ಮನಸ್ಸಿನ ಉದ್ವೇಗ, ತಲ್ಲಣ, ಖುಷಿ, ನೋವು, ನಲಿವು ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ನೆನಪಾಗುವವರೇ ಸ್ನೇಹಿತರು. ಸಣ್ಣ ವಿಷಯದಿಂದ ಮಾತು ಪ್ರಾರಂಭವಾಗಿ ಎಲ್ಲವನ್ನೂ ಹೇಳಿಕೊಳ್ಳುವ ಮಟ್ಟಿಗೆ ಬಂಧ ಬಿಗಿಯಾಗುವ ಸ್ನೇಹವನ್ನು ಮರೆಯಲಾಗದು. ಒಂದು ಘಳಿಗೆಯಲ್ಲಿ ನಾವೊಬ್ಬರನ್ನು ನಂಬಲು ಪ್ರಾರಂಭಿಸುತ್ತೇವೆ. ನಿರ್ದಿಷ್ಟವಾದ ಕಾರಣ ಗೊತ್ತಿಲ್ಲದೇ ಮಾತುಗಳು ಒಂದೊಂದಾಗಿ ತೆರೆದುಕೊಳ್ಳಲು ಪ್ರಾರಂಭಿಸುತ್ತದೆ. ಜೀವದ ಗೆಳೆಯರೇ ಆಗಿರುತ್ತೇವೆ.
ಏನೂ ಅರಿಯದ ವಯಸ್ಸಿನಿಂದ ಎಲ್ಲವನ್ನೂ ಅರಿತು ಮುಪ್ಪಾಗುವ ಹಾದಿಯಲ್ಲಿ ಹಲವಾರು ಸ್ನೇಹ ಹಸ್ತಗಳು ಪ್ರತಿಯೊಬ್ಬರ ಜೀವನದ ಮುಖ್ಯ ಪಾತ್ರಧಾರಿ. ಶಾಲೆಯಲ್ಲಿ ಕದ್ದು ಕಡಲೆ ತಿನ್ನುವಾಗ ಜೊತೆಯಾಗಿ, ಮತ್ತೆ ಸಿಕ್ಕಿ ಬಿದ್ದು ಬೈಗುಳಕ್ಕೂ ಜೊತೆಯಾಗುವ ಗೆಳೆತನದಿಂದ ಹಿಡಿದು, ಕೂದಲು ಉದುರಿ, ಮೈ ಚರ್ಮಗಳು ಸುಕ್ಕುಗಟ್ಟಿ ನಂಗೊಂದು ಕೋಲು ನಿಂಗೊಂದು ಕೋಲು ಎನ್ನುವಾಗಿನ ತನಕ ಅದೆಷ್ಟೋ ಗೆಳೆಯರು ಜೀವನದ ಪಯಣದಲ್ಲಿ ಜೊತೆಯಾಗುತ್ತಾರೆ. ಬಾಲ್ಯದ ಗೆಳೆತನ ಬಲಿತು ಪಕ್ವವಾಗುವುದರೊಳಗೆ ಮುದುಡಿರಬಹುದು. ಅಥವಾ ಅಪರಿಚಿತರಿಂದ ಪರಿಚಯವಾದ ಅದೆಷ್ಟೋ ಸ್ನೇಹಗಳು ಚಿರಕಾಲವೂ ಉಳಿಯಬಹುದು. ಹೀಗೆ ಸ್ನೇಹವೆಂಬುದು ಜೀವನದ ಮಜಲುಗಳಲ್ಲಿ ಹೊಸತನದ ಜೊತೆ ಜೊತೆಗೆ ಹಳಸದೇ ಸಾಗುವ ಪಯಣ.
ಸ್ನೇಹ ಗಟ್ಟಿಯಾಗಿ ಜೀವಿಸಲು, ಬಂಧ ಬಿಗಿಯಾಗಿರಲು ಸ್ನೇಹಿತರ ದಿನವನ್ನು ಆಚರಿಸುತ್ತಾರೆ. ಶಾಲಾ ಕಾಲೇಜು ದಿನಗಳಲ್ಲಿ ಅರಿಯದ ಸಂಭ್ರಮ ಆದರೆ ಕಾಲೇಜಿನ ನಂತರ ಅದಕ್ಕೆ ಸಮಯದ ಅಭಾವವೋ ಅಥವಾ ಒತ್ತಡದ ಬದುಕೋ ಕಾರಣವಿಲ್ಲದೇ ವಾರಗಟ್ಟಲೆ ನಡೆಯುವ ಸಂಭ್ರಮ ಕಾಣೆಯಾಗುತ್ತದೆ. ಫ್ರೆಂಡ್‌ಶಿಪ್ ಡೇ ನೆನಪಾದರೆ ನೆನಪಿಕೊಂಡು ಶುಭಕೋರುವುದು ಇಲ್ಲವಾದರೆ ಇಲ್ಲ ಎಂಬಂತಾ ದಿನ.
ಪ್ರತೀ ವರ್ಷವೂ ಭೊರ್ಗರೆಯುವ ಮಳೆಗಾಲದ ಆಗಸ್ಟ್ ತಿಂಗಳು ಬಂತೆಂದರೆ ಫ್ರೆಂಡ್‌ಶಿಪ್ ಡೇ ಎಂದು ಆಚರಿಸುವ ರೂಢಿಯೊಂದಿದೆ. ಯುನೈಟೆಡ್ ನೇಷನ್ಸ್ ಈ ಆಚರಣೆಯನ್ನು ತಂದಿದೆ. ಜನರ ಮಧ್ಯೆ ಇರುವ ಬಂಧವನ್ನು ಗಟ್ಟಿಗೊಳಿಸಲು, ಗೆಳೆತನವನ್ನು ಆಚರಿಸಲು ಜುಲೈ ತಿಂಗಳ ಕೊನೆಯ ದಿನ ಅಥವಾ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಈ ದಿನಕ್ಕಾಗಿ ಮೀಸಲಿಟ್ಟಿದೆ. ಆದರೆ ಗೆಳೆತನ ಎಂಬುದು ಒಂದು ದಿನಕ್ಕಾಗಿ ಮೀಸಲಿಟ್ಟಿದ್ದಲ್ಲಾ, ಗೆಳೆತನದಲ್ಲಿ ಪ್ರತೀ ದಿನವೂ ಸಂಭ್ರಮವೇ ಪ್ರತೀ ದಿನವೂ ಆಚರಣೆಯೆ. ಒಮ್ಮೆ ಸಂತೋಷ ಮಗದೊಮ್ಮೆ ದುಃಖ ಎಲ್ಲವೂ ಆಚರಣೆಯಾಗಲೇಬೇಕು.
ಸೋತಾಗ ಸಂತ್ವಾನಿಸಿ ‘ನಾನಿದ್ದೇನೆ‘ ಎಂಬ ಭರವಸೆಯನ್ನು ನೀಡಲು, ಅಮ್ಮನಂತೆ ಅಕ್ಕರೆಗೆ, ಅಪ್ಪನಂತೆ ಗದರುವಿಕೆಗೆ, ಅಣ್ಣನಂತೆ ಪ್ರೀತಿಗೆ, ತಂಗಿಯಂತೆ ಕೀಟಲೆಗೆ ಎಲ್ಲವೂ ಗೆಳೆತನದಲ್ಲಿ ಹಾಸುಹೊಕ್ಕಾಗಿವೆ. ಸ್ನೇಹ ಯಾವಾಗಲೂ ಹಚ್ಚ ಹಸಿರು. ನಮ್ಮ ಭಾವನೆಗಳಿಗೆ ಸ್ಪಂದಿಸುವ ಪ್ರತೀ ಜೀವವೂ ಸ್ನೇಹವೇ ಆಗಿದೆ. ಅತ್ತಾಗ ಪ್ರೀತಿಯಿಂದ ನಾಲಿಗೆಯ ಮೂಲಕ ನೆಕ್ಕಿ ಸಂತೈಸುವ ನಾಯಿಯೋ ದನವೋ ಎಲ್ಲೋ ಒಂದು ಕಡೆ ಮನಸ್ಸಿಗೆ ಹತ್ತಿರವಾಗಿ ಬಿಡುತ್ತದೆ. ಬಸ್ಸಿನ ಸಹಪ್ರಯಾಣಿಕನೋ, ಟ್ರಾಫಿಕ್‌ನಲ್ಲಿ ರಸ್ತೆ ದಾಟುವಾಗ ಸಿಕ್ಕಿದ ಸ್ನೇಹವೋ, ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಿದ ಸ್ನೇಹವೋ ಎಲ್ಲವೂ ಮಧುರ ಭಾವನೆಯನ್ನು ಹೊರಸೂಸುವ ಹೂವುಗಳು.
ಸಹಪಾಠಿ, ಸಹೋದ್ಯೋಗಿ, ಸಂಗಾತಿ ಹೀಗೆ ಗೆಳೆತನಕ್ಕೆ ಯಾವುದೇ ಅಂತರವಿಲ್ಲ. ಜಗಳ, ಸಣ್ಣ ಹುಸಿಮುನಿಸುಗಳ ಮಿಶ್ರಣದಿಂದ ಕೂಡಿದ ಗೆಳೆತನ ಇನ್ನೂ ಸೊಗಸು. ‘ಅತಿಯಾದರೆ ಅಮೃತವೂ ವಿಷ‘ ಹಾಗೆ ಜಗಳ, ಮುನಿಸುಗಳು ಅತಿಯಾಗದೆ ಇದ್ದರೆ ಗೆಳೆತನ ನವಿರಾಗಿರುತ್ತದೆ. ಕೊಂಚ ಪ್ರೀತಿ, ಕೊಂಚ ಮುನಿಸುಗಳು ಗೆಳೆತನವನ್ನು ಹೊಸತರಂತೆ ಇರಿಸುತ್ತದೆ.
ಸೊಷಿಯಲ್ ಮೀಡಿಯಾದಲ್ಲಿ ಸಾವಿರಾರು ಜನ ಗೆಳೆಯರು ಎನ್ನುವ ಪಟ್ಟಿ ದೊಡ್ಡದಾಗಿರಬಹುದು, ಆದರೆ ನಮ್ಮ ಭಾವಗಳಿಗೆ ಬೆಸೆದುಕೊಂಡವರೆಷ್ಟು? ನಮ್ಮ ಭಾವನೆಗಳಿಗೆ ಬೆಸೆದುಕೊಂಡು ನಮಗೂ ಸ್ಪಂದಿಸುವ ಮನಸುಗಳಿಗೆ ಗೆಳೆಯರು ಎಂಬ ಹಣೆಪಟ್ಟಿಯನ್ನು ನೀಡಬಹುದು. ಹಿಂದಿನಂತೆ ಊರಲ್ಲಿ ಒಂದು ಹರಟೆಕಟ್ಟೆ ಅಲ್ಲಿ ಗೆಳೆಯರು ಬಂದು ಸೇರುವವರು ಎಂಬ ಇರಾದೆ ಈಗಿಲ್ಲ. ಈಗೇನಿದ್ದರೂ ವಾಟ್ಸಾಪ್‌ನ ಗ್ರೂಪ್‌ಗಳು. ಸಕ್ರಿಯವಾಗಿ ಮತ್ತೆ ನಿಶ್ಕ್ರಿಯವಾಗಿರುವ ಗೆಳೆತನಗಳ ಮದ್ಯೆ ‘ಹಾಯ್ ನಾನಿದ್ದೇನೆ ಹೇಳು‘ ಎನ್ನುವ ಬಂಧವೇ ಮುಖ್ಯವಾಗುತ್ತದೆ. ಸೋಷಿಯಲ್ ಮೀಡಿಯಾದ ಲೈಕ್, ಪೋಸ್ಟ, ಕಾಮೆಂಟ್‌ಗಳನ್ನು ನೋಡಿ ಹುಟ್ಟಿದ ಸ್ನೇಹಗಳು ಈಗಿನ ಕಾಲದಲ್ಲಿ ಹೆಚ್ಚು. ಹೇಗಾದರೂ ಆಗಲಿ ಮನದ ಭಾವನೆಗಳಿಗೆ ಸ್ಪಂದಿಸುವ ಪರಿಶುದ್ಧ ಭಾವವಾಗಿದ್ದರೆ ಅಷ್ಟೇ ಸಾಕು.
ಯಾವುದೋ ಒಂದು ಸುಸ್ತಿನ ಸಂಜೆ ಗೆಳೆಯರ ಹೆಗಲಿಗೊರಗಿ ಒಂದಷ್ಟು ಹರಟಿದಾಗ ಆಯಾಸವೆಲ್ಲವೂ ಕರಗಿ ಹಾಯಾದ ಸಂತೋಷ, ಸಂಭ್ರಮ. ಹಂಚಿದಷ್ಟು ಹೆಚ್ಚಾಗುವ ಸಿಹಿಯಂತೆ ಗೆಳೆತನವನ್ನು ಕಾಯ್ದುಕೊಳ್ಳುವ.
ಜೀವನದ ಸಾಗರದಲ್ಲಿ ನಾವೆಲ್ಲರೂ ಸ್ನೇಹವೆಂಬ ನಾವೆಯಲ್ಲಿ ಸಾಗುತ್ತಿದ್ದೇವೆ. ಸಂಕುಚಿತ ಮನೋಭಾವನೆಗಳು ದೂರವಾಗಿ ಬಂಧಗಳು ಬಿಗಿಯಾಗಿ ಚಲಿಸಬೇಕಿದೆ. ಸ್ನೇಹ ಎಂಬುದು ಕೆಲವೊಂದು ಪರಿಧಿಯನ್ನು ಮೀರಿದ್ದು ಅದಕ್ಕೆ ಇಲ್ಲದಿರುವ ಸಂಬಂಧಗಳ ಕಲ್ಪನೆಯನ್ನು ದೂರವಾಗಿಸಿ ಮುನ್ನಡೆಯಬೇಕಿದೆ. ಮೂರು ಮತ್ತೊಂದು ದಿನದ ಜೀವನದಲ್ಲಿ ಸಿಟ್ಟು, ಮೋಸ, ದ್ವೇಷ, ಕಲಹಗಳನ್ನು ಮರೆತು ಜನರ ಜನರ ನಡುವೆ ಒಳ್ಳೆಯ ಸ್ನೇಹವು ಬೆಸೆಯಲಿ, ಬಂಧ ಬಿಗಿಯಾಗಿ ಸೌಹಾರ್ದಯುತವಾದ ಜೀವನ ಪ್ರತಿಯೊಬ್ಬರದ್ದಾಗಿರಲಿ. ಫ್ರೆಂಡ್‌ಶಿಪ್ ಡೇ ದಿನ ದಿನವೂ ಆಚರಣೆಗೊಳ್ಳುವ ಹಾಗೆ ಸ್ನೇಹವು ಹಸಿರಾಗಿ ಕಂಗೊಳಿಸುತ್ತಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.