ಕೊಹ್ಲಿ: ಸಫಲ ಬ್ಯಾಟ್ಸ್‌ಮನ್‌; ಫಲ ಕಾಣದ ನಾಯಕ

ನವದೆಹಲಿ (ಪಿಟಿಐ): ಇಂಗ್ಲೆಂಡ್‌ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1–4ರಿಂದ ಕಳೆದುಕೊಂಡಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಒಂದು ಪಂದ್ಯವನ್ನು ಮಾತ್ರ ಗೆಲ್ಲಿಸಿಕೊಡಲು ಸಾಧ್ಯವಾಗಿದೆ. ಆದರೆ ಬ್ಯಾಟ್ಸ್‌ಮನ್ ಆಗಿ ಅವರು ಸಹಜ ಸಾಮರ್ಥ್ಯ ಮೆರೆದಿದ್ದಾರೆ.

ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 593 ರನ್ ಕಲೆ ಹಾಕಿರುವ ಕೊಹ್ಲಿ, ಸರಣಿಯಲ್ಲಿ ಗರಿಷ್ಠ ರನ್ ದಾಖಲಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದಾರೆ. ನಿರ್ಣಾಯಕ ಹಂತಗಳಲ್ಲಿ ವೈಫಲ್ಯ ಕಂಡಿದ್ದರೂ ಕೆ.ಎಲ್‌.ರಾಹುಲ್‌ ಕೊನೆಯ ಪಂದ್ಯದಲ್ಲಿ ಗಳಿಸಿದ ಶತಕದೊಂದಿಗೆ 299 ರನ್‌ ಸೇರಿಸಿ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.

‘ನಾವು ಹೀನಾಯವಾಗಿ ಸೋತಿದ್ದೇವೆ ಎಂದು ಹೇಳಲಾಗದು. ಆತಿಥೇಯ ಇಂಗ್ಲೆಂಡ್‌ ಸಂದರ್ಭಕ್ಕೆ ಅನುಗುಣವಾಗಿ ಆಡಿ ಪಂದ್ಯಗಳನ್ನು ಗೆದ್ದರು. ಆದ್ದರಿಂದ ಈ ಸರಣಿಯಲ್ಲಿ ಭಾರತ ವೈಫಲ್ಯ ಕಂಡಿದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಕೊನೆಯ ಪಂದ್ಯದ ನಂತರ ವಿರಾಟ್ ಕೊಹ್ಲಿ ನುಡಿದಿದ್ದಾರೆ. ಭಾರತ ಉಪಖಂಡದಂತೆ ಇಂಗ್ಲೆಂಡ್ ನೆಲದಲ್ಲೂ ನಿರಾತಂಕವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಿದೆ ಎಂದು ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಜೇಮ್ಸ್ ಆ್ಯಂಡರ್ಸನ್‌ ಅವರಂಥ ಅಪಾಯಕಾರಿ ಬೌಲರ್‌ಗಳಿಗೆ ಸಮರ್ಥವಾಗಿ ಉತ್ತರಿಸಲು ಅವರಿಗೆ ಸಾಧ್ಯವಾಗಿದೆ ಎಂಬುದು ಕೂಡ ಗಮನಾರ್ಹ.  

ಭಾರತವು ಈ ಸರಣಿಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ ಎಂಬ ಆರೋಪ ಆರಂಭದಲ್ಲೇ ಕೇಳಿಬಂದಿತ್ತು. ಕೌಂಟಿ ಚಾಂಪಿಯನ್ ತಂಡ ಎಸೆಕ್ಸ್‌ ಜೊತೆಗಿನ ಅಭ್ಯಾಸ ಪಂದ್ಯದಲ್ಲೂ ಭಾರತ ಸರಿಯಾಗಿ ತೊಡಗಿಸಿಕೊಳ್ಳದೇ ಇದ್ದುದಕ್ಕೆ ಸುನಿಲ್ ಗಾವಸ್ಕರ್‌ ಕಿಡಿ ಕಾರಿದ್ದರು. ‘ಎಲ್ಲ ಸಂದರ್ಭದಲ್ಲೂ ಅಭ್ಯಾಸ ಪಂದ್ಯಗಳ ಅಗತ್ಯವಿಲ್ಲ’ ಎಂದು ಕೊಹ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಾವಸ್ಕರ್‌ ‘ಕೊಹ್ಲಿ ಅವರು ಒಂದು ತಿಂಗಳು ಅಂಗಣಕ್ಕೆ ಇಳಿಯದಿದ್ದರೂ ಚೆನ್ನಾಗಿ ಆಡಬಲ್ಲರು. ಆದರೆ ಉಳಿದವರಿಗೆ ಅಭ್ಯಾಸ ಪಂದ್ಯಗಳು ಬೇಕು’ ಎಂದಿದ್ದರು.

ಆಟಗಾರರ ಆಯ್ಕೆಯ ಗೊಂದಲ: ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಲ್ಲೂ ಭಾರತ ಗೊಂದಲಕ್ಕೆ ಈಡಾಗಿತ್ತು. ಇದಕ್ಕೆ ಟೀಕೆಯೂ ವ್ಯಕ್ತವಾಗಿತ್ತು. ಚೇತೇಶ್ವರ ಪೂಜಾರ ಅವರಿಗೆ ಮೊದಲ ಟೆಸ್ಟ್‌ನಲ್ಲಿ ಅವಕಾಶ ನೀಡಲಿಲ್ಲ. ನಂತರ ಲಭಿಸಿದ ಅವಕಾಶಗಳಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಒಟ್ಟು 278 ರನ್‌ ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ಹೆಚ್ಚು ಅವಲಂಬಿಸಿದ್ದಕ್ಕೂ ಠೀಕೆ ವ್ಯಕ್ತವಾಗಿದೆ. ನಿರಂತರ ವೈಫಲ್ಯ ಕಂಡರೂ ಶಿಖರ್ ಧವನ್ ಅವರಿಗೆ ಮತ್ತೆ ಮತ್ತೆ ಅವಕಾಶಗಳನ್ನು ಕೊಟ್ಟದ್ದು ಕೂಡ ಸೋಲಿನ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಕರುಣ್‌ ನಾಯರ್‌ ಅವರಿಗೆ ಒಂದು ಪಂದ್ಯದಲ್ಲೂ ಆಡಲು ಅವಕಾಶ ನೀಡದೇ ಇದ್ದುದು ಮತ್ತು ಹನುಮ ವಿಹಾರಿ ಅವರಿಗೆ ಅನಿರೀಕ್ಷಿತವಾಗಿ ಅವಕಾಶ ನೀಡಿದ್ದು ಕೂಡ ವಿಮರ್ಶೆಗೆ ಒಳಗಾಗಿದೆ.

ಪ್ರಮುಖ ಸುದ್ದಿಗಳು