ಗುರುವಾರ , ಫೆಬ್ರವರಿ 25, 2021
19 °C

PV Web Exclusive| ಗೋಶಾಲೆಗೂ ಬಂತು ಐಎಸ್‌ಒ ಪ್ರಮಾಣಪತ್ರ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

‘ಉದ್ಯೋಗ, ವಿಷಮುಕ್ತ ಅನ್ನ, ಸ್ವಾವಲಂಬನೆ’ ಈ ಪರಿಕಲ್ಪನೆಯಲ್ಲಿ ಆರಂಭಗೊಂಡಿರುವ ಕಲಬುರ್ಗಿಯ ಶ್ರೀ ಮಾಧವ ಗೋಶಾಲೆಗೆ ‘ISO 9001-2015 ಪ್ರಮಾಣಪತ್ರ’ ಲಭಿಸಿದೆ.

ಐಎಸ್‌ಒ ಪ್ರಮಾಣ ಪತ್ರ ಪಡೆದ ರಾಜ್ಯದ ಎರಡನೇ ಗೋಶಾಲೆ ಇದು. ಕರ್ನಾಟಕದಲ್ಲಿ ‘ISO 9001 ಪ್ರಮಾಣಪತ್ರ ಪಡೆದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಕೋಳು ಗ್ರಾಮದ ‘ಪಶುತಾಯಿ’ ಗೋಶಾಲೆ ಎನ್ನುವುದು ಶ್ರೀ ಮಾಧವ ಗೋಶಾಲೆಯ ಮಹೇಶ ಬೀದರಕರ ಅವರ ಹೇಳಿಕೆ.

ಗೋವುಗಳಿಗೆ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ಆರೈಕೆ, ದೇಸಿ ಗೋ ತಳಿ ಅಭಿವೃದ್ಧಿ ಮತ್ತು ಪಂಚಗವ್ಯ ಉತ್ಪನ್ನಗಳಲ್ಲಿ ಅಚ್ಚುಕಟ್ಟುತನ ಹಾಗೂ ಸಮರ್ಥ ನಿರ್ವಹಣೆಯ ಮೌಲ್ಯಮಾಪನ ನಡೆಸಿ ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (International Organization for Standardization) ಈ ಪ್ರಮಾಣ ಪತ್ರ ನೀಡಿದೆ. 

ಈ ಗೋಶಾಲೆ ಆರಂಭಗೊಂಡಿದ್ದರ ಹಿಂದೆ ಬೀಡಾಡಿ ದನಗಳ ಕಥೆಯೂ ಇದೆ.

ಮಹೇಶ ಮತ್ತು ಸಂಗಡಿಗರು ಕಲಬುರ್ಗಿ ನಗರದಲ್ಲಿ ಬೀಡಾಡಿ ದನಗಳಿಗೆ ಚಿಕಿತ್ಸೆ ಕೊಡುತ್ತಿದ್ದರು. ಅಕ್ರಮ ಗೋವುಗಳ ಸಾಗಾಣೆಯನ್ನು ಪೊಲೀಸರ ನೆರವಿನಿಂದ ತಡೆಯುತ್ತಿದ್ದರು.

‘ಬಿಡಾಡಿ ದನ ಹಾಗೂ ಅಕ್ರಮ ಸಾಗಣೆಯಿಂದ ರಕ್ಷಿಸಿದ ಗೋವುಗಳನ್ನು ಇರಿಸಲು ನಗರದಲ್ಲಿ ಗೋಶಾಲೆ ಇರಲಿಲ್ಲ. ಜನರಿಗೆ ಗೋವಿನ ಮಹತ್ವವನ್ನು ತಿಳಿಸಿಕೊಡಬೇಕಿತ್ತು. ಹೀಗಾಗಿ ನಾವೇ ಗೋಶಾಲೆ ಆರಂಭಿಸಿದೆವು. 2021ರ ಜನವರಿ 14ಕ್ಕೆ ನಮ್ಮ ಗೋಶಾಲೆಗೆ ನಾಲ್ಕು ವರ್ಷ ತುಂಬುತ್ತದೆ’ ಎನ್ನುತ್ತಾರೆ ಮಹೇಶ.

ದೇಶಿ ಎರೆಹುಳು ಬ್ಯಾಂಕ್

‘ಮಹಾರಾಷ್ಟ್ರದ ದೇವಲಾಪುರದಲ್ಲಿರುವ ಗೋಶಾಲೆಯವರು ಗೋ ಮೂತ್ರ ಹಾಗೂ ಗೋವು ಆಧಾರಿತ  ಉತ್ಪನ್ನಗಳ ಮೇಲೆ ಆರು ಪೇಟೆಂಟ್‌ ಪಡೆದುಕೊಂಡಿದ್ದಾರೆ. ಅಲ್ಲಿಗೆ ಹೋಗಿ 10 ಕೆ.ಜಿ. ದೇಶಿ ಎರೆಹುಳು ತಂದೆವು.  ಕಲಬುರ್ಗಿಯ ಈ ಗೋಶಾಲೆಯಲ್ಲಿ ಎರೆಹುಳು ಗೊಬ್ಬರ ತಯಾರಿಸುತ್ತಿದ್ದೇವೆ. ಸಾಮಾನ್ಯ ಎರೆಹುಳು ಗೊಬ್ಬರಕ್ಕಿಂತ ದೇಶಿ ಎರೆಹುಳು ಗೊಬ್ಬರ ಉತ್ಕೃಷ್ಟ ಗುಣಮಟ್ಟದ್ದಾಗಿರುತ್ತದೆ’ ಎನ್ನುತ್ತಾರೆ ಮಾಧವ ಗೋಶಾಲೆಯವರು.

ಗೊಡ್ಡು ಆಕಳುಗಳಿಗೂ ಆರೈಕೆ: ಹಾಲು ಕೊಡುವ ಗೋವುಗಳು ಮಾತ್ರ ಅಲ್ಲ. ಹಾಲು ಕೊಡದ ಗೋವುಗಳೂ ಲಾಭದಾಯಕ. ಅವುಗಳ ಉತ್ಪನ್ನಗಳ ಮಾರಾಟದಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂಬುದನ್ನು ಸಾರಲು ಇಲ್ಲಿ ಒತ್ತು ನೀಡಲಾಗುತ್ತಿದೆ. ಅದಕ್ಕಾಗಿಯೇ ಇಲ್ಲಿ ಗೋನಾಯಿಲ್‌ ಸೇರಿದಂತೆ ಹಲವು ಉತ್ಪನ್ನ ತಯಾರಿಸಲಾಗುತ್ತಿದೆ.

ರೈತರಿಗೆ ಹಸು ವಿತರಣೆ

ಈ ಗೋಶಾಲೆಯಿಂದ ಉಳುಮೆಗೆ ಅನುಕೂಲವಾಗುವ ರಾಸು, ಹಾಲು ನೀಡುವ ಗೋವುಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ.

‘263 ಹಸು–ರಾಸುಗಳನ್ನು ರೈತರಿಗೆ ಉಚಿತವಾಗಿ ನೀಡಿದ್ದೇವೆ. ಅವುಗಳನ್ನು ಮಾರಾಟ ಮಾಡಬಾರದು ಮತ್ತು ಅವು ಬೇಡವಾದರೆ ಮರಳಿ ನಮ್ಮ ಗೋಶಾಲೆಗೇ ತಂದು ಬಿಡಬೇಕು ಎಂಬ ಷರತ್ತು ವಿಧಿಸುತ್ತೇವೆ. ರೈತರೂ ಅಕ್ಕರೆಯಿಂದ ಅವುಗಳನ್ನು ಸಾಕುತ್ತಿದ್ದಾರೆ. ಪ್ರತಿ ರೈತರ ಮನೆಯಲ್ಲಿ ಗೋವು ಇರಬೇಕು ಎಂಬ ಉದ್ದೇಶ ನಮ್ಮದು’ ಎನ್ನುತ್ತಾರೆ ಈ ಗೋಶಾಲೆಯವರು.  

‘ಅನೇಕ ಗೋಭಕ್ತರ ನಿರಂತರ ನೆರವಿನಿಂದಾಗಿ ಗೋಶಾಲೆ ಈ ಮೈಲುಗಲ್ಲು ಸಾಧಿಸಿದೆ.  ಸದ್ಯ 93 ಗೋವುಗಳಿವೆ. ಬಡ ಬಾಲಕಿಯರ ಶಿಕ್ಷಣಕ್ಕೆ ಗುರುಕುಲ, ಪಂಚಗವ್ಯ ಚಿಕಿತ್ಸೆಗಾಗಿ 10 ಹಾಸಿಗೆಯ  ‘ಪಂಚಗವ್ಯ ಆಸ್ಪತ್ರೆ’, ಕೃಷಿಕರಿಗೆ ಗೋವು ಆಧಾರಿತ ತರಬೇತಿ ಕೇಂದ್ರ, ಆಧ್ಯಾತ್ಮಿಕ, ವೈಜ್ಞಾನಿಕ, ಆರ್ಥಿಕವಾಗಿ ಗೋವು... ಹೀಗೆ ಗೋವಿಗೆ ಸಂಬಂಧಿಸಿದ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ ಆರಂಭಿಸುವ ಉದ್ದೇಶ ಇದೆ’ ಎನ್ನುತ್ತಾರೆ ಅವರು.

‘ಗೋಶಾಲೆಯ ಉತ್ಪನ್ನಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಗೋಶಾಲೆಗಳಿಗೆ ಮತ್ತು ಗೋವು ಆಧಾರಿತ ಉತ್ಪನ್ನಗಳಿಗೆ ಸಣ್ಣ ಕೈಗಾರಿಕೆಯ ಸ್ಥಾನಮಾನ ಕೊಡಬೇಕಿದೆ. ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳುವ ಮತ್ತು ನಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಹೆಚ್ಚಿಸಲು ಐಎಸ್‌ಒ ಪ್ರಮಾಣ ಪತ್ರ ಪಡೆದಿದ್ದೇವೆ. ಕೇವಲ 10 ಆಕಳು ಸಾಕಿಕೊಂಡು ನಾಲ್ಕೈದು ಸಣ್ಣ ಯಂತ್ರಗಳನ್ನು ಇಟ್ಟುಕೊಂಡು ಗೋವು ಆಧಾರಿತ ಉತ್ಪನ್ನ ಉತ್ಪಾದಿಸಿ ಬದುಕು ರೂಪಿಸಿಕೊಳ್ಳಬಹುದು ಎಂಬುದನ್ನು ನಿರೂಪಿಸುವುದು ಮತ್ತು ಅದಕ್ಕೆ ಪ್ರೇರಣೆ ನೀಡುವುದು. ಗೋವು ಆಧಾರಿತ ದೇಶೀಯ ಜೈವಿಕ ಉತ್ಪನ್ನ ಹೆಚ್ಚಿಸಿ, ವಿದೇಶದಿಂದ ಕೀಟನಾಶಕ, ರಸಗೊಬ್ಬರ ಮತ್ತು ಅಲೋಪಥಿ ಔಷಧಿ ಆಮದು ಕಡಿಮೆ ಮಾಡುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಮಹೇಶ ಬೀದರಕರ (ಮೊ. 92428 68095)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು