ಸೋಮವಾರ, ಜನವರಿ 17, 2022
27 °C
ಮಣ್ಣು ತಿನ್ನಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ– ಡಾ. ಮನಗೊಳಿ

PV Web Exclusive | ಕಪ್ಪತ್ತಗುಡ್ಡದಲ್ಲಿ ಮಣ್ಣು ಮೇಯುವ ಕುರಿಗಳು!

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

‘ಕಣ್ಣಿದ್ದಾವ ಕನಕಗಿರಿ ನೋಡಬೇಕು; ಕಾಲಿದ್ದಾವ ಕಪ್ಪತ್ತಗಿರಿ ಹತ್ತಬೇಕು’ ಎಂಬ ಮಾತನ್ನು ಎಷ್ಟು ಉಜ್ಜಿದರೂ ಕ್ಲೀಷೆ ಅಂತ ಅನ್ನಿಸುವುದಿಲ್ಲ. ಕಪ್ಪತ್ತಗುಡ್ಡ ರಮ್ಯತೆಯಿಂದಷ್ಟೇ ಅಲ್ಲದೇ; ನೈಸರ್ಗಿಕ ಸಂಪತ್ತಿನಿಂದಲೂ ಶ್ರೀಮಂತವಾಗಿದೆ. ಹಾಗೆಯೇ, ಇದರ ಒಡಲಲ್ಲಿರುವ ಚೌಳುಮಣ್ಣಿಗೆ ಕುರಿಗಳ ಆರೋಗ್ಯ ಕಾಪಾಡುವ ಗುಣವಿದೆ ಎಂದು ಕೆಲವು ಕುರಿಗಾಹಿಗಳು ನಂಬಿದ್ದಾರೆ. ಆದರೆ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಗುರುರಾಜ್‌ ಮನಗೊಳಿ, ‘ಇದು ತಪ್ಪು ನಂಬಿಕೆ. ಅಜ್ಞಾನದಿಂದ ಕುರಿಗಳು ಮಣ್ಣನ್ನು ಜಾಸ್ತಿ ತಿನ್ನಲು ಬಿಟ್ಟರೆ ಆಪತ್ತು ಖಂಡಿತ’ ಎಂದು ಎಚ್ಚರಿಸುತ್ತಾರೆ.

***

ಕಪ್ಪತ್ತಗುಡ್ಡದಲ್ಲಿರುವ ಚೌಳುಮಣ್ಣಿನ ಗುಂಡಿಯಲ್ಲಿ ಮೇಯುತ್ತಿದ್ದ ಕುರಿಗಳಲ್ಲಿ ಕೆಲವು ಮಣ್ಣು ನೆಕ್ಕಿ ರುಚಿ ನೋಡುತ್ತಿದ್ದವು. ಉಳಿದವು ಕಾಲಿನಿಂದ ನೆಲ ಕೆರೆದು ಮಣ್ಣಿನ ಹೆಂಟೆಯನ್ನು ಮಿಠಾಯಿಯಂತೆ ತಿನ್ನುತ್ತಿದ್ದವು!

ಕುರಿಗಳು ಚೌಳುಮಣ್ಣು ತಿನ್ನುವ ವಿಡಿಯೊ ಒಂದು ವೈರಲ್‌ ಆಗಿದ್ದು, ಅದರಲ್ಲಿ ಕುರಿಗಾಹಿ ತನ್ನ ಕುರಿಗಳನ್ನು ಚೌಳುಗುಂಡಿಗೆ ಯಾಕೆ ಕರೆ ತರುತ್ತೇನೆ ಎಂಬುದರ ಬಗ್ಗೆ ನೀಡುವ ವಿವರಣೆ ಆಸಕ್ತಿದಾಯಕವಾಗಿದ್ದು, ಅದು ಹೀಗಿದೆ: ‘ವಾರದಲ್ಲಿ ಎರಡ್ಮೂರು ದಿನ ಕುರಿಗಳನ್ನ ಇಲ್ಲಿಗ್‌ ಕರ್ಕೋಬಂದು ಮಣ್ ತಿನ್ನೋಕ್‌ ಬಿಟ್ಟೇ ಬಿಡ್ತಿವ್ರೀ. ಈ ನೆಲದಾಗ ಉಪ್ಪು ಮತ್ತು ಮಣ್ಣು ಏಕ ಐತಿ. ರುಚಿ ಅನಸೋದ್ರಿಂದ ಕುರಿಗಳು ಮಣ್‌ ತಿಂತ್ರಾವ್ರೀ. ಅವಕ್ಕೆ ಏನೂ ಆಗಂಗಿಲ್ಲ. ಆರೋಗ್ಯನೂ ಚಲೋ ಐತಿ...’

ಈ ವಿಚಾರವಾಗಿ ಗದಗ ಜಿಲ್ಲೆ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಗುರುರಾಜ್‌ ಮನಗೊಳಿ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ‘ಅಜ್ಞಾನದಿಂದ ವರ್ತಿಸಿದರೆ ಆಪತ್ತು ಖಂಡಿತ. ಈ ವಿಚಾರವಾಗಿ ಕೆಲವು ಕುರಿಗಾಹಿಗಳಿಗೆ ಅರಿವಿನ ಕೊರತೆ ಇದೆ. ಕಪ್ಪತ್ತಗುಡ್ಡದಲ್ಲಿ ವನಸ್ಪತಿ ಸಸ್ಯಗಳು ಹೆಚ್ಚಾಗಿದ್ದು ಕುರಿಗಳು ಅದರ ಚಿಗುರನ್ನು ಮೇಯುತ್ತವೆ. ಇದರಿಂದಾಗಿ, ಅವು ದಷ್ಟಪುಷ್ಟವಾಗಿ ಬೆಳೆಯುತ್ತವೆ. ಮಣ್ಣು ತಿನ್ನಿಸಿದರೆ ಕುರಿಗಳ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಯಾವ ಸಂಶೋಧನೆಯಿಂದಲೂ ದೃಢಪಟ್ಟಿಲ್ಲ’ ಎಂದು ಹೇಳಿದರು.

‘ಚೌಳುಮಣ್ಣಿನಲ್ಲಿ ಲವಣ ಮತ್ತು ಇತರ ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಅದರ ರುಚಿ ಭಿನ್ನವಾಗಿರುತ್ತವೆ. ಈ ಕಾರಣಕ್ಕಾಗಿ ಕುರಿಗಳು ಮಣ್ಣು ನೆಕ್ಕುತ್ತವೆ. ಕುರಿಗಳು ಮಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದರೆ ತೊಂದರೆ ಇಲ್ಲ. ಹೆಚ್ಚು ತಿಂದರೆ  ಸಾಯುವುದು ಗ್ಯಾರಂಟಿ’ ಎಂದು ಅವರು ಹೇಳಿದರು.

ಶಿರಹಟ್ಟಿ ತಾಲ್ಲೂಕಿನ ಕಪ್ಪತ್ತಗುಡ್ಡದ ಸೆರಗಿನಲ್ಲಿ ವಾಸಿಸುವ ಹನುಮಂತ ಬಸಪ್ಪ ಲಬಾಪುರ ಎಂಬ ಕುರಿಗಾಹಿ ತಮ್ಮ ಕುರಿಗಳನ್ನು ಮೇಯಿಸಲು ಕಪ್ಪತ್ತಗುಡ್ಡವನ್ನೇ ಆಶ್ರಯಿಸಿದ್ದಾರೆ. ಅವರಿಗೆ ಈ ವಿಚಾರವಾಗಿ ಸ್ವಲ್ಪ ಜಾಗೃತಿ ಇದ್ದು, ಕುರಿಗಳು ಚೌಳುಮಣ್ಣನ್ನು ಹೆಚ್ಚು ತಿನ್ನದಂತೆ ಜಾಗೃತಿ ವಹಿಸುತ್ತಿದ್ದಾರೆ.

‘ಕುರಿ ಮೇಯಿಸಲು ದಿನಾ ಕಾಡಿಗೆ ಹೋಗುತ್ತೇವೆ. ಕುರಿಗಳು ಇಲ್ಲಿನ ಕುರುಚಲು ಗಿಡಗಳನ್ನು ಚೆನ್ನಾಗಿ ಮೇಯುತ್ತವೆ. ಕಾಡಿನ ಕೆಲವೆಡೆ ಚೌಳುಮಣ್ಣಿನ ಗುಂಡಿಗಳಿದ್ದು, ಅದನ್ನು ನೋಡಿದ ತಕ್ಷಣವೇ ಕುರಿಗಳು ಅಲ್ಲಿಗೆ ನುಗ್ಗುತ್ತವೆ. ಅದರಲ್ಲಿ ಉಪ್ಪಿನಂಶ ಇರುವುದರಿಂದ ಮಣ್ಣನ್ನು ನೆಕ್ಕುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ತಿಂದರೆ ಕುರಿಗಳಿಗೆ ತೊಂದರೆ ಆಗುತ್ತದೆ. ಹಾಗಾಗಿ, ಸ್ವಲ್ಪ ಸಮಯ ಮಾತ್ರ ಕುರಿಗಳನ್ನು ಅಲ್ಲಿ ಬಿಡುತ್ತೇವೆ. ಬಳಿಕ ಅಲ್ಲಿಂದ ಓಡಿಸಿಕೊಂಡು ಬರುತ್ತೇವೆ’ ಎನ್ನುತ್ತಾರೆ ಅವರು.

‘ವಾರದ ಹಿಂದೆ ಕಪ್ಪತ್ತಗುಡ್ಡದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದೆವು. ಆ ವೇಳೆ ಯಾವುದೋ ಒಂದು ವಿಷದ ಸೊಪ್ಪು ತಿಂದು 40 ಕುರಿಗಳು ಸತ್ತುಹೋದವು. ಕಪ್ಪತ್ತಗುಡ್ಡದಲ್ಲಿ ಸಾಕಷ್ಟು ಬಗೆಯ ಸಸ್ಯಗಳು ಇರುವುದರಿಂದ ಕುರಿಗಳು ಯಾವ ಸೊಪ್ಪು ತಿಂದವು ಅಂತ ತಿಳಿಯಲಿಲ್ಲ. ಸೊಪ್ಪು ತಿಂದ ಕುರಿಗಳ ಹೊಟ್ಟೆ ಉಬ್ಬರಿಸಿಕೊಂಡಿತು. ಅಲ್ಲಿಂದ ಮುಂದಕ್ಕೆ ಹೆಜ್ಜೆ ಇಡಲು ಸಾಧ್ಯವಾಗದೇ ಕೊನೆಗೆ ಸತ್ತೇ ಹೋದವು. ಇದರಿಂದಾಗಿ ತುಂಬ ಲುಕ್ಸಾನು ಆಯಿತು’ ಎಂದು ಅವರು ಹೇಳಿದರು.

ಕಪ್ಪತ್ತಗುಡ್ಡದ ಚಿಕ್ಕವಡ್ಡಟ್ಟಿ ಸಮೀಪದ ಯಲ್ಲಮ್ಮ ಗುಡಿ ಮುಂಭಾಗದಲ್ಲಿರುವ ಕೊಳದ ಆಸುಪಾಸಿನಲ್ಲಿ ಈ ಘಟನೆ ಸಂಭವಿಸಿದ್ದು, ಈಗ ಕುರಿಗಾಹಿಗಳು ಆ ಪ್ರದೇಶಕ್ಕೆ ತಮ್ಮ ಕುರಿಗಳನ್ನು ಮೇಯಿಸಲು ಹೋಗುವುದನ್ನೇ ನಿಲ್ಲಿಸಿದ್ದಾರೆ.

‘ಬಸುರಿಗೆ ಬಯಕೆ ಅಂತ ಹೇಳಿ ಹಿಂದಿನ ಕಾಲದಲ್ಲಿ ಹಿರಿಯರು ಆಕೆಗೆ ಮಣ್ಣಿನ ರುಚಿ ತೋರಿಸುತ್ತಿದ್ದರು. ಅಂತೆಯೇ, ಕಪ್ಪತ್ತಗುಡ್ಡದ ಆಸುಪಾಸಿನಲ್ಲಿರುವ ಕುರಿಗಾಹಿಗಳು ತಮ್ಮ ಕುರಿಗಳಿಗೆ ಆಗಾಗ ಚೌಳುಮಣ್ಣಿನ ರುಚಿ ತೋರಿಸುತ್ತಾರೆ. ಎಲ್ಲೆಡೆಯೂ ಇದು ನಡೆಯುತ್ತದೆ. ಆದರೆ, ಕುರಿಗಳು ಹೆಚ್ಚು ಮಣ್ಣು ತಿನ್ನದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಆಪತ್ತು ಗ್ಯಾರಂಟಿ’ ಎಂದು ಎಚ್ಚರ ನೀಡುತ್ತಾರೆ ಡಾ. ಗುರುರಾಜ ಮನಗೊಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.