ಈ ಅಜ್ಜಿಗೆ ಬರೋಬ್ಬರಿ 96 ವರ್ಷ. ನಡು ಬಾಗಿದೆ, ಚರ್ಮ ಸುಕ್ಕುಗಟ್ಟಿದೆ, ಕೈಗಳು ನಡುಗುತ್ತವೆ, ಕಣ್ಣುಗಳಿಗೆ ಮಂಜು ಆವರಿಸಿದೆ. ಆದರೆ ಮಗ ಕೇಶಪ್ಪ ಹಾರ್ಮೋನಿಯಂ ಹಿಡಿದು ಮಹಾಭಾರತದ ಸನ್ನಿವೇಶವೊಂದರ ಹಾಡನ್ನು ಹಾಡಲು ಆರಂಭಿಸಿದರೆ ಅಜ್ಜಿಯ ಕಿವಿಗಳು ನಿಮಿರುತ್ತವೆ, ಕಣ್ಣುಗಳಲ್ಲಿ ಕಾಂತಿ ಮೂಡುತ್ತದೆ, ಕೈಗಳು ಅರಿವಿಲ್ಲದಂತೆ ಲಾಲಿತ್ಯ ಮಾಡುತ್ತವೆ. ಮಗನಿಗೆ ಕೈಸನ್ನೆ ಮಾಡಿ ತೊಗಲುಗೊಂಬೆ ಕೊಡಲು ಸೂಚಿಸುತ್ತಾರೆ. ಗೊಂಬೆ ಹಿಡಿದು ಏರುಧ್ವನಿಯಲ್ಲಿ ‘ಭೀಮಸೇನ, ಹೀಗೆ ಮಲಗಿ ಬಿಟ್ಟರೆ ಹೇಗಪ್ಪ, ನಿನಗಾಗಿ ನಿನ್ನ ಸಹೋದರರು ಬಾಗಿಲಲ್ಲಿ ಕಾಯ್ದು ನಿಂತಿದ್ದಾರೆ...’ ಎಂದು ಮಾತಿಗೆ ತಕ್ಕಂತೆ ಬೊಂಬೆಗಳನ್ನು ಕುಣಿಸಿದರು! ಇಂತಹ ಭೀಮವ್ವಗೆ ಪದ್ಮಶ್ರೀ ಲಭಿಸಿದೆ.

ಭೀಮವ್ವ ಸಂಕಷ್ಟಗಳನ್ನು ಎದುರಿಸಿದವರು. ತಮ್ಮ ಬಹುತೇಕ ಜೀವನವನ್ನು ಗುಡಿಸಲಿನಲ್ಲಿಯೇ ಕಳೆದರು. ಅವರು ಅನ್ನಕ್ಕಿಂತ ಅಂಬಲಿ ಕುಡಿದು ಮಲಗಿದ ದಿನಗಳೇ ಹೆಚ್ಚು. ಅನಕ್ಷರಸ್ಥೆಯಾದರೂ ಐದನೆ ವಯಸ್ಸಿನಲ್ಲಿಯೇ ಅಪ್ಪನ ಹಾಡಿಗೆ ಧ್ವನಿಗೂಡಿಸಿ ಕಥೆ ಹಾಡು ಕಲಿತ ಜನಪದ ಲೋಕದ ಗಟ್ಟಿಗಿತ್ತಿ. ಈ ಕಲೆ ಮುತ್ತಜ್ಜ, ಅಜ್ಜ, ತಂದೆಯಿಂದ ಬಳುವಳಿಯಾಗಿ ಬಂದಿದೆ. ಮಹಾಭಾರತದ 18 ಪರ್ವಗಳನ್ನು ತಮ್ಮ ಕಂಠದಲ್ಲಿ ತುಂಬಿಕೊಂಡು ಇಡೀ ದಿನ ಹಾಡಿದರೂ, ಕಥೆ ಹೇಳಿದರೂ ಕಂಠ ದಣಿಯುವುದಿಲ್ಲ, ಕಥೆಗಳು ಮುಗಿಯುವುದಿಲ್ಲ. ‘ಆವಾಗೇನ ಬಸ್ ಇದ್ದಿಲ್ಲ, ಹತ್ತಾರು ಮೈಲಿ ಕುಟುಂಬ ಸಮೇತ ನಡೆದುಕೊಂಡೇ ಹೋಗಿ ಗೊಂಬೆ ಆಟ ಪ್ರದರ್ಶನ ಮಾಡಬೇಕಾಗುತ್ತಿತ್ತು. ಗ್ರಾಮದ ಗುಡಿಗಳಲ್ಲಿ ವಾಸಮಾಡಿ ಊರ ಹಿರಿಯರ ಬಳಿ ‘ಗೊಂಬೆ ಆಟ ಆಡಿಸೋಕೆ ಬಂದೀವ್ರಿ’ ಎಂದು ದೈನಾಸಿಯಿಂದ ಕೇಳಿ ಇಡೀ ರಾತ್ರಿ ಆಟ ಮಾಡ್ತಿದ್ವಿ, ಊರ ಜನರು ಕೊಟ್ಟ ಜೋಳ, ಸಜ್ಜಿ ತಗೊಂಡು ಮತ್ತೊಂದು ಊರ ದಾರಿ ತುಳಿಯುತ್ತಿದ್ವಿ, ಹೀಗೆ ಊರೂರು ತಿರುಗುತ್ತಾ ಹೋಗಿ ಮರಳಿ ನಮ್ಮ ಗುಡಿಸಲು ಸೇರಲು ಮೂರ್ನಾಲ್ಕು ತಿಂಗಳು ಆಕ್ತಿತ್ತು’ ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಐದನೆ ವಯಸ್ಸಿನಲ್ಲಿ ಹಸೆಮಣೆ ಏರಿ, 12ನೇ ವಯಸ್ಸಿಗೆ ಗಂಡನ ಮನೆಗೆ ಬಂದರು. ಅಲ್ಲಿಯೂ ಅದೇ ಕುಲಕಸುಬು ಆಗಿದ್ದರಿಂದ ಗಂಡ ದೊಡ್ಡಬಾಳಪ್ಪನ ಜೊತೆ ಹೆಗಲಿಗೆ ಜೋಳಿಗೆ ಹಾಕಿಕೊಂಡು ಕೈಯಲ್ಲಿ ಗೊಂಬೆ ಹಿಡಿದುಕೊಂಡು ಊರೂರು ಸುತ್ತುವುದು ನಡೆಯಿತು.

ಗಂಡನ ಮನೆಗೆ ಬಂದು 12 ವರ್ಷವಾದರೂ ಭೀಮವ್ವಗೆ ಮಕ್ಕಳಾಗಲಿಲ್ಲ. ಅತ್ತೆ, ಮಾವ, ನೆರೆಹೊರೆಯವರು ಬಂಜೆ ಎಂದು ಪಟ್ಟಕಟ್ಟಿದರೂ ಗಂಡ ಮಾತ್ರ ‘ನಮಗೆ ಮಕ್ಕಳೇ ಬೇಡ, ಈ ಗೊಂಬೆಗಳೇ ನಮ್ಮ ಮಕ್ಕಳು’ ಎನ್ನುತ್ತಿದ್ದರು. ಗಂಡನ ಆ ಮಾತು ಭೀಮವ್ವಳಿಗೆ ಮನೋಬಲ ತಂದುಕೊಟ್ಟರೂ ತನ್ನ ಕೈಯಲ್ಲಿದ್ದ ದೇವರ ಬೊಂಬೆಗಳನ್ನು ಹಿಡಿದುಕೊಂಡು ‘ನನ್ನ ಕೈಯಲ್ಲಿ ಕೃಷ್ಣ, ಬಲರಾಮ, ಕರ್ಣ, ಅರ್ಜುನ, ರಾಮ, ಲಕ್ಷ್ಮಣ, ಸೀತಾದೇವಿ ಇದ್ದೀರಿ, ಯಾರ್ಯಾರಿಗೆ ಏನೇನೋ ಕೊಟ್ಟೀರಿ, ಇಷ್ಟು ದಿವಸ ನಿಮ್ಮನ್ನ ನಂಬಿ ನಿಮ್ಮ ಕಥೆ ಹೇಳಿಕೊಂತ ತಿರಗತೀನಿ, ನನ್ನ ಹೊಟ್ಯಾಗ ಯಾಕ ಒಂದು ಕುಡಿ ಬೆಳಸೊಲ್ರಿ’ ಎಂದು ಕಣ್ಣೀರು ಹಾಕುತ್ತಿದ್ದರು. ಬಳಿಕ ಆರು ಮಕ್ಕಳು ಹುಟ್ಟಿದವು. ಈಗ 12 ಜನ ಮೊಮ್ಮಕ್ಕಳು, 10 ಮರಿಮಕ್ಕಳು ಇಬ್ಬರು ಗಿರಿಮೊಮ್ಮಕ್ಕಳನ್ನು ಹೊಂದಿದ ಸಂಸಾರವಾಗಿದ್ದು, ಎಲ್ಲರೂ ತೊಗಲು ಗೊಂಬೆ ಆಟ ಮುಂದುವರೆಸಿದ್ದಾರೆ.

ಪೌರಾಣಿಕ ಕಥೆ ಆಧಾರಿತ ರಾಮಾಯಣ, ಕುರುಕ್ಷೇತ್ರ, ವಿರಾಟ ಪರ್ವ, ಕರ್ಣ ಪರ್ವ, ದ್ರೌಪದಿ ವಸ್ತ್ರಾಪಹರಣ, ಆದಿ ಪರ್ವ ಸೇರಿ ಮಹಾಭಾರತದ 18 ಪರ್ವಗಳನ್ನು ಇವರು ಪ್ರದರ್ಶಿಸುತ್ತಾರೆ.

‘ಕೆಲವೊಂದು ಕಡೆ ಬೆಳತನಕ ಬೊಂಬೆಯಾಟ ಮಾಡಿ ಬರಿಗೈಯಲ್ಲಿ ಬಂದ ಉದಾಹರಣೆಗಳೂ ಇವೆ. ಸಣ್ಣಮಕ್ಕಳನ್ನು ಕಂಕುಳಲ್ಲಿ, ಹೆಗಲ ಮೇಲೆ ಹೊತ್ತುಕೊಂಡು ತಿರುಗುತ್ತಿದ್ವಿ, ಯಾರೋ ಒಬ್ಬರು ಆಕಳು ದಾನ ಕೊಟ್ಟಿದ್ದರು. ಆ ಆಕಳಿನ ಮೇಲೆ ಚೀಲ ಹಾಸಿ ಆಚೀಚೆ ಜೋಳಿಗೆ ಮಾಡಿ ಅದರಲ್ಲಿ ಸಣ್ಣಮಕ್ಕಳನ್ನು ಕೂಡಿಸಿಕೊಂಡು ಹೋಗುತ್ತಿದ್ದೆವು.ಗಾಳಿ, ಮಳೆ, ಬಿಸಿಲು, ಚಳಿ, ಹಸಿವು, ನೋವು, ನಲಿವು ಉಂಡ ಈ ಜೀವ ಹ್ಯಾಗ ಗಟ್ಟಿ ಐತೆ ನೋಡ್ರಿ’ ಎಂದು ತನ್ನ ಬೊಚ್ಚು ಬಾಯಿಯಲ್ಲಿಯೇ ಸಿಹಿ ನಗೆ ಬೀರುತ್ತಾರೆ. ‘ಅದೊಂದು ದಿನ ಪೇಟೆಯಲ್ಲಿ ಹೋಗುತ್ತಿದ್ದಾಗ ನಾವು ಎಳನೀರು ಕೇಳಿದೆವು, ಕೊಡಿಸಲು ಅವ್ವನಲ್ಲಿ ಹಣ ಇದ್ದಿಲ್ಲ, ಜನರು ಕುಡಿದು ಬಿಸಾಕಿದ ಎಳನೀರಿನ ಕಾಯಿಗಳನ್ನು ತಂದು ಅದರಲ್ಲಿನ ಎಳೆ ಕೊಬ್ರಿ ಕೊಟ್ಟು ಸಮಾಧಾನ ಮಾಡಿದ್ದಳು’ ಎಂದು ಮಗ ಕೇಶಪ್ಪ ಹೇಳುವಾಗ ಅಜ್ಜಿಯ ಕಣ್ಣಾಲೆಗಳು ತುಂಬಿ ಬಂದವು.

ಎಂತಹ ಬಡತನವಿದ್ದರೂ ತನ್ನ ಬದುಕಿಗೆ ದಿಕ್ಸೂಚಿಯಾದ ತೊಗಲುಬೊಂಬೆ ಹಿಡಿದು ಮಕ್ಕಳೊಂದಿಗೆ ಪ್ರದರ್ಶನ ಆರಂಭಿಸಿದರೆ ಬದುಕಿನ ನೋವು ಮಾಯವಾಗಿ ಕುರುಕ್ಷೇತ್ರ, ಗದಾಯುದ್ಧ, ಮಹಾಭಾರತ, ರಾಮಾಯಣದ ಪಾತ್ರಧಾರಿಗಳಾಗಿ ನಮಗೇನು ಕಡಿಮೆಯಾಗಿದೆ, ದೇವತೆಗಳೇ ನಮ್ಮ ಕೈಯಲ್ಲಿದ್ದಾರೆ’ ಎಂಬ ಹಮ್ಮುಬಿಮ್ಮಿನಲ್ಲಿಯೇ ಬಹುತೇಕ ಬದುಕು ಕಳೆದಿದ್ದಾರೆ.

ಗಂಡ ತೀರಿಕೊಂಡ ನಂತರ ತೊಗಲುಬೊಂಬೆ ಆಟದ ಪೂರ್ಣ ಜವಾಬ್ದಾರಿ ಭೀಮವ್ವ ಮೇಲೆ ಬಿತ್ತು. ಆಗ ಅವರ ಆಸ್ತಿ ಎಂದರೆ ಒಂದು ಗುಡಿಸಲು, ಬೊಂಬೆ, ಹಾರ್ಮೋನಿಯಂ, ಡೊಲಕ್, ತಾಳ ಮಾತ್ರ. ಬದುಕಿಗೆ ಆಧಾರವಾಗಿದ್ದ ಅವುಗಳನ್ನೇ ನಂಬಿಕೊಂಡು ಮಕ್ಕಳಿಗೆ ಹಾಡು, ತಾಳ, ಕಥೆಯ ಪಾಠ ಮಾಡಿ ಕಲಿಸಿ ಅವರೊಂದಿಗೆ ಬೊಂಬೆ ಆಟಕ್ಕೆ ಹೋಗುತ್ತಿದ್ದರು.

ಭೀಮವ್ವ ತೊಗಲುಬೊಂಬೆ ಆಟ ಆಡಿಸಿದರೆ ಮಳೆ ಬರುತ್ತದೆ ಎಂಬ ಪ್ರತೀತಿ ಇದ್ದ ಕಾರಣ ಬೊಂಬೆ ಪ್ರದರ್ಶನದ ಬಳಿಕ ಗ್ರಾಮಸ್ಥರು ಉಡಿತುಂಬ ಕಾಳು ತುಂಬಿ ಕಳಿಸುತ್ತಿದ್ದರು. ರಾಶಿಯ ಸಮಯದಲ್ಲಿ ಆಯ್ದಭಾಗಗಳಲ್ಲಿ ಪ್ರದರ್ಶನ ಮಾಡುತ್ತಿದ್ದರು. 70ರ ದಶಕದಲ್ಲಿ ಭೀಕರ ಬರಗಾಲದ ಸಮಯದಲ್ಲಿ ಒಂದು ಹೊತ್ತಿನ ಅನ್ನಕ್ಕೂ ಕಷ್ಟಪಟ್ಟಿದ್ದಾರೆ. ‘ಮಕ್ಕಳಿಗೆ ಅನ್ನ ಮಾಡಿ ಹಾಕಿ ಗಂಜಿ ಕುಡಿದು ಮಲಗುತ್ತಿದ್ದೆವು. ಮಳೆಗಾಲದಲ್ಲಿ ಗೊಂಬೆಯಾಟ ನಡೆಯದೆ ಭಿಕ್ಷಾಟನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾಗಿತ್ತು’ ಎಂದು ಹೇಳುವಾಗ ಅವರ ಕಂಠ ಬಿಗಿಯಾಗಿತ್ತು.

2008ರಲ್ಲಿ ಭಾರಿ ಮಳೆ-ಗಾಳಿಗೆ ಭೀಮವ್ವರ ಗುಡಿಸಲು ಕೊಚ್ಚಿ ಹೋಯಿತು. ‘ಗುಡಿಸಲು ಹಾರಿ ಹೋದದ್ದು, ಬಟ್ಟೆ, ಧಾನ್ಯ ನೀರಿನೊಂದಿಗೆ ತೇಲಿಹೋದದ್ದು ನನಗೆ ದುಃಖವಾಗಲಿಲ್ಲ, ಆದರೆ ನನ್ನ ತುತ್ತಿಗೆ ಕಾರಣವಾಗಿದ್ದ ಸಾಕಷ್ಟು ತೊಗಲುಬೊಂಬೆಗಳು ಹಾಳಾಗಿ ಹೋಗಿದ್ದು ದುಃಖವಾಗಿತ್ತು’ ಎಂದು ಹೇಳುವ ಅವರು ನಾಲ್ಕು ವರ್ಷಗಳ ಹಿಂದೆ ಪುಟ್ಟದೊಂದು ಮನೆ ನಿರ್ಮಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.