ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನ & ತಂತ್ರಜ್ಞಾನ: ಕಿಸಾನ್ ಕವಚ– ರೈತರನ್ನು ಕಾಯುವ ಬಟ್ಟೆಯ ಗುರಾಣಿ

ಕೀಟನಾಶಕಗಳಿಂದ ರೈತರಿಗೆ ಅಪಾಯ ಒದಗುವುದು ಹೊಸತೇನಲ್ಲ. ಅಧ್ಯಯನದ ಪ್ರಕಾರ ಪ್ರತಿವರ್ಷವೂ ಆಂಧ್ರಪ್ರದೇಶ ಒಂದರಲ್ಲಿಯೇ ನೂರ ಅರವತ್ತು ಮಂದಿ ಕೀಟನಾಶಕದ ವಿಷದಿಂದಾಗಿ ಸಾಯುತ್ತಾರಂತೆ.
Published 11 ಜೂನ್ 2024, 15:55 IST
Last Updated 11 ಜೂನ್ 2024, 15:55 IST
ಅಕ್ಷರ ಗಾತ್ರ

ಡಿಸೆಂಬರ್ ಕಾಲಿಡುತ್ತಿದ್ದ ಹಾಗೆಯೇ ಹುಣಸೂರು ತಾಲೂಕಿನ ಬನ್ನಿಕುಪ್ಪೆಯ ಹೆದ್ದಾರಿಯ ಎರಡೂ ಬದಿಯಲ್ಲಿ, ಸೀಸನ್ನಿನ ಬೆಳೆ ಅವರೆಕಾಯಿ ಮೂಟೆಗಳು ಗುಡ್ಡೆ, ಗುಡ್ಡೆಯಾಗಿ ಬಿದ್ದಿರುತ್ತವೆ. ಹತ್ತು ವರ್ಷಗಳ ಹಿಂದ ಅವರೆಕಾಯಿಯ ಸೊನೆದಕ್ಕಿಂತಲೂ ಕೀಟನಾಶಕದ ಘಾಟು ಮೂಗಿಗೆ ಅಡರುತ್ತಿತ್ತು. ಈಗ ಹಾಗಿಲ್ಲ. ಕಾರಣ, ಹತ್ತು ವರ್ಷದ ಹಿಂದೆ ಕೀಟಟನಾಶಕವನ್ನು ಸಿಂಪಡಿಸಿದ ಹಲವು ಕೃಷಿಕಾರ್ಮಿಕರು ಆಸ್ಪತ್ರೆ ಸೇರಿದ್ದರು. ಅವರಲ್ಲಿ ಒಬ್ಬ ಮರಣಿಸಿದ್ದ. ಅಂದಿನಿಂದ ಕೀಟನಾಶಕಗಳ ಸಿಂಪರಣೆಯನ್ನು ನಿಷೇಧಿಸಲಾಗಿದೆ.

ಕೀಟನಾಶಕಗಳಿಂದ ರೈತರಿಗೆ ಅಪಾಯ ಒದಗುವುದು ಹೊಸತೇನಲ್ಲ. ಒಂದು ಅಧ್ಯಯನದ ಪ್ರಕಾರ ಪ್ರತಿವರ್ಷವೂ ಆಂಧ್ರಪ್ರದೇಶ ಒಂದರಲ್ಲಿಯೇ ನೂರ ಅರವತ್ತು ಮಂದಿ ಕೀಟನಾಶಕದ ವಿಷದಿಂದಾಗಿ ಸಾಯುತ್ತಾರಂತೆ. ಭತ್ತ, ಗೋಧಿ, ಬೇಳೆಗಳನ್ನು ಬೆಳೆಯುವ ಆಂಧ್ರಪ್ರದೇಶ, ಕರ್ನಾಟಕ, ಪಂಜಾಬು, ಒಡಿಶಾಗಳಲ್ಲಿ ಕೀಟನಾಶಕದ ದುಷ್ಪರಿಣಾಮದಿಂದ ಸಾವನ್ನಪ್ಪುವವರು ಹೆಚ್ಚು. ಇದೀಗ ಈ ಸಂಕಟವನ್ನು ದೂರಮಾಡುವ ರಕ್ಷಾಕವಚ ಸಿದ್ಧವಾಗಿದೆ. ಬೆಂಗಳೂರಿನ ‘ಐಸ್ಟೆಮ್’ ಅಥವಾ ‘ಇನ್‌ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಥೆರಪಿ ಅಂಡ್ ರೀಜನರೇಟಿವ್ ಮೆಡಿಸಿನ್’ ಸಂಸ್ಥೆಯ ವಿಜ್ಞಾನಿಗಳು, ಕೀಟನಾಶಕ ಮೈಯನ್ನು ತಗುಲಿದರೂ ಅಪಾಯವಾಗದಂತೆ ತಡೆಯುವ ಬಟ್ಟೆಯನ್ನು ಸಿದ್ಧಪಡಿಸಿದ್ದಾರೆ.

ಕೀಟನಾಶಕಗಳು ನರವಿಷಗಳು. ದೇಹದೊಳಗೆ ಹೊಕ್ಕಾಗ ಅವು ನರಮಂಡಲದ ಚಟುವಟಿಕೆಗೆ ಅವಶ್ಯಕವಾದ ‘ಅಸಿಟೈಲ್ಕೋಲಿನ್ ಎಸ್ಟರೇಸ್’ (ಎಸಿಇ) ಎನ್ನುವ ರಾಸಾಯನಿಕವನ್ನು ನಾಶ ಮಾಡುತ್ತವೆ. ತಲೆನೋವು, ವಾಂತಿಯಿಂದ ಆರಂಭಿಸಿ, ಪಾರ್ಶ್ವವಾಯು, ಹೃದಯದ ಬಡಿತ ನಿಲ್ಲುವುದು ಮೊದಲಾದ ಗಂಭೀರ ಸಮಸ್ಯೆಗಳೂ ತೋರಬಹುದು. ಕೀಟನಾಶಕದ ಪ್ರಮಾಣ ಹೆಚ್ಚಿದ್ದಲ್ಲಿ ಸಾವು ಕೂಡ ಸಂಭವಿಸಬಹುದು. ವಿದೇಶಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸುವಾಗ ಸೈನಿಕರು ಯುದ್ಧದಲ್ಲಿ ಬಳಸುವಂತಹ ದಿರಿಸು, ಮುಖಗವಸುಗಳನ್ನು ಧರಿಸುವುದುಂಟು. ಆದರೆ ಬೇಗೆಯ ನಾಡಿನಲ್ಲಿ ಈ ದಿರಿಸುಗಳು ಭಾರಿ ಎನ್ನಿಸುತ್ತವೆ; ಜೊತೆಗೆ ದುಬಾರಿ ಕೂಡ.

‘ಉನ್ನತ ವಿಜ್ಞಾನವನ್ನು ಬಳಸಿಕೊಂಡು ರೈತರ ಆರೋಗ್ಯವನ್ನು ಕಾಯುವ ಉಪಾಯಗಳು ಸಾಧ್ಯವೇ?’ ಎನ್ನುವುದು ನಮ್ಮ ಪ್ರಯತ್ನ ಎನ್ನುತ್ತಾರೆ, ಕಿಸಾನ್ ಕವಚ್ ಎಂಬ ಹೆಸರಿನ ಬಟ್ಟೆಯನ್ನು ಸಿದ್ಧಪಡಿಸಿರುವ ವಿಜ್ಞಾನಿಗಳ ನೇತಾರ ಪ್ರವೀಣ್ ಕುಮಾರ್ ವೇಮುಲ. ಐಸ್ಟೆಮ್ ಸಂಸ್ಥೆಯ ಜೈವಿಕ ತಂತ್ರಜ್ಞಾನದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಪ್ರವೀಣ್ ಈ ಹಿಂದೆ ಕೀಟನಾಶಕ ಸೋಂಕಿದಾಗ ಅದನ್ನು ತೆಗೆದು ಹಾಕುವ ಮುಲಾಮನ್ನು ಸಿದ್ಧಪಡಿಸಿದ್ದರು. ಆದರೆ ಪ್ರತಿಬಾರಿ ಗದ್ದೆಗೆ ಹೋಗುವಾಗಲೂ ಇದನ್ನು ಮೈಗೆಲ್ಲ ಲೇಪಿಸಿಕೊಳ್ಳುವ ತಾಪತ್ರಯವಿತ್ತು. ದುಬಾರಿ, ಭಾರಿ ದಿರಿಸು ಧರಿಸುವ ಹಾಗೂ ನಿತ್ಯ ಲೇಪನದ ಕಷ್ಟವನ್ನು ಈ ‘ಕವಚ’ ನಿವಾರಿಸಲಿದೆಯಂತೆ.

ಹತ್ತಿ ಬಟ್ಟೆಗೆ ಕೀಟನಾಶಕಗಳನ್ನು ನಾಶಪಡಿಸುವ ಶಕ್ತಿಯನ್ನು ವಿಶೇಷ ರಾಸಾಯನಿಕ ತಂತ್ರಗಳಿಂದ ಒದಗಿಸಿದ್ದಾರೆ. ‘ಕೀಟನಾಶಕಗಳ ಜಟಿಲ ರಚನೆಯನ್ನು ಒಡೆದರೆ ಅವು ವಿಷವೆನ್ನಿಸುವುದಿಲ್ಲ. ಈ ಕೆಲಸ ಮಾಡುವ ರಾಸಾಯನಿಕಗಳನ್ನು ಹತ್ತಿ ಬಟ್ಟೆಗೆ ಅಂಟಿಸಿದರೆ, ಬಟ್ಟೆ ಕೀಟನಾಶಕಗಳನ್ನು ನಿರ್ವಿಷವಾಗಬಹುದು ಎಂಬುದು ನಮ್ಮ ಆಲೋಚನೆ’ ಎನ್ನುತ್ತಾರೆ, ವೇಮುಲ. ಈ ನಿಟ್ಟಿನಲ್ಲಿ ಇವರು ಆಕ್ಸೈಮುಗಳೆಂದ ರಾಸಾಯನಿಕಗಳನ್ನು ಆಯ್ದುಕೊಂಡರು. ಅವನ್ನು ಹತ್ತಿಯಲ್ಲಿರುವ ಸೆಲ್ಯುಲೋಸು ನಾರಿಗೆ ಅಂಟಿಸಲೆಂದು ಸಿಲೈಲು ಆಕ್ಸೈಮು ರೂಪಕ್ಕೆ ಪರಿವರ್ತಿಸಿದ್ದಾರೆ. ಸ್ವಚ್ಛವಾಗಿ ಒಗೆದು, ಒಣಗಿಸಿದ ಬಟ್ಟೆಯನ್ನು ಸಿಲೈಲು ಆಕ್ಸೈಮು ದ್ರಾವಣದಲ್ಲಿ ಅದ್ದಿ ತೆಗೆದು, ಇಸ್ತ್ರಿ ಮಾಡುವಂತೆ ಅತಿ ಹೆಚ್ಚಿನ ಉಷ್ಣತೆಯಲ್ಲಿ ಬಿಸಿ ಮಾಡಿ ಒಣಗಿಸಿದ್ದಾರೆ. ಹೀಗೆ ಹತ್ತಿ ನಾರಿಗೆ ಆಕ್ಸೈಮು ಧಾರಣೆಯಾಗಿದೆ.

ಆಕ್ಸೈಮು ನಿಜಕ್ಕೂ ಹತ್ತಿಗೆ ಅಂಟಿಕೊಂಡಿರುವುದನ್ನು ಖಚಿತ ಪಡಿಸಿಕೊಂಡ ನಂತರ ಬಟ್ಟೆ ಕೀಟನಾಶಕಗಳಿಂದ ರಕ್ಷಿಸುತ್ತದೆಯೇ ಎಂದು ಪ್ರಯೋಗಗಳನ್ನು ಮಾಡಿದ್ದಾರೆ. ಈ ಬಟ್ಟೆಯನ್ನು ಹೊದ್ದ ಇಲಿಗಳ ಮೇಲೆ ಕೊಲ್ಲುವಷ್ಟು ಪ್ರಬಲವಾದ ಕೀಟನಾಶಕಗಳನ್ನು ಸಿಂಪಡಿಸಿ, ಪರೀಕ್ಷಿಸಿದ್ದಾರೆ. ಹಾಗೆಯೇ ಸಾಮಾನ್ಯ ಹತ್ತಿಬಟ್ಟೆಯನ್ನು ಹೊದಿಸಿಯೂ ಪ್ರಯೋಗ ಮಾಡಿದ್ದಾರೆ. ಸಾಮಾನ್ಯವಾಗಿ ಕೀಟನಾಶಕ ಸಿಂಪಡಿಸಿದ ನಂತರ ಕಾಣುವ ಅಡ್ಡಾದಿಡ್ಡಿ ವಾಲು ನಡೆ, ಸ್ನಾಯುಗಳ ಸೆಟೆತ ಮುಂತಾದ ಲಕ್ಷಣಗಳು ‘ಕವಚ’ ಹೊದ್ದ ಇಲಿಗಳಲ್ಲಿ ಹತ್ತಿಬಟ್ಟೆ ಹೊದ್ದವುಗಳಿಗಿಂತಲೂ ಕಡಿಮೆ ಇತ್ತೆಂದು ಕಂಡಿದ್ದಾರೆ. ಅಷ್ಟೇ ಅಲ್ಲ, ಕವಚ ಹೊದ್ದ ಇಲಿಗಳಲ್ಲಿ ಸತ್ತವುಗಳ ಸಂಖ್ಯೆಯೂ ಗುರುತರವಾಗಿ ಕಡಿಮೆಯಾಗಿತ್ತು. ಇಲಿಗಳ ರಕ್ತ, ಮಿದುಳು, ಹೃದಯ ಹಾಗೂ ಶ್ವಾಸಕೋಶಗಳಲ್ಲಿ ‘ಎಸಿಇ’ ಕಿಣ್ವದ ಚಟುವಟಿಕೆಯನ್ನು ಅಳೆದಾಗ, ಕವಚವನ್ನು ಹೊದ್ದ ಇಲಿಗಳಲ್ಲಿ ಇದು ಉಳಿದೆರಡು ತಂಡಗಳ ಇಲಿಗಳಲ್ಲಿ ಇರುವುದಕ್ಕಿಂತ ಹೆಚ್ಚು ಇತ್ತು. ಬರೇ ಬಟ್ಟೆಯ ಮೂಲಕ ಕೀಟನಾಶಕವಿರುವ ಗಾಳಿಯನ್ನು ಹಾಯಿಸಿಯೂ ಪರೀಕ್ಷೆ ಮಾಡಲಾಗಿದೆ. ಬಟ್ಟೆ ಕೀಟನಾಶಕಗಳನ್ನು ಸೋಸಿ ಗಾಳಿಯನ್ನು ಸ್ವಚ್ಛಗೊಳಿಸಿತ್ತು. ಈ ಗಾಳಿಯನ್ನು ಉಸಿರಾಡಿದ ಇಲಿಗಳಲ್ಲಿ ಎಸಿಇ ಕಿಣ್ವದ ಚಟುವಟಿಕೆಗೆ ಹೆಚ್ಚು ಬಾಧೆ ಆಗಿರಲಿಲ್ಲ ಎಂದೂ ಇವರು ಕಂಡುಕೊಂಡಿದ್ದಾರೆ. ಹೀಗೆ ಕವಚ ಪರಿಣಾಮಕಾರಿಯಾಗಿ ಕೀಟನಾಶಕಗಳ ಕೆಟ್ಟ ಪರಿಣಾಮಗಳನ್ನು ತಡೆಗಟ್ಟುತ್ತದೆ ಎಂದು ನಿರೂಪಿಸಿದ್ದಾರೆ. ‘ಕಿಸಾನ್ ಕವಚ್’ ಎಂಬ ಹೆಸರಿನಲ್ಲಿ ಈ ಬಟ್ಟೆಯನ್ನು ಪೇಟೆಂಟು ಮಾಡಲಾಗಿದೆ.

ಹತ್ತಿಬಟ್ಟೆಯಾದ್ದರಿಂದ ಸಾಮಾನ್ಯವಾಗಿ ದಿರಿಸನ್ನು ಹೊಲಿಯುವಂತೆಯೇ ಇದನ್ನೂ ಹೊಲಿದುಕೊಳ್ಳಬಹುದು. ಅವರವರಿಗೆ ಬೇಕಾದಂತೆ ದಿರಿಸನ್ನು ಸಿದ್ಧ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ. ಒಗೆದಾಗ ಕವಚದ ಸಾಮರ್ಥ್ಯ ಕುಂದುತ್ತದೆಯೋ ಎಂದೂ ಪರಿಶೀಲಿಸಲಾಗಿದೆ. ಐವತ್ತು ಬಾರಿ ಒಗೆದು ಮರುಬಳಸಿದಾಗಲೂ ಬಟ್ಟೆಗೆ ಅಂಟಿದ್ದ ಆಕ್ಸೈಮುಗಳ ತೊಳೆದು ಹೋಗಿರಲಿಲ್ಲ. ‘ಎಂದರೆ ಈ ಬಟ್ಟೆಯಿಂದ ಹೊಲಿದ ದಿರಿಸನ್ನು ಧರಿಸಿ ಎಂದಿನಂತೆ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಮುಖಗವುಸನ್ನು ಮಾಡಿ, ಕೀಟನಾಶಕಗಳಿರುವ ಗಾಳಿಯಿಂದ ಅಪಾಯವಾಗದಂತೆ ಕಾಪಾಡಬಹುದು’ ಎನ್ನುತ್ತಾರೆ, ಇದನ್ನು ತಯಾರಿಸಿ, ಮಾರಾಟ ಮಾಡಲು ಸಿದ್ಧವಾಗಿರುವ ‘ಸೆಪಿಯೋ ಹೆಲ್ತ್ ಪ್ರೈ ಲಿ.’ ಎನ್ನುವ ಕಂಪೆನಿಯ ನಿರ್ದೇಶಕ ಓಂಪ್ರಕಾಶ್ ಸುಣ್ಣಾಪು. ಈ ಬಟ್ಟೆಯನ್ನು ಕೀಟನಾಶಕ ಸೋಂಕಿರುವ ನೀರನ್ನು ಶುಚಿಗೊಳಿಸಲೂ ಬಳಸಬಹುದೋ? ಗೊತ್ತಿಲ್ಲ. ಸದ್ಯಕ್ಕೆ ಕೀಟನಾಶಕ ಸಿಂಪಡಿಸಿದಮೇಲೆ ಆಸ್ಪತ್ರೆಗೆ ಹೋಗುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು ಅಷ್ಟೆ.


ವೆಮುಲ ತಂಡದ ಈ ಸಾಧನೆಯ ವಿವರಗಳನ್ನು ‘ನೇಚರ್ ಕಮ್ಯೂನಿಕೇಷನ್ಸ್ ಪತ್ರಿಕೆ’ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT