ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಯಂಗಳದಲ್ಲಿ....’ಸಿ.ಎಸ್. ದ್ವಾರಕಾನಾಥ್

Last Updated 14 ಡಿಸೆಂಬರ್ 2018, 15:43 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ‘ಮನೆಯಂಗಳದಲ್ಲಿ ಮಾತುಕತೆ’ 205ನೇ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಗಳ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ತಿಂಗಳ ಅತಿಥಿಯಾಗಿ ಪಾಲ್ಗೊಳ್ಳುವರು.

ಸಮುದಾಯದ ಸೇವೆಯೇ ಬದುಕಿನ ‘ಧ್ಯಾನ’. ಸಾಮಾಜಿಕ ನ್ಯಾಯಾನುಷ್ಠಾನಕ್ಕೆ ಹೋರಾಡುವುದೇ ಜೀವನ ‘ದಾರಿ’ಯಾಗಿಸಿಕೊಂಡ ವಿರಳರಲ್ಲಿ ವಿರಳರು ಡಾ.ಸಿ.ಎಸ್.ದ್ವಾರಕಾನಾಥ್. ನಿಸ್ವಾರ್ಥ, ನಿಷ್ಕಲ್ಮಷ ನಡೆ, ಪ್ರಖರ ವಿಚಾರಧಾರೆಗಳಿಂದ ಹೆಸರುವಾಸಿಯಾದವರು. ಹೆಸರಾಂತ ನ್ಯಾಯವಾದಿ. ಅಪ್ಪಟ ಅಂಬೇಡ್ಕರ್‌ವಾದಿ.

ಚಿನ್ನದ ಗಣಿಯ ಬೀಡು ಕೋಲಾರದ ಅಪೂರ್ವ ಕೊಡುಗೆ ದ್ವಾರಕಾನಾಥ್. ಹಿಂದುಳಿದ ರೈತ ಕುಟುಂಬದ ಕುಡಿ. ಬಡತನದ ಬದುಕಿಗೆ ಅಕ್ಷರವೇ ಅಮೃತ!. ಕಲಿಕೆಯೇ ಮೆಟ್ಟಿಲು. ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ವ್ಯಾಸಂಗ. ಓದಿನ ದಾಹಕ್ಕೆ ದಕ್ಕಿದ್ದು ಬಿ.ಎಸ್ಸಿ, ಎಲ್‌.ಎಲ್‌.ಬಿ. ಸಾಹಿತ್ಯದಲ್ಲಿ ಡಾಕ್ಟರೇಟ್ (ಡಿ.ಲಿಟ್) ಹಾಗೂ ಪತ್ರಿಕೋದ್ಯಮ ಕೋರ್ಸ್.

ಬಾಲ್ಯದಿಂದಲೂ ಬದುಕಿನ ನಾನಾ ಮುಖಗಳ ಬಗ್ಗೆ ತೀವ್ರ ಕುತೂಹಲ. ಸಾಮಾಜಿಕ ತಾರತಮ್ಯ–ಅನಿಷ್ಟ ಪಿಡುಗಗಳ ಕುರಿತು ಆಕ್ರೋಶ. ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತ. ಕುದಿವ ಮನಕ್ಕೆ ಬಂಡಾಯದ ಗುರಿ. ಹೋರಾಟವೇ ಮನೋಧರ್ಮ. ನ್ಯಾಯವಾದಿಯಾಗುವುದೇ ಸೂಕ್ತವೆಂಬ ನಿಶ್ಚಿತ ನಿಲುವು. ವಕೀಲ ವೃತ್ತಿಯಲ್ಲಿ ಮೂರೂವರೆ ದಶಕಗಳ ಅನನ್ಯ ಸೇವೆ. ದಮನಿತರು, ಅಸಹಾಯಕರಿಗೆ ನ್ಯಾಯ ದೊರಕಿಸಿದ ಸಂತೃಪ್ತಿ. ನ್ಯಾಯಾಲಯದಾಚೆಗಿನ ಹೋರಾಟದಲ್ಲೂ ಸಕ್ರಿಯ. ದಲಿತ, ಕನ್ನಡಪರ ಚಳವಳಿ, ಬಂಡಾಯ ಸಾಹಿತ್ಯ ಸಂಘಟನೆ, ಹಿಂದುಳಿದ ವರ್ಗಗಳ ಪರವಾದ ಚಳವಳಿಗಳಲ್ಲಿ ಗುರುತರ ಪಾತ್ರ.

ಸಾಮಾಜಿಕ ಅನುಭವಗಳಿಗೆ ಅಕ್ಷರದ ರೂಪ. ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ‘ಲಂಕೇಶ್ ಪತ್ರಿಕೆ’ಯಲ್ಲಿ ನಿರಂತರ ಬರಹ. ಅಂಬೇಡ್ಕರ್ ವಿಚಾರಧಾರೆ. ಭಾರತೀಯ ಸಂವಿಧಾನ ಮತ್ತು ಮಾನವ ಹಕ್ಕುಗಳ ಹೋರಾಟ ಕುರಿತು ದೇಶ–ವಿದೇಶಗಳಲ್ಲಿ ಉಪನ್ಯಾಸ. ಉತ್ತಮ ವಾಗ್ಮಿಯೆಂಬ ಹೆಗ್ಗಳಿಕೆ. ದೃಶ್ಯ ಮಾಧ್ಯಮಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕಾರಣ ಮತ್ತು ಕಾನೂನಾತ್ಮಕ ಚರ್ಚೆಗಳಲ್ಲಿ ವಿಚಾರಲಹರಿ ಹರಿಸಿದ ವಾಗ್ಪಟು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ವಿಳಾಸವೇ ಇಲ್ಲದ ಅಸ್ಫೃಶ್ಯ, ಅಲೆಮಾರಿ, ಆದಿವಾಸಿ, ಹಿಂದುಳಿದವರಿಗೆ ಅಸ್ಮಿತೆಯ ಕರುಣಿಸುವಿಕೆ. ಚೊಚ್ಚಲಬಾರಿಗೆ ಲೈಂಗಿಕ ಅಲ್ಪಸಂಖ್ಯಾತರ ಗುರುತಿಸಿ ದೇವದಾಸಿ, ವೇಶ್ಯೆ, ಎಚ್‌ಐವಿ ಪೀಡಿತರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ನೀಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದ ಮಹತ್ವದ ಸಾಧನೆ. ಸಾಹಿತ್ಯ ಕ್ಷೇತ್ರದಲ್ಲೂ ವಿಶಿಷ್ಟ ಛಾಪು. ‘ಯೋಗಿವೇಮನ’, ‘ಮಣ್ಣ ಬಳೆನಾದ’, ‘ಗಾಂಧಿ ಮೆಟ್ಟಿದ ನಾಡಿನಲ್ಲಿ’, ‘ಅಮೆರಿಕ ಆ ಮುಖ’, ‘ಸಂಕುಲ’ ಇತ್ಯಾದಿ ಪ್ರಕಟಿತ ಕೃತಿಗಳು. ರಾಮ ಮನೋಹರ ಲೋಹಿಯಾ ಬರಹಗಳನ್ನು ಕನ್ನಡಕ್ಕೆ ತಂದ ಅನುವಾದಕ. ಹಲವು ಸಂಶೋಧನಾ ಕೃತಿಗಳಿಗೆ ಮಾರ್ಗದರ್ಶಕರೂ ಆಗಿರುವ ಡಾ.ಸಿ.ಎಸ್. ದ್ವಾರಕಾನಾಥ್ ಸಾಹಿತ್ಯ ಅಕಾಡೆಮಿ, ಬುದ್ಧ ಪ್ರಶಸ್ತಿ, ಕೊಡವರತ್ನ, ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳಿಂದ ಭೂಷಿತರು. ನಾಡಿನ ಪ್ರಮುಖ ಚಿಂತಕರು.

**

ಮನೆಯಂಗಳಲ್ಲಿ ಮಾತುಕತೆ: ತಿಂಗಳ ಅತಿಥಿ–ಡಾ.ಸಿ.ಎಸ್.ದ್ವಾರಕಾನಾಥ್. ಅತಿಥಿ–ಬಲವಂತರಾವ್ ಪಾಟೀಲ್. ಆಯೋಜನೆ–ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸ್ಥಳ–ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಶನಿವಾರ ಸಂಜೆ 4.

ಡಾ.ಸಿ.ಎಸ್. ದ್ವಾರಕಾನಾಥ್ ಅವರ ‘ಮೂಕನಾಯಕ’ ಪುಸ್ತಕ ಬಿಡುಗಡೆ (ಸಂ–ಹರೀಶ್‌ಕುಮಾರ್): ಶಾಸಕ ಎನ್. ಮಹೇಶ್ ಅವರಿಂದ. ಅತಿಥಿಗಳು–ಪಲ್ಲವಿ ಇಡೂರ್, ಚೇತನ್ ಅಹಿಂಸ. ಅಂಬೇಡ್ಕರ್ ಗೀತೆಗಳು–ನಾಗೇಶ್ ಮತ್ತು ತಂಡ. ಸ್ಥಳ–ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಹಿಂಭಾಗ, ಜೆ.ಸಿ. ರಸ್ತೆ, ಶನಿವಾರ ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT