ಗುರುವಾರ , ನವೆಂಬರ್ 14, 2019
19 °C

ಹುತ್ತದಿಂದ ಪೆಟ್ಟಿಗೆಗೆ ತುಡುವೆ ಜೇನು

Published:
Updated:

ಜೇನುಕೃಷಿ, ಸಮಗ್ರ ಕೃಷಿ ಪದ್ಧತಿಯ ಭಾಗವಾಗಿದೆ. ಅನೇಕ ರೈತರು ತೋಟಗಳಲ್ಲಿ ಬೆಳೆಗಳ ಇಳುವರಿ ಹೆಚ್ಚಳಕ್ಕಾಗಿ ಪೆಟ್ಟಿಗೆಗಳನ್ನು ಇಟ್ಟು ಜೇನು ಸಾಕಣೆ ಮಾಡುತ್ತಾರೆ. ಕೆಲವರು ಜೇನುಕೃಷಿಯನ್ನು ಉಪಕಸುಬಾಗಿ ಮಾಡಿಕೊಂಡಿದ್ದಾರೆ. ಹೂವು ಬಿಡುವ ಜಾಗದಲ್ಲಿ ನೂರಾರು ಪೆಟ್ಟಿಗೆಗಳನ್ನಿಟ್ಟು ಜೇನುಕೃಷಿ ಮಾಡುತ್ತಿರುವವರೂ ಇದ್ದಾರೆ.

ಜೇನುಹುಳುಗಳಲ್ಲಿ ಮುಖ್ಯವಾಗಿ 5 ಪ್ರಬೇಧಗಳಿವೆ. ಅವುಗಳೆಂದರೆ, ತುಡುವೆಜೇನು, ಕಡ್ಡಿಜೇನು, ಹೆಜ್ಜೆನು, ವಿದೇಶಿ/ಯೂರೋಪಿಯನ್ ಜೇನು, ನುಸುರಿಜೇನು. ಇವುಗಳಲ್ಲಿ ಹೆಜ್ಜೇನು, ಕಡ್ಡಿಜೇನು ಸಾಕಲು ಯೋಗ್ಯವಲ್ಲ. ಉಳಿದ ಮೂರು ಪ್ರಬೇಧದ ಜೇನುಗಳನ್ನು ಸಾಕಬಹುದು.

ಈ ಎಲ್ಲ ಜೇನುಹುಳುಗಳನ್ನು ಪೆಟ್ಟಿಗೆಯಲ್ಲಿ ಇಟ್ಟು ಸಾಕುತ್ತಾರೆ. ಆದರೆ, ತುಡುವೆಜೇನನ್ನು ಹಾಗೆ ಮಾಡಲಾಗುವುದಿಲ್ಲ. ಏಕೆಂದರೆ, ಆ ಜೇನುಹುಳುಗಳು ಹುತ್ತದಲ್ಲೇ ಗೂಡುಕಟ್ಟುತ್ತವೆ. ಆದರೆ, ತುಡುವೆ ಜೇನುಹುಳುಗಳನ್ನೂ ಹುತ್ತದಿಂದ ತೆಗೆದು ಪೆಟ್ಟಿಗೆಗಳಿಗೆ ವರ್ಗಾಯಿಸಿ ಸಾಕಣೆ ಮಾಡಬಹುದು.

ಹೀಗೆ ಹೇಳುತ್ತಿದ್ದಂತೆ ಜೇನು ಕೃಷಿಕರ ತಲೆಯಲ್ಲಿ, ‘ಹುತ್ತದಿಂದ, ಜೇನುಹುಳುಗಳನ್ನು ಹೇಗೆ ಪೆಟ್ಟಿಗೆಗೆ ವರ್ಗಾಯಿಸಬೇಕು? ಯಾವ ಹಂತದಲ್ಲಿ ಹುತ್ತದಿಂದ ಹುಳುಗಳನ್ನು ತೆಗೆಯಬೇಕು? ಪೆಟ್ಟಿಗೆಗಳ ಪಟ್ಟಿಗೆ ಹುಳುಗಳನ್ನು ಸೇರಿಸುವುದು ಹೇಗೆ?’ ಎಂಬ ಅನೇಕ ಪ್ರಶ್ನೆಗಳು ಹರಿದಾಡುತ್ತಿರುತ್ತವೆ.

ನಿಜ. ನಿಸರ್ಗದಲ್ಲಿ ಸ್ವಚ್ಛಂದವಾಗಿ ಕಟ್ಟಿರುವ ಜೇನುಗೂಡನ್ನು ಅಲುಗಾಡಿಸಿ, ಅಲ್ಲಿಂದ ಹುಳುಗಳನ್ನು ತಂದು ಪೆಟ್ಟಿಗೆಗೆ ಸ್ಥಳಾಂತರಿಸುವುದು ಬಹಳ ನಾಜೂಕಾದ ಕೆಲಸ. ಇದಕ್ಕೆ ನೈಪುಣ್ಯ ಬೇಕು. ಹಾಗೆ ವರ್ಗಾಯಿಸಬೇಕೆಂದರೆ, ಹತ್ತರಿಂದ ಹನ್ನೊಂದು ಉಪಕರಣಗಳು ಬೇಕು. ಜೇನು ವರ್ಗಾವಣೆಗೆ ಬೇಕಾಗುವ ಉಪಕರಣಗಳು ಹೀಗಿವೆ; ಗುದ್ದಲಿ ಗಡಾರಿ ಸಲಿಕೆ, ಚಾಕು,ತಟ್ಟೆ, ಜೇನು ಪೆಟ್ಟಿಗೆ ಮತ್ತು ಚೌಕಟ್ಟು, ಬಾಳೆನಾರು, ಹೊಗೆತಿದಿ, ಅಡಿಕೆ ಪಟ್ಟೆ, ಜೇನು ಮುಖಕವಚ, ಕೈ ಕವಚ, ಜೇನು ಹುಳು ಉಡುಪು ಮತ್ತು  ರಾಣಿ ಪಂಜರ.

ಜೇನುಗೂಡು ಹುಡುಕುವುದು ಹೇಗೆ?

ಮಧ್ಯಾಹ್ನ ನಡುಬಿಸಿಲಿನಲ್ಲಿ ಈ ತುಡುವೆಜೇನು ಗೂಡನ್ನು ಹುಡುಕಬಹುದು.

ಜೇನುನೊಣವು ಹೂವಿನ ಮಕರಂದ ಮತ್ತು ಪರಾಗವನ್ನು ಹೀರಿಹೋಗುವಾಗ ಅದನ್ನು ಹಿಂಬಾ ಲಿಸಬೇಕು. ಇಲ್ಲವೇ, ಆ ಹುಳು ಹಾರಾಡುತ್ತಾ ಹೋದ ದಿಕ್ಕನ್ನು ನೋಡಿಕೊಂಡು ಆ ದಿಕ್ಕಿನೆಡೆ ಸಾಗಿ ಜೇನು ಗೂಡನ್ನು ಪತ್ತೆ ಮಾಡಬಹುದು.

ಸಕ್ಕರೆ ದ್ರಾವಣವನ್ನು ಮುಚ್ಚಳದಲ್ಲಿ ಕಡ್ಡಿ ಯೊಂದಿಗೆ ಇಟ್ಟಾಗ ಸಕ್ಕರೆ ಹೀರಲು ಬಂದ ಹುಳುಗಳನ್ನು ಹಿಂಬಾಲಿಸುವುದರಿಂದ ಹುಳು ಗಳ ಗೂಡನ್ನು ಹುಡುಕಲು ಸಾಧ್ಯವಿದೆ.

ಹುತ್ತದಲ್ಲಿ ಅಥವಾ ಕಲ್ಲಿನ ಕೆಳಗೆ ಅಥವಾ ಪೊಟರೆ ಹತ್ತಿರ ಜೇನಿನ ಹಾರಾಟವನ್ನು ಗಮನಿಸಿಯೂ ಗೂಡನ್ನು ಹುಡುಕಬಹುದಾಗಿದೆ.

ದನಗಾಯಿ /ಕುರಿಗಾಯಿ/ ಆದಿವಾಸಿಗಳಿಂದ ಗೂಡು ಇರುವ ಮಾಹಿತಿಯನ್ನು ತಿಳಿಯಬ ಹುದಾಗಿದೆ.

ಜೇನು ನೊಣಗಳ ವರ್ಗಾವಣೆ...

ಜೇನುಗೂಡು ಹುಡುಕಿದ ನಂತರ ಅದನ್ನು ಜೇನು ಪೆಟ್ಟಿಗೆಗೆ ಸ್ಥಳಾಂತರಿಸಬೇಕು. ಈ ವಿಧಾನ ಒಂದು ಕಲೆ. ಮಾತ್ರವಲ್ಲ, ನಾವು ಜೇನುಕೃಷಿಯ ಹೃದಯ ಭಾಗವನ್ನು ಸ್ಥಳಾಂತರಿಸುವುದರಿಂದ, ಎಚ್ಚರಿಕೆ ಅಗತ್ಯ. ಈ ವೇಳೆ ಜೇನಿಗೆ ಯಾವುದೇ ರೀತಿ ತೊಂದರೆಯಾಗದಂತೆ ವರ್ಗಾಯಿಸಬೇಕು.

ಹುತ್ತದಲ್ಲಿ ಅಥವಾ ಕಲ್ಲಿನ ಕೆಳಗೆ ಅಥವಾ ಪೊಟರೆಯಲ್ಲಿ ಜೇನುಗೂಡನ್ನು ಗಮನಿಸಿದ ನಂತರ ಸುತ್ತಲು ಇರುವ ಗಿಡ-ಮರಗಳನ್ನು ಕಡಿದು ವಿಸ್ತಾರವಾದ ಜಾಗ ಮಾಡಿಕೊಳ್ಳಬೇಕು.

ಹುತ್ತದ ಮಣ್ಣನ್ನು ಅಗೆಯುವ ಮೂಲಕ ಅಥವಾ ಕಲ್ಲನ್ನು ಮೇಲಕ್ಕೆ ಎತ್ತುವ ಮೂಲಕ ಮಣ್ಣು ಮತ್ತು ಕಲ್ಲನ್ನು ಸರಿಸಬೇಕು.

ಹುತ್ತದ ಮಣ್ಣನ್ನು ತೆಗೆದು ಎರಡು ಕೈಯಾಡು ವಷ್ಟು ಜಾಗವನ್ನು ಮಾಡಿಕೊಳ್ಳಬೇಕು. ಈ ರೀತಿ ಮಾಡುವಾಗ ಜೇನಿಗೆ ಅದರ ಎರಿಗೆ(ಹುಟ್ಟಿ ಅಥವಾ ತಟ್ಟಿ) ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಬೇಕು. ನಂತರ ಮುಖಪರದೆ ಮತ್ತು ಕೈ ಕವಚವನ್ನು ಧರಿಸಬೇಕು, ಉದ್ದವಾದ ಶರ್ಟ್ ಪ್ಯಾಂಟ್‍ನ್ನು ಧರಿಸುವುದು ಒಳ್ಳೆಯದು.

ಎರಿಗಳನ್ನು ಜೇನಿಗೆ ಯಾವುದೇ ರೀತಿ ತೊಂದರೆ ಯಾಗದಂತೆ ಚಾಕುವಿನಿಂದ ಕತ್ತರಿಸಿ ತಟ್ಟೆಯಲ್ಲಿ ಇಡಬೇಕು. ಈ ರೀತಿ ಎರಿಯನ್ನು ಕತ್ತರಿಸುವಾಗ ನೊಣಗಳು ಹಿಂದೆ ಸರಿಯುತ್ತಿರುತ್ತವೆ. ಕೊನೆಯಲ್ಲಿ ಎಲ್ಲವೂ ಗುಂಪಿನಿಂದ ಹಿಂದೆ ಕುಳಿತಿರುತ್ತವೆ.

ಕತ್ತರಿಸಿದ ಎರಿಯನ್ನು ಚೌಕಕಾರವಾಗಿ ಅಥವಾ ಆಯತಾಕಾರಕ್ಕೆ ಕತ್ತರಿಸಿ, ಅದನ್ನು ಎರಿಯ ಚೌಕಕ್ಕೆ ಬಾಳೆನಾರಿನಿಂದ ಕಟ್ಟಬೇಕು.
ಒಂದು ವೇಳೆ ರಾಣಿಜೇನನ್ನು ಮೊದಲೇ ಗುರುತಿಸಿದರೆ ಆ ಹುಳುವನ್ನು ಹಿಡಿದು ರಾಣಿಪಂಜರದಲ್ಲಿ ಹಾಕಿ ಜೇನುಪೆಟ್ಟಿಗೆ ಒಳಗೆ ಇಡಬೇಕು. ಆಗ ಎಲ್ಲಾ ಕೆಲಸಗಾರ ನೊಣಗಳು ಜೇನುಪೆಟ್ಟಿಗೆ ಒಳಗೆ ಬರುತ್ತವೆ.

ಎರಿಯನ್ನು ಕತ್ತರಿಸುವಾಗ ಜೇನುನೊಣಗಳಿಗೆ ತೊಂದರೆಯಾದರೆ ರಾಣಿಜೇನು ಭಯಗೊಂಡು ತನ್ನ ಕುಟುಂಬದೊಂದಿಗೆ ಹಾರಿ ಹತ್ತಿರದಲ್ಲಿರುವ ಮರದ ಮೇಲೆ ಕುಳಿತುಕೊಳ್ಳುತ್ತದೆ. ಹಾಗೆ ಕುಳಿತ ಜೇನನ್ನು ಹಿಡಿದು ತಂದು ಪೆಟ್ಟಿಗೆಯ ಒಳಗೆ ಬಿಡಬೇಕು. ಮೇಲೆ ತಿಳಿಸಿದ ಎರಡು ವಿಧಾನಗಳೂ ಸಾಧ್ಯ ವಾಗದಿದ್ದರೆ ಗುಂಪಾಗಿ ಕುಳಿತಿರುವ ಹುಳುಗಳನ್ನು ಕೈಯಿಂದ ಸೂಕ್ಷ್ಮವಾಗಿ ಬಾಚಿ ಪೆಟ್ಟಿಗೆ ಮೇಲು ಮುಚ್ಚಳ ತೆಗೆದು ಹುಳುಗಳನ್ನು ಒಳಗೆ ಬಿಡಬೇಕು. ಅಧಿಕ ಸಂಖ್ಯೆಯಲ್ಲಿ ಹುಳುಗಳನ್ನು ಈ ರೀತಿ ಪೆಟ್ಟಿಗೆಗೆ ವರ್ಗಾಯಿಸಬೇಕು. ಉಳಿದ ಹುಳುಗಳನ್ನು ರಾಣಿ-ತಡೆಗೇಟಿನ ಮೂಲಕ ವರ್ಗಾಯಿಸಬೇಕು. ಈ ರೀತಿ ಮಾಡುವಾಗ ರಾಣಿ-ತಡೆಗೇಟನ್ನು ಮುಚ್ಚಿದರೆ ರಾಣಿ ತಪ್ಪಿಸಿಕೊಳ್ಳುವುದನ್ನು ತಡೆಯಬಹುದು.

ಹೀಗೆ ಮಾಡುವಾಗ ರಾಣಿಜೇನು ಪೆಟ್ಟಿಗೆಯಲ್ಲಿ ಬಂದಿದ್ದರೆ ಎಲ್ಲಾ ಹುಳುಗಳು ಒಳಗಡೆ ಹೋಗುತ್ತವೆ. ಇಲ್ಲದಿದ್ದರೆ ಹುಳುಗಳು ಹೊರಗೆ ಬರುತ್ತಿರುತ್ತವೆ.

ಈ ರೀತಿ ಜೇನು ವರ್ಗಾಯಿಸಿದ ನಂತರ ಜೇನು ಪೆ ರ್ಯಸ್ತದವರೆಗೂ ಅಲ್ಲೇ ಬಿಟ್ಟು ಪುನಃ ಸೂರ್ಯೋದಯಕ್ಕೆ ಮುನ್ನ ಜೇನು ಸಾಕಣೆ ಕೇಂದ್ರಕ್ಕೆ ಸಾಗಿಸಬೇಕು.

‌ಹೊಸದಾಗಿ ತಂದ ಜೇನು ನೊಣಗಳಿಗೆ ಹೊಂದಾಣಿಕೆಯಾಗುವವರೆಗೂ ಸಕ್ಕರೆ ಪಾಕವನ್ನು (ಒಂದು ಕೆ.ಜಿ ಸಕ್ಕರೆ ಮತ್ತು ಒಂದು ಲೀಟರ್ ನೀರು ಮಿಶ್ರಣ)ನೀಡಬೇಕು. ಸಾಮಾನ್ಯವಾಗಿ 10-15 ದಿನದೊಳಗೆ ಜೇನು ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಹುಳುಗಳು ಮಕರಂದ ಮತ್ತು ಪರಾಗವನ್ನು ತರಲು ಶುರು ಮಾಡುತ್ತವೆ. ವಾತಾವರಣಕ್ಕೆ ಹೊಂದಿಕೆಯಾದಾಗ ರಾಣಿ ತಡೆಗೇಟನ್ನು ತೆಗೆಯಬೇಕು.

ಜೇನುಗೂಡು ನಿರ್ವಹಣೆ

ಹೊಸದಾಗಿ ಬಂದ ಜೇನುಹುಳುಗಳಿಗೆ ಸಕ್ಕರೆ ಪಾಕ ನೀಡಬೇಕು.

ಬೇಸಿಗೆಯಲ್ಲಿ ದೊಡ್ಡ ಬಾಗಿಲನ್ನು ತೆಗೆಯಬೇಕು.

ಪೆಟ್ಟಿಗೆ ಒಳಗಿರುವ ಚೌಕಟ್ಟುಗಳನ್ನು ತೆಗೆದು ಗಾಳಿಯಾಡಲು ಜಾಗ ಮಾಡಬೇಕು. ಡಬ್ಬಿಯ ಮೇಲೆ ತಂಪಾದ ಗೋಣಿಚೀಲವನ್ನು ಹೊದಿಸಬೇಕು.

ಚಳಿಗಾಲದಲ್ಲಿ ಎಲ್ಲಾ ಚೌಕಟ್ಟುಗಳನ್ನು ಒತ್ತೊತ್ತಾಗಿ ಸೇರಿಸಿ ಮತ್ತು ಡಮ್ಮಿ ಚೌಕಟ್ಟನ್ನು ಇಡಬೇಕು. ಉಷ್ಣಾಂಶ ಕಾಪಾಡಿಕೊಳ್ಳಲು ಚಿಕ್ಕ ಬಾಗಿಲನ್ನು ತೆರೆಯಬೇಕು.

ಬೇಸಿಗೆಯಲ್ಲಿ ಮತ್ತು ಮಕರಂದ ಸಿಗದ ಸಮಯದಲ್ಲಿ ಜೇನುತುಪ್ಪವನ್ನು ತೆಗೆಯಬಾರದು.

ಜೇನುಗೂಡಿನಲ್ಲಿ ಜೇನುಹುಳುಗಳ ಸಂತತಿ ಹೆಚ್ಚಾದರೆ ಯಾವುದೇ ರೀತಿಯ ಶತೃಹುಳುಗಳಿಗೆ ಒಳಗಡೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ (ವಿಶೇಷವಾಗಿ ಮೇಣದ ಪತಂಗ).

ಪ್ರತಿಕ್ರಿಯಿಸಿ (+)