ಈ ವರ್ಷ ಸುವರ್ಣ ಮಹೋತ್ಸವದಲ್ಲಿರುವ ಕಾಂತಾವರ ಕನ್ನಡ ಸಂಘದ ಹೆಜ್ಜೆಗಳು ಪ್ರತಿಯೊಬ್ಬ ಕನ್ನಡಿಗನಿಗೂ ಸ್ಫೂರ್ತಿಯಾಗುವಂತಿದೆ. ವೈದ್ಯಕೀಯ ಪದವಿ ಪಡೆದರೆ ಸಾಲದು, ತಾನು ಗಳಿಸಿದ ಜ್ಞಾನದಿಂದ ಅಗತ್ಯ ಇರುವವರಿಗೆ ನೆರವು ದೊರೆಯಬೇಕು ಎಂಬ ಸದಾಶಯ ಹೊಂದಿದ್ದ ಯುವಕ, ಗ್ರಾಮೀಣ ಪ್ರದೇಶದ ಜನರ ಸೇವೆಯನ್ನೂ ಕನ್ನಡಮ್ಮನ ಸೇವೆಯನ್ನೂ ನಿಸ್ವಾರ್ಥವಾಗಿ ಮಾಡುತ್ತ ಸಾಗಿದ ಸುಂದರ ಹಾದಿಯಿದು.

ಕಾರ್ಕಳದ ಗ್ರಾಮೀಣ ಪ್ರದೇಶದಲ್ಲಿ ತಾಲ್ಲೂಕು ಬೋರ್ಡ್ ನಡೆಸುವ ಗ್ರಾಮೀಣ ಚಿಕಿತ್ಸಾಲಯಕ್ಕೆ ವೈದ್ಯಾಧಿಕಾರಿಯಾಗಿ 1965ರ ನವೆಂಬರ್ 1ರಂದು ಬಂದ ನಾರಾಯಣ ಮೊಗಸಾಲೆ ಅವರ ಕಾಯಕದ ಹಾದಿಯಿದು. ಅವರ ಹುಟ್ಟೂರು ಕಾಸರಗೋಡಿನ ಕೋಳ್ಯೂರು. ಸ್ವಭಾವತಃ ಓದು–ಬರಹ ಸಾಹಿತ್ಯ ಸಂವಾದಗಳ ಹವ್ಯಾಸ ಹೊಂದಿದ್ದ ಅವರಿಗೆ ಈ ಪ್ರದೇಶದಲ್ಲಿಯೇ ಕನ್ನಡದ ಸಂಘಟನೆಯೊಂದನ್ನು ಸ್ಥಾಪಿಸಿದರೆ ಹೇಗೆ ಎಂಬ ಆಲೋಚನೆ ಮೊಳಕೆಯೊಡೆಯಿತು. ತಮ್ಮಂತೆಯೇ ಆಲೋಚಿಸುವ ಸಹೃದಯರನ್ನು ಸೇರಿಸಿಕೊಂಡು ಅವರು ಕಾಂತಾವರ ಕನ್ನಡ ಸಂಘವನ್ನು ಔಪಚಾರಿಕವಾಗಿ 1976ರ ಮೇ 26ರಂದು ರೂಪಿಸಿದರು. ಹೀಗೆ ನಾ.ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಂಘದ ಪಯಣವು ಆರಂಭವಾಯಿತು. ಅದೇ ವರ್ಷದ ದಸರಾ ಸಾಹಿತ್ಯೋತ್ಸವದ ಸಮಯದಲ್ಲಿ ಸಂಘವನ್ನು ಅಧಿಕೃತವಾಗಿ ಉದ್ಘಾಟಿಸಿದವರು ಕವಿ ಎಸ್.ವಿ. ಪರಮೇಶ್ವರ ಭಟ್ಟರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ, ಬೆಳುವಾಯಿ, ಕಾಂತಾವರ, ಬೋಳ, ಕೆದಿಂಜೆ ಮತ್ತು ನಂದಳಿಕೆ ಎಂಬ ಐದು ಗ್ರಾಮಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಿದ ಸಂಘವು ಕಳೆದ ಐವತ್ತು ವರ್ಷಗಳಲ್ಲಿ ಇಡೀ ರಾಜ್ಯದ ಗಮನ ಸೆಳೆಯುವಷ್ಟರ ಮಟ್ಟಿಗೆ ಬೆಳೆಯಿತು. ಕನ್ನಡ ಸಾಹಿತ್ಯ ಲೋಕವೇ ಗಮನಿಸುವಂತಹ ಕೆಲಸಗಳನ್ನು ಮಾಡಿತು. ಜನಪ್ರಿಯತೆಗೆ ಮಾರು ಹೋಗದ ಕನ್ನಡ ಸಂಘವು ಮೊತ್ತ ಮೊದಲು ಶ್ರೀಮಂತ ಕನ್ನಡ ಸಾಹಿತ್ಯ ಪರಂಪರೆಯನ್ನು ಜನಸಾಮಾನ್ಯರಿಗೆ ಪರಿಚಯಿಸುವ ಕೆಲಸ ಕೈಗೆತ್ತಿಕೊಂಡಿತು. ಏಕೀಕರಣದ ನೇತಾರ ಕಾಂತಾವರ ಬಾರಾಡಿ ಬೀಡಿನ ಜಿನರಾಜ ಹೆಗ್ಡೆ ಅವರ ನೆನಪಿನಲ್ಲಿ ಕನ್ನಡ ಭವನವೊಂದು ನಿರ್ಮಾಣವಾದಾಗ ಸಂಘದ ಇಂತಹ ಚಟುವಟಿಕೆಗಳಿಗೆ ಆಸರೆ ದೊರೆತಂತಾಯಿತು.

ಕನ್ನಡ ಸಂಘದ ಕಾರ್ಯವ್ಯಾಪ್ತಿಯು ಇರುವ ನಂದಳಿಕೆಯು ಕವಿ ಮುದ್ದಣನ ಹುಟ್ಟೂರು ತಾನೇ? ತಾನು ಬರೆದ ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಗದೇ ಮುದ್ದಣ ಕಷ್ಟಪಡಬೇಕಾಗಿ ಬಂದ ಕಥೆ ಸಾಹಿತ್ಯಪ್ರಿಯರಿಗೆ ಗೊತ್ತೇ ಇದೆ. ಆದರೆ ಹೊಸ ಕವಿಗಳಿಗೆ ಇಂತಹ ಕಷ್ಟ ಆಗಬಾರದು ಎಂಬ ಉದ್ದೇಶದಿಂದ, ಜೊತೆಗೆ ಮುದ್ದಣನ ನೆನಪು ಸದಾಕಾಲ ಹಸಿರಾಗಿರುವಂತೆ, 1978ರಲ್ಲಿ ಸಂಘವು ಕಾವ್ಯದ ಹಸ್ತಪ್ರತಿಗಳನ್ನು ಆಹ್ವಾನಿಸಿ, ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ನೀಡಲಾರಂಭಿಸಿತು. ಅದಾದ ಬಳಿಕ ತಲಾ ಹತ್ತು ಸಾವಿರ ರೂಪಾಯಿ ನಗದಿನ ಹನ್ನೊಂದು ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಿ ಕನ್ನಡದ ಕೈಂಕರ್ಯ ಮಾಡುತ್ತಿರುವವರನ್ನು ಗುರುತಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಬೀದರ್ನಿಂದ ಹಿಡಿದು ಕಾಸರಗೋಡಿನವರೆಗೆ ಪ್ರತಿಭಾವಂತ ಕವಿಗಳನ್ನು ಗುರುತಿಸುವ ಕೆಲಸವನ್ನು ಕನ್ನಡ ಸಂಘ ಮಾಡುತ್ತಿದೆ.

ಸಹೃದಯರೊಡನೆ ಸಂವಾದ ಸಂಘದ ಮತ್ತೊಂದು ಆಶಯ. ಇದರ ಸಾಕಾರಕ್ಕಾಗಿ ಪ್ರತೀ ತಿಂಗಳು ಕನ್ನಡ ಭವನದಲ್ಲಿ ‘ನುಡಿನಮನ’ ಎಂಬ ಉಪನ್ಯಾಸ ಮಾಲಿಕೆಯನ್ನು 2008ರಲ್ಲಿ ಆರಂಭಿಸಲಾಯಿತು. ಕನ್ನಡ ನಾಡಿನ ಪ್ರಸಿದ್ಧ ಸಾಹಿತಿಗಳು ಕಾಂತಾವರಕ್ಕೆ ಬಂದು ಸಾಹಿತ್ಯ ಕೃತಿಗಳ ಕುರಿತು, ಹೊಸ ಪರಿಕಲ್ಪನೆಗಳ ಕುರಿತು ಉಪನ್ಯಾಸ ನೀಡಿದರು. ಕೋವಿಡ್ ಸೋಂಕಿನ ಸಂದರ್ಭ ಹೇರಿದ ಲಾಕ್ಡೌನ್ ನಂತರ ಈಗ ಈ ಉಪನ್ಯಾಸವನ್ನು ಕಾರ್ಕಳದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಿರಂತರವಾಗಿ ಆಯೋಜಿಸಲಾಗುತ್ತಿದೆ. ಇದುವರೆಗೆ 189ಕ್ಕೂ ಹೆಚ್ಚು ಉಪನ್ಯಾಸಗಳು ನಡೆದಿದ್ದು ಕನ್ನಡ ಸಂಘದ ಬದ್ಧತೆಗೆ ಸಾಕ್ಷಿಯಾಗಿದೆ.

ಮೈಸೂರು ರಾಜ್ಯವೆಂಬ ನಾಮಕರಣವಾದ ಸುವರ್ಣ ವರ್ಷಾಚರಣೆಯನ್ನು 2006ರಲ್ಲಿ ರಾಜ್ಯದಾದ್ಯಂತ ಸಂಭ್ರಮಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘವು ಮೂವತ್ತನೇ ವರ್ಷದ ಸಂಭ್ರಮದಲ್ಲಿ ಹತ್ತಾರು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿತು. ಈ ಯುಗಳ ಸವಿನೆನಪಿಗಾಗಿ ‘ನಾಡಿಗೆ ನಮಸ್ಕಾರ’ ಎಂಬ ಪುಸ್ತಕ ಮಾಲೆಯ ಪ್ರಕಟಣೆಗೆ ಕಾಂತಾವರ ಕನ್ನಡ ಸಂಘವು ಶ್ರೀಕಾರ ಹಾಕಿತು. ಈ ಕೃತಿಹಾರಕ್ಕೆ ಈಗಾಗಲೇ 369 ಪುಸ್ತಕಗಳು ಸೇರಿದ್ದು ಪ್ರಕಟಣೆಯ ಕಾರ್ಯ ಮುಂದುವರೆದಿದೆ. ಆರಂಭಿಕ ವರ್ಷಗಳಲ್ಲಿ ಸಾಹಿತಿ ವಿ.ಗ.ನಾಯಕ್ ಅವರ ಸಂಪಾದಕತ್ವದಲ್ಲಿ ನಡೆದ ಈ ಗ್ರಂಥ ಸಂಪಾದನೆಯ ಕೆಲಸ ನಂತರ ಡಾ.ಬಿ. ಜನಾರ್ದನ ಭಟ್ ಅವರ ಸಂಪಾದಕತ್ವದಲ್ಲಿ ಮುಂದುವರೆಯುತ್ತಿದೆ. ಮೂವತ್ತು ಪುಸ್ತಕಗಳನ್ನು ಪ್ರಕಟಿಸುವ ಸೀಮಿತ ಉದ್ದೇಶದೊಂದಿಗೆ ಆರಂಭವಾದ ಈ ಪುಸ್ತಕ ಮಾಲೆಯು ಬಹಳಷ್ಟು ಜನಪ್ರಿಯವಾಯಿತು. ಎಲೆಮರೆಯ ಕಾಯಿಯಂತೆ ಇರುವ ಅನೇಕ ಸಾಧಕರ ಹೆಜ್ಜೆಗಳನ್ನು ದಾಖಲಿಸುವುದಕ್ಕೆ ಇದೊಂದು ಮಾಧ್ಯಮವಾಯಿತು. ಪ್ರಕಟಣೆಯ ಕಾರ್ಯ ಇಂದಿಗೂ ಮುಂದುವರೆದಿದೆ.

ಕಾಂತಾವರ ಕನ್ನಡ ಸಂಘವು ಸುವರ್ಣ ಮಹೋತ್ಸವ ಆಚರಿಸುವ ಹುಮ್ಮಸ್ಸಿನಲ್ಲಿದೆಯಾದರೂ ಪ್ರಸ್ತುತ ಹತ್ತಾರು ಸವಾಲುಗಳನ್ನು ಎದುರಿಸುತ್ತಿದೆ. ಸಾಮಾನ್ಯವಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನ ಸಾಂಸ್ಕೃತಿಕ ಉತ್ಸವಾದಿಗಳಿಗೆ ಸೀಮಿತವಾಗಿರುತ್ತದೆ. ಕನ್ನಡ ಸಂಘವು ವಿಚಾರ ಸಂಕಿರಣ, ಉಪನ್ಯಾಸ ಮಾಲಿಕೆ, ಪುಸ್ತಕ ಪ್ರಕಟಣೆ, ಕನ್ನಡದ ಸೇವೆ ಮಾಡುವವರನ್ನು ಗೌರವಿಸುವ ಕಾಯಕಗಳನ್ನೇ ಉದ್ದೇಶವಾಗಿರಿಸಿಕೊಂಡಿರುವುದರಿಂದ ಸರ್ಕಾರಿ ಅನುದಾನ ಪಡೆಯುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕನ್ನಡ ಭವನದ ನಿರ್ವಹಣೆಯನ್ನು ಅನಿವಾರ್ಯವಾಗಿ ಕಾಂತಾವರ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಹಾಗೆಂದು ಸುವರ್ಣ ಸಂಭ್ರಮದ ಅಪರೂಪದ ಕ್ಷಣಗಳನ್ನು ಸಂಭ್ರಮಿಸದೇ ಇರಲಾದೀತೇ. ವರ್ಷಪೂರ್ತಿ ಕಾರ್ಯಕ್ರಮಗಳ ರೂಪರೇಶೆಯೊಂದಿಗೆ ಸಂಘವು ಕನ್ನಡದ ಧ್ವಜ ಹಿಡಿದು ಸಿದ್ಧವಾಗಿದೆ. ಪ್ರೋತ್ಸಾಹದ ನಿರೀಕ್ಷೆಯಲ್ಲಿದೆ.

ಉತ್ಸಾಹಿ ಯುವಕರ ಸಂಖ್ಯೆಯೇ ಕಡಿಮೆ

‘ನಾನು ಸಂಘವನ್ನು ಆರಂಭಿಸಿದಾಗ ನನ್ನಂತೆಯೇ ಉತ್ಸಾಹಿಗಳಾದ ಸಮಾನ ಮನಸ್ಕ ಯುವಕರು ಸಾವಿರಾರು ಮಂದಿಯಿದ್ದರು. ಹಾಗಾಗಿ ಈ ಪಯಣ ಕಷ್ಟವೇನೂ ಆಗಲಿಲ್ಲ. ಆದರೆ ಈಗ ಕನ್ನಡದ ಕೆಲಸ ಮಾಡುವ ಉತ್ಸಾಹಿ ಯುವಕರ ಸಂಖ್ಯೆಯೇ ಕಡಿಮೆಯಾಗಿದೆ. ಅಂದು ದೇಣಿಗೆ ನೀಡುತ್ತಿದ್ದ ಸಾಹಿತ್ಯಪ್ರೀತಿಯ ಉದ್ಯಮಿಗಳು ಇಂದು ಒಬ್ಬೊಬ್ಬರಾಗಿಯೇ ಮರೆಯಾಗುತ್ತಿದ್ದಾರೆ. ಮಕ್ಕಳ ಸಂಖ್ಯೆ ಕೊರತೆಯಿಂದಾಗಿ ಸ್ಥಳೀಯ ಶಾಲೆಗಳು ಮುಚ್ಚುತ್ತಿವೆ. ಕನ್ನಡಮ್ಮನನ್ನು ಪ್ರೀತಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅನಿಸತೊಡಗಿದೆ. ಮುಂದೇನು ಎಂಬ ಸ್ಪಷ್ಟತೆಯಿಲ್ಲ. ಆದಾಗ್ಯೂ ಸುವರ್ಣ ಸಂಭ್ರಮದ ರೂಪರೇಶೆಗಳು ಸಿದ್ಧವಾಗಿವೆ. ಕಷ್ಟಕರ ಪರಿಸ್ಥಿತಿ ಎದುರಾಗಿದೆ ಎಂದರೆ ಇನ್ನಷ್ಟು ಹೆಚ್ಚು ಕೆಲಸ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅಲ್ಲವೇ?

-ಡಾ.ನಾ.ಮೊಗಸಾಲೆ ,ಅಧ್ಯಕ್ಷರು ಕಾಂತಾವರ ಕನ್ನಡ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.