ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿ ಬೆಳ್ಳಗಾಗ್ತಿದೆ, ಏನ್ಮಾಡೋದು?

Last Updated 3 ಜುಲೈ 2019, 7:10 IST
ಅಕ್ಷರ ಗಾತ್ರ

‘ಸಾರ್ ಇವತ್ತು ಫೀಲ್ಡಿಗೆ ಬರ್ಲೇಬೇಕು’ ಎಂದರು ನಿಶಾಂತ್. ಅವರ ಧ್ವನಿಯಲ್ಲಿ ಆತಂಕವಿತ್ತು. ‘ಏನಾಯ್ತು’ ಎಂದೆ. ‘ನಾಲ್ಕು ಎಕರೆ ಶುಂಠಿಬೆಳೆ ಎಲ್ಲ ಬೆಳ್ಳಗಾಗ್ತಾ ಇದೆ’ ಅಂದ್ರು !

ಅವರ ಮಾತು ಕೇಳಿಸಿಕೊಂಡ ನಂತರ, ನಮ್ಮ ಕಾಲೇಜಿನ ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ತನ್ವೀರ್ ಅಹ್ಮದ್ ಅವರನ್ನು ಕರೆದುಕೊಂಡು ಬಿಳಿಕೆರೆ ಬಳಿಯ ಗೌರಿಪುರದ ನಿಶಾಂತ್ ಅವರ ಶುಂಠಿ ಜಮೀನಿನತ್ತ ಹೊರಟೆ. ಅವರ ಜಮೀನಿಗೆ ಹೋಗುವಾಗ ದಾರಿಯಲ್ಲಿ ಅಕ್ಕಪಕ್ಕದಲ್ಲಿದ್ದ ಶುಂಠಿ ತಾಕು(ಬದು)ಗಳನ್ನು ಗಮನಿಸಿದೆವು. ಹಸಿರಾಗಿರಬೇಕಿದ್ದ ಬೆಳೆ ಅಲ್ಲಲ್ಲಿ ಬೆಳ್ಳಗೆ, ಮತ್ತೆ ಕೆಲವೆಡೆ ಹಳದಿಯಾಗಿತ್ತು. ಅದರಲ್ಲೂ ಸುಳಿಯ ಎಲೆಗಳಲ್ಲಿ ಈ ಲಕ್ಷಣ ಆರಂಭವಾಗಿ, ಕೆಳಮುಖವಾಗಿ ಹರಡುತ್ತಿರುವುದು ಕಂಡು ಬಂತು. ಅಷ್ಟೇ ಅಲ್ಲ ನನಗೆ ಇತ್ತೀಚೆಗೆ ಬಂದ ಅನೇಕ ಶುಂಠಿ ಕೃಷಿಕರ ದೂರವಾಣಿ ಕರೆಗಳು ಹಾಗೂ ವಾಟ್ಸ್‌ಆ್ಯಪ್‌ಗೆ ಬಂದ ಚಿತ್ರ-ವಿಡಿಯೊ ತುಣಕುಗಳಲ್ಲೂ ಈ ಸಮಸ್ಯೆಯ ಕುರಿತೇ ವಿವರಣೆ ಇತ್ತು.

ಒಳ್ಳೆ ಹಣ ಸಿಗುತ್ತದೆ ಎಂಬ ಭರವಸೆಯೊಂದಿಗೆ ಮೈಸೂರು ಜಿಲ್ಲೆಯ ಹುಣಸೂರು,‌ ಪಿರಿಯಾಪಟ್ಟಣ, ಕೆ. ಆರ್ ನಗರ, ನಂಜನಗೂಡು ತಾಲ್ಲೂಕುಗಳ ರೈತರು ಈ ಬಾರಿ ತುಸು ಹೆಚ್ಚು ಪ್ರದೇಶದಲ್ಲೇ ಶುಂಠಿ ನಾಟಿ ಮಾಡಿದ್ದಾರೆ. ನಾಟಿ ಮಾಡಿ ಎರಡು-ಮೂರು ತಿಂಗಳಾಗಿದೆ. ‘ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿಯೇ ಬೆಳೆ ಮಾಡಬೇಕು’ ಎಂಬ ನಮ್ಮ ಸಲಹೆ ಬಹುಪಾಲು ಕೃಷಿಕರಿಗೆ ಕೇಳಿಸಿಯೇ ಇಲ್ಲವೇನೋ. ಏಕೆಂದರೆ, ನಾವು ಪರೀಕ್ಷಿಸಿದ ಕೆಲವು ಮಣ್ಣಿನ ಮಾದರಿಯ ಪಿಎಚ್‌ (ರಸಸಾರ) ಸರಾಸರಿ 8 ಆಸುಪಾಸಿನಲ್ಲಿತ್ತು. ಇಲ್ಲೇ ಅಡಗಿತ್ತು ರೋಗದ ಮೂಲ ಸಮಸ್ಯೆ.

ಶುಂಠಿ ಬೆಳೆಯಲು ಮಣ್ಣಿನಲ್ಲಿ 6.5ರಿಂದ 7ರಷ್ಟು ರಸಸಾರವಿರಬೇಕು. ಅಂದರೆ ಮಣ್ಣು ತುಸು ಹುಳಿ/ಆಮ್ಲೀಯವಾಗಿರಬೇಕು. ಆದರೆ ಈ ಭಾಗದ ಬಹುತೇಕ ಮಣ್ಣಿನ ಕ್ಷಾರ ಹೆಚ್ಚಿರುವುದು ವಿಶ್ಲೇಷಣೆಯಿಂದ ತಿಳಿದು ಬಂದಿತ್ತು. ‘ಉರಿಯೊ ಬೆಂಕಿಗೆ ತುಪ್ಪ ಸುರಿತಾರೆ’ ಅನ್ನೋ ಹಾಗೆ, ನಮ್ಮ ಶುಂಠಿ ಬೆಳೆಗಾರರು ಹೆಚ್ಚು ಡಿಎಪಿ ಬಳಸಿದ್ದಾರೆ ಎಂದು ನಮ್ಮ ಗಮನಕ್ಕೆ ಬಂತು. ಅಂತೂ ಇಂತೂ ಇವೆಲ್ಲ ಒಟ್ಟಾಗಿ ಮಣ್ಣಿನಲ್ಲಿ ಕಬ್ಬಿಣದಂಶ ತೀವ್ರ ಕೊರತೆಯಾಗಿ ಹಸಿರಾಗಿರಬೇಕಿದ್ದ ಶುಂಠಿ ಬೆಳೆ, ಕ್ಷಾರ ಹೆಚ್ಚಾಗಿ ಕೆಲವು ಕಡೆ ಬಿಳಿ, ಇನ್ನೂ ಕೆಲವು ಕಡೆ ಹಳದಿ ಬಣ್ಣಕ್ಕೆ ತಿರುಗಿತ್ತು.

ಇದಕ್ಕೆ ಪರಿಹಾರ ಏನು?

ಶುಂಠಿ ಬೆಳೆಯುವ ಮುನ್ನ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ, ಅದರ ಆಧಾರದ ಮೇಲೆ ಪೋಷಕಾಂಶಗಳನ್ನು ನೀಡಬೇಕು. ನಿರ್ವಹಣೆ ಮಾಡಬೇಕು. ಮಣ್ಣು ಕ್ಷಾರವಾಗಿದ್ದಲ್ಲಿ, ಅಂದರೆ ರಸಸಾರ 7.5ರಿಂದ 8 ಅಥವಾ ಅದಕ್ಕೂ ಹೆಚ್ಚಾಗಿದ್ದಲ್ಲಿ, ರಸಸಾರ ತಗ್ಗಿಸಲು ಜಿಪ್ಸಂ ಬಳಕೆ ಅನಿವಾರ್ಯ. ರಸಸಾರ ಹೆಚ್ಚಿದಷ್ಟೂ ಜಿಪ್ಸಂ ಪ್ರಮಾಣ ಹೆಚ್ಚಿಸಬೇಕು. ಎಕರೆಗೆ ಅರ್ಧದಿಂದ ಒಂದು ಟನ್‌ವರೆಗೆ ಜಿಪ್ಸಂ ಕೊಡಬೇಕು. ಆದರೆ, ಇದನ್ನು ಶುಂಠಿ ನಾಟಿಗೆ ಒಂದೆರಡು ತಿಂಗಳುಗಳ ಮೊದಲೇ ಸೇರಿಸಿ, ಮಣ್ಣಿನೊಂದಿಗೆ ಚೆನ್ನಾಗಿ ಮಿಶ್ರ ಮಾಡಿ ಎರಡು-ಮೂರು ಸಲ ನೀರು ಹಾಯಿಸಿ, ಆ ನೀರು ಬಸಿಯುವಂತೆ ಮಾಡಬೇಕು. ಆಗ ಅದು ಮಣ್ಣಿನಲ್ಲಿ ಕರಗಿ ಮಣ್ಣಿನ ಕ್ಷಾರ ಕಡಿಮೆಯಾಗಿ, ಹುಳಿಯ ಕಡೆಗೆ ತಿರುಗುತ್ತದೆ. ಶುಂಠಿಗೆ ಇದೇ ಬೇಕಾಗಿರುವುದು.

ರಸಸಾರ 7.5 ಕ್ಕಿಂತ ಕಡಿಮೆ ಇದ್ದಲ್ಲಿ ಜಿಪ್ಸಂ ಅವಶ್ಯಕತೆ ಇಲ್ಲ. ಇದಕ್ಕೂ ಪೂರ್ವದಲ್ಲಿ ಅಂದರೆ, ಶುಂಠಿ ಬೆಳೆಯುವ ಜಮೀನಿನಲ್ಲಿ ಎರಡು ತಿಂಗಳು ಮೊದಲೇ ಸಾಧ್ಯವಾದರೆ ಹಸಿರೆಲೆ ಗೊಬ್ಬರದ ಬೆಳೆ ಬೆಳೆದು ಅದು ಹೂವಾದಾಗ ಭೂಮಿಗೆ ಅರಗಿಸಬೇಕು (ಸೇರಿಸಿಬಿಡಬೇಕು). ನಂತರ ನಾಟಿ ಮಾಡುವ ಸಮಯದಲ್ಲಿ ಏರುಮಡಿಗಳಿಗೆ ರಸಸಾರದ ಆಧಾರದ ಮೇರೆಗೆ ಮೂಲ ಗೊಬ್ಬರದ ಜೊತೆ ಲಘು ಪೋಷಕಾಂಶಗಳಾದ ಕಬ್ಬಿಣದ ಸಲ್ಫೇಟ್, ಝಿಂಕ್ ಸಲ್ಫೇಟ್‌ಗಳನ್ನು ತಪ್ಪದೇ ನೀಡಬೇಕು. ಎಕರೆಗೆ ಕನಿಷ್ಠ 10 ರಿಂದ 15 ಟನ್ ಕೊಟ್ಟಿಗೆ ಗೊಬ್ಬರ ಹಾಕಲೇಬೇಕು.

ರಸಸಾರ ಅನುಸಾರ ನಿರ್ವಹಣೆ

ನಾಟಿ ಮಾಡಿದ ಶುಂಠಿ ಮೊಳಕೆ ಮೇಲೆ ಬರಲು ತಿಂಗಳಾದರೂ ಬೇಕು. ಮೊದಮೊದಲಿಗೆ ಪೋಷಕಾಂಶಗಳ ಬೇಡಿಕೆ ಕಡಿಮೆಯೇ ಇರುತ್ತದೆ. ಎರಡು ತಿಂಗಳ ನಂತರ ಎಲೆಗಳು ನಿಶಾಂತ್‌ ಹೇಳಿದಂತೆ ಬೆಳ್ಳಗೋ, ಹಳದಿಗೋ ತಿರುಗುತ್ತದೆ. ಆಗೊಮ್ಮೆ ಫೆರಸ್ ಇಡಿಟಿಎಯನ್ನು ಲೀಟರ್ ನೀರಿಗೆ 0.5-1 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು. 15 ದಿನಗಳ ನಂತರ ಭಾರತೀಯ ಸಂಬಾರು ಬೆಳೆಗಳ ಸಂಶೋಧನಾ ಸಂಸ್ಥೆಯವರು ಅಭಿವೃದ್ಧಿಪಡಿಸಿರುವ ‘ಜಿಂಜರ್ ಸ್ಪೆಷಲ್’ ಎಂಬ ದ್ರಾವಣವನ್ನು ಲೀಟರ್ ನೀರಿಗೆ 5 ಗ್ರಾಂನಂತೆ ಬೆರೆಸಿ ಸಿಂಪಡಿಸಬೇಕು.

ಮಣ್ಣಿನ ರಸಸಾರ 7.5ಗಿಂತ ಅಧಿಕವಾಗಿದ್ದರೆ, ಸಾರಜನಕದ ಮೂಲವಾಗಿ ಅಮೋನಿಯಂ ಸಲ್ಫೇಟ್‌ ಅನ್ನೂ, ಪೊಟ್ಯಾಷ್‍ನ ಮೂಲವಾಗಿ ಸಲ್ಫೇಟ್ ಆಫ್ ಪೊಟ್ಯಾಷನ್ನೂ ರಂಜಕದ ಮೂಲವಾಗಿ ಫಾಸ್ಪರಿಕ್ ಆಸಿಡ್‍ನ್ನೂ ಬಳಸಬೇಕು. ಯೂರಿಯಾ, ಡಿಎಪಿ, ಎಂಓಪಿ ಬಳಕೆ ಬೇಡ. ಒಂದು ವೇಳೆ ಮಣ್ಣು ಮೊದಲೇ ಆಮ್ಲೀಯವಾಗಿದ್ದರೆ (ರಸಸಾರ 7ಕ್ಕಿಂತ ಕಡಿಮೆಯಿದ್ದರೆ) ಈ ಗೊಬ್ಬರಗಳನ್ನು ಬಳಸಬಹುದು.

ರಂಜಕದ ಅಂಶ ಶಿಫಾರಸಿಗಿಂತ ಹೆಚ್ಚು ಕೊಡುವುದು ಬೇಡ. ಹೆಚ್ಚಾದಲ್ಲಿ ವೆಚ್ಚ ಅಷ್ಟೇ ಹೆಚ್ಚಾಗುತ್ತದೆ. ಸಮಸ್ಯೆಯೂ ಉಲ್ಬಣವಾಗುತ್ತದೆ. ರಂಜಕ ಹೆಚ್ಚಾದಾಗ ಕಬ್ಬಿಣದ ಕೊರತೆ ಇನ್ನೂ ಹೆಚ್ಚಿ ಶುಂಠಿ ಹೆಚ್ಚೆಚ್ಚು ಬೆಳ್ಳಗಾಗಿ ಕೃಷಿಕರು ಚಿಂತೆಗೀಡಾಗುವಂತೆ ಮಾಡುತ್ತದೆ. ಸುಣ್ಣಕಲ್ಲು ಮಣ್ಣಾಗಿದ್ದರೂ ಕಬ್ಬಿಣದ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಅಂತಹ ಮಣ್ಣಿನ ರಸಸಾರ ತಗ್ಗಿಸಲು ಗಂಧಕ ಬಳಸುವುದು ಒಳಿತು.

ಒಟ್ಟಾರೆ ಶುಂಠಿ ಬೆಳೆಯುವ ಮುನ್ನ ಮಣ್ಣು ಪರೀಕ್ಷೆ ಕಡ್ಡಾಯ. ಈ ಪರೀಕ್ಷೆ ಫಲಿತಾಂಶ ಆಧರಿಸಿ, ಮೇಲೆ ತಿಳಿಸಿರುವ ಪೋಷಕಾಂಶಗಳನ್ನು ಪೂರೈಸಿದರೆ, ಶುಂಠಿ ಬೆಳೆ ಬೆಳ್ಳಗಾಗುವುದು ಅಥವಾ ಹಳದಿಯಾಗುವುದು ತಪ್ಪುತ್ತದೆ.

ಈ ಕುರಿತ ಹೆಚ್ಚಿನ ವಿವರಗಳಿಗೆ ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಶೀಲಾ ರಾಣಿ (81238 36730), ಹರೀಶ್ ಬಿ. ಎಸ್. (94805 57634) ಅಥವಾ ಬೆಂಗಳೂರಿನ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಡಾ ಅನಿಲ್‍ಕುಮಾರ್ (97431 96196) ಅವರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT