ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯ ತೋಟದ ವಿಭಿನ್ನ ನೋಟ

Last Updated 21 ಜನವರಿ 2020, 3:59 IST
ಅಕ್ಷರ ಗಾತ್ರ

ನಿವೃತ್ತಿ ನಂತರ ಮುಂದೇನು? ಉದ್ಯೋಗಸ್ಥರನ್ನು ಕಾಡುವ ಕಾಡುವ ಪ್ರಮುಖ ಚಿಂತೆ ಇದು. ವೃತ್ತಿಯೊಂದಿಗೆ ನಿಸರ್ಗ ನಂಟು, ಗಿಡ/ಮರ ಪ್ರೀತಿ ಬೆಳೆಸಿಕೊಂಡವರು ಖಂಡಿತ ಭೂತಾಯಿ ಸೇವೆಗೆ ನಿಲ್ಲುತ್ತಾರೆ. ಕೃಷಿ ಖುಷಿ ಅನುಭವಿಸುತ್ತ, ಸುತ್ತಲಿನ ಪರಿಸರದಲ್ಲಿ ವಿಭಿನ್ನತೆ ಕಂಪು ಹರಡುತ್ತಾರೆ. 65ರ ಹರೆಯದ ಕಲ್ಲಪ್ಪ ಸೋಮಪ್ಪ ಸಣಕಲ್, ಅಂಥದ್ದೇ ಪರಿಸರ ಪ್ರಿಯ, ಕೃಷಿ ಪ್ರೀತಿಯ ಸ್ವಭಾವವುಳ್ಳ ವ್ಯಕ್ತಿ.

ಕಲ್ಲಪ್ಪ, ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಬಸರಗಿ ಕೆ.ಎಂ. ಗ್ರಾಮದವರು. 1975ರಲ್ಲಿ ಅರಣ್ಯ ಗಾರ್ಡ್‌ ಎಂದು ಸರ್ಕಾರಿ ಸೇವೆಗೆ ಸೇರಿ, 2015ರಲ್ಲಿ ಸಹಾಯಕ ವಲಯ ಅರಣ್ಯ ಅಧಿಕಾರಿಯಾಗಿ ನಿವೃತ್ತಿಯಾದರು. ಇದೀಗ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಗೊಳಗೊಳಕಿ, ಪಾರ್ಥೇನಿಯಂ ಕಳೆ ತಾಣವಾಗಿದ್ದ ಎರಡೂವರೆ ಎಕರೆ ಜಮೀನು ಹದಗೊಳಿಸಿ, ನೆಮ್ಮದಿ ನೆಲವಾಗಿಸಿಕೊಂಡಿದ್ದಾರೆ. ಪಿಂಚಣಿ ಮೊತ್ತದಿಂದ ಇನ್ನೆರಡು ಎಕರೆ ಖರೀದಿಸಿ ಅಲ್ಲೂ ಕೃಷಿ ವಿಸ್ತರಿಸಿದ್ದಾರೆ. ಇವರ ಕೃಷಿ ಚಟುವಟಿಕೆಗೆ ಹೊಲದಂಚಿನ ಹಳ್ಳ, ಕೊಳವೆ ಬಾವಿ ನೀರು ಆಧಾರವಾಗಿದೆ. ಸದ್ಯ ಜಮೀನಿನಲ್ಲಿ ಹತ್ತಿ, ಗೋಧಿ, ಜೋಳ, ಗೋವಿನಜೋಳ ಪ್ರಮುಖ ಬೆಳೆಗಳು. ಹತ್ತಿಯಲ್ಲಿ ಟೊಮೆಟೊ, ಕೊತ್ತಂಬರಿ, ಸೀತಾಫಲದಲ್ಲಿ ಹೆಸರು, ಉದ್ದು ಕಡಲೆ ಅಂತರ ಬೆಳೆಗಳಾಗಿವೆ. ಕುಟುಂಬದ ಸದಸ್ಯರು ಕೃಷಿ ಚಟುವಟಿಕೆಗೆ ನೆರವಾಗುತ್ತಾರೆ. ಕೊಯ್ಲು ಸಮಯದಲ್ಲಿ ಸ್ಥಳೀಯ ಕೆಲಸಗಾರರನ್ನು ಬಳಸಿಕೊಳ್ಳುತ್ತಾರೆ.

ವಿಭಿನ್ನ ನೋಟದ ತೋಟ

ಒಂದೂವರೆ ಎಕರೆಯಲ್ಲಿ ಅರ್ಕ ಸಹಾನ ಸೀತಾಫಲ ತಳಿಯನ್ನು ನಾಟಿ ಮಾಡಿದ್ದಾರೆ. 15 ಅಡಿ *13 ಅಡಿ ಅಂತರದಲ್ಲಿ ಒಟ್ಟು 360 ಗಿಡಗಳಿವೆ. ಬಾಲನಗರ ಸೀತಾಫಲ ತಳಿಯನ್ನು ಇದೇ ಅಂತರದಲ್ಲಿ 40 ಗಿಡ ನಾಟಿ ಮಾಡಿದ್ದಾರೆ. ಎಲ್ಲ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ. ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ ಸಸಿ ಖರೀದಿಸಿ 2015ರಲ್ಲಿ ನಾಟಿ ಮಾಡಿದ್ದಾರೆ. ಫೆಬ್ರುವರಿ- ಮಾರ್ಚ್‌ನಲ್ಲಿ ಟೊಂಗೆಗಳನ್ನು ಕತ್ತರಿಸುತ್ತಾರೆ (ಪ್ರೂನಿಂಗ್). ಇದರಿಂದ ಫಲಭರಿತ ಹೊಸ ಟೊಂಗೆಗಳ ಉಗಮವಾಗುತ್ತದೆ. ಇಳುವರಿ ಪ್ರಮಾಣ ಹೆಚ್ಚುತ್ತದೆ. ಅರ್ಕ ಸಹಾನ ಹೈಬ್ರಿಡ್ ತಳಿಯಾಗಿದ್ದು, ಕೃತಕ ಪರಾಗಸ್ಪರ್ಶ ಮಾಡಿದಲ್ಲಿ ಫಸಲು ಹೆಚ್ಚಾಗುತ್ತದೆ.

ಈ ತಳಿಯ ಹಣ್ಣಿನ ತಿರುಳು ಸಿಹಿಯಾಗಿರುತ್ತದೆ. ಬೀಜ ಕಡಿಮೆ ಇದ್ದು, ತಿರುಳಿನ ಪ್ರಮಾಣ ಹೆಚ್ಚಿರುತ್ತದೆ. ಕಾಯಿ ಗಾತ್ರವೂ ಹಿರಿದು. 250 ಗ್ರಾಂನಿಂದ 300ಗ್ರಾಂ ತೂಕವಿರುತ್ತವೆ. ಐಸ್‌ಕ್ರೀಮ್‌ ತಯಾರಿಕೆಯಲ್ಲಿ ಅರ್ಕ ಸಹಾನ ತಳಿಯ ತಿರುಳು ಹೆಚ್ಚು ಬಳಕೆಯಾಗುತ್ತದೆ ಎನ್ನುತ್ತಾರೆ ಕಲ್ಲಪ್ಪ. ಬಾಲನಗರ ತಳಿ ಹಣ್ಣು ಮಧ್ಯಮ ಗಾತ್ರ, ಬೀಜ ಹೆಚ್ಚು. ರುಚಿ ಉತ್ತಮ. ಕಳೆದ ಮುಂಗಾರಿನಲ್ಲಿ ಸೀತಾಫಲ ನಡುವೆ ಎರಡು ಚೀಲ ಉದ್ದು (130ಕೆಜಿ) ಬೆಳೆದಿದ್ದಾರೆ. ಸದ್ಯ ಗೋಧಿ ಬಿತ್ತನೆ ಮಾಡಿದ್ದಾರೆ. ಸಮೀಪದ ಬೆಳಗಾವಿ, ಹುಬ್ಬಳ್ಳಿ, ಕೊಲ್ಲಾಪುರ ಮುಖ್ಯ ಮಾರುಕಟ್ಟೆ. ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿರುವ ಹಿರಿಮಗನ ಕಚೇರಿ ಉದ್ಯೋಗಿಗಳನ್ನು ಸಹ ತಲುಪಿವೆ ಕಲ್ಲಪ್ಪ ಅವರ ಸೀತಾಫಲ.

ಇನ್ನೊಂದು ಎಕರೆ ಪ್ರದೇಶದಲ್ಲಿ 15*13ಅಡಿ ಅಂತರದಲ್ಲಿ ಸಿಂದಗಿ ಸ್ಥಳೀಯ ತಳಿ ನಿಂಬೆ ನಾಟಿ ಮಾಡಿದ್ದಾರೆ. ನಾಟಿಗೆ ಮುನ್ನ ಸಾಕಷ್ಟು ಹಸಿರೆಲೆ, ಕಾಂಪೋಸ್ಟ್‌ ಹಾಗೂ ಎರೆಗೊಬ್ಬರ ಮಣ್ಣಿಗೆ ಸೇರಿಸಿದ್ದಾರೆ. ಈ ತಳಿಯ ನಿಂಬೆಹಣ್ಣಿನ ಸಿಪ್ಪೆ ತೆಳು, ಹೆಚ್ಚು ರಸಭರಿತವಾಗಿವೆ. ಗಾತ್ರವೂ ದೊಡ್ಡದು. ಕಳೆದ ವರ್ಷ ಅಂತರ ಬೆಳೆಯಾಗಿ 20 ಕೆಜಿ ಅಜುವಾನ, 60ಕೆಜಿ ಒಣಮೆಣಸಿನಕಾಯಿ, 30ಕೆಜಿ ಸಾಸಿವೆ ಹಾಗೂ ಗೋಧಿ ಬೆಳೆದಿದ್ದಾರೆ. ಸ್ಥಳೀಯ ಮಾರಾಟಗಾರರೇ ಪ್ರಮುಖ ಖರೀದಿದಾರರು. ಇತ್ತೀಚೆಗೆ ಉಪ್ಪಿನಕಾಯಿ ತಯಾರಿಕೆ ಫ್ಯಾಕ್ಟರಿಯವರು ಚೀಲಕ್ಕೆ ₹750 ರಂತೆ 70 ಚೀಲ ನಿಂಬೆ (1000ನಿಂಬೆ/ಚೀಲ) ಖರೀದಿಸಿದ್ದಾರೆ.

ಕಣ್ಮನ ತಣಿಸುವ ವೈವಿಧ್ಯತೆ

ಹೊಲಕ್ಕೆ ಬಂದವರು ಯಾರೂ ಹಸಿದು ಹೊರ ಹೋಗಬಾರದು. ಮನಸ್ಸಿಗೆ ಹಿಡಿದಷ್ಟು ವಿವಿಧ ಹಣ್ಣುಗಳ ರುಚಿ ಸವಿಯಬೇಕು. ಗಿಡ ಮರಗಳು ಪಕ್ಷಿಗಳಿಗೆ ಅನ್ನ ಆಶ್ರಯ ಒದಗಿಸಬೇಕು– ಇವು ಕಲ್ಲಪ್ಪ ಅವರ ಆಶಯ. ಅದಕ್ಕಾಗಿಯೇ ಇವರು ಹೊಲದಲ್ಲಿ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಜತೆಗೆ, ಕಾಡು ಗಿಡಗಳಿವೆ. ಔಷಧೀಯ ಸಸ್ಯಗಳಿವೆ. ಹೂವಿನ ತೋಟವೂ ಇದೆ. ಎಲ್ಲ ಗಿಡಗಳಿಗೂ ಒಣಹುಲ್ಲು, ಕಳೆ ಸಸ್ಯಗಳನ್ನು ಮುಚ್ಚಿಗೆ ಮಾಡಿ, ತೇವಾಂಶ ರಕ್ಷಣೆ ಮಾಡುತ್ತಾರೆ.

ಕಾಂಚಾಣ ನೀಡುವ ಕರಿಬೇವು

ಹೊಲದ ಅಂಚಿನ ಸುತ್ತಲೂ ಮೂರು ಅಡಿ ಅಂತರದಲ್ಲಿ 500 ಸ್ಥಳೀಯ ಕರಿಬೇವು ಸಸಿ ನೆಟ್ಟಿದ್ದಾರೆ. ಹೊಲಕ್ಕೆ ಭೇಟಿ ನೀಡುವವರನ್ನು ಆಕರ್ಷಿಸುತ್ತವೆ. ಮೂರು ಅಡಿಯಷ್ಟು ಎತ್ತರವಾಗಿರುವ ಕರಿಬೇವಿನ ಮರಗಳನ್ನು ಹೆಚ್ಚಿನ ಎತ್ತರಕ್ಕೆ ಹೋಗದಂತೆ ಗೆಲ್ಲುಗಳನ್ನು ವರ್ಷಕ್ಕೆರಡು ಬಾರಿ ಕತ್ತರಿಸುತ್ತಾರೆ. ಬೇಸಿಗೆ ಮುಗಿಯುತ್ತಿದ್ದಂತೆ ಒಮ್ಮೆ ಅಗೆತ ಮಾಡಿ ಸಗಣಿ ಗೊಬ್ಬರ ಹಾಕಿ, ಸಾಲು ಮಾಡಿ ನೀರುಣಿಸುತ್ತಾರೆ. ಇವುಗಳಿಂದ ಸರಾಸರಿ ಮಾಸಿಕ ಎರಡೂವರೆ ಸಾವಿರ ರೂಪಾಯಿ ಆದಾಯ ನಿಶ್ಚಿತ. ಸಮೀಪದ ಹೋಟೆಲ್‌, ಖಾನಾವಳಿ ಮಾಲೀಕರು ನಿಯಮಿತವಾಗಿ ಖರೀದಿಸುತ್ತಾರೆ.

ವೃತ್ತಿಯಲ್ಲಿದ್ದಾಗ ಹಾವೇರಿ-ಕಾಗಿನೆಲೆ ಇನ್ನಿತರೆಡೆ ರಸ್ತೆಗುಂಟ ಹತ್ತು ಹಲವು ವೈವಿಧ್ಯಮಯ ಗಿಡ ನೆಟ್ಟ ಅನುಭವ ಇದೀಗ ವೈಯಕ್ತಿಕ ಬದುಕಿನಲ್ಲೂ ಗಿಡಮರ ಬೆಳೆಸುವ ಪ್ರೀತಿಯನ್ನು ಹಸಿರಾಗಿಸಿದೆ. ಗಿಡಮರಗಳು ಪ್ರಾಣಿ ಸಂಕುಲದ ಅನ್ನ-ಆಶ್ರಯ ತಾಣಗಳು. ಮನುಷ್ಯರ ಬದುಕಿನೊಂದಿಗೆ ಮೇಳೈಸಿಕೊಂಡಿರುವ ನೆಲ, ಜಲ, ಪರಿಸರಕ್ಕೆ ಪೂರಕವಾದ ನಿಸರ್ಗ ಕೊಡುಗೆಗಳು. ಅವುಗಳನ್ನು ಬೆಳೆಸಿ ಉಳಿಸುವುದು ಎಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎನ್ನುತ್ತಾರೆ ಕಲ್ಲಪ್ಪ.

ಉದ್ಯೋಗ ಅರಸಿ ಪಟ್ಟಣ ಸೇರಿರುವ ಮಕ್ಕಳಿಗೂ ಕೃಷಿ ನಂಟಿದೆ. ಹೊಸ ಬಗೆಯ ಹಣ್ಣು ಹೂವು, ಗಿಡಮರ ಕಂಡರೆ ತಪ್ಪದೆ ತಂದು ಹೊಲದಲ್ಲಿ ನೆಲೆಯೂರಲು ನೆರವಾಗುತ್ತಾರೆ. ಹೃದಯದ ಬೈಪಾಸ್ ಸರ್ಜರಿ ಮಾಡಿಸಿಕೊಂಡಿರುವ ಕಲ್ಲಪ್ಪ, ತೋಟದಲ್ಲಿ ಆರೋಗ್ಯಯುತ ಬದುಕು ಸಂತೃಪ್ತಿಯ ನೆಲೆ ಹಾಗೂ ಆದಾಯದ ಸೆಲೆ ಕಂಡುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕಲ್ಲಪ್ಪ ಸಣಕಲ್ – 99722 72642

ಕಾಡು–ಹಣ್ಣು–ಹೂವು

ಕಲ್ಲಪ್ಪ, ತಮ್ಮ ತೋಟದ ತುಂಬಾ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಕವಳೆ, ರಾಮಫಲ, ಸೀತಾಫಲ, ಹನುಮಾನಫಲ, ಬೆಣ್ಣೆಹಣ್ಣು, ಪ್ಯಾಶನ್‍ಫ್ರುಟ್, ಹಲಸು, ಮೊಸಂಬಿ, ದ್ರಾಕ್ಷಿ, ಗೋಡಂಬಿ, ಪಪ್ಪಾಯ, ಅಂಜೂರ, ಪೇರಲ, 4 ತಳಿಯ ಬಾಳೆಹಣ್ಣಿನ ಗಿಡಗಳಿವೆ. ಜತೆಗೆ ಬೆಟ್ಟದನೆಲ್ಲಿ, ಕಡಗೋಲನೆಲ್ಲಿ, ಸೇಬು, ಮರಗೆಣಸು, ನುಗ್ಗೆ, ಕರಿಬೇವು ಗಿಡಗಳಿವೆ.

ಬೇವು, ಹೆಬ್ಬೇವು, ನೀಲಗಿರಿ ಶಿವನಿ, ಅಜನಿ, ಬೀಟ್, ಮಹಾಗನಿ ಸಾಗವಾನಿ, ಸಿಮಾರೂಬಾ ಕಾಡುಔಡಲ, ಶ್ರೀಗಂಧದಂಥ ಅರಣ್ಯ ಗಿಡಗಳಿವೆ. ಕೃಷ್ಣತುಳಸಿ, ಹಿಮ್ಮುಗುಳು, ಚಹಾಗರಿ, ಲಾವಂಚ ಔಷಧಿ ಸಸ್ಯಗಳಿವೆ. ಆಕಾಶಮಲ್ಲಿಗೆ, ಸಂಪಿಗೆ, ಮಲ್ಲಿಗೆ, ಗುಲಾಬಿ ಇನ್ನೂ ಹಲವು ಅಲಂಕಾರಿಕ ಸಸ್ಯರಾಶಿ ಇವರಲ್ಲುಂಟು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT