ಶಾಸಕರ ಕಾರ್ಯಪಡೆಗೆ ₹43 ಕೋಟಿ, ಮೇವು ಪೂರೈಕೆಗೆ ₹15 ಕೋಟಿ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಾಗಿ ಶಾಸಕರ ನೇತೃತ್ವದ ಕಾರ್ಯಪಡೆಗೆ ₹43 ಕೋಟಿ ಹಾಗೂ ಜಾನುವಾರುಗಳ ಮೇವು ಖರೀದಿಗೆ ₹15 ಕೋಟಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ 86 ತಾಲ್ಲೂಕುಗಳನ್ನು ಬರ‍ಪೀಡಿತ ಎಂದು ಘೋಷಿಸಲು ತೀರ್ಮಾನಿಸಲಾಯಿತು. ಮಳೆಯ ಕೊರತೆಯಿಂದಾಗಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಒಣಗಿ ಹೋಗಿದ್ದು, ಅಂದಾಜು ₹8 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಪ್ರತಿ ತಾಲ್ಲೂಕಿಗೆ ₹50 ಲಕ್ಷ ಅನುದಾನ ನೀಡಲಾಗುತ್ತದೆ ಎಂದು ದೇಶಪಾಂಡೆ ತಿಳಿಸಿದರು.

‘ಮುಂಗಾರಿನಲ್ಲಿ 88 ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಕೊರತೆ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ತೀವ್ರ ಮಳೆ ಕೊರತೆ ಕಂಡುಬಂದಿದೆ. 104 ತಾಲ್ಲೂಕುಗಳಲ್ಲಿ ಮೂರು ವಾರ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ, 115 ತಾಲ್ಲೂಕುಗಳಲ್ಲಿ ತೇವಾಂಶ ಕೊರತೆ, 44 ತಾಲ್ಲೂಕುಗಳಲ್ಲಿ ಶೇ 75ಕ್ಕಿಂತ ಕಡಿಮೆ ಬಿತ್ತನೆ ಆಗಿದೆ. 35 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇನ್ನು ಏಳೆಂಟು ದಿನ ಮಳೆ ಬರುವ ಸೂಚನೆಯೂ ಇಲ್ಲ’ ಎಂದರು.

ಬರಪೀಡಿತ ತಾಲ್ಲೂಕುಗಳಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನಷ್ಟದ ಅಂದಾಜು ಮಾಡಲಿದ್ದಾರೆ. ಬಳಿಕ ಕೇಂದ್ರಕ್ಕೆ ವರದಿ ಸಲ್ಲಿಸಲಾಗುತ್ತದೆ. ನಂತರ ಕೇಂದ್ರ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದರು.

ಬರದಿಂದಾಗಿ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಕಾಣಿಸಿಕೊಂಡಿದ್ದು, ಗ್ರಾಮೀಣ ಉದ್ಯೋಗದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹247 ಕೋಟಿ ಹಣ. ಯಾವುದೇ ಕೆಲಸಕ್ಕೆ ಹಣದ ಕೊರತೆ ಇಲ್ಲ. ಹೆಚ್ಚುವರಿ ಅನುದಾನ ನೀಡಲು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

‘ಅತಿವೃಷ್ಟಿಯಿಂದ ಸತ್ತವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಪ್ರಧಾನಿ ನಿಧಿಯಿಂದಲೂ ನೆರವು ಕೊಡುತ್ತೇನೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ. ಪ್ರತಿ ಕುಟುಂಬಕ್ಕೆ ₹2 ಲಕ್ಷ ಸಿಗಲಿದೆ. ಈ ಸಂಬಂಧ 2 ದಿನಗಳಲ್ಲಿ ಕೇಂದ್ರಕ್ಕೆ ವರದಿ ನೀಡಲಿದ್ದೇವೆ’ ಎಂದು ಅವರು ತಿಳಿಸಿದರು.

ಬರಪೀಡಿತ ತಾಲ್ಲೂಕುಗಳು:

ಬೆಂಗಳೂರು ಗ್ರಾಮಾಂತರ–ಹೊಸಕೋಟೆ, ರಾಮನಗರ–ಚನ್ನಪಟ್ಟಣ, ಕನಕ‍ಪುರ, ಕೋಲಾರ–ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ.

ಚಿಕ್ಕಬಳ್ಳಾಪುರ–ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ತುಮಕೂರು–ಸಿ.ಎನ್‌.ಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್‌, ಮಧುಗಿರಿ, ಪಾವಗಡ, ಶಿರಾ, ತಿಪಟೂರು, ತುಮಕೂರು.

ಚಿತ್ರದುರ್ಗ–ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮೂರು, ದಾವಣಗೆರೆ–ಹರಪನಹಳ್ಳಿ, ಹರಿಹರ, ಚಾಮರಾಜನಗರ–ಕೊಳ್ಳೆಗಾಲ, ಯಳಂದೂರು, ಮಂಡ್ಯ–ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ.

ಬಳ್ಳಾರಿ–ಬಳ್ಳಾರಿ, ಹಡಗಲಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು, ಸಿರಗುಪ್ಪ, ಕೊಪ್ಪಳ–ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ.

ರಾಯಚೂರು–ದೇವದುರ್ಗ, ಲಿಂಗಸುಗೂರು, ಮಾನ್ವಿ, ರಾಯಚೂರು, ಸಿಂಧನೂರು, ಕಲಬುರ್ಗಿ–ಅಫ್ಜಲ್‌ಪುರ, ಚಿಂಚೋಳಿ, ಚಿತ್ತಾಪುರ, ಕಲಬುರ್ಗಿ, ಜೇವರ್ಗಿ, ಸೇಡಂ, ಯಾದಗಿರಿ–ಶಹಾಪುರ, ಶೋರಾಪುರ, ಯಾದಗಿರಿ.

ಬೀದರ್‌–ಬೀದರ್‌, ಹುಮನಾಬಾದ್‌, ಬೆಳಗಾವಿ–ರಾಮದುರ್ಗ, ಸವದತ್ತಿ, ಬಾಗಲಕೋಟೆ–ಬಾದಾಮಿ, ಬಾಗಲಕೋಟೆ, ಹುನಗುಂದ, ಜಮಖಂಡಿ, ವಿಜಯಪುರ–ಬಸವನಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ, ಸಿಂದಗಿ, ಗದಗ–ಗದಗ, ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ, ಹಾವೇರಿ–ರಾಣೆಬೆನ್ನೂರು, ಧಾರವಾಡ–ಹುಬ್ಬಳ್ಳಿ, ನವಲಗುಂದ, ಹಾಸನ–ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಚಿಕ್ಕಮಗಳೂರು–ಕಡೂರು.

ಪ್ರಮುಖ ಸುದ್ದಿಗಳು