ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮ್ ತಕ್ಕ ತಕ್ಕ ತಕ್ಕ...

Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಲೇಖಕರು: ಎಸ್. ವಿಷ್ಣುಕುಮಾರ್

ನನ್ನೂರು ‘ಟುಮುಕಿ’ ಹೆಸರಿನ ಜಿಲ್ಲೆಯದ್ದು ಅರ್ಥಾತ್ ತುಮಕೂರು ಜಿಲ್ಲೆಯದ್ದು. ಕರಡಿ-ತಿಪಟೂರು ಆಸುಪಾಸಿನಲ್ಲೇ ಬೆಳೆದು ದೊಡ್ಡವನಾದವನು ನಾನು. ಈಗ 46 ವರ್ಷ ವಯಸ್ಸು. ಕರಡಿ ನನ್ನ ಅಮ್ಮನೂರು. ಅಪ್ಪನ ಕೆಲಸದ ನಿಮಿತ್ತ ಬಾಳಿ ಬದುಕಿದ್ದೆಲ್ಲ ತಿಪಟೂರು.

ಚಿಕ್ಕಂದಿನಿಂದ ‘ಜಗ್ಗಣಕ ಜಗ್ಗ ಜಗ್ಗ-ಜಗ್ಗಣಕ ಜಗ್ಗ ಜಗ್ಗ...’  ಎಂಬ ತಮಟೆಯ ನಾದ ಕೇಳಿಸಿಕೊಳ್ಳುತ್ತಲೇ ಬೆಳೆದ ನಾನು, ಅದನ್ನು ನುಡಿಸುತ್ತಿದ್ದ ಬಂಧು-ಮಿತ್ರರನ್ನೂ ಬಲು ಚೋದ್ಯದಿ ನೋಡುತ್ತಿದ್ದುಂಟು. ಪಂಚಾಯಿತಿಕೆಯದ್ದೋ, ಸರ್ಕಾರದ್ದೋ ಜರೂರು ವಾರ್ತೆಗಳನ್ನು ಊರಮಂದಿಗೆ ತಲುಪಿಸಲಿಕ್ಕಾಗಿ ತಮಟೆ ಬಡಿಯುತ್ತಾ ಊರತುಂಬ ‘ಸಾರುಹಾಕುವ ಅಂದಾನಣ್ಣ’ನನ್ನು ನಾನು ಶಾಲೆ ಕಿಟಕಿಯಿಂದ ಇಣುಕಿಣುಕಿ ನೋಡುತ್ತಿದ್ದುದೂ ಇದೆ.

ತಮಟೆ ಬಡಿಯುವ ಅಂದಾನಣ್ಣ, ಹನುಮಣ್ಣ, ಗೌಡದಾಸೇಣ್ಣ ಮತ್ತವರ ಮಗ ರಂಗಾ ಇವರನ್ನೆಲ್ಲ ಕುತೂಹಲ, ಗೌರವಾದರಗಳಿಂದ ನೋಡುತ್ತಿದ್ದ ಬಾಲಕರಾದ ನಮ್ಮ ಕಣ್ಣಿಗೆ ಅವರು ಎಲ್ಲಿಂದಲೋ ಅವತರಿಸಿ ಬಂದ ಅನ್ಯಲೋಕಿಗಳಂತೆ ಕಾಣುತ್ತಿದ್ದರು. ಅವರು ಬಾರಿಸುತ್ತಿದ್ದ ತಮಟೆಯ ನಾದ ನಮ್ಮ ಎಳವೆಯಲ್ಲಿ ಕಿವಿಮೇಲೆ ಬಿದ್ದಿತೆಂದರೆ, ಅಪರಿಚಿತ ಅಂತಃಕರಣವೊಂದು ಜಾಗೃತವಾಗುತ್ತಿತ್ತು. ಒಂದೇ ಕಡೆ ನಿಲಲಾರದವರನ್ನೂ, ಕಷ್ಟಪಟ್ಟು ನಿಂತವರನ್ನೂ ಚಕಿತರನ್ನಾಗಿಸುತ್ತಿತ್ತು. ತಮಟೆ ಬಾರಿಸುತ್ತಾ ಅವರು ಸಮೀಪ ಬಂದಂತೆಲ್ಲಾ ನಾದ ನಮ್ಮ ಮೈ ಮನಸ್ಸನ್ನು ಹೊಕ್ಕಿ ಬೆಚ್ಚಗಾಗಿಸುತ್ತಿತ್ತು; ಸುಮ್ಮಸುಮ್ಮನೆ ಹುಚ್ಚೆದ್ದು ಕುಣಿದೇಬಿಡಬೇಕು ಎಂಬಂತೆ ರೋಮಾಂಚನಗೊಳಿಸುತ್ತಿತ್ತು!

ಈ ಜೀವಮಾನದಲ್ಲಿ ಒಂದಿಲ್ಲೊಂದು ಒಂದು ದಿನ ಇದನ್ನು ಕಲಿಯಲೇಬೇಕು ಎಂದು ತೀವ್ರವಾಗಿ ನನ್ನನ್ನು ಕಾಡಿದ ವಾದ್ಯ ಈ ತಮಟೆ. ಚಿಕ್ಕ ವಯಸ್ಸಿನಿಂದ ನೋಡಿರುವ, ಕೇಳಿರುವ ವಾದ್ಯ ಇದು. ಇದನ್ನು ಕಲಿಯುವ ಆಸೆ ಆಗಿನಿಂದಲೂ ಇದ್ದರೂ ಎಲ್ಲಿ ಕಲಿಯಬೇಕು, ಹೇಗೆ ಕಲಿಯಬೇಕು, ಯಾರನ್ನು ಕೇಳಿ, ಎಲ್ಲಿ ಹೇಳಿಸಿಕೊಂಡು ಕಲಿಯಬೇಕು ಎಂಬೆಲ್ಲ ಗೊಂದಲದಿಂದಾಗಿ ತಮಟೆ ನುಡಿಸುವುದನ್ನು ಕಲಿಯಬಕೆಂಬ ಆಸೆಯನ್ನೇ ಬಿಟ್ಟೇಬಿಟ್ಟಿದ್ದೆ. ‘ಮುನಿ ಬಕಾಲ-ಕೆ.ಬಿ. ಸಿದ್ಧಯ್ಯ’ನವರ ಖಂಡಕಾವ್ಯ ‘ದಕ್ಲಕಥಾ ದೇವಿ’ ಆಧಾರಿತ ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೆಳೆಯ ಡಿಂಗ್ರಿ ಭರತ್ ಮತ್ತು ಸ್ನೇಹಿತರು ಒಗ್ಗೂಡಿ, ‘ಜಂಗಮ ಪದ’ ಹಾಗೂ ‘ದಿ ಕೊಲಾಜ್’ ಸಹಭಾಗಿತ್ವದಲ್ಲಿ ಬೆಂಗಳೂರಿನ ‘ಸ್ಫೂರ್ತಿ-ಧಾಮ’ದ ಅಂಗಳದಲ್ಲಿ ಒಂದು ವಾರದ ತಮಟೆ ಶಿಬಿರವನ್ನು ಆಯೋಜಿಸಿದ್ದರು.

ಸಂಸ್ಕೃತಿ ಚಿಂತಕ ರಾಜಪ್ಪ ದಳವಾಯಿ ಅವರೂ ಸೇರಿದಂತೆ ಶಿಬಿರಾರ್ಥಿಗಳು
ಸಂಸ್ಕೃತಿ ಚಿಂತಕ ರಾಜಪ್ಪ ದಳವಾಯಿ ಅವರೂ ಸೇರಿದಂತೆ ಶಿಬಿರಾರ್ಥಿಗಳು

ಇದರಲ್ಲಿ ವಿವಿಧ ಕ್ಷೇತ್ರಗಳಿಂದ ಬಂದ ಸುಮಾರು 15 ಮಂದಿ ಶಿಬಿರಾರ್ಥಿಗಳಿದ್ದರು. ಅವರಲ್ಲಿ ನಾನೂ ಒಬ್ಬ. ವಿಶೇಷ ಅಂದರೆ, ಯಾವುದೇ ವಯಸ್ಸಿನ ಮಿತಿ ಇರಲಿಲ್ಲ; ಕಲಿವ ಮನಸುಗಳ ಉಪಸ್ಥಿತಿಯಷ್ಟೆ ಪ್ರಮುಖವಾಗಿತ್ತು. ನಾಟಕಕಾರ ಮತ್ತು ಸಂಸ್ಕೃತಿ ಚಿಂತಕ ರಾಜಪ್ಪ ದಳವಾಯಿ ಕೂಡ ಶಿಬಿರಾರ್ಥಿಗಳಲ್ಲಿ ಒಬ್ಬರಾಗಿದ್ದರು. ಶಿಬಿರದ ಮೊದಲ ದಿನ ತಮಟೆಯ ಪರಿಚಯ, ಅದನ್ನು ಹೇಗೆ ಹದವಾಗಿ ಕಾಯಿಸಬೇಕು, ಹೇಗೆ ಹಿಡಿಯಬೇಕು, ಹೇಗೆ ಬಾರಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು. ಮುಖ್ಯವಾಗಿ, ತಮಟೆಗೆ ಯಾವುದೇ ಶಿಸ್ತುಬದ್ಧ ನೋಟ್ಸ್ ಇರುವುದಿಲ್ಲ ಎಂಬುದನ್ನು ಅರಿತ ಗೆಳೆಯ ಡಿಂಗ್ರಿ ಭರತ್ ತಾವೇ ಸ್ವತಃ ರೂಢಿಸಿಕೊಂಡ, ರೂಪಿಸಿಕೊಂಡ ವಿಶಿಷ್ಟ ಶೈಲಿಯ ‘ಬೀಟ್‌’ಗಳನ್ನು ನುಡಿಸುತ್ತಾ, ಶಿಬಿರಾರ್ಥಿಗಳಿಗೂ ಹೇಳಿಕೊಟ್ಟರು.

‘ಜಾಮ್ ತಕ್ಕ ತಕ್ಕ ತಕ್ಕ/ಜಾಮ್ ಜಾಮ್ ತಕ್ಕ ತಕ್ಕ ತಕ್ಕ/ಜಾಮ್ ತಕ್ಕ ತಕ್ಕ ತಕ್ಕ/ಜಾಮ್ ಜಾಮ್ ತಕ್ಕ ತಕ್ಕ ತಕ್ಕ/ಜಾಮ್ ತಕ್ಕ ತಕ್ಕ ತಕ್ಕ/
ಜಾಮ್ ಜಾಮ್ ತಕ್ಕ ತಕ್ಕ ತಕ್ಕ/ತಕ್ ಜಾಮ್ ತಕ್ ಜಾಮ್ ತಕ್ ಜಾಮ್ ತಕ್... ಹೀಗೆ ಏಳು ದಿನಗಳಲ್ಲಿ ಎಂಟು ಬೀಟ್‌ಗಳ ಮೂಲಕ ವಿಶಿಷ್ಟ ನಾದ-ಲಯಗಳ ಪರಿಚಿತ ಅನುಭವ ಲೋಕವೇ ಶಿಬಿರದಲ್ಲಿ ಮತ್ತೆ ತೆರೆದುಕೊಂಡಂತಾಯಿತು.

ದಿನವೂ ಮಧ್ಯಾಹ್ನ 3ರಿಂದ ರಾತ್ರಿ 8ರ ವರೆಗೆ ಕಲಿಕೆ ಇರುತ್ತಿತ್ತು. ನಿತ್ಯವೂ ಭರತ್ ಡಿಂಗ್ರಿ ಒಂದು ಬೀಟ್‌ ಅನ್ನು ಪ್ರತಿ ಶಿಬಿರಾರ್ಥಿಗೂ ಲಕ್ಷ್ಯ ಕೊಟ್ಟು ಕಲಿಸುತ್ತಿದ್ದರು. ಮರುದಿನ ಬೆಳಿಗ್ಗೆ ಆ ಬೀಟ್‌ ಅನ್ನು ಅಭ್ಯಾಸ ಮಾಡಿ, ಒಪ್ಪಿಸಬೇಕಿತ್ತು. ಇನ್ನೂ ಪಕ್ಕಾ ಆಗಬೇಕಿದ್ದರೆ ಅದನ್ನೂ ಹೇಳಿಕೊಡುತ್ತಿದ್ದರು. ಹೀಗೆ ಎಂಟು ಬೀಟ್‌ಗಳನ್ನು ಕಲಿತ ನಂತರ ಕೊನೆಯ ದಿನ ಎಲ್ಲರೂ ಸೇರಿ ಅಷ್ಟೂ ಬೀಟ್‌ಗಳನ್ನು ನುಡಿಸಿದ್ದು ಸಾರ್ಥಕ್ಯದ ಕ್ಷಣ.

ನನ್ನ ಪ್ರಕಾರ ತಮಟೆ ಒಂದು ವಾದ್ಯವಷ್ಟೇ ಅಲ್ಲ; ಅದು ಸಮುದಾಯಗಳ ಅಧಿಕಾರಯುತ Void ಅನ್ನು ಬಗೆದು ತನ್ನ ಇರವನ್ನು ದಿಟ್ಟವಾಗಿ ಸ್ಥಾಪಿಸುವ Voice ಇದ್ದಂತೆ.

ಭರತ್ ಡಿಂಗ್ರಿ
ಭರತ್ ಡಿಂಗ್ರಿ

ಸಾಮಾನ್ಯವಾಗಿ, ಧರಣಿ-ಪ್ರತಿಭಟನೆ-ಹಬ್ಬ-ಮದುವೆ-ಸಾವುಗಳ ಸಂದರ್ಭದಲ್ಲಿ ಮಾತ್ರ ಕೇಳಿಸುವ ವಾದ್ಯದಂತೆ ಇದು ಅನಿಸಿದರೂ, ಬಹು ಸಮಾಜಗಳ ನೋವಿಗೂ, ನಲಿವಿಗೂ ರಮಾರಮ್ಮನೆ ಸದ್ದುಸ್ಫೋಟಿಸಿ ವಿಜೃಂಭಿಸುವ ಏಕೈಕ ವಾದ್ಯವೂ ಹೌದು.

ಇದನ್ನು ನುಡಿಸುವುದೇ ಒಂದು ಅದ್ಬುತ ಅನುಭವ. ತಮಟೆ ಬಾರಿಸುವ ಅನುಭವದ ಪರಮಾನಂದಕ್ಕೆ ಅವಮಾನದ ಕಾರಣದಿಂದಾಗಿ ಬಹಳಷ್ಟು ಜನ ತೆರೆದುಕೊಳ್ಳದೇ ಇರುವುದು ಬೇಸರದ ಸಂಗತಿ. ಅಸ್ಪೃಶ್ಯತೆಯ ವೈದಿಕ-ಸೋಂಕು ಅಂಟಿಸಿ ಕೈಬಿಟ್ಟಿರುವ ತಮಟೆಯನ್ನು ಪರಿಶಿಷ್ಟರು ಮಾತ್ರ ಬಾರಿಸಲಿ....ಎಂಬ ಚಾತುರ್ವರ್ಣ್ಯ ಕಟ್ಟಳೆಯಿದ್ದಂತಿದೆ!

ತಮಟೆ ನಾದ ನುಡಿವುದೆಂದರೆ, ನೆಲ-ಸಮಾಜಗಳ ನಿಸರ್ಗವಿವೇಕ ಜಗಕೆ ಹಬ್ಬಿದಂತೆ. ತಮಟೆ ನಾದ ನುಡಿವುದೆಂದರೆ, ಪ್ರಾಣ ಮೈದುಂಬಿದಂತೆ. ತಮಟೆ ನಾದ ನುಡಿವುದೆಂದರೆ ಸದ್ದಿಲ್ಲದಂತಿಹ ಸರ್ವಜ್ಞರ ಸದ್ದು ಸ್ಫೋಟಿಸಿದಂತೆ. ತಮಟೆ ನಾದ ನುಡಿವುದೆಂದರೆ, ಸಮನಾಗಿ ಬದುಕುವ ಹಕ್ಕನ್ನೇ ಕಸಿದುಕೊಂಡಿದ್ದ ಸವರ್ಣೀಯರ ಸದ್ದಡಗಿದಂತೆ... ಸತ್ತಂತಿಹರನೂ ಬಡಿದೆಚ್ಚರಿಸಬಲ್ಲ ತಮಟೆ ನಾದ ನಾಡಿನ, ನಾಳಿನ ಸನ್ನದು. ಇದು, ನೆಲ-ಸಮುದಾಯಗಳ ಪಾಲಿಗೆ ‘ಅಧಿಕಾರದಾಚೆಗಿನ ಅಧಿಕಾರ’ವಿದ್ದಂತೆ.

ಈಗ ಚರ್ಮದ ಬದಲಿಗೆ ಫೈಬರ್ ತಮಟೆಗಳೂ ಮಾರುಕಟ್ಟೆಗೆ ಬಂದಿವೆ. ಮಾದಿಗ ಸಮುದಾಯದ ಸಾಂಸ್ಕೃತಿಕ ವಾದ್ಯ ಪರಂಪರೆಯಂತೆ ಮಾತ್ರ ಸೀಮಿತವಾಗಿದ್ದ ತಮಟೆ, ಈಗ ಎಲ್ಲಾ ಸಮಾಜಗಳಿಗೂ ಆಕರ್ಷಕವಾಗಿ ಕಾಣುತ್ತಿದೆ. ಅಸ್ಪೃಶ್ಯರ ಪ್ರತಿಭಾವಂತ ವಾದನ ಕೌಶಲಗಳನ್ನು ಇದು ಸಂಕೇತಿಸುತ್ತದೆ. ಈಗಲಾದರೂ ಮತ್ತೆ ತಮಟೆ ಬಾರಿಸುವುದನ್ನು ಪೂರ್ತಿ ಕಲಿಯಬೇಕು ಎಂಬ ದೊಡ್ಡ ಆಸೆ ಮೂಡಿದೆ.

(ಲೇಖಕರು ಚಿತ್ರ ಕಲಾವಿದರು)

ಶಿಬಿರಾರ್ಥಿಗೆ ತಮಟೆ ನುಡಿಸುವುದನ್ನು ಕಲಿಸುತ್ತಿರುವ ಭರತ್ ಡಿಂಗ್ರಿ
ಶಿಬಿರಾರ್ಥಿಗೆ ತಮಟೆ ನುಡಿಸುವುದನ್ನು ಕಲಿಸುತ್ತಿರುವ ಭರತ್ ಡಿಂಗ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT