ಶನಿವಾರ, ಫೆಬ್ರವರಿ 29, 2020
19 °C

ನಾಟಿಕೋಳಿ ಸಾಕಣೆ: ಖರ್ಚು–ರಿಸ್ಕ್ ಕಡಿಮೆ, ಆದಾಯ ಖಚಿತ

ಡಾ.ಗಣೇಶ ಹೆಗಡೆ ನೀಲೆಸರ Updated:

ಅಕ್ಷರ ಗಾತ್ರ : | |

Prajavani

ಭಟ್ಕಳದ ಮೊಹಮ್ಮದ್ ದಶಕಗಳಿಂದ ಬ್ರಾಯ್ಲರ್ ಕೋಳಿ ಎಂದು ಕರೆಯುವ ಮಾಂಸದ ಕೋಳಿ ಸಾಕಿದವರು. ಈ ತರಹದ ಕೋಳಿಗಳು ಬಹುಬೇಗ ಬೆಳೆದು ಒಂದೂವರೆ ತಿಂಗಳಲ್ಲಿಯೇ ಎರಡು ಕೆ.ಜಿ ತೂಕ ಪಡೆದರೂ ಲಾಭ ನಿಶ್ಚಿತವಲ್ಲ. ಮಾರುಕಟ್ಟೆ ದರ ವಿಪರೀತ ಏರಿಳಿತ ಕಾಣುವುದರಿಂದ ನಷ್ಟವೂ ಆಗುತ್ತದೆ. ಇದರಿಂದ ಬೇಸತ್ತ ಅವರು ಕಳೆದೆರಡು ವರ್ಷಗಳಿಂದ ನಾಟಿ ಕೋಳಿ ಸಾಕಿ ಸಣ್ಣ ಪ್ರಮಾಣವಾದರೂ ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ.

ಕೋಳಿ ಸಾಕಣೆಯಲ್ಲಿ ಎರಡು ವಿಧ. ಫಾರಂ ಕೋಳಿಗಳು ಮತ್ತು ಹಿತ್ತಿಲಲ್ಲಿ ಸಾಕುವ ನಾಟಿ ಕೋಳಿಗಳು. ಫಾರಂ ಕೋಳಿಗಳಲ್ಲಿ ಮಾಂಸ ಮತ್ತು ಮೊಟ್ಟೆಗಾಗಿ ಸಾಕುವ ಪ್ರತ್ಯೇಕ ತಳಿಗಳಿವೆ. ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಸಾಕುತ್ತಾರೆ. ಇದಕ್ಕೆ ಹೆಚ್ಚಿನ ಬಂಡವಾಳ ಬೇಕು. ಲಾಭವೂ ಹೆಚ್ಚು. ಆದರೆ ದೇಶೀ ಕೋಳಿ ಸಾಕುವುದಿದ್ದರೆ ಹೆಚ್ಚಿನ ಹಣ ಹೂಡುವ ಅಗತ್ಯವಿಲ್ಲ. ವಿಶೇಷ ಆರೈಕೆಯೂ ಬೇಕಾಗಿಲ್ಲ. ಹಳ್ಳಿಗಳಾದರೆ, ಇವುಗಳನ್ನು ಮನೆಯ ಹಿತ್ತಿಲಲ್ಲಿ ಬಿಟ್ಟು ಸಾಕಿಕೊಂಡು ಸಣ್ಣ ಪ್ರಮಾಣದಲ್ಲಿ ನಿರಂತರ ಆದಾಯ ಪಡೆಯಬಹುದು. ಇವುಗಳನ್ನು ಮಾಂಸ ಮತ್ತು ಮೊಟ್ಟೆಗಾಗಿ ಎರಡೂ ಉದ್ದೇಶಕ್ಕೆ ಸಾಕಬಹುದು.

ನಾಟಿ ಕೋಳಿಗಳಲ್ಲಿ ಸುಧಾರಿತ ತಳಿ

ಈಗ ನಾಟಿ ಕೋಳಿಗಳಲ್ಲಿಯೇ ಅಭಿವೃದ್ಧಿಪಡಿಸಿದ ಕೋಳಿಗಳು ಸಿಗುತ್ತವೆ. ಉದಾಹರಣೆಗೆ ಗಿರಿರಾಜ, ಗಿರಿರಾಣಿ, ಸ್ವರ್ಣಧಾರಾ ಇತ್ಯಾದಿ. ಇವು ಜವಾರಿ ಕೋಳಿ ತಳಿಗಳ ಎಲ್ಲಾ ಲಕ್ಷಣಗಳನ್ನೂ ಹೊಂದಿವೆ. ಮೊಟ್ಟೆಯೂ ನಾಟಿ ಕೋಳಿಗಳಂತೆ ಕಂದು ಬಣ್ಣದ್ದು. ನಾಟಿ ಕೋಳಿಗಳಿಗಿಂತ ಎರಡು ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಮಾಂಸ ಮತ್ತು ಮೊಟ್ಟೆ ನೀಡಬಲ್ಲವು. ಹೀಗಾಗಿ ಇವುಗಳನ್ನು ಸಾಕುವುದು ಲಾಭಕರ. ಹಳ್ಳಿಗಳಲ್ಲಿ ಮಹಿಳೆಯರೂ ಕೂಡ ಸುಲಭವಾಗಿ ಸಾಕಬಹುದು.

ಗಿರಿರಾಜ ಅಥವಾ ಸ್ವರ್ಣಧಾರಾದಂತಹ ಕೋಳಿಗಳನ್ನು ಎರಡು ತಿಂಗಳು ಸಾಕಿದರೆ ಒಂದೂವರೆ ಕೆ.ಜಿ ತೂಕ ಪಡೆಯಬಲ್ಲವು. ಇನ್ನೂ ಬಲಿತರೆ ಐದಾರು ಕೆ.ಜಿ.ವರೆಗೆ ತೂಗುತ್ತವೆ! ವರ್ಷಕ್ಕೆ 150 ರಿಂದ 200 ಮೊಟ್ಟೆ ಇಡುತ್ತವೆ. ಮೊಟ್ಟೆಯ ಗಾತ್ರವೂ ದೊಡ್ಡದು. ಕಂದು ಬಣ್ಣ, ಮೊಟ್ಟೆಯೊಂದಕ್ಕೆ ಏಳೆಂಟು ರೂಪಾಯಿ ತನಕ ದರ ಸಿಗಬಹುದು. ಹೀಗಾಗಿ 50 ಕೋಳಿ ಸಾಕಿದರೆ ಕೇವಲ ಮೊಟ್ಟೆಗಳ ಮಾರಾಟದಿಂದಲೇ ತಿಂಗಳಿಗೆ ಎರಡೂವರೆಯಿಂದ ಮೂರು ಸಾವಿರ ರೂಪಾಯಿ ಆದಾಯ. ಅದೇ ಪಕ್ಕಾ ಜವಾರಿ ಕೋಳಿ ವರ್ಷಕ್ಕೆ ಸುಮಾರು 50 ಮೊಟ್ಟೆ ಇಡುತ್ತವೆ.

ಇದನ್ನೂ ಓದಿ: ಬದುಕಿಗೆ ಆಧಾರ ನಾಟಿಕೋಳಿ ಸಾಕಣೆ

ಪ್ರಯೋಜನಗಳು

ಮಾಂಸಪ್ರಿಯರನ್ನೊಮ್ಮೆ ಕೇಳಿ ನೋಡಿ. ನಾಟಿ ಕೋಳಿಗಳ ಮಾಂಸದ ರುಚಿ ಫಾರಂ ಕೋಳಿಗಳಿಗಿಲ್ಲ ಎನ್ನುತ್ತಾರೆ. ಹೀಗಾಗಿ ನಾಟಿ ಕೋಳಿಗೆ ಬೇಡಿಕೆ ಜಾಸ್ತಿ. ಇವುಗಳ ಮಾಂಸ ಮತ್ತು ಮೊಟ್ಟೆಗೆ ಫಾರಂ ಕೋಳಿಗಿಂತ ಎರಡಪಟ್ಟು ಬೆಲೆ ಇದೆ. ಸಾಕುವವರ ಮನೆಯಲ್ಲಿಯೂ ಮೊಟ್ಟೆ ಮಾಂಸದ ಬಳಕೆ ಹೆಚ್ಚುವುದರಿಂದ ಕೋಳಿ ಸಾಕಿದ ಕುಟುಂಬಕ್ಕೂ ಉತ್ತಮ ಪೌಷ್ಟಿಕ ಆಹಾರ ದೊರೆಯುತ್ತದೆ. ಇವನ್ನು ಸಾಕಲು ಯಾವುದೇ ಸಿದ್ಧ ಆಹಾರ ಇಲ್ಲವೇ ಔಷಧಗಳ ಅಗತ್ಯವಿಲ್ಲ. ಸ್ವೇಚ್ಛೆಯಿಂದ ಓಡಾಡಿಕೊಂಡು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ. ಹೀಗಾಗಿ ಕಲಬೆರಕೆಯಿಲ್ಲದ ಶುದ್ಧ ಆರೋಗ್ಯಕರ ಮಾಂಸ ಮತ್ತು ಮೊಟ್ಟೆ ಸಿಗುತ್ತದೆ. ಹಾಗೆ ನೋಡಿದರೆ ಇದು ಸಾವಯವ ಕೋಳಿ ಸಾಕಣೆಯೂ ಹೌದು.

ನಾಟಿ ಕೋಳಿಗಳನ್ನು ಹೊಲದಲ್ಲಿ ಬಿಟ್ಟರೆ ಬೆಳೆಗಳಿಗೆ ತಗಲುವ ಕೀಟಗಳನ್ನು ಹಿಡಿದು ತಿನ್ನುತ್ತವೆ. ರೈತರಿಗೆ ಪರೋಪಕಾರಿಯಾಗುತ್ತವೆ. ಮಾತ್ರವಲ್ಲ, ಬೆಳೆ ಕೊಯ್ಲಾದ ಮೇಲೆ, ಹೊಲದಲ್ಲಿ ಅಳಿದುಳಿದ ಕಾಳುಕಡಿ ತಿನ್ನುತ್ತವೆ. ಮನೆಯ ಸುತ್ತಲಿರುವ ತಿಪ್ಪೆಯ ಕಸಕಡ್ಡಿಗಳನ್ನು ತಿಂದು ಸ್ವಚ್ಛತಾಕಾರ್ಯವನ್ನೂ ನಿರ್ವಹಿಸುತ್ತವೆ.

ಕೋಳಿಹಿಕ್ಕೆ ಅತ್ಯುತ್ತಮ ಗೊಬ್ಬರ. ಇದನ್ನು ಮಾರಾಟ ಮಾಡಬಹುದು ಇಲ್ಲವೇ ಸ್ವಂತ ಜಮೀನಿಗೆ ಉಪಯೋಗಿಸಿ ಬೆಳೆ ಇಳುವರಿ ಹೆಚ್ಚಿಸಿಕೊಳ್ಳಬಹುದು. ನಾಟಿಕೋಳಿಗಳ ಗುಂಪಿನಲ್ಲಿ ಗಂಡು ಹೆಣ್ಣುಗಳೆರಡೂ ಇರುವುದರಿಂದ ಸ್ವಾಭಾವಿಕವಾಗಿಯೇ ಫಲೀಕೃತ ಮೊಟ್ಟೆಗಳಿಂದ ಮರಿಗಳು ಉತ್ಪಾದನೆಯಾಗತ್ತವೆ. ಹೀಗಾಗಿ ಸಂತಾನೋತ್ಪತ್ತಿಯೂ ತಂತಾನೇ ಆಗುತ್ತದೆ.

ಇದನ್ನೂ ಓದಿ: ಲಾಭ ತಂದ ನಾಟಿಕೋಳಿ ಸಾಕಣೆ ಪ್ರಯೋಗ

ಔಷಧೋಪಚಾರ ಬೇಕೇ?

ಇವು ಉತ್ತಮ ರೋಗನಿರೋಧಕ ಶಕ್ತಿ ಹೊಂದಿವೆ. ಎಲ್ಲಾ ತರಹದ ವಾತಾವರಣಕ್ಕೂ ಹೊಂದಿಕೊಳ್ಳುತ್ತವೆ. ಆದರೂ ಏಳನೇ ದಿನದಲ್ಲಿ ಮತ್ತು ಏಳನೇ ವಾರದಲ್ಲಿ ನೀರಿನ ಮೂಲಕ ಕೊಕ್ಕರೆರೋಗದ ವಿರುದ್ಧ ಲಸಿಕೆ ನೀಡಿದರೆ ಸಾಕು. ಹದಿನೈದನೇ ದಿನದಲ್ಲಿ ಗುಂಬರೋ ಲಸಿಕೆ. ಎರಡು ತಿಂಗಳಿಗೊಮ್ಮೆ ಜಂತುನಾಶಕ ಔಷಧಿ ನೀಡುತ್ತಿದ್ದರೆ ಉತ್ತಮ.

ಎಲ್ಲಿ ಸಿಗುತ್ತವೆ?

ಪಶುಪಾಲನಾ ಇಲಾಖೆಯು ಕಾಲಕಾಲಕ್ಕೆ ಒಂದರಿಂದ ಎರಡು ತಿಂಗಳು ವಯಸ್ಸಿನ ಗಿರಿರಾಜ ಕೋಳಿ ಮರಿಗಳನ್ನು ಆಯ್ದ ಗ್ರಾಮೀಣ ಮಹಿಳೆಯರಿಗೆ ಸರಬರಾಜು ಮಾಡುತ್ತದೆ. ಜೊತೆಗೆ ಸರ್ಕಾರ ನಡೆಸುವ ಕುಕ್ಕುಟ ಸಂವರ್ಧನಾ ಕೇಂದ್ರಗಳಲ್ಲಿ ಕೋಳಿಮರಿಗಳು ಲಭ್ಯವಿವೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಾಟಿ ಕೋಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಲಾಗುತ್ತಿದ್ದು ಶಾಂತಿ ಹ್ಯಾಚರೀಸ್‍ನಂತಹ ಹಲವು ಖಾಸಗಿ ಕೋಳಿ ಕಂಪನಿಗಳು ನಾಟಿ ಮರಿಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತವೆ.

ಹೆಚ್ಚು ಹಣವಿಲ್ಲ; ಬೆಲೆಯೂ ಉತ್ತಮ

ಶಿರಸಿಯ ಅಹಮದ್ 500 ನಾಟಿ ಕೋಳಿಯ ಫಾರಂ ಮಾಲಿಕರು. ‘ಈ ಕೋಳಿಗಳಿಗೆ ಆಹಾರದ ಅವಶ್ಯಕತೆ ಕಡಿಮೆಯಿರುವುದರಿಂದ ಹೆಚ್ಚು ಹಣ ತೊಡಗಿಸುವ ಅಗತ್ಯವಿಲ್ಲ. ಅಲ್ಲದೇ ಬೆಳವಣಿಗೆಯ ವೇಗವೂ ನಿಧಾನವಾದ್ದರಿಂದ ಇವುಗಳನ್ನು ಒಮ್ಮೆಲೇ ಮಾರಾಟ ಮಾಡುವ ಒತ್ತಡವಿರುವುದಿಲ್ಲ.’ ಎಂಬುದು ಅವರ ಅಭಿಪ್ರಾಯ.

‘ಅತಿ ಶೀಘ್ರ ಬೆಳೆಯುವ ಬಿಳಿಗರಿಗಳ ಬ್ರಾಯ್ಲರ್ ಮಾಂಸದ ಕೋಳಿಗಳಿಗಿಂತ ಬಣ್ಣಬಣ್ಣದ ಪುಕ್ಕಗಳುಳ್ಳ ಈ ನಾಟಿ ಕೋಳಿಗಳನ್ನು ಇಷ್ಟಪಟ್ಟು ಖರೀದಿಸುವವರು ಹೆಚ್ಚು. ಬೆಲೆಯೂ ಅಧಿಕ’ ಎನ್ನುತ್ತಾರೆ ಕಾರವಾರದ ಚಿಕನ್ ಅಂಗಡಿಯ ಮಾಲಿಕ ಲೋಕೇಶ್. ‘ಇದರ ಮಾಂಸ ಜಿಗುಟಾಗಿರುವುದರಿಂದ ದೇಸಿರುಚಿ ನೀಡುತ್ತದೆ’ ಎನ್ನುತ್ತಾರೆ ಕಾಳೆಹೊಂಡದ ಮೊಹಮ್ಮದ್.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು