ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆ ಈಗ ರೈತರ ಹಕ್ಕು: ಮಾಹಿತಿ ದಾಖಲಿಸಲು ಆ್ಯಪ್‌

Last Updated 6 ಆಗಸ್ಟ್ 2021, 6:31 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ 2021–22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭವಾಗಿದೆ. ಮೊಬೈಲ್ ಫೋನ್‌ ಆ್ಯಪ್‌ ಮೂಲಕ ಫೋಟೊ ಸಹಿತ ಸ್ವತಃ ದಾಖಲಿಸುವ ಅವಕಾಶವನ್ನು ಸರ್ಕಾರವುರೈತರಿಗೆ ನೀಡಿದೆ.

ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ನಿರ್ವಹಿಸುತ್ತಿದ್ದರು. ಆಗ ಕೆಲವು ದೂರುಗಳು ಬರುತ್ತಿದ್ದವು. ಇದನ್ನು ತ‍ಪ್ಪಿಸಲು ಈ ಉಪಕ್ರಮ ಅನುಸರಿಸಲಾಗುತ್ತಿದೆ.

ಬಿತ್ತನೆ ಕಾರ್ಯ ಬಹುತೇಕ ಮುಗಿದಿದ್ದು, ಸಮೀಕ್ಷೆ ಪ್ರಗತಿಯಲ್ಲಿದೆ. ಒಂದೆಡೆ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತಿದೆ.

ಈಗ ರೈತರು ದಾಖಲಿಸುವ ಮಾಹಿತಿಯು ‘ಭೂಮಿ’ ತಂತ್ರಾಂಶದ ಸೇರಿ, ಪಹಣಿಯಲ್ಲಿ ತಾನಾಗಿಯೇ ದಾಖಲಾಗುತ್ತದೆ. ಇದರಿಂದ, ರೈತರು ಪಹಣಿಪತ್ರದಲ್ಲಿ ಮಾಹಿತಿ ತಪ್ಪಾಗಿದೆ ಎಂದು ದೂರುವ ಪ್ರಮೇಯಗಳು ಎದುರಾಗುವುದಿಲ್ಲ. ‘ನನ್ನ ಬೆಳೆ ನನ್ನ ಹಕ್ಕು’ ಎಂದು ಕೃಷಿಕರು ಪ್ರತಿಪಾದಿಸಲು ಅವಕಾಶವಿದೆ ಎಂದು ಕೃಷಿ ಇಲಾಖೆ ಹೇಳಿದೆ.

ಫೋಟೊಸಹಿತ:

ಹಂಗಾಮಿನಲ್ಲಿ ರೈತರು ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಫೋಟೊಸಹಿತ ಅಪ್‌ಲೋಡ್ ಮಾಡಬಹುದು. ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಸಾಂಖಿಕ ಇಲಾಖೆ ಜಂಟಿ ಸಹಯೋಗದಲ್ಲಿ ಸಮೀಕ್ಷೆ ನಡೆದಿದೆ. ಸಂಗ್ರಹವಾದ ಮಾಹಿತಿಯನ್ನು ಆಯಾ ತಾಲ್ಲೂಕು ಆಡಳಿತ ಪರಿಶೀಲಿಸಲಿದೆ.

‘ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಕಂದಾಯ ಅಥವಾ ಕೃಷಿ ಇಲಾಖೆಯಿಂದ ನಿಯೋಜನೆಗೊಂಡ ಅದೇ ಗ್ರಾಮದ ಯುವಕರ (ಖಾಸಗಿ ನಿವಾಸಿ/ ಪಿ.ಆರ್) ನೆರವಲ್ಲೂ ನಿರ್ವಹಿಸಬಹುದು. ಒಟಿಪಿ ಪಡೆದು ಜಮೀನಿನ (ಹಿಸ್ಸಾವಾರು) ಬೆಳೆಗಳ ಮಾಹಿತಿ ದಾಖಲಿಸಬಹುದು. ನಿಗದಿತ ಸಮಯದಲ್ಲಿ ಮಾಹಿತಿ ಅಪ್‌ಲೋಡ್ ಆಗದಿದ್ದಲ್ಲಿ ಪ್ರತಿ ಗ್ರಾಮಕ್ಕೆ ನಿಯೋಜಿತ ಸಮೀಕ್ಷಕರು ನಿರ್ವಹಿಸುತ್ತಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸುತ್ತಾರೆ.

ಜಿಲ್ಲೆಯಲ್ಲಿ 15,02,372 ತಾಕುಗಳ (ಜಮೀನುಗಳ) ಗುರಿಯಲ್ಲಿ 12,700 ತಾಕುಗಳ ಸಮೀಕ್ಷೆ ನಡೆದಿದೆ. ಸತತ ಮಳೆಯಿಂದಾಗಿ ಕೊಂಚ ಹಿನ್ನಡೆಯಾಗಿದೆ. ಮಳೆ ಬಿಡುವು ಕೊಟ್ಟಲ್ಲಿ ಕ್ರಮೇಣ ಚುರುಕುಗೊಳ್ಳಲಿದೆ ಎನ್ನುವುದು ಇಲಾಖೆಯ ಅಧಿಕಾರಿಗಳ ಹೇಳಿಕೆ.

ಕೆಲವೆಡೆ ಇಂಟರ್ನೆಟ್‌ ಸಂಪರ್ಕದ ಸಮಸ್ಯೆ ಇದೆ. ಕೆಲವರಿಗೆ ಮಾಹಿತಿ ಕೊರತೆಯೂ ಉಂಟು. ಕೃಷಿಕರು ತಾವಾಗಿಯೇ ಮಾಹಿತಿ ದಾಖಲಿಸಲು ಆ.15ರವರೆಗೆ ಅವಕಾಶವಿದೆ.

‘ರೈತರಿಗೆ ಜಾಗೃತಿ ಮೂಡಿಸಲಾಗಿದೆ. ಮಹತ್ವದ ಕಾರ್ಯ ಇದಾಗಿದ್ದು, ಎಲ್ಲರೂ ಸ್ವಯಂಪ್ರೇರಣೆಯಿಂದ ಭಾಗವಹಿಸಿ ಲಾಭ ಪಡೆದುಕೊಳ್ಳಬೇಕು. ಇಲಾಖೆಯವರು ನನ್ನ ಎಲ್ಲ ಬೆಳೆಯನ್ನೂ ದಾಖಲಿಸಲಿಲ್ಲ ಎಂದು ಹೇಳುವುದಕ್ಕೆ ಈಗ ಅವಕಾಶವಿಲ್ಲ. ನನ್ನ ಬೆಳೆ ನನ್ನ ಹಕ್ಕು ಎನ್ನುವುದನ್ನು ಅವರಿಗೆ ತಿಳಿಸಲಾಗುತ್ತಿದೆ. ಉತ್ತಮ ಸ್ಪಂದನೆ ಸಿಕ್ಕಿದೆ. ಈ ಕ್ರಮವನ್ನು ಕೇಂದ್ರ ಸರ್ಕಾರವೂ ಶ್ಲಾಘಿಸಿದೆ’ ಎನ್ನುತ್ತಾರೆ ಪಾಟೀಲ.

ಕೆಲವು ದೂರುಗಳಿವೆ

ರಾಯಬಾಗ: ತಾಲ್ಲೂಕಿನಲ್ಲಿ ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೈತರು ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ. ಈ ಆ್ಯಪ್‌ನಿಂದ ಕೃಷಿಕರು 9 ರೀತಿಯ ಸೇವೆ ಪಡೆಯಬಹುದು. ಬೆಳೆ ವಿಮೆ, ಸಹಾಯಧನ, ಕೃಷಿ ಉಪಕರಣಗಳು ಮತ್ತಿತರ ಮೂಲಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಮುಂದಿನ 4 ದಿನಗಳ ಹವಾಮಾನ ವರದಿಯನ್ನೂ ಪಡೆಯಬಹುದು.

ಆ್ಯಪ್‌ನ ತಾಂತ್ರಿಕ ಅಂಶದ ಬಗ್ಗೆ ದೂರುಗಳಿವೆ. ಸ್ವತಃ ತಮ್ಮ ಜಾಗದಲ್ಲಿ ನಿಂತಿದ್ದರೂ ಜಿಪಿಎಸ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಲು ಆಗುತ್ತಿಲ್ಲ ತಿಳಿಸುತ್ತಾರೆ.

‘ಬೆಳೆಗಳ ವಿವರ ದಾಖಲಿಸದಿದ್ದರೆ ಸೌಲಭ್ಯಗಳಿಂದ ವಂಚಿತರಾಗುವ ಸಂಭವ ಇದೆ. ಹೀಗಾಗಿ, ಎಲ್ಲರೂ ಪಾಲ್ಗೊಳ್ಳಬೇಕು. ಸರ್ಕಾರಕ್ಕೂ ನಿಖರ ಮಾಹಿತಿ ದೊರೆಯುತ್ತದೆ’ ಎಂದು ಬೆಕ್ಕೇರಿಯ ರೈತ ಮಹೇಶಚಂದ್ರ ಭೀ. ತೇಲಿ ಸಲಹೆ ನೀಡಿದರು.

ಖಾಸಗಿ ನಿವಾಸಿಗಳಿಂದ

ತೆಲಸಂಗ: ಆ್ಯಪ್ ಬಳಕೆ ಬಾರದ ರೈತರು ಗೊತ್ತಿರುವವರ ಮೊರೆ ಹೋಗಬೇಕಾಗಿದೆ. ಒಂದೇ ಹೊಲದಲ್ಲಿ ವಿವಿಧ ಬೆಳೆಗಳ ಮಾಹಿತಿ ಅಪ್‌ಲೋಡ್‌ ವೇಳೆ ಗೊಂದಲ ಆಗುತ್ತಿದೆ.

‘ಕಳೆದ ವರ್ಷ ಆ್ಯಪ್‌ನಲ್ಲಿ ತಪ್ಪು ನಮೂದಾದ ಪರಿಣಾಮ ದ್ರಾಕ್ಷಿ ಬೆಳೆ ವಿಮೆಯ ಹಣ ಪಡೆಯಲು ರೈತರು ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ. ಯಾವ ಬೆಳೆಗೆ ಕಂತು ತುಂಬಿರುತ್ತೇವೆಯೋ ಅದೇ ಬೆಳೆ ನಮೂದಾಗಿರದಿದ್ದರೆ ಮಾತ್ರ ವಿಮೆ ಸಿಗುತ್ತದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರ್ಕಾರ ಆಯಾ ಬೆಳೆಗಳಿಗೆ ನೀಡುವ ಪರಿಹಾರವೂ ತಪ್ಪು ನಮೂದಿನಿಂದ ಕೈತಪ್ಪುವ ಆತಂಕವೂ ಇದೆ. ತಿಳಿವಳಿಕೆ ಕಾರ್ಯಕ್ರಮಗಳು ಹೆಚ್ಚಬೇಕು’ ಎಂದು ಕೊಟ್ಟಲಗಿಯ ಪ್ರಗತಿಪರ ರೈತ ಶಿವಾನಂದ ತೇಲಿ ಹೇಳಿದರು.

‘ಆ.15ರವರೆಗೆ ರೈತರೇ ಸಮೀಕ್ಷೆ ನಡೆಸಲು ಅವಕಾಶವಿದೆ. ಬಳಿಕವೂ ಬಾಕಿ ಇದ್ದರೆ ನಿಯೋಜಿತ ಸಿಬ್ಬಂದಿ ಪೂರ್ಣಗೊಳಿಸಲಿದ್ದಾರೆ. ತೊಂದರೆ ಆದಲ್ಲಿ ಸರಿಪಡಿಸಲು ಅವಕಾಶವಿದೆ’ ಎಂದು ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ತಿಳಿಸಿದರು.

ಆ್ಯಪ್ ಬಳಸಲು ಕಷ್ಟ

ಚನ್ನಮ್ಮನ ಕಿತ್ತೂರು: ಮೊಬೈಲ್‌ ಫೋನ್‌ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ನಡೆಸುವ ಪ್ರಕ್ರಿಯೆ ಸ್ವಲ್ಪ ಕಷ್ಟದಾಯಕವಾಗಿದೆ. ನೆಟ್‌ವರ್ಕ್ ಮತ್ತು ಸರ್ವರ್ ಸಮಸ್ಯೆಯೂ ಇದಕ್ಕೆ ಕಾರಣಗಳಲ್ಲೊಂದಾಗಿದೆ ಎನ್ನುತ್ತಾರೆ ರೈತರು.

‘ಬೆಳೆ ಬಳಿಯೇ ನಿಂತು ಭಾವಚಿತ್ರ ಅಪ್ ಲೋಡ್ ಮಾಡಬೇಕಾಗುತ್ತದೆ. ಹೊಲದಲ್ಲಿ ತೊಂದರೆಯಾದರೆ ಕೃಷಿ ಇಲಾಖೆ ಪರ್ಯಾಯ ಮಾರ್ಗವನ್ನೂ ರೈತರಿಗೆ ಸೂಚಿಸಿದೆ. ನೆಟ್‌ವರ್ಕ್ ಸಿಗದಿದ್ದರೆ ಅಲ್ಲಿಯ ಬೆಳೆ ಫೋಟೊಗಳನ್ನು ತಂದು ಬೇರೆಡೆ ಅಪ್‌ಲೋಡ್ ಮಾಡಲು ಅವಕಾಶವಿದೆ. ಸಿಬ್ಬಂದಿಯೂ ನೆರವಾಗಲಿದ್ದಾರೆ’ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ಕೆಂಚರಾಹುತ್.

ನೆಟ್‌ವರ್ಕ್‌ನದ್ದೇ ಸಮಸ್ಯೆ

ಖಾನಾಪುರ: ತಾಲ್ಲೂಕಿನಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿರುವ ರೈತಾಪಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಅವರೆಲ್ಲರ ಬಳಿ ಸ್ಮಾರ್ಟ್ ಮೊಬೈಲ್‌ ಫೋನ್ ಇಲ್ಲದಿರುವುದು ಮತ್ತು ನೆಟ್‌ವರ್ಕ್‌ ಸಿಗದಿರುವುದು ಸಮೀಕ್ಷೆಗೆ ಅಡ್ಡಿಯಾಗಿದೆ.

ಗುಂಜಿ ಮತ್ತು ಜಾಂಬೋಟಿ ಹೋಬಳಿ ವ್ಯಾಪ್ತಿಯ 80 ಗ್ರಾಮಗಳು ಅರಣ್ಯ ಮತ್ತು ಗುಡ್ಡಗಾಡು ಪ್ರದೇಶ ಸುತ್ತುವರಿದಿದೆ. ಅಲ್ಲಿ ಮೊಬೈಲ್ ನೆಟ್‌ವರ್ಕ್ ಲಭ್ಯವಿಲ್ಲ. ಹೀಗಾಗಿ ಎರಡೂ ಹೋಬಳಿಗಳ ವ್ಯಾಪ್ತಿಯ ಬಹುತೇಕ ರೈತರಿಗೆ ತೊಂದರೆಯಾಗಿದೆ.

‘ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈ ವಿಷಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಬಿ. ಚವಾಣ ಪ್ರತಿಕ್ರಿಯಿಸಿದರು.

ಎಂ.ಕೆ. ಹುಬ್ಬಳ್ಳಿ ಭಾಗದಲ್ಲೂ ಇದೇ ಸಮಸ್ಯೆ. ಕೆಲ ರೈತರಲ್ಲಿ ಮೊಬೈಲ್‌ ಫೋನ್‌ಗಳಿಲ್ಲ. ಇರುವವರಿಗೆ ಆ್ಯಪ್ ಬಳಕೆ ಗೊತ್ತಿಲ್ಲ. ಈಗಾಗಲೇ ಹಲವು ರೈತರು ಸಮೀಕ್ಷೆ ನಡೆಸಿದ್ದಾರೆ. ‘ಮಾಹಿತಿ ಗೊತ್ತಿರದವರಿಗೆ ನಮ್ಮ ಸಿಬ್ಬಂದಿ ನೆರವಾಗುತ್ತಿದ್ದಾರೆ. ರೈತರ ಮೊಬೈಲ್ ಮೂಲಕವೇ ಸಮೀಕ್ಷೆ ಮಾಡುತ್ತಾರೆ. ತಿಳಿವಳಿಕೆಯನ್ನೂ ನೀಡುತ್ತಿದ್ದೇವೆ’ ಎಂದು ಸಹಾಯಕ ಕೃಷಿ ಅಧಿಕಾರಿ ಎಸ್.ಎ. ನಿಂಬಲಗುಂದಿ ತಿಳಿಸಿದರು.

ಉದ್ದೇಶವೇನು?

* ಸಮೀಕ್ಷೆಯ ಮಾಹಿತಿಯನ್ನು ಸಾಂಖ್ಯಿಕ ಇಲಾಖೆಯ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ ವಿಸ್ತೀರ್ಣ ಎಣಿಕಾ ಕಾರ್ಯದಲ್ಲಿ ಬಳಸಲು ಅನುಮತಿಸಲಾಗಿದೆ.

* ಪ್ರಾಕೃತಿಕ ವಿಕೋಪದ ಸಂದರ್ಭ ಬೆಳೆ ಹಾನಿ ಸಹಾಯಧನ ನೀಡಲು ವರದಿ ತಯಾರಿಸಲು ಬಳಕೆ.


* ಬೆಳೆ ವಿಮೆ ಯೋಜನೆಯಡಿ ರೈತರ ತಾಕುವಾರು ಬೆಳೆ ಪರಿಶೀಲನೆಗೆ.

* ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು.

* ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನದಲ್ಲಿ ಆಧಾರವಾಗಿ ಇಟ್ಟುಕೊಳ್ಳಲಾಗುವುದು.

* ಆರ್‌ಟಿಸಿಯಲ್ಲಿ ಬೆಳೆ ವಿವರ ದಾಖಲಿಸಲು.

ರೈತರೇ ನಿರ್ವಹಿಸಿದರೆ ಅನುಕೂಲ

ಒಂದು ವೇಳೆ ತಾಂತ್ರಿಕ ಸಮಸ್ಯೆಯಿಂದ ರೈತರು ಸಮೀಕ್ಷೆ ಮಾಡುವುದು ಸಾಧ್ಯವಾಗದಿದ್ದಲ್ಲಿ ಖಾಸಗಿ ನಿವಾಸಿಗಳ ಮೂಲಕ ಮಾಹಿತಿಯನ್ನು ಆ್ಯಪ್‌ ಮೂಲಕ ದಾಖಲಿಸಲಾಗುವುದು. ಆದರೆ, ರೈತರೇ ತಮ್ಮ ಬೆಳೆಗಳೆಲ್ಲವನ್ನೂ ದಾಖಲಿಸುವುದು ಅನುಕೂಲವಾಗುತ್ತದೆ.

–ಶಿವನಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ, ಬೆಳಗಾವಿ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ಬಸವರಾಜ ಶಿರಸಂಗಿ, ಜಗದೀಶ ಖೋಬ್ರಿ, ಶಿವಾನಂದ ವಿಭೂತಿಮಠ, ಆನಂದ ಮನ್ನಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT