲಿಸಿದರು. ಈ ಸಂಸ್ಥೆಯು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಆದರೆ, ರಷ್ಯಾದ ಆಕ್ರಮಣಶೀಲತೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾವು ವಿಟೊ ಅಧಿಕಾರವನ್ನು ಹೊಂದಿದೆ,‌. ಜಾಗತಿಕ ವೇದಿಕೆಯಲ್ಲಿ ನಿರ್ಣಯಗಳು ಮತ್ತು ಮಾತುಕತೆಗಳನ್ನು ನಿರ್ಬಂಧಿಸಲು ಅದನ್ನು ಪದೇ ಪದೆ ಬಳಸುತ್ತಿದೆ.

‘ರಷ್ಯಾ ವಿರುದ್ಧ ಕ್ರಮಕ್ಕೆ ಯಾವುದೇ ಪರ್ಯಾಯ ಆಯ್ಕೆ ಇಲ್ಲದಿದ್ದರೆ ನಿಮ್ಮ ಸಂಸ್ಥೆಯನ್ನು ವಿಸರ್ಜಿಸಿ’ಎಂದು ಝೆಲೆನ್‌ಸ್ಕಿ ಹೇಳಿದರು.

‘ಕೆಲಸಕ್ಕೆ ಬಾರದ ವಿಶ್ವಸಂಸ್ಥೆಯನ್ನು ಸುಮ್ಮನೆ ಮುಚ್ಚಿಬಿಡಬೇಕು. ಮಹಿಳೆಯರು ಮತ್ತು ಮಹನೀಯರೇ, ನೀವು ವಿಶ್ವಸಂಸ್ಥೆಯನ್ನು ಮುಚ್ಚಲು ಸಿದ್ಧರಿರುವಿರಾ? ಅಂತರರಾಷ್ಟ್ರೀಯ ಕಾನೂನಿನ ಸಮಯ ಕಳೆದುಹೋಗಿದೆ. ಬಾಗಿಲು ಮುಚ್ಚುವುದಿಲ್ಲ ಎಂಬುದು ನಿಮ್ಮ ಉತ್ತರವಾದರೆ, ತಕ್ಷಣ ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಿ’ಎಂದು ಝೆಲೆನ್‌ಸ್ಕಿ ಆಗ್ರಹಿಸಿದ್ದಾರೆ.

ಗಡ್ಡಧಾರಿ, ಮಿಲಿಟರಿಯ ಹಸಿರು ಟಿ–ಶರ್ಟ್‌ ಧರಿಸಿದ್ದ ಝೆಲೆನ್‌ಸ್ಕಿ, ‘ಉಕ್ರೇನ್ ರಾಜಧಾನಿ ಕೀವ್‌ ಹೊರಗಿನ ಪಟ್ಟಣವಾದ ಬುಕಾದಲ್ಲಿ ನಾಗರಿಕರ ವಿರುದ್ಧ ರಷ್ಯಾದ ಸೈನಿಕರು ನಡೆಸಿದ ದೌರ್ಜನ್ಯಗಳ ಕುರಿತಾದ ಚಿತ್ರಣವನ್ನು ಎಳೆ ಎಳೆಯಾಗಿ ಭದ್ರತಾ ಮಂಡಳಿಯ ಮುಂದಿಟ್ಟರು.

‘ಅಪಾರ್ಟ್‌ಮೆಂಟ್‌, ಮನೆಗಳಲ್ಲೇ ಜನರನ್ನು ಕೊಲ್ಲಲಾಗಿದೆ. ಗ್ರೆನೇಡ್‌ಗಳನ್ನು ಸ್ಫೋಟಿಸಲಾಗಿದೆ. ನಾಗರಿಕರನ್ನು ರಸ್ತೆಯಲ್ಲಿ ತಮ್ಮ ಕಾರುಗಳಲ್ಲಿ ಕುಳಿತಿದ್ದಾಗ ಟ್ಯಾಂಕ್‌ಗಳನ್ನು ಹರಿಸಿ ಹತ್ಯೆ ಮಾಡಲಾಗಿದೆ. ಅವರ ವಿಕೃತ ಸಂತೋಷಕ್ಕಾಗಿ ಕೈಕಾಲುಗಳು ಮತ್ತು ಕುತ್ತಿಗೆ ಕತ್ತರಿಸಲಾಗಿದೆ’ಎಂದು ಅವರು ಹೇಳಿದರು. .

‘ಮಹಿಳೆಯರ ಮೇಲೆ ಅವರ ಮಕ್ಕಳ ಮುಂದೆಯೇ ಅತ್ಯಾಚಾರ ಮಾಡಿ ಕೊಲ್ಲಲಾಗಿದೆ’ಎಂದು ಅಳಲು ತೋಡಿಕೊಂಡಿದ್ದಾರೆ.

‘ಆದ್ದರಿಂದ ಇದು ವಿಶ್ವದ ಕೆಲವು ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಭಯೋತ್ಪಾದಕ ಚಟುವಟಿಕೆಗಿಂತ ಭಿನ್ನವಾಗಿಲ್ಲ ಮತ್ತು ಇಲ್ಲಿ ಅದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವೇ(ರಷ್ಯಾ) ಮಾಡಿದೆ’ಎಂದು ಅವರು ಕಿಡಿ ಕಾರಿದರು.

ಬಳಿಕ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್‌, 74 ದೇಶಗಳ 120 ಕೋಟಿ ಜನರ ಮೇಲೆ ಯುದ್ಧ ಪರಿಣಾಮ ಬೀರಿದ್ದು, ಆಹಾರ, ಶಕ್ತಿ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು.

‘ಉಕ್ರೇನ್‌ನಲ್ಲಿನ ಯುದ್ಧವು ತಕ್ಷಣ ನಿಲ್ಲಬೇಕು’ ಎಂದ ಅವರು, ಇದು ‘ಅಂತರರಾಷ್ಟ್ರೀಯ ಕ್ರಮಕ್ಕೆ ಇದುವರೆಗಿನ ದೊಡ್ಡ ಸವಾಲಾಗಿದೆ’ಎಂದು ಹೇಳಿದರು.

ವಿಶ್ವಸಂಸ್ಥೆಯ ತತ್ವಗಳ ಆಧಾರದ ಮೇಲೆ ಶಾಂತಿಸ್ಥಾಪನೆಗಾಗಿ ಗಂಭೀರ ಮಾತುಕತೆಗಳ ಅಗತ್ಯವಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT