ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಉತ್ಪನ್ನಗಳ ಮಳಿಗೆ 80ಕ್ಕೆ ಏರಿಕೆ: ನೈರುತ್ಯ ರೈಲ್ವೆ

ಸ್ಥಳೀಯ ಉತ್ಪನ್ನ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ರೈಲ್ವೆ ಯೋಜನೆ
Published 4 ಮೇ 2024, 23:37 IST
Last Updated 4 ಮೇ 2024, 23:37 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ನಿಲ್ದಾಣ– ಒಂದು ಉತ್ಪನ್ನ’ ಯೋಜನೆಯು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ 40 ನಿಲ್ದಾಣಗಳಲ್ಲಿ ಅನುಷ್ಠಾನಗೊಂಡಿದೆ. ಈ ಮಳಿಗೆಗಳನ್ನು 80ಕ್ಕೆ ಏರಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ರೈಲ್ವೆ ಇಲಾಖೆಯು ಎರಡು ವರ್ಷಗಳ ಹಿಂದೆ ದೇಶದಾದ್ಯಂತ ‘ಒಂದು ನಿಲ್ದಾಣ– ಒಂದು ಉತ್ಪನ್ನ’ ಯೋಜನೆಯನ್ನು ರೂಪಿಸಿತ್ತು. ಅದರಂತೆ ನೈರುತ್ಯ ರೈಲ್ವೆಯ ಬೆಂಗಳೂರು ವಲಯದಲ್ಲಿಯೂ ರೈಲು ನಿಲ್ದಾಣಗಳಲ್ಲಿ ಉತ್ಪನ್ನ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿತ್ತು.

ಚನ್ನಪಟ್ಟಣದ ಗೊಂಬೆ, ಮಂಡ್ಯದ ಬೆಲ್ಲ, ತಿಪಟೂರಿನ ಕೊಬ್ಬರಿ, ಮುದಿರೆಡಿಪಲ್ಲಿ ಸೀರೆ, ಕೂರ್ಗ್ ಸಂಸ್ಕೃತಿ ಬಿಂಬಿಸುವ ಉತ್ಪನ್ನಗಳು, ಸಿರಿಧಾನ್ಯ, ಚರ್ಮೋತ್ಪನ್ನ, ಖಾದಿ, ಸೆಣಬು, ಎಣ್ಣೆ ಪದಾರ್ಥ, ಮನೆಯಲ್ಲಿ ತಯಾರಿಸಿದ ಚಾಕೊಲೆಟ್‌ ಮತ್ತು ಡ್ರೈಫ್ರೂಟ್ಸ್‌, ಮನೆಯಲ್ಲಿಯೇ ತಯಾರಿಸಿದ ಸೋಪು, ಸಾವಯವ ಜೇನು, ಕರಕುಶಲ ವಸ್ತುಗಳು ಹೀಗೆ ವಿವಿಧ ವಸ್ತುಗಳಿಗೆ ಮಾರುಕಟ್ಟೆ ಒದಗಿಸಿತ್ತು.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್‌, ಕೆ.ಆರ್‌.ಪುರ, ಮಲ್ಲೇಶ್ವರ, ತುಮಕೂರು, ಬಾಣಸವಾಡಿ ಸೇರಿ 40 ನಿಲ್ದಾಣಗಳಲ್ಲಿ 41 ಮಳಿಗೆಗಳಿಗೆ ಅವಕಾಶ ಮಾಡಿಕೊಟ್ಟಿತ್ತು. 

ಸ್ಥಳೀಯ ಮಾರಾಟಗಾರರು ₹1,000 ನೋಂದಣಿ ಶುಲ್ಕ ನೀಡಬೇಕು. ಅವರು 15 ದಿನ ವ್ಯಾಪಾರ ಮಾಡುತ್ತಾರೆ. ಬಳಿಕ ಬೇರೆ ಉತ್ಪನ್ನ ಮಾರಾಟಗಾರರು ಬಂದರೆ ಅವರಿಗೆ ಅವಕಾಶ ನೀಡಲಾಗುತ್ತದೆ.

ಉತ್ತಮ ಸ್ಪಂದನೆ: ಮೊದಲ ಹಂತದಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಚನ್ನಪಟ್ಟಣದ ಗೊಂಬೆಗಳಿಗೆ, ಸಿರಿಧಾನ್ಯ, ಬೆಲ್ಲ, ಕರಕುಶಲ ವಸ್ತುಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಅವು ಹೆಚ್ಚಿನ ನಿಲ್ದಾಣಗಳಲ್ಲಿ ಮಾರಾಟದ ಅವಕಾಶಗಳನ್ನು ಪಡೆದಿವೆ.

’ಇದನ್ನೆಲ್ಲ ಗಮನಿಸಿ ಇನ್ನೂ 40 ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಕೋಲಾರ, ಚಿಂತಾಮಣಿ ರೈಲು ನಿಲ್ದಾಣಗಳು ಸೇರಿದಂತೆ ವಿವಿಧೆಡೆ ಶೀಘ್ರದಲ್ಲೇ ಆರಂಭಗೊಳ್ಳಲಿವೆ’ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಆರ್‌. ತ್ರಿನೇತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಲ್ದಾಣಗಳಲ್ಲಿ ಸ್ಥಳಾವಕಾಶದ ಲಭ್ಯತೆಯನ್ನು ನೋಡಿಕೊಂಡು ಮತ್ತು ಉತ್ಪನ್ನಗಳಿಗೆ ಅನುಗುಣವಾಗಿ ಮಳಿಗೆ ಅಥವಾ ಟ್ರಾಲಿಗಳನ್ನು ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣದಲ್ಲಿ ‘ಒಂದು ನಿಲ್ದಾಣ– ಒಂದು ಉತ್ಪನ್ನ’ ಯೋಜನೆಯಡಿ ಆರಂಭವಾಗಿರುವ ಟ್ರಾಲಿ
ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣದಲ್ಲಿ ‘ಒಂದು ನಿಲ್ದಾಣ– ಒಂದು ಉತ್ಪನ್ನ’ ಯೋಜನೆಯಡಿ ಆರಂಭವಾಗಿರುವ ಟ್ರಾಲಿ
ಒಂದು ನಿಲ್ದಾಣ– ಒಂದು ಉತ್ಪನ್ನ ಯೋಜನೆಯಡಿ ಇನ್ನಷ್ಟು ರೈಲು ನಿಲ್ದಾಣಗಳಲ್ಲಿ ಮಳಿಗೆ ಇಲ್ಲವೇ ಟ್ರಾಲಿ ಒದಗಿಸಲಾಗುವುದು. ಸ್ಥಳೀಯರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು.
ಕೆ.ಆರ್‌. ತ್ರಿನೇತ್ರ ಸಾರ್ವಜನಿಕ ಸಂಪರ್ಕಾಧಿಕಾರಿ ನೈರುತ್ಯ ರೈಲ್ವೆ–ಬೆಂಗಳೂರು ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT