ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Valentine Day | ಅಂದಿನ ಕಾವ್ಯಮಯ ನಿವೇದನೆ ಇಂದಿಗೂ ರಸಮಯ

Last Updated 13 ಫೆಬ್ರುವರಿ 2020, 13:47 IST
ಅಕ್ಷರ ಗಾತ್ರ

ಅವಳು ಕಂಡರೆ ಸಾಕು ಮಿಂಚಂತೆ ಮಂಗಮಾಯವಾಗುತ್ತಿದ್ದೆ. ನನಗೂ ಅವಳಿಗೂ ಸಂಭಾಷಣೆ ಪ್ರಾರಂಭವಾಗಲು ಸುಮಾರು 3 ವರ್ಷ ಬೇಕಾಯ್ತು. ಅಲ್ಲಿಯವರೆಗೂ ಕಣ್ಣುಗಳಲ್ಲೇ ನಮ್ಮ ಆತಿಥ್ಯ, ಸಂಭಾಷಣೆಗೆ ಸೇತುವೆಗಳು. ಕಣ್ಣಿನ ಭಾಷೆ ಅವಳೆದುರು ನನ್ನ ಮಾತನ್ನೇ ನುಂಗಿ ಹಾಕಿತ್ತು. ಹೀಗಿದ್ದಾಗ ಅವಳಿಗೆ ಪ್ರೊಪೋಸ್ ಮಾಡಿದ್ದೇ ಒಂದು ರೀತಿಯ ಕಾವ್ಯಮಯ ಕಹಾನಿ.

ಎಲ್ಲವನ್ನೂ ಮಾತಿನಲ್ಲಿ ಹೇಳಲಾಗುವುದಿಲ್ಲ ಎಂದು ನನಗೆ ಮೊದಲೇ ಗೊತ್ತಿತ್ತು. ಏಕೆಂದರೆ ನಾನು ತುಸು ನಾಚಿಕೆ ಸ್ವಭಾವಿ. ಅವಳೆದುರಿಗೆ ನಿಂತರೆ ಭಾಷೆ ಮೈಲಿಗಟ್ಟಲೇ ಹಿಂದೆ ಹೋಗುತ್ತಿತ್ತು. ನಿವೇದನೆ ಮಾಡಬೇಕೆಂದು ಬಂಡಧೈರ್ಯದಿಂದ ಹೋಗಿ ಏನೂ ಹೇಳಲಾಗದೆ ಎಷ್ಟೋ ಸಾರಿ ವಾಪಸ್ ಬಂದಿದ್ದೂ ಇದೆ. ಇದೇ ಕಾರಣ ಇಟ್ಟುಕೊಂಡು ನನ್ನ ಸ್ನೇಹಿತರು ಪುಕ್ಕಲು ಎಂದು ಗೇಲಿ ಮಾಡಿದ್ದು ಇದೆ. ಮನಸ್ಸಿನ ಎಲ್ಲ ಭಾವನೆಗಳನ್ನು ಪುಸ್ತಕದ ಕೊನೆ ಪುಟದಲ್ಲಿ ಮೂರು ಸಾಲು ಗೀಚಿ ಸುಮ್ಮನಾಗುತ್ತಿದ್ದ ನನಗೆ. ಅದೊಂದು ಗಳಿಗೆ ಕೂಡಿ ಬಂತು.

ಅವತ್ತು ತರಾತುರಿಯಲ್ಲಿ ಅವಳಿಗಾಗಿ ಪುಟ್ಟದೊಂದು ಕವಿತೆ ಗೀಚಿಕೊಂಡೆ...

“ಓ ಇನಿಯೇ..
ಎಲ್ಲಾ ಕನಸುಗಳಿಗೆ ರೆಕ್ಕೆಪುಕ್ಕಗಳ ಕಟ್ಟಿ
ನಿನ್ನೆಡೆಗೆ ಬಿಟ್ಟಿರುವೆ..
ನಿನ್ನೆಲ್ಲ ಕನಸುಗಳೊಂದಿಗೆ ಕೂಡಿಸಿಕೋ
ಇಬ್ಬರ ಮಿಲನಕ್ಕೆ ಅಂಬರ ಎದೆಯ ಚಾಚಿದೆ.
ಚಪ್ಪರಕೆ ಬೆಳದಿಂಗಳೇ ಸಾಕ್ಷಿ
ಅರುಂಧತಿಯೇ ಅತಿಥಿ..!!”

ಎನ್ನುವ ಪುಟ್ಟ ಕವಿತೆ ಚೀಟಿಯ ಕೊನೆಯಲ್ಲಿ “(ಗಮನಿಸು :- ಉತ್ತರಕ್ಕಾಗಿ ಈ ಹೃದಯ ಹಪಹಪಿಸುತ್ತಿದೆ)” ಎಂದು ಬರೆದು ಬಾಕ್ಸ್‌ನಲ್ಲಿ ಬರೆದುಕೊಂಡು ಕ್ಲಾಸಿಗೆ ಹೋದೆ. ಅವಳು ಬ್ಯಾಗ್ ಇಟ್ಟು ಹೊರಗೆ ಹೋಗಿದ್ದಳು. ಅಲ್ಲಿ ಯಾರೂ ನೋಡದಂತೆ ಅವಳ ಬ್ಯಾಗ್‌ಗೆ ಚೀಟಿ ಇಡುವುದು ನನ್ನ ಸವಾಲಾಗಿತ್ತು. ಸುಮಾರು ಒಂದು ಗಂಟೆ ನೋಡಿದೆ ಚೀಟಿಯನ್ನು ಬ್ಯಾಗ್‌ನಲ್ಲಿಡಲು ಸಾಧ್ಯವಾಗಲೇ ಇಲ್ಲ. ಇನ್ನು ಕ್ಲಾಸ್‌ಗಳು ಶುರುವಾಗಿ ಬಿಡುತ್ತವೆ ಬೇಗ ಇಡೋ ಎಂದು, ಪಕ್ಕದಲ್ಲಿದ್ದ ಗೆಳೆಯ ಎದೆ ಬಡಿತವನ್ನು ಮತ್ತಷ್ಟು ಹೆಚ್ಚಿಸಿದ್ದ. ಅವಳು ಕೂರುತ್ತಿದ್ದ ಬೆಂಚಿನ ಕೆಳಗೆ ಬಳಪ ಬಿದ್ದಿತ್ತು. ಅದರ ನೆಪದಲ್ಲಿ ಅವಳ ಜಾಗಕ್ಕೆ ಹೋಗಿ ಜೇಬಿನಲ್ಲಿದ್ದ ಚೀಟಿಯನ್ನು ಬ್ಯಾಗ್‌ನೊಳಕ್ಕೆ ತೂರಿಸಿ ಥಟ್ ಅಂತ ನನ್ನ ಪ್ಲೇಸ್‌ಗೆ ಬಂದು ಉಸಿರುಬಿಟ್ಟುಕೊಂಡೆ. ಆದರೆ ಆತುರದಲ್ಲಿ ಬ್ಯಾಗ್‌ನ ಜಿಪ್ ಹಾಕುವುದನ್ನು ಮರೆತು ಬಿಟ್ಟೆ. ಸರ್ ಬಂದರು ಕ್ಲಾಸ್ ಶುರುವಾಯ್ತು. ನನ್ನ ಗಮನವೆಲ್ಲಾ ಬ್ಯಾಗ್ ಕಡೆಗೆ ನೆಟ್ಟಿತ್ತು. ಚೀಟಿ ಇಟ್ಟಿದ್ದ ಕಡೆಗೆ ಅವಳ ಕೈಗಳು ಹೋಗಲೇ ಇಲ್ಲ. ಕೊಂಚ ಬೇಸರವಾಯ್ತು. ಅತ್ತ ಸರಿಯಾಗಿ ಮೂರು ದಿನ ಕಳೆದವು. ಚೀಟಿ ನನ್ನ ಬ್ಯಾಗ್‌ನಲ್ಲಿ ಸಿಕ್ತು. ಆಶ್ಚರ್ಯಗೊಂಡು ಓಪನ್ ಮಾಡಿದರೆ...!!

“ಇನಿಯಾ..
ಮನಸು ಎಂದೋ ತೆರೆದಿತ್ತು
ನಿನ್ನ ಹೊಂಗನಸುಗಳಿಗೆ
ತಡಮಾಡದೆ ರುಜು ಹಾಕೋಣ ಈ ಪ್ರೇಮಿಗಳ ದಿನಕ್ಕೆ,
ಅಂತರಂಗದ ಹಾಡನ್ನು ಕೇಳೋಣ ಬಾ
ಕಡ್ಡಾಯ ರಜೆ ಹೇಳಿ ಇಷ್ಟುದಿನದ ಅಂತರಕ್ಕೆ.”

ಎಂದು ಚೀಟಿಯ ಇನ್ನೊಂದು ಮಗ್ಗುಲಲ್ಲಿ ಬರೆದಿತ್ತು. ಅದನ್ನು ಓದಿದ ಕ್ಷಣದ ಪರಿಣಾಮ ಹೇಳತೀರದು.. ಈಗಲೂ ಇಬ್ಬರ ನಡುವೆ ಅಂತರಂಗದ ಕವಿತೆಗಳು ಮೊಳಗುತ್ತಲೇ ಇವೆ. ಅವಳು ಒಪ್ಪಿ ಅಪ್ಪಿಕೊಂಡು ಇದೇ ಪ್ರೇಮಿಗಳ ದಿನಕ್ಕೆ ನಾಲ್ಕು ವರ್ಷ ಭರ್ತಿಯಾಯ್ತು..

-ಯೋಗೇಶ್ ಮಲ್ಲೂರು

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT