ಭಾಷೆ ಬಾರದಿದ್ದಾಗ...!

ನಾನು ಆಗ ಚಿಕ್ಕೋಡಿ ಸಮೀಪದ ಶಾಲೆಯಲ್ಲಿ ಹೈಸ್ಕೂಲ್ ಓದುತ್ತಿದ್ದೆ. ಪಕ್ಕದ ಶಾಂತಿಗಿರಿ ಬೆಟ್ಟದಲ್ಲಿ ಜೈನಮುನಿ ತರುಣ ಸಾಗರಜೀ ಅವರು ಬರುತ್ತಿದ್ದಾರೆ ಎಂದು ವಿಷಯ ತಿಳಿಯಿತು. ಶಾಲೆಯ ಮಕ್ಕಳೆಲ್ಲರನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಶಿಕ್ಷಕವೃಂದ ನಿರ್ಧರಿಸಿತು.

ದೇಶಾದ್ಯಂತ ಅವರ ಪ್ರವಚನ ಕೇಳಲು ಜನ ಹಾತೊರೆಯುತ್ತಾರೆಂದಾಗ ನನಗೂ ಆ ಸ್ವಾಮೀಜಿ ಕಂಡು, ಅವರ ಮಾತುಗಳನ್ನು ಕೇಳಬೇಕೆನಿಸಿತು. ಆದರೆ ಅವರು ದಿಗಂಬರರಾಗಿರುತ್ತಾರೆ ಎಂದು ತಿಳಿದಾಗ ನನಗೆ ಸ್ವಲ್ಪ ಮುಜುಗರವೆನಿಸಿತು. ಆದರೂ ಆ ಕಾರ್ಯಕ್ರಮಕ್ಕೆ ಹೊರಡಲು ನಾವೆಲ್ಲ ರೆಡಿಯಾದವು.

ಶಾಂತಿಗಿರಿ ಬೆಟ್ಟದಲ್ಲಿ ಸ್ವಾಮೀಜಿ ಅವರ ಪ್ರವಚನ ಕಾರ್ಯಕ್ರಮಕ್ಕಾಗಿ ದೊಡ್ಡ ಪೆಂಡಾಲು ಹಾಕಲಾಗಿತ್ತು. ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಅಲ್ಲಿಗೆ ತರುಣ ಸಾಗರ್ ಜೀಯಂತೆ ಅವರ ನೂರಾರು ಅನುಯಾಯಿಗಳು ಆಗಮಿಸಿದ್ದರು. ಭಾಷಣ ಕೇಳಲು ನೂರಾರು ಜನ ಸೇರಿದ್ದರು. ಆ ಮುನಿಗಳ ಬಗ್ಗೆ ಹೆಚ್ಚಾಗಿ ತಿಳಿಯದಿದ್ದ ನನಗೆ ಅವರು ಕನ್ನಡದಲ್ಲಿಯೆ ಭಾಷಣ ಮಾಡುತಿದ್ದಾರೆಂದು ತಿಳಿದಿದ್ದೆ.

ಸ್ವಾಮೀಜಿ ಬಂದರು. ವೇದಿಕೆಯಲ್ಲಿ ಕುಳಿತು ಮಾತು ಆರಂಭಿಸಿದರು. ಅವರು ಹಿಂದಿಯಲ್ಲಿ ಮಾತನಾಡಲಾರಂಭಿಸಿದರು. ನನಗೆ ಹಿಂದಿ ಭಾಷೆಯ ಬಗ್ಗೆ ಅಷ್ಟಾಗಿ ಗೊತ್ತಿರದ ಕಾರಣ, ನಿರಾಸೆಯಾಯಿತು. ಹರಳು ಹುರಿದಂತೆ ಪಟಪಟನೆ ಮಾತನಾಡುವ ಅವರ ಶೈಲಿಗೆ ಆಶ್ಚರ್ಯಚಕಿತನಾಗಿದ್ದೆ. ಆದರೆ ಸ್ವಾಮೀಜಿಯವರ ಪ್ರವಚನಕ್ಕೆ ಅಲ್ಲಿದ್ದ ಜನರೆಲ್ಲ ಕ್ರಿಯಾಶೀಲವಾಗಿ ಪ್ರತಿಕ್ರಿಯಿಸುತ್ತಿದ್ದರು. ಕೆಲವೊಂದು ಬಾರಿ ಎಲ್ಲ ಗೊಳ್ಳೆಂದು ನಗುತಿದ್ದರು. ಆದರೆ ನಾನು ಹ್ಯಾಪುಮೋರೆ ಹಾಕಿಕೊಂಡು ಕೂತಿದ್ದೆ.

ನನಗೆ ಹಿಂದಿ ಭಾಷೆ ಅರ್ಥವಾಗುವುದಿಲ್ಲ ಎಂಬುದು ಬೇರೆಯವರಿಗೆ ಗೊತ್ತಾಬಾರದೆಂದು, ಸಭಿಕರು ನಗಲು ಶುರುಮಾಡಿದಾಗ ನಾನು ಕೂಡ ಅವರೊಂದಿಗೆ ನಗುತ್ತಿದೆ. ಅವರು ಮಾತು ಮುಗಿಯವರೆಗೂ ಇದೇ ಕಥೆ ಮುಂದುವರಿಯಿತು. ಕೊನೆಗೆ ಕಾರ್ಯಕ್ರಮ ಮುಗಿದ ತರುಣ್ ಸಾಗರ್ ಮುನಿಗಳನ್ನು ಮೆರವಣಿಗೆಯ ಮೂಲಕ ಬಿಳ್ಕೊಟ್ಟೆವು.

ಇತ್ತೀಚೆಗೆ ಅವರು ನಿಧನರಾದರೆಂದು ಸುದ್ದಿ ಓದಿದಾಗ ಅಂದಿನ ಘಟನೆ ನೆನಪಾಯಿತು.

ಪ್ರಮುಖ ಸುದ್ದಿಗಳು