ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಲಯ ಈ ಲಯ ನಾಟಕ ವಿಮರ್ಶೆ: ಹಿಂಸೆ-ಅಹಿಂಸೆಯ ‘ಮುಖಾಮುಖಿ’

Published 19 ನವೆಂಬರ್ 2023, 0:19 IST
Last Updated 19 ನವೆಂಬರ್ 2023, 0:19 IST
ಅಕ್ಷರ ಗಾತ್ರ

ಆರು ದಶಕಗಳ ಹಿಂದೆ ರಚಿತವಾದ ಆಫ್ರಿಕನ್ ನಾಟಕವೊಂದು ಭಾರತದ- ಕರ್ನಾಟಕದ ವರ್ತಮಾನದ ‘ಪ್ರಶ್ನೆ’ಗಳಿಗೆ ಉತ್ತರ ಹುಡುಕಲು ಯತ್ನಿಸುತ್ತದೆ. ಹಾಗೆ ನೋಡಿದರೆ ಅದೇನೂ ವಿಶೇಷ ಸಂಗತಿಯಲ್ಲ. ಸಾಹಿತ್ಯದ ಎಲ್ಲ ಅಲ್ಲದಿದ್ದರೂ ಬಹುತೇಕ ಪಠ್ಯಗಳು ಕಾಲ-ದೇಶಗಳ ‘ಮಿತಿ’ಯನ್ನು ಮೀರುವ ಮೂಲಕವೇ ತಮ್ಮತನ ಸಾಬೀತುಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ. ಈ ಹೆಣಗುವಿಕೆಯ ‘ಫಲ’ ನಿರ್ಧಾರವಾಗುವುದು ಅದು ಕೊಡುವ ಅನುಭವದ ಆಧಾರದ ಮೇಲೆ. ಕೃತಿಯೊಂದು ‘ಕ್ಲಾಸಿಕ್‌’ ಆಗುವುದರ ಕಡೆಗಿನ ಚಲನೆ ಅದು. ರೂಪಕಗಳ ಭಾಷೆಯಲ್ಲಿ ಮಾನವ ಬದುಕಿನ ಚಲನೆಗಳನ್ನು ದಾಖಲಿಸುವ ಎಚ್‌.ಕೆ. ಶ್ವೇತಾರಾಣಿಯವರ ನಿರ್ದೇಶನದ ಈ ಪ್ರದರ್ಶನವು ಕೇವಲ ‘ಪ್ರಯೋಗ’ವಾಗಿ ಮಾತ್ರ ಉಳಿಯದೇ ವಿಭಿನ್ನ- ವಿಶಿಷ್ಟ ಹಾಗೂ ತೀವ್ರ ರಂಗಾನುಭವ ಒದಗಿಸುತ್ತದೆ ಎಂಬುದೇ ವಿಶೇಷ.

ಆಫ್ರಿಕಾದ ನಾಟಕಕಾರ ಲೂಯಿ ನಕೋಸಿಯ (1936-2010) ನಾಟಕ ‘ದ ರಿದಮ್‌ ಆಫ್‌ ವಯಲನ್ಸ್‌’ (1963) ಕನ್ನಡದಲ್ಲಿ ‘ಆ ಲಯ ಈ ಲಯ’ ಆಗಿದೆ. ಮೂಲ ಇಂಗ್ಲಿಷ್‌ ನಾಟಕವವನ್ನು ನಟ-ನಿರ್ದೇಶಕ ನಟರಾಜ ಹೊನ್ನವಳ್ಳಿ ಅವರು ಕನ್ನಡೀಕರಿಸಿದ್ದಾರೆ. ಸಾಹಿತ್ಯ ಕೃತಿಯಾದ ನಾಟಕವು ರಂಗದ ಮೇಲೆ ಪ್ರಯೋಗವಾದಾಗಲೇ ಅದು ಸಾರ್ಥಕ. ಹಾಗೆಯೇ ರಂಗಪಠ್ಯವು ಸಾಹಿತ್ಯಕೃತಿಯೂ ಆದಾಗಲೇ ಸೊಗಸು. ನಾಟಕ-ರಂಗಪಠ್ಯಗಳೆರಡೂ ಆಗಿ ಮನ-ಗಮನ ಸೆಳೆಯುವುದು ಈ ನಾಟಕ- ಪ್ರಯೋಗದ ವಿಶೇಷ. 1963ರಲ್ಲಿ ಇಂಗ್ಲಿಷಿನಲ್ಲಿ ಮೊದಲ ಬಾರಿಗೆ ರಂಗಪ್ರಯೋಗ ಕಂಡಿದ್ದ ರಂಗಪಠ್ಯವು 1964ರಲ್ಲಿ ನಾಟಕವಾಗಿ ಪ್ರಕಟವಾಗಿತ್ತು.

ತನ್ನ ಸಮಕಾಲೀನ ವರ್ತಮಾನಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುವ ಮೂಲಕ ಎಲ್ಲ ಕಾಲ-ದೇಶಗಳಿಗೂ ಸಮಕಾಲೀನವಾಗುವ ಗುಣವನ್ನು ಈ ಪಠ್ಯ ಮತ್ತು ಅದರ ಪ್ರಯೋಗ ಒಳಗೊಂಡಿದೆ. ರೈತರ ಪ್ರತಿಭಟನೆಯೂ ಸೇರಿ ಕಳೆದ ನಾಲ್ಕಾರು ವರ್ಷಗಳಲ್ಲಿ ಭಾರತ ಕಂಡ ಹೋರಾಟ- ಪ್ರತಿಭಟನೆಗಳನ್ನು ಈ ನಾಟಕದಲ್ಲಿ ವಾಚ್ಯವಾಗದಂತೆ ಸೂಚ್ಯವಾಗಿ ದಾಖಲಿಸಲಾಗಿದೆ.

ಅಹಿಂಸಾತ್ಮಕ ಪ್ರತಿಭಟನೆಯೊಂದು ‘ಹಿಂಸೆ’ಯೆಡೆಗೆ ತಿರುಗಲಿ ಎಂದು ಆಶಿಸುವ ಪ್ರಭುತ್ವ. ಅದಕ್ಕೆ ಪ್ರತಿಕ್ರಿಯೆಯಾಗಿ ಶಾಂತಿಯುತ ಪ್ರತಿರೋಧದಲ್ಲಿ ತೊಡಗಿಸಿಕೊಂಡೂ ಅದರ ‘ಲಯ’ ಬದಲಿಸಿ ಹಿಂಸೆಯೆಡೆಗೆ ಚಲಿಸುವ ಆಲೋಚನೆಗಳು ಪರಸ್ಪರ ಮುಖಾಮುಖಿ ಆಗುತ್ತವೆ. ಈ ಸಂಘರ್ಷವೇ ನಾಟಕವನ್ನು ‘ಜೀವಂತ’ವಾಗಿ ಇಡುತ್ತದೆ. ಸರಿ-ತಪ್ಪುಗಳ, ಹಿಂಸೆ-ಅಹಿಂಸೆಗಳ ನಡುವಿನ ಎರಡಾಗಿ ವಿಭಜಿಸುವ ಕ್ರಮವನ್ನು ಇಲ್ಲವಾಗಿಸಿಬಿಡುತ್ತದೆ. ಒಂದು ಮತ್ತೊಂದರೊಳಗೆ ಬೆರೆತು, ಪರಸ್ಪರ ತಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸುವ ನಿಟ್ಟಿನಲ್ಲಿ ಚಲಿಸುತ್ತವೆ. ಈ ಚಲನೆಯು ನಾಟಕದ ಜೀವಾಳ.

ಪ್ರಭುತ್ವದ ವರ್ಣಭೇದ ನೀತಿ, ತಾರತಮ್ಯ -ಅಸಮಾನತೆಯ ವಿರುದ್ಧದ ದನಿಗಳು ಪ್ರೇಕ್ಷಕರ ಸಮೂಹದ ನಡುವಿನಿಂದಲೇ ‘ಪಾತ್ರ’ಗಳಾಗಿ ವೇದಿಕೆ ಪ್ರವೇಶಿಸುತ್ತವೆ. ರಂಗ ಮತ್ತು ನೋಡುಗರ ನಡುವಿನ ‘ಅಂತರ’ವನ್ನು ಕಡಿಮೆ ಮಾಡುವ ಅಥವಾ ಬಹುತೇಕ ‘ಇಲ್ಲ’ವಾಗಿಸುವ ಪ್ರಯತ್ನ ಇದು. ಇದೇನೂ ಹೊಚ್ಚಹೊಸ ಪ್ರಯತ್ನವೇನಲ್ಲವಾದರೂ ಈ ನಾಟಕದ ವಸ್ತುವಿನ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಆಗಿದೆ.

ಮೊದಲ ದೃಶ್ಯದ ಸಂಯೋಜನೆ ವಿಭಿನ್ನವಾಗಿದೆ. ರಂಗದ ಎರಡೂ ಬದಿ ಇಬ್ಬರು ಪೊಲೀಸ್‌ ಸಿಬ್ಬಂದಿ ‘ಹಿಂಸೆ’ಗಾಗಿ ಕಾಯುತ್ತಿದ್ದಾರೆ. ಈ ಕಾಯುವಿಕೆ ಅವರ ಅಸಹನೆಯ ಜೊತೆಗೆ ಸಹಾನುಭೂತಿಗೂ ಕಾರಣವಾಗಿದೆ. ‘ಕಾವ್ಯಾತ್ಮಕ’ ಅನುಭವ ಒದಗಿಸುವ ಸಂಭಾಷಣೆಗಳು ಭಾವನೆಗಳ ಜೊತೆಗೆ ವಿಚಾರಕ್ಕೂ ಅನುವು ಮಾಡಿಕೊಡುತ್ತವೆ. 

ರಂಗವನ್ನು ಪರದೆಯ ಮೂಲಕ ವಿಭಾಗಿಸಿ, ಪರದೆಯಾಚೆಗಿನ ಪ್ರತಿಭಟನೆಗೆ ಹಿಂಬೆಳಕು ನೀಡಿ ತೆರೆಯ ಮೇಲೆ ಕಪ್ಪು-ಬಿಳುಪಾಗಿ ಕಾಣಿಸುವಂತೆ ಮಾಡಿದ್ದು ವಿಶೇಷ. ಈ ಪ್ರತಿಭಟನೆಯು ‘ಆಜಾದಿ’ ಘೋಷಣೆ ಹಾಗೂ ‘ಕಾಗದ ತೋರಿಸುವುದಿಲ್ಲ’ ಎಂಬ ಅಂಶ ಸೇರಿಕೊಳ್ಳುವುದರೊಂದಿಗೆ ಭಾರತೀಯಗೊಂಡಿದೆ. ಮೇಲ್ನೋಟಕ್ಕೆ ವಾಚ್ಯ ಎಂಬಂತೆ ಭಾಸವಾದರೂ, ಅದು ಸಹ್ಯವೂ ಆಗಿದೆ.

ಕತೆಯ ಜೊತೆಗೆ ಬೆಳೆಯುತ್ತ ನಾಟಕವು ಒಂದೊಂದೇ ಮಜಲನ್ನು ದಾಟುತ್ತ ಹೋಗುತ್ತದೆ. ಮೊದಲಿಗೆ ಇದ್ದ ಪ್ರತಿಭಟನೆ- ಆಕ್ರೋಶದ ದನಿಯು ನಂತರದ ದೃಶ್ಯದಲ್ಲಿ ಶಿಫ್ಟ್‌ ಆಗುತ್ತದೆ. ಹಾಗಂತ ಅದು ಮೂಲ ಆಶಯದಿಂದ ದೂರ ಸಾಗುವುದಿಲ್ಲ. ವಿದ್ಯಾರ್ಥಿಗಳು ಒಂದೆಡೆ ಸೇರುವ ಕೆಫೆಯಲ್ಲಿನ ದೃಶ್ಯಗಳು ಜೀವಂತಿಕೆಯಿಂದ ಕೂಡಿವೆ. ಸಂಗೀತ ಪ್ರಧಾನ ನೆಲೆಗೆ ಬರುವುದರ ಜೊತೆಗೆ ಪ್ರತಿಭಟನೆಯಲ್ಲಿ ತನ್ನ ಪಾಲನ್ನೂ ಸೇರಿಸಿಕೊಳ್ಳುತ್ತದೆ. ಪ್ರೀತಿ- ಪ್ರಣಯ- ಆತಂಕ- ಭರವಸೆ- ಹುಡುಕಾಟಗಳ ಕೂಡುತಾಣವಾದ ಕೆಫೆಯು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತದೆ.

ಸ್ಫೋಟದ ಮೂಲಕ ‘ಹಿಂಸೆ’ಯ ಲಯ ಬದಲಿಸುವ ಪ್ರಯತ್ನ, ಅದನ್ನು ಅರಿತು ಸ್ಫೋಟ ತಪ್ಪಿಸಲು ಹೊರಡುವ ಯುವಕ, ಅದಕ್ಕೆ ನಾಟಕ ಒದಗಿಸುವ ಕಾರಣ ‘ತೆಳು’ವಾಗಿದೆ. ಎರಡು ಗಂಟೆಗಳ ಹಿಂದಷ್ಟೇ ಭೇಟಿಯಾದ ‘ಬಿಳಿ’ಯ ಹುಡುಗಿ ಪ್ರೇಯಸಿಯಾಗುತ್ತಾಳೆ. ಪ್ರೇಯಸಿಯ ತಂದೆಯ ಉಳಿಸಲು ವಿಫಲ ಯತ್ನ ನಡೆಸುತ್ತಾನೆ. ಸ್ಫೋಟದಲ್ಲಿ ತಂದೆಯನ್ನು ಮಾತ್ರವಲ್ಲದೆ ಪ್ರಿಯಕರನನ್ನೂ ಕಳೆದುಕೊಂಡ ಯುವತಿಯು ಸಿನಿಮೀಯ ರೀತಿಯಲ್ಲಿ ಪ್ರತಿಭಟಿಸುತ್ತಾಳೆ. ನಾಟಕದ ಒಡಲಲ್ಲಿಯೇ ಈ ತೆಳುವಾದ ರಚನೆ ಇರುವುದರಿಂದ ರಂಗದ ಮೇಲೆಯೂ ಕಾಣಿಸಿಕೊಂಡಿದೆ. ಸಾಹಿತ್ಯ ಕೃತಿಯನ್ನು ರಂಗಪಠ್ಯವಾಗಿಸಿ ಅದನ್ನು ಸಮಕಾಲೀನ ಹಾಗೂ ಭಾರತೀಯಗೊಳಿಸುವ ನಿಟ್ಟಿನಲ್ಲಿ ಅನುವಾದಕರ ಹಾಗೂ ನಿರ್ದೇಶಕರ ಶ್ರಮ ಪರಿಶ್ರಮ ಎದ್ದು ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ನಟರಾಜ ಹೊನ್ನವಳ್ಳಿ ಹಾಗೂ ಎಚ್‌.ಕೆ. ಶ್ವೇತಾರಾಣಿ ಅವರು ಅಭಿನಂದನಾರ್ಹರು.

ನಾಟಕವನ್ನು ವೈಚಾರಿಕತೆಯ ಭಾರದಿಂದ ಕುಸಿಯದಂತೆ ನೋಡಿಕೊಳ್ಳುವ ಪ್ರಯತ್ನವನ್ನು ರಂಗದ ಮೇಲೆ ಅಭಿನಯಿಸಿದ ಕಲಾವಿದರು ಮಾಡಿದ್ದಾರೆ. ನಿರ್ದೇಶಕರ ಆಲೋಚನೆ-ವಿಚಾರಗಳು ಪ್ರದರ್ಶನದ ವೇಳೆ ಲವಲವಿಕೆಯಿಂದ ಸಾಕಾರಗೊಳ್ಳುವಂತೆ ಮಾಡಿದ್ದು ನಟರ ವೃತ್ತಿಪರತೆಗೆ ಸಾಕ್ಷಿಯಂತಿತ್ತು. ಬೆಳಕು-ರಂಗಸಂಯೋಜನೆ-ಸಂಗೀತ-ಪ್ರಸಾಧನ ಪೂರಕವಾಗಿದ್ದವು.

ಕಳೆದ ಕೆಲವು ವರ್ಷಗಳಿಂದ ಹಾಡು-ಕುಣಿತ, ಪುರಾಣ-ಚರಿತ್ರೆಗಳ ಮೂಲಕ ಮನರಂಜನೆ ಕೇಂದ್ರಿತವಾಗಿದ್ದ ‘ನೀನಾಸಂ’ನ ತಿರುಗಾಟದ ನಾಟಕಗಳ ಲಯವನ್ನು ಈ ನಾಟಕ ಬದಲಿಸಿದೆ. ‘ಆ ಲಯ ಈ ಲಯ’ವು ವೈಚಾರಿಕ- ಪ್ರತಿಭಟನೆಯನ್ನು ಸಕಾರಾತ್ಮಕ ನೆಲೆಯಿಂದ ನೋಡಿದ-ನೋಡಬಯಸುವ ಮೂಲಕ ‘ತಿರುಗಾಟ’ವು ತಪ್ಪಿಸಿಕೊಂಡಿದ್ದ ತನ್ನ ಹೆಜ್ಜೆ ಜಾಡಿಗೆ ಮರಳುವ ಪ್ರಯತ್ನದಂತಿದೆ. 

ಭಾರತದ ಇತ್ತೀಚಿನ ಹೋರಾಟ-ಪ್ರತಿಭಟನೆಗಳನ್ನೂ ಸೂಚ್ಯವಾಗಿ ಕಾಣಿಸುವ ಉದ್ದೇಶದ ನಾಟಕವಿದು
ಭಾರತದ ಇತ್ತೀಚಿನ ಹೋರಾಟ-ಪ್ರತಿಭಟನೆಗಳನ್ನೂ ಸೂಚ್ಯವಾಗಿ ಕಾಣಿಸುವ ಉದ್ದೇಶದ ನಾಟಕವಿದು

ಶ್ವೇತಾರಾಣಿ ಎಚ್‌.ಕೆ. ನಿರ್ದೇಶನದ ‘ಆ ಲಯ ಈ ಲಯ’ ನಾಟಕವು ಲೂಯಿ ನಕೋಸಿಯ ರಚನೆ. ಅದನ್ನು ನಟರಾಜ್ ಹೊನ್ನವಳ್ಳಿ ಕನ್ನಡೀಕರಿಸಿದ್ದು, ನವೆಂಬರ್ 8ರಂದು ರಂಗಶಂಕರದಲ್ಲಿ ಪ್ರದರ್ಶಿತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT