ಗುರುವಾರ , ಏಪ್ರಿಲ್ 15, 2021
19 °C

ಹೊಲಕ್ಕಿಳಿದಿವೆ ವಿದ್ಯುತ್ ಚಾಲಿತ ಟ್ರ್ಯಾಕ್ಟರ್‌

ಇ. ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಏರುತ್ತಿರುವ ಡೀಸೆಲ್ ಬೆಲೆಯಿಂದಾಗಿ ತತ್ತರಿಸಿರುವ ರೈತರಿಗೆ ನೆರವಾಗುವ ಹಾಗೂ ಪರಿಸರಕ್ಕೆ ಪೂರಕವಾಗಿರುವ ವಿದ್ಯುತ್ ಚಾಲಿತ ಟ್ರ್ಯಾಕ್ಟರ್‌ಗಳ ಅಭಿವೃದ್ಧಿಯಲ್ಲಿ ಈಗ ಪೈಪೋಟಿ ಶುರುವಾಗಿದೆ.

ಸದ್ಯದ ಸುದ್ದಿಯ ಪ್ರಕಾರ ಎಸ್ಕಾರ್ಟ್ ಮತ್ತು ಸೊನಾಲಿಕಾ ಕಂಪನಿಗಳು ವಿದ್ಯುತ್ ಚಾಲಿತ ಟ್ರ್ಯಾಕ್ಟರ್‌ಗಳ ಅಭಿವೃದ್ಧಿ ಕೈಹಾಕಿ ಸೈ ಎನಿಸಿಕೊಂಡಿವೆ. ಕೇವಲ ಕಾರು ಮತ್ತು ಸ್ಕೂಟರ್‌ಗಳೇ ಅಲ್ಲದೇ ಕೃಷಿ ಕ್ಷೇತ್ರದಲ್ಲೂ ವಿದ್ಯುತ್ ಚಾಲಿತ ವಾಹನಗಳ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದು ಈ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.

‘ಟೈಗರ್ ಟ್ರ್ಯಾಕ್ಟರ್‌’

ಈ ನಿಟ್ಟಿನಲ್ಲಿ ಸೋನಾಲಿಕಾ ಟ್ರ್ಯಾಕ್ಟರ್ಸ್ ಕಂಪನಿ ಕಳೆದ ವರ್ಷ ಡಿಸೆಂಬರ್‌ನ 23ರಂದು ದೇಶೀಯ ಮಾರುಕಟ್ಟೆಗೆ ತನ್ನ ವಿದ್ಯುತ್ ಚಾಲಿತ ಟ್ರ್ಯಾಕ್ಟರ್ ಬಿಡುಗಡೆ ಮಾಡಿತು. 11ಕೆವಿ ಸಾಮರ್ಥ್ಯದ ಮೋಟಾರು ಹೊಂದಿರುವ ಟ್ರ್ಯಾಕ್ಟರ್ 25.5ಕಿಲೋವ್ಯಾಟ್ ಸಾಮರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿದೆ. 

ಒಮ್ಮೆ ಚಾರ್ಜ್ ಮಾಡಿದರೆ 2 ಟನ್ ಸಾಮರ್ಥ್ಯದ ಟ್ರಾಲಿಯೊಂದಿಗೆ 8ರಿಂದ 10 ಗಂಟೆ ಕೆಲಸ ಮಾಡಬಲ್ಲ ಸಾಮರ್ಥ್ಯ ಇದರದ್ದು. ಸಾಮಾನ್ಯವಾದ ಮನೆಯ ಚಾರ್ಜಿಂಗ್ ಪಾಯಿಂಟ್ ಮೂಲಕವೇ ಬ್ಯಾಟರಿ ಚಾರ್ಜ್ ಮಾಡಬಹುದು. ಪೂರ್ಣ ಚಾರ್ಜ್‌ಗೆ ತಗಲುವ ಒಟ್ಟು ಸಮಯ 4 ಗಂಟೆಗಳು ಮಾತ್ರ. ‘ಟೈಗರ್ ಟ್ರ್ಯಾಕ್ಟರ್’ ಎಂಬ ಹೆಸರಿನ ವಾಹನದ ಎಕ್ಸ್ ಶೋರೂಂ ಬೆಲೆ ₹5.99ಲಕ್ಷ ಎಂದು ಕಂಪನಿ ತಿಳಿಸಿದೆ.

ಜರ್ಮನಿ ವಿನ್ಯಾಸದ ಈ ಟ್ರ್ಯಾಕ್ಟರ್ ಇಂಧನದ (ವಿದ್ಯುತ್‌) ಸೋರಿಕೆ ಇಲ್ಲದೆ ಗರಿಷ್ಠ ಆರ್‌ಪಿಎಂ ಉತ್ಪಾದಿಸಲಿದೆ. ಪಿಕ್‌ಅಪ್‌ ಮತ್ತು ಕಾರ್ಯಕ್ಷಮತೆಯಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳದಂತೆ ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇವುಗಳ ಬ್ಯಾಟರಿ ಕಡಿಮೆ ನಿರ್ವಹಣೆ ಬೇಡುವುದರ ಜತೆಗೆ ಡೀಸೆಲ್‌ಗೆ ಹೋಲಿಸಿದಲ್ಲಿ ಶೇ 75ರಷ್ಟು ಉಳಿತಾಯವಾಗಲಿದೆ ಎಂದೆನ್ನಲಾಗಿದೆ.

ಎಸ್ಕಾರ್ಟ್‌ ಟ್ರ್ಯಾಕ್ಟರ್‌

ಮೂರು ವರ್ಷಗಳ ಹಿಂದೆ ಎಸ್ಕಾರ್ಟ್ ಕಂಪನಿಯೂ ತನ್ನದೇ ವಿನ್ಯಾಸದ ವಿದ್ಯುತ್ ಚಾಲಿತ ಟ್ರ್ಯಾಕ್ಟರ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿತ್ತು. ಈಗಾಗಲೇ ಅವುಗಳನ್ನು ತಯಾರಿಸಿ ರಫ್ತು ಮಾಡುತ್ತಿದೆ. ಆದರೆ ಭಾರತದಲ್ಲಿ ಪರಿಚಯಿಸಿರಲಿಲ್ಲ. ಇದೀಗ ಕೇಂದ್ರೀಯ ಕೃಷಿ ಯಂತ್ರೋಪಕರಣಗಳ ತರಬೇತಿ ಹಾಗೂ ಪರೀಕ್ಷಾರ್ಥ ಕೇಂದ್ರದಿಂದ ಕೇಂದ್ರೀಯ ಮೋಟಾರು ವಾಹನಗಳ ಕಾಯ್ದೆ ಅನ್ವಯ ಎಸ್ಕಾರ್ಟ್‌ ವಿದ್ಯುತ್ ಚಾಲಿತ ಟ್ರ್ಯಾಕ್ಟರ್ ಮಾರಾಟಕ್ಕೆ ಅನುಮತಿ ಪಡೆದಿದೆ.

ಎಸ್ಕಾರ್ಟ್ ಟ್ರ್ಯಾಕ್ಟರ್ ಕೂಡ 21ರಿಂದ 30 ಎಚ್‌ಪಿ ವಿಭಾಗದ್ದಾಗಿದೆ. ಈ ಟ್ರ್ಯಾಕ್ಟರ್‌ಗಳಿಗೆ ಅಗತ್ಯವಾದ ಮೋಟಾರುಗಳನ್ನು ಕಿರ್ಲೋಸ್ಕರ್ ಕಂಪನಿ ಅಭಿವೃದ್ಧಿಪಡಿಸಿದೆ. ಪವರ್‌ ಟ್ರ್ಯಾಕ್ ಮತ್ತು ಫಾರ್ಮ್‌ ಟ್ರ್ಯಾಕ್ ಎಂಬ ಹೆಸರಿನ ಮೋಟಾರ್‌ಗಳನ್ನು ಕಂಪನಿ ಅಭಿವೃದ್ಧಿಪಡಿಸಿದೆ.

ಹೈಬ್ರಿಡ್‌ ತಂತ್ರಜ್ಞಾನ 

ಇವುಗಳ ಜತೆಯಲ್ಲೇ ಎಸ್ಕಾರ್ಟ್ ಹೈಬ್ರಿಡ್ ತಂತ್ರಜ್ಞಾನದ ಟ್ರ್ಯಾಕ್ಟರ್‌ಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದೆ. ಅಂದರೆ ಡೀಸೆಲ್ ಚಾಲಿತ ಎಂಜಿನ್ ಮೂಲಕ ಒಳಗೆ ಅಳವಡಿಸಿರುವ ಬ್ಯಾಟರಿಯೂ ಚಾರ್ಜ್ ಆಗುತ್ತಲಿರುತ್ತದೆ. ನಂತರ ಆ ಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯ.

ಇಂಥ ಹೈಬ್ರಿಡ್ ಟ್ರ್ಯಾಕ್ಟರ್‌ಗಳು 70ರಿಂದ 75 ಅಶ್ವಶಕ್ತಿ ಸಾಮರ್ಥ್ಯದಲ್ಲಿ ಲಭ್ಯ. ಹೈಬ್ರಿಡ್‌ ಶಕ್ತಿಯಿಂದಾಗಿ ಇದರ ಸಾಮರ್ಥ್ಯವನ್ನು 90 ಅಶ್ವಶಕ್ತಿಗೆ ಹೆಚ್ಚಿಸಿ ಕೊಳ್ಳಲು ಸಾಧ್ಯ. ಈಗಾಗಲೇ ಕಂಪನಿಯ ಟ್ರ್ಯಾಕ್ಟರ್‌ಗಳು ಅಮೆರಿಕ, ಯುರೋಪ್, ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಆಸಿಯಾನ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. 

ಕೃಷಿ ಕ್ಷೇತ್ರಕ್ಕೂ ವಿದ್ಯುತ್ ಚಾಲಿತ ಟ್ರ್ಯಾಕ್ಟರ್‌ಗಳ ಪದಾರ್ಪಣೆ ಹೊಸ ಶಖೆಯ ಆರಂಭವಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಈಗಲೂ ವಿದ್ಯುತ್ ಪೂರೈಕೆಯ ವ್ಯತ್ಯಯ ಸಮಸ್ಯೆ ಇರುವುದರಿಂದ ರೈತರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಎಸ್ಕಾರ್ಟ್ ಫಾರ್ಮ್ ಟ್ರ್ಯಾಕ್ 26ಇ

 ಲೀಥಿಯಂ ಅಯಾನ್ ಬ್ಯಾಟರಿ

 19ಕಿಲೋ ವ್ಯಾಟ್ (25.5ಅಶ್ವಶಕ್ತಿ)

 ಒಂದು ಚಾರ್ಜ್‌ನಲ್ಲಿ ಆರು ಗಂಟೆ ಕೆಲಸ

 ಪವರ್ ಸ್ಟಿಯರಿಂಗ್‌

 ಆಯಿಲ್ ಇಮ್ಮರ್ಸ್ಡ್‌ ಬ್ರೇಕ್‌

ಹೈಡ್ರಾಲಿಕ್ ಲಿಂಕೇಜ್‌

ಕಡಿಮೆ ಶಬ್ದ, ಶೂನ್ಯ ಮಾಲಿನ್ಯ

ಗುರಿ: ವಿನ್‌ಯಾರ್ಡ್‌ಗಳು, ತೊಟಗಾರಿಕೆ ಮಾರುಕಟ್ಟೆ

ಸೊನಾಲಿಕಾ ಟೈಗರ್ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌

ಲೀಥಿಯಂ ಅಯಾನ್ ಬ್ಯಾಟರಿ (ನ್ಯಾಚುರಲ್ ಕೂಲಿಂಗ್‌ ಬ್ಯಾಟರಿ)

35 ಅಶ್ವಶಕ್ತಿ (25.5ಕಿಲೋ ವ್ಯಾಟ್)

ಒಂದು ಚಾರ್ಜ್‌ನಲ್ಲಿ 10 ಗಂಟೆ ಕೆಲಸ

ಸಾಮಾನ್ಯ ಚಾರ್ಜಿಂಗ್ ಪಾಯಿಂಟ್ ಮೂಲಕ 4 ಗಂಟೆಗಳ ಚಾರ್ಚ್ಡೀ

ಸೆಲ್‌ಗೆ ಹೋಲಿಸಿದಲ್ಲಿ ಶೇ 75ರಷ್ಟು ಉಳಿತಾಯ

ಗರಿಷ್ಠ ವೇಗ ಗಂಟೆಗೆ 24.93 ಕಿ.ಮೀ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು