ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತರುವ ಅಂಗಳದಲ್ಲಿನ ನಾಟಿ ಕರಿಬೇವು

Last Updated 21 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ಇನ್ನೂ ಕರಿಬೇವಿನ ಗಿಡಗಳು ಇವೆಯಾ?’ – ಗಿರಿರಾಜ್ ಅವರಿಗೆ ಫೋನ್ ಮಾಡಿದಾಗ ವಿಚಾರಿಸಿದೆ. ಮೂರು ವರ್ಷಗಳ ಹಿಂದೆ ಅವರ ಮನೆಗೆ ಹೋಗಿದ್ದಾಗ ಅರ್ಧ ಎಕರೆ ಅಂಗಳದಲ್ಲಿ ಸೊಂಪಾಗಿ ಬೆಳೆದಿದ್ದ ಕರಿಬೇವಿನ ಮರಗಳನ್ನು ನೋಡಿ ಬೆರಗಾಗಿದ್ದೆ. ಈಗಲೂ ಆ ಗಿಡಗಳು ಹಾಗೆ ಇದೆಯಾ ಎಂಬ ಕುತೂಹಲದಿಂದ ಕೇಳಿದ್ದೆ. ಅದಕ್ಕವರು, ‘ಕರಿಬೇವಿನ ಗಿಡಗಳೂ ಇವೆ. ಅವುಗಳ ಜತೆಗೆ ತೆಂಗು, ತರಹೇವಾರಿ ಹಣ್ಣಿನ ಗಿಡಗಳಿವೆ. ದೇವರ ಪೂಜೆಗಾಗುವಷ್ಟು ಹೂವು ಕೊಡುವ ಗಿಡಗಳನ್ನು ಹಾಕಿದ್ದೇನೆ. ಒಮ್ಮೆ ಬನ್ನಿ’ ಎಂದು ಆಹ್ವಾನಿಸಿದರು.

ಅಂದ ಹಾಗೆ, ಚಿತ್ರದುರ್ಗದ ಹೊರವಲಯದ ಮೆದೇಹಳ್ಳಿಯಲ್ಲಿ ಗಿರಿರಾಜ್ ಅವರ ಮನೆ ಇದೆ. ಮನೆ ಎದುರಿಗಿರುವ ಅರ್ಧ ಎಕರೆ ಅಂಗಳದಲ್ಲಿ ಕರಿಬೇವು ಬೆಳೆಯುತ್ತಾರೆ. ಸದ್ಯ ಮುನ್ನೂರು ಮರಗಳಿವೆ. ಹಿಂದೊಮ್ಮೆ ಅವರ ಮನೆಗೆ ಹೋಗಿದ್ದಾಗ, ಅಷ್ಟೊಂದು ಕರಿಬೇವು ಮರಗಳನ್ನು ಕಂಡು ಅಚ್ಚರಿಪಟ್ಟಿದೆ. ಆಗಾಗ್ಗೆ ‘ಕರಿಬೇವಿನ ಕುಟುಂಬದ’ ಬಗ್ಗೆ ವಿಚಾರಿಸುತ್ತಲೇ ಇದ್ದೆ. ಈಗ್ಗೆ ಕೆಲವು ದಿನಗಳ ಹಿಂದೆ ಅವರ ಮನೆಗೆ ಹೋಗಿದ್ದಾಗ, ಅಲ್ಲಿ, ಕರಿಬೇವಿನ ಜತೆಗೆ, ದಾಳಿಂಬೆ, ಹಲಸು, ಮಾವು, ಸಪೋಟ, ಸೀಬೆ, ಹೂವಿನಗಿಡಗಳ ವೈವಿಧ್ಯ ಕಂಡು ಅಚ್ಚರಿಯಾಯಿತು. ‘ಕರಿಬೇವಿನ’ ಪ್ರೀತಿ ಮುಂದುವರಿದಿದ್ದನ್ನು ಕಂಡು ಖುಷಿಯೂ ಆಯಿತು.

ಕರಿಬೇವಿನ ಕೃಷಿ ಹಿನ್ನೆಲೆ

ಗಿರಿರಾಜ್ ದಾವಣಗೆರೆ ಜಿಲ್ಲೆಯವರು. ಹದಿನಾಲ್ಕು ವರ್ಷಗಳ ಹಿಂದೆ ಕುಟುಂಬ ಸಹಿತ ವ್ಯಾಪಾರಕ್ಕಾಗಿ ಚಿತ್ರದುರ್ಗಕ್ಕೆ ಬಂದು ಮೆದೇಹಳ್ಳಿಯಲ್ಲಿ ಅರ್ಧ ಎಕರೆ ಜಮೀನು ಖರೀದಿಸಿದರು. ಒಂದು ಭಾಗದಲ್ಲಿ ಮನೆ ಕಟ್ಟಿಕೊಂಡರು, ಎದುರಿಗೆ ಖಾಲಿ ನಿವೇಶನವಿತ್ತು. ಪಕ್ಕದಲ್ಲೇ ಸೊಂಪಾಗಿ ಬೆಳೆದ ಕರಿಬೇವಿನಗಿಡವಿತ್ತು. ಜತೆಗೆ ತೆರೆದ ಬಾವಿಯೂ ಇತ್ತು.

‘ಖಾಲಿ ಜಾಗ ಯಾಕೆ ಬಿಡಬೇಕು. ಕಣ್ಣು ತಂಪಾಗಿಸಲು ಒಂದಷ್ಟು ಹಸಿರು ಇರಲಿ’ ಎಂದು ಸ್ವಲ್ಪ ಹೂವು, ಪತ್ರೆ, ಮನೆ ಬಳಕೆಗಾಗಿ ಸೊಪ್ಪು, ತರಕಾರಿ ಬೆಳೆಯುತ್ತಿದ್ದರು. ನೀರಿಗೆ ಕೊರತೆ ಇರಲಿಲ್ಲ. ಆದರೆ, ಲಭ್ಯವಾಗುತ್ತಿದ್ದ ನೀರು ಬಹಳ ಗಡಸು. ಹಾಗಾಗಿ ಇಲ್ಲಿ, ಬೇರೆ ಗಿಡಗಳೆಲ್ಲ ಸೊರಗಿಬಿಡುತ್ತಿದ್ದವು. ಆದರೆ, ಕರಿಬೇವಿನ ಗಿಡ ಮಾತ್ರ ಈ ಗಡಸು ನೀರಿಗೆ ಜಗ್ಗಿರಲಿಲ್ಲ. ಒಮ್ಮೆ ಗಿರಿರಾಜ್ ಅವರ ಗೆಳೆಯ ಶರಣಯ್ಯ ಮನೆಗೆ ಬಂದಾಗ, ಕರಿಬೇವಿನ ಗಿಡ ತೋರಿಸಿ, ‘ನೋಡ್ರಿ ಈ ನೆಲದಲ್ಲಿ ಕರಿಬೇವು ಮಾತ್ರ ಬೆಳೆಯುತ್ತೆ ಅನ್ನಿಸುತ್ತೆ. ಒಂದಷ್ಟು ಗಿಡ ಹಾಕಿ ನೋಡಿ’ ಎಂದು ಸಲಹೆ ಕೊಟ್ಟರು. ಗೆಳೆಯರ ಸಲಹೆ ಒಪ್ಪಿದ ಗಿರಿರಾಜ್, ಸಹೋದರ ರವಿಯೊಂದಿಗೆ ಸೇರಿ ನರ್ಸರಿಯಿಂದ ಆರೇಳು ತಿಂಗಳ ಪ್ರಾಯದ ನಾಟಿ ತಳಿಯ 60 ಕರಿಬೇವಿನ ಸಸಿ ತಂದು ನೆಟ್ಟರು. ಇದೆಲ್ಲ ಶುರುವಾಗಿದ್ದು ಒಂಬತ್ತು ವರ್ಷಗಳ ಹಿಂದೆ.

ಸುಮ್ಮನೆ ನೆಟ್ಟಿದ್ದು...

ನರ್ಸರಿಯಿಂದ ಸಸಿ ತಂದ ಮೇಲೆ, ಅಳತೆ, ಅಗಲ ಏನೂ ನೋಡಲಿಲ್ಲ. ತಮಗೆ ತಿಳಿದಂತೆ ನಾಟಿ ಮಾಡಿದರು. ಅದಕ್ಕೂ ಮುನ್ನ ಗುಂಡಿ ತೆಗೆದು ನಾಲ್ಕೈದು ಲೋಡ್‌ ಕುರಿ ಗೊಬ್ಬರ, ಮಣ್ಣು ಹಾಕಿ ಭೂಮಿ ಹದ ಮಾಡಿದರು. ಪ್ರತಿ ಗುಂಡಿಗೊಂದರಂತೆ, ಅರ್ಧ ಎಕರೆಯಲ್ಲಿ 150 ನಾಟಿ ಕರಿಬೇವಿನ ಸಸಿಗಳನ್ನು ನೆಟ್ಟರು.

ಆಗ, ತೆರೆದ ಬಾವಿಯಲ್ಲಿ ನೀರಿತ್ತು. ಅದನ್ನೇ ಬಳಸಿಕೊಂಡು ಗಿಡಗಳನ್ನು ಬೆಳೆಸಿದರು. ಕ್ರಮೇಣ ಮಳೆ ಕೊರತೆಯಿಂದಾಗಿ. ಬಾವಿಯಲ್ಲೂ ನೀರು ಕಡಿಮೆಯಾಗುತ್ತಾ ಹೋಯಿತು. ಒಂದು ದಿನ ಬಾವಿ ಬತ್ತೇಬಿಡ್ತು. ನಂತರ ಕೊಳವೆ ಬಾವಿ ಕೊರೆಸಿದರು. ನೀರು ಸಿಕ್ಕಿತ್ತು. ಆದರೆ, ಆ ನೀರೂ ಕ್ಷಾರಯುಕ್ತ. ಯಾವುದಕ್ಕೂ ಉಪಯೋಗವಿಲ್ಲದಾಯಿತು. ಅದೃಷ್ಟವೆಂದರೆ, ಆ ನೀರಿನಲ್ಲಿ ಕರಿಬೇವು ಚೆನ್ನಾಗಿ ಬಂತು. ಒಂಬತ್ತು ತಿಂಗಳಲ್ಲೇ ಕೊಯ್ಲೂ ಶುರುವಾಯಿತು. ನಾಟಿ ಮಾಡಿದ ಒಂದೂವರೆ ವರ್ಷದಲ್ಲಿ ಕರಿಬೇವಿನ ಮರಗಳು ನಿತ್ಯ ಆದಾಯ ಕೊಡಲು ಆರಂಭಿಸಿದವು. ಇದರಿಂದ ಉತ್ತೇಜನಗೊಂಡ ಗಿರಿರಾಜ್, ಪಕ್ಕದ ಗೆಳೆಯರ ಜಮೀನು ಪಡೆದುಕೊಂಡು ಮತ್ತೊಂದಿಷ್ಟು ಗಿಡಗಳನ್ನು ನಾಟಿ ಮಾಡಿದರು. ಇಡೀ ಮನೆಯ ಅಂಗಳದ ತುಂಬಾ 300 ಕರಿಬೇವಿನ ಗಿಡಗಳು ಬೆಳೆಯಲಾರಂಭಿಸಿದವು.

ನಿತ್ಯದ ಮಾರಾಟ

ಪ್ರತಿನಿತ್ಯ ಕುಟುಂಬದ ಮಹಿಳಾ ಸದಸ್ಯರು ಕರಿಬೇವು ಕಟಾವು ಮಾಡಿ, ಸಿವುಡು (ಕಂತೆ) ಕಟ್ಟಿ ಸಿದ್ದ ಮಾಡಿಟ್ಟರೆ, ಪುರುಷರು ಅವುಗಳನ್ನು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿ ಬರುತ್ತಿದ್ದರು. ಈಗಲೂ ಅದೇ ಪ್ರಕ್ರಿಯೆ ಮುಂದುವರಿಸಿದ್ದಾರೆ. ‘ದಿನಕ್ಕೆ ಎರಡು ಗಿಡವನ್ನು ಮಾತ್ರ ಕತ್ತರಿಸುತ್ತೇವೆ. 90 ದಿನಗಳಿಗೊಮ್ಮೆ ಎರಡೆರಡು ಗಿಡಗಳಂತೆ ಕಟಾವು ಮಾಡುತ್ತೇವೆ. ಒಂದು ಸುತ್ತು ಎಲ್ಲ ಗಿಡಗಳನ್ನೂ ಕಟ್ಟು ಮಾಡುತ್ತೇವೆ ನಂತರ ಅವು ಚಿಗುರುತ್ತವೆ, ಹೀಗಾಗಿ ವರ್ಷಪೂರ್ತಿ ಇಳುವರಿ ಇರುತ್ತದೆ’ ಎನ್ನುತ್ತಾರೆ ಗಿರಿರಾಜ್ .

ಸಂಜೆ ವೇಳೆಗೆ ಮನೆಯವರೆಲ್ಲರೂ ಒಟ್ಟುಗೂಡಿ ಖುಷಿಯಿಂದ ಸೊಪ್ಪು ಕಟ್ಟುವ ಕೆಲಸದಲ್ಲಿ ನಿರತರಾಗುತ್ತಾರೆ. ಒಂದೆರೆಡು ಗಂಟೆಗಳಲ್ಲಿ ಕೆಲಸ ಮಾಡಿ ಮುಗಿಸುತ್ತಾರೆ. ಒಂದು ಕಟ್ಟಿಗೆ ₹ 2 ಮಾರಾಟ ಮಾಡುತ್ತಾರೆ ಕೆಲವರು ಮನೆಗೇ ಬಂದು ತಾಜಾ ಸೊಪ್ಪು ಖರೀದಿಸುತ್ತಾರೆ. ಒಂದು ಪಕ್ಷ ಹಬ್ಬ, ಮದುವೆಯ ಕಾರಣದಿಂದ ಮಾರುಕಟ್ಟೆಗೆ ಇವರು ಸೊಪ್ಪು ಕಳಿಸದಿದ್ದರೆ, ಮನೆಗೆ ಬಂದು ಕೊಂಡೊಯ್ಯುವಂತಹ ಗ್ರಾಹಕರೂ ಇದ್ದಾರೆ ಎನ್ನುವುದು ಗಿರಿರಾಜ್ ಅವರ ಪತ್ನಿ ಅಭಿಪ್ರಾಯ.

ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಕಟ್ಟುಗಳನ್ನು ಕಟ್ಟುತ್ತಿರುವುದು
ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಕಟ್ಟುಗಳನ್ನು ಕಟ್ಟುತ್ತಿರುವುದು

ಶ್ರಮವಿಲ್ಲದ ಬದುಕು

ಸಾಮಾನ್ಯವಾಗಿ ನಾಟಿ ಅಥವಾ ಜವಾರಿ ಕರಿಬೇವಿನ ತಳಿಗಳಿಗೆ ರೋಗ–ಕೀಟಬಾಧೆ ಕಡಿಮೆ. ಇವರು ನಾಟಿ ತಳಿ ಬೆಳೆಸಿರುವುದರಿಂದ, ನಿರ್ವಹಣೆಯ ಹೊರೆಯೂ ಕಡಿಮೆ. ಆದರೆ ಬೀಜ ಹೆಚ್ಚಾದರೆ ಇಳುವರಿ ಕಡಿಮೆಯಾಗುತ್ತದೆ. ಕೊಯ್ಲು ಮಾಡುವ 20 ದಿನಗಳ ಮುನ್ನವೇ ಕೀಟ ನಾಶಕ ಸಿಂಪಡಿಸುವುದರಿಂದ ಬೀಜದ ಪ್ರಮಾಣ ಕಡಿಮೆಯಾಗುತ್ತದೆ. ಆದರೆ, ಗಿಡಗಳಿಗೆ ಹಾನಿಯಾಗುವುದಿಲ್ಲ’ ಎನುತ್ತಾರೆ ಗಿರಿರಾಜ್ ಸಹೋದರ ರವಿ. ಈ ವರ್ಷ ಕೀಟಬಾಧೆ ಹೆಚ್ಚಾಗಿತ್ತು. ಅಂಟಿರುವ ಹಳದಿ ಹಾಳೆಯನ್ನು ಎಲ್ಲ ಗಿಡಗಳಿಗೂ ನೇತು ಹಾಕಿದ್ದರಿಂದ, ಕೆಲವೇ ದಿನಗಳಲ್ಲಿ ಕೀಟ ಬಾಧೆ ನಿಯಂತ್ರಣಕ್ಕೆ ಬಂದಿತು ಎಂದರು ಗಿರಿರಾಜ್.

ಸದ್ಯ ಕರಿಬೇವಿನ ಕೃಷಿಯಿಂದ ತಿಂಗಳಿಗೆ ಸರಾಸರಿ ಖರ್ಚು–ವೆಚ್ಚ ಕಳೆದು ಅಂದಾಜು ₹17 ಸಾವಿರ ಆದಾಯವಿದೆ. ಖರ್ಚು ಎಂದು ವರ್ಷಕೊಮ್ಮೆ ಕುರಿಗೊಬ್ಬರ, ಮಣ್ಣು ಹಾಗೂ ಕೀಟನಾಶಕ ಎಂದು ₹ 22 ಸಾವಿರವಾಗುತ್ತದೆ. ಆರೇಳು ವರ್ಷಗಳಿಂದ ಈ ಆದಾಯ– ಖರ್ಚಿನಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸವಾಗಿಲ್ಲ ಎನ್ನುತ್ತಾರೆ.

ಇದು ಈ ಕುಟುಂಬಕ್ಕೆ ಸಣ್ಣದೊಂದು ಆದಾಯದ ಮೂಲವಾಗಿದೆ. ಕಡಿಮೆ ಶ್ರಮ, ಮನೆ ಮಂದಿಗೆಲ್ಲ ಕೈಗೊಂದಿಷ್ಟು ಕೆಲಸ ಕೊಡುತ್ತಿದೆ. ಮನೆಯ ದಿನಸಿ ಖರ್ಚನ್ನು ಪೂರೈಸುತ್ತದೆ. ಕರಿಬೇವಿನ ಕೃಷಿ ಕುರಿತ

ಹೆಚ್ಚಿನ ಮಾಹಿತಿಗಾಗಿ ಗಿರಿರಾಜ್ ಸಂಪರ್ಕ: 944856637

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT