ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಿಕ ಆದಾಯದ ಪನೀರ್ ಪತ್ರೆ

Last Updated 15 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯಲ್ಲಿ ಭತ್ತ, ಕಬ್ಬಿನ ಗದ್ದೆಗಳ ನಡುವೆ ಅಲ್ಲಲ್ಲಿ ಅಂಗೈ ಹಸಿರು ಚಾದರದಂತೆ ಕಾಣುವ ಅಂಗೈ ಅಗಲದ ಪನ್ನೀರ ಪತ್ರೆಗಳ ಅಂಗಳ ಕಾಣಿಸುತ್ತಿದೆ. ಆಲೆಮನೆಯ ಬೆಲ್ಲದ ಘಮಲಿನ ನಡುವೆ ಈ ಪತ್ರೆಯ ಘಮಲು ವಿಸ್ತರಿಸುತ್ತಿದೆ.

ಶ್ರೀರಂಗಪಟ್ಟಣ ಸಮೀಪದ ಪಾಲಹಳ್ಳಿ ರೈತ ಶ್ರೀನಿವಾಸ ಒಂದೂವರೆ ಎಕರೆಯಲ್ಲಿ ಪನೀರ್ ಪತ್ರೆ (ಸೆಂಟೆಡ್ ಜೆರೆನಿಯಂ) ಬೆಳೆ ಬೆಳೆಯುತ್ತಿದ್ದಾರೆ. ಆರಂಭಿಕವಾಗಿ ಉತ್ತಮ ಇಳುವರಿ ದೊರೆತಿದೆ. ಸರದಿಯಂತೆ ಪ್ರತಿ ದಿನ ಈ ಪತ್ರೆ ಕೊಯ್ದು ಮೈಸೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಪನೀರ್‌ ಪತ್ರೆ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಹೆಚ್ಚು ಬಳಕೆಯಾಗುವ ಸಸ್ಯ. ಸ್ಥಳೀಯವಾಗಿ ಹೂವಿನ ಹಾರಗಳಲ್ಲಿ, ಮಾಲೆಗಳ ನಡುವೆ ಬಳಸುತ್ತಾರೆ. ಈ ಎರಡು ಕಾರಣಗಳಿಗಾಗಿ ಈ ಪತ್ರೆ ಹೊರ ರಾಜ್ಯಗಳಿಗೂ ರಫ್ತಾಗುತ್ತದೆ.

ಪ್ರಾಯೋಗಿಕ ಆರಂಭ : ಶ್ರೀನಿವಾಸ್ ಅವರದ್ದು ಎಂಟು ಎಕೆರೆ ಜಮೀನು. ಅದರಲ್ಲಿ ತೆಂಗು, ಬಾಳೆ, ಅಡಿಕೆಯೊಂದಿಗೆ ಕಾಫಿ ಕೃಷಿಯೂ ಇದೆ. ಇಪ್ಪತ್ತು ವರ್ಷಗಳಿಂದ ಕೊಳವೆಬಾವಿ ಆಶ್ರಿತವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವು ವಾರ್ಷಿಕ ಆದಾಯ ಕೊಡುವ ಬೆಳಗಳಿವು. ನಿತ್ಯ ಹಣಕಾಸು ವಹಿವಾಟು ನಡೆಸುವ ಬೆಳೆ ಬೆಳೆಯಬೇಕೆಂದು ಅವರು ಯೋಚಿಸುತ್ತಿದ್ದಾಗ, ಈ ಪನೀರ್ ಪತ್ರೆ ಕೃಷಿ ಮಾಡುವ ಐಡಿಯಾ ಬಂತು. ನೀರಾವರಿ ಸೌಲಭ್ಯವಿದ್ದು, ಸಾಧಾರಣ ಉಷ್ಣತೆಯಲ್ಲಿ ಬೆಳೆಯುವ ಈ ಬೆಳೆಯನ್ನು ಮೊದಲು ಸ್ವಲ್ಪ ಜಾಗದಲ್ಲಿ ಪ್ರಾಯೋಗಿಕವಾಗಿ ಬೆಳೆದು ನೋಡಿದರು. ‘ಪರವಾಗಿಲ್ಲ, ನಮ್ಮ ಭಾಗದಲ್ಲಿ ಇದನ್ನು ಬೆಳೆಯಬಹುದು. ತ್ರಾಸದಾಯಕವಲ್ಲದೇ, ವರ್ಷಪೂರ್ತಿ ಬೇಡಿಕೆ ಇರುವ ಬೆಳೆಯಾಗಿದೆ’ ಎಂದು ಅವರಿಗೆ ಖಚಿತವಾದ ಮೇಲೆ, ಅದನ್ನು ಒಂದೂವರೆ ಎಕರೆಗೆ ವಿಸ್ತರಿಸಿದ್ದಾರೆ.

ಪನೀರ್ ಕೃಷಿ ಹೀಗಿದೆ : ಪನೀರ್ ಪತ್ರೆಯ ಎಳೆಯ ಕಾಂಡ (ಅಂಗಾಂಶ)ವನ್ನು ಒಂದೂವರೆ ಅಥವಾ ಎರಡು ಇಂಚಿಗೆ ಕತ್ತರಿಸಿ ಸಸಿ ಮಡಿಯಲ್ಲಿ ನಾಟಿ ಮಾಡಬೇಕು. ಎರಡು ತಿಂಗಳ ಬಳಿಕ ಮೂರರಿಂದ ನಾಲ್ಕು ಇಂಚು ಬೆಳೆದ ಸಸಿಗಳನ್ನು ಹದಮಾಡಿಕೊಂಡ ಭೂಮಿಯಲ್ಲಿ ನೆಡಬೇಕು. ಸಾಲಿನಿಂದ ಸಾಲಿಗೆ 5 ಅಡಿ, ಗಿಡದಿಂದ ಗಡಕ್ಕೆ 2 ಅಡಿ ಅಂತರ ಇರುವಂತೆ ಸಸಿಗಳನ್ನು ನಾಟಿ ಮಾಡಬೇಕು. ವಾರಕ್ಕೆ ಒಮ್ಮೆ ನೀರುಣಿಸಬೇಕು. ‘ಮಿತ ನೀರಿನಲ್ಲಿಯೂ ಬೆಳೆಯಬಹುದು. ಈ ಬೆಳೆಗೆ ಮಲ್ಚಿಂಗ್ (ಮುಚ್ಚಿಗೆ) ಸಹಿತ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದು ಸೂಕ್ತ’ ಎಂಬುದು ಶ್ರೀನಿವಾಸ್ ಅಭಿಪ್ರಾಯ.

ಪತ್ರೆ ಕೊಯ್ಯುತ್ತಿರುವ ಕಾರ್ಮಿಕರು(ಚಿತ್ರಗಳು: ಲೇಖಕರು)
ಪತ್ರೆ ಕೊಯ್ಯುತ್ತಿರುವ ಕಾರ್ಮಿಕರು(ಚಿತ್ರಗಳು: ಲೇಖಕರು)

ನಾಟಿ ಮಾಡಿದ 4 ತಿಂಗಳಿಗೆ ಗಿಡದಿಂದ ಪತ್ರೆಗಳನ್ನು ಕೊಯ್ಯಬಹುದು. ಚೆನ್ನಾಗಿ ಬಲಿತ ಪತ್ರೆ ಕೊಯ್ದರೆ ಅದು 48 ಗಂಟೆಗಳ ಕಾಲ ತಾಜಾ ಆಗಿಯೇ ಇರುತ್ತದೆ; ಸುಗಂಧ ಬೀರುತ್ತಿರುತ್ತದೆ. ಒಂದು ಗಿಡ ಎರಡು ವರ್ಷದಲ್ಲಿ ಅರ್ಧ ಕೆ.ಜಿಯಷ್ಟು ಪತ್ರೆ ಕೊಡುತ್ತದೆ. ಮೊದ ಮೊದಲು 25 ದಿನಗಳಿಗೊಮ್ಮೆ ಗಿಡದಿಂದ ಪತ್ರೆಯನ್ನು ಕೊಯ್ಲು ಮಾಡಬೇಕು. ವರ್ಷ ಕಳೆದ ಬಳಿಕ ಗುಣಮಟ್ಟದ ಪತ್ರೆ ಸಿಗಬೇಕಾದರೆ 30 ರಿಂದ 40 ದಿನಗಳವರೆಗೂ ಕಾಯಬೇಕು. ಅಂದರೆ, ಕೊಯ್ಲಿನ ಅವಧಿಯನ್ನು ವಿಸ್ತರಿಸಬೇಕು.

ಗಿಡ ರೋಗಮುಕ್ತವಾಗಿದ್ದರೆ ಪ್ರತಿ ಕೊಯ್ಲಿಗೆ ಎಕರೆಗೆ ಎರಡು ಟನ್‌ವರೆಗೂ ಪತ್ರೆ ಪಡೆಯಬಹುದು. ಎಲ್ಲ ಬೆಳೆಯಂತೆ ಇದಕ್ಕೂ ರೋಗ ರುಜಿನಗಳು ಬರುತ್ತವೆ. ಆದರೆ, ನಷ್ಟವಾಗುವಷ್ಟು ಕಾಡುವುದಿಲ್ಲ. ಅಂದಹಾಗೆ, ಈ ಬೆಳೆಗೆ ಬೇರು ಕೊಳೆಯುವ ರೋಗ ಹೊರತುಪಡಿಸಿದರೆ ಬೇರೆ ರೋಗಬಾಧೆ ಇಲ್ಲ. ಒಮ್ಮೆ ನಾಟಿ ಮಾಡಿದರೆ, 25 ದಿನಗಳಿಗೆ ಒಮ್ಮೆ ಕೊಯ್ಲು ಮಾಡುತ್ತಾ, ಕನಿಷ್ಠ ಎರಡು ವರ್ಷಗಳ ಕಾಲ ಸುವಾಸನೆಯುಕ್ತ ಪತ್ರೆ ಪಡೆಯಬಹುದು. ಒಂದು ಎಕರೆಗೆ ₹90 ಸಾವಿರ ಖರ್ಚು ಬಂದಿದೆ ಎನ್ನುತ್ತಾರೆ ಶ್ರೀನಿವಾಸ್

ಹೇಗಿದೆ ಮಾರುಕಟ್ಟೆ?: ಒಂದು ಎಕರೆಗೆ ಐದು ಸಾವಿರ ಗಿಡಗಳನ್ನು ನಾಟಿ ಮಾಡಬಹುದು. ಇವರ ಜಮೀನಿಲ್ಲಿ ಏಳರಿಂದ ಎಂಟು ಸಾವಿರದಷ್ಟು ಗಿಡಗಳಿವೆ. ಒಂದು ಗಿಡದ ಆಯಸ್ಸು ಎರಡು ವರ್ಷ. ತನ್ನ ಜೀವಿತಾವಧಿಯಲ್ಲಿ ಒಂದು ಗಿಡ ಅರ್ಧ ಕೆ.ಜಿಯಷ್ಟು ಪತ್ರೆ ಕೊಡುತ್ತದೆ. ಒಂದು ಕೆ.ಜಿ ಪತ್ರೆಗೆ ಕನಿಷ್ಠ ₹ 20 ರಿಂದ ಗರಿಷ್ಠ ₹50ರವರೆಗೂ ಬೆಲೆ ಇರುತ್ತದೆ.‘ಪನೀರ್ ಪತ್ರೆಗೆ ವರ್ಷ ಪೂರ್ತಿ ಬೇಡಿಕೆ ಇರುತ್ತದೆ. ಸದ್ಯ ಸ್ಥಳೀಯ ಮಾರುಕಟ್ಟೆ ಮತ್ತು ಮೈಸೂರು ಮಾರುಕಟ್ಟೆಗೆ ಕಳಿಸುತ್ತೇನೆ. ಬೆಲೆಯಲ್ಲಿ ಏರಿಳಿತ ಸಹಜ’ ಎನ್ನುತ್ತಾರೆ ಶ್ರೀನಿವಾಸ್.

ಪನೀರ್ ಪತ್ರೆ ಹದವಾದ ಉಷ್ಣಾಂಶವನ್ನು ತಡೆಯುತ್ತದೆ. ಅತಿವೃಷ್ಟಿ ಸಹಿಸಿಕೊಳ್ಳುವ ಶಕ್ತಿ ಕಡಿಮೆ. ಹಾಗಾಗಿ ಮಳೆ ಹೆಚ್ಚಾದಾಗ ಇಳುವರಿ ಕುಸಿದುಬಿಡುತ್ತದೆ. ಆ ವೇಳೆ ಈ ಪತ್ರೆಗೆ ಬೆಲೆ ಹೆಚ್ಚು, ಬೇಡಿಕೆಯೂ ಹೆಚ್ಚು. ಸ್ಥಳೀಯ ಮಾರುಕಟ್ಟೆಯಲ್ಲಂತೂ ಪತ್ರೆಗೆ ಬೇಡಿಕೆ ನಿರಂತರವಂತೆ. ಪನೀರ್ ಪತ್ರೆ ಕುರಿತ ಹೆಚ್ಚಿನ ಮಾಹಿತಿಗೆ ಮೊ:9945419236 ಸಂಪರ್ಕಿಸ ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT