ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಟೇಸ್ವಾಮಿಯ ಮಂಗಳ ಪದ

Published 1 ಸೆಪ್ಟೆಂಬರ್ 2024, 0:23 IST
Last Updated 1 ಸೆಪ್ಟೆಂಬರ್ 2024, 0:23 IST
ಅಕ್ಷರ ಗಾತ್ರ

ಮೈಸೂರು, ಮಂಡ್ಯ, ಚಾಮರಾಜನಗರ ಪ್ರದೇಶಗಳಲ್ಲಿ ತುಂಬ ಪ್ರಸಿದ್ಧವಾದ ಜನಪದ ಮಹಾಕಥನ ಮಂಟೇಸ್ವಾಮಿಯದು. ಮಂಟೇಸ್ವಾಮಿ, ಮಲೆಯ ಮಹದೇಶ್ವರ ಸಂತರ ಮೇಲಿನ ಈ ಬಗೆಯ ವೈವಿಧ್ಯಮಯ, ಗದ್ಯಪದ್ಯ, ಸಂಭಾಷಣಾ ಮಾದರಿಯ ದೀರ್ಘ ಕಥನಗಳು ಭಾರತದ ಬೇರಾವ ಭಾಷೆಯಲ್ಲೂ ಇಲ್ಲ. ದೀಕ್ಷೆ ತೆಗೆದುಕೊಂಡು ಈ ಕಾವ್ಯಗಳನ್ನು ಶ್ರಮದಿಂದ ಕಲಿತು ಶತಮಾನಗಳಿಂದ ಹಾಡುತ್ತಲೇ ಬಂದ ನೀಲಗಾರರು, ಗುಡ್ಡರು ದಕ್ಷಿಣ ಕರ್ನಾಟಕದಲ್ಲಿ ಅಸಂಖ್ಯಾತವಾಗಿ ಕಾಣಸಿಗುತ್ತಾರೆ. ಇವರು ಸಂಸಾರಸ್ಥರು, ಕಾಯಕಜೀವಿಗಳು. ಈ ಭಾಗದ ಲಕ್ಷಾಂತರ ಜನ ನಂಬಿದ ಸಂತರು ಇತರೇ ಶ್ರೀಮಂತ ದೈವಗಳಂತೆ ಭವ್ಯ ದೇವಾಲಯಗಳಲ್ಲಿ ವಾಸಿಸುವುದಿಲ್ಲ. ವಚನಕಾರರ ಸಂದರ್ಭದಲ್ಲಿ ಹುಟ್ಟಿಕೊಂಡ ಶೂನ್ಯ ಅಥವಾ ಬಯಲ ಆಲಯದವರು.

ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳು ಬೇರೆಬೇರೆಯ ಕಲಾವಿದರಿಂದ ಹಾಡಲ್ಪಟ್ಟು ಅವು ವಿಶ್ವವಿದ್ಯಾನಿಲಯಗಳಿಂದಲೋ, ಖಾಸಗಿಯಾಗಿಯೋ ಕಳೆದ ದಶಕಗಳಲ್ಲಿ ಅಂದರೆ 1973 ರಿಂದ ಜೀಶಂಪ, ತಮಂಪ ಮೂರ್ತಿ, ಪಿ.ಕೆ.ರಾಜಶೇಖರ, ವೆಂಕಟೇಶ ಇಂದುವಾಡಿ, ಹಿ. ಚಿ. ಬೋರಲಿಂಗಯ್ಯ ಅವರಿಂದ ಪ್ರಕಟಗೊಂಡು ಬಂದಿವೆ. ಒಂದು ಕಾಲಕ್ಕೆ ಜಾನಪದ ಅಂದರೆ ಅದು ತ್ವರಿತಗತಿಯಲ್ಲಿ ಸಂಗ್ರಹವಾಗಬೇಕು, ಪ್ರಕಟವಾಗಬೇಕು, ತರಗತಿಗಳಲ್ಲಿ ಪಠ್ಯವಾಗಬೇಕು ಎಂಬೆಲ್ಲ ಉದ್ದೇಶಗಳಿದ್ದವು. ಆದರೆ ಇದರ ಜೀವಂತಿಕೆ ಇರುವುದು ಹಾಡುಗಾರಿಕೆಯಲ್ಲೇ! ಅದರಲ್ಲೂ ಮಂಟೇಸ್ವಾಮಿ ಕಾವ್ಯ ಗಾಯನ ಮಾತ್ರ ತುಂಬ ಸುಶ್ರಾವ್ಯವಾದುದು. ಅದರ ಅರ್ಥವ್ಯಾಪ್ತಿಯೂ ಅಷ್ಟೆ.

ಕಣ್ಣಿಗೆ ಕಾಣುವ ಬೆಳಕು, ಆಮೇಲೆ ಅದರ ಮುಂದುವರೆದ ಪರಂಜ್ಯೋತಿ ರೂಪು, ಇದರ ಪ್ರಸ್ತಾಪದಿಂದ ತೊಡಗಿ, ಆ ದಿವ್ಯಜ್ಯೋತಿ ಬಡವಬಲ್ಲಿದ, ಅರಮನೆ ಗುರುಮನೆ, ಹೆತ್ತವರು ಸತ್ತವರ ಮನೆಯಲ್ಲದೆ ಕಡೆಗೆ ತಿಪ್ಪೆ ಮೇಲೆ ಹಚ್ಚಿ ಇಟ್ಟರೂ ಉರಿಯುತ್ತ, ಅದಕ್ಕೆ ಭಿನ್ನ ಭೇದ ಗುಣವೇ ಇಲ್ಲವೆಂಬ ಪ್ರಾರ್ಥನೆಯೊಡನೆ ಆರಂಭವಾಗುತ್ತದೆ. ನಂತರದಲ್ಲಿ ಉತ್ತರದಿಂದ ದಕ್ಷಿಣದ ಕಡೆಗೆ ಮಂಟೇಸ್ವಾಮಿಯ ಪ್ರಯಾಣದಿಂದ ಕಥೆ ತೊಡಗುತ್ತದೆ. ಎಲ್ಲ ಶಿಷ್ಟ, ಜನಪದ ಕಾವ್ಯ ನಾಯಕರ ಪಡಿಪಾಟಲು ದೀರ್ಘ ಪ್ರಯಾಣದ ಕಥೆಯೇ! ದಕ್ಷಿಣ ಕರ್ನಾಟಕದ ಜನಪದರು 15ನೆಯ ಶತಮಾನದಲ್ಲಿ ಆಗಿಹೋದ ಈ ಸಂತರನ್ನು 12ನೆಯ ಶತಮಾನದ ಬಸವಾದಿ ಶರಣರೊಡನೆ ಸಮೀಕರಿಸಿಕೊಂಡು ಕಥೆ ಕಟ್ಟಿಬಿಟ್ಟಿದ್ದಾರೆ!

ಎರಡು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭಗೊಂಡ ಮಂಟೇಸ್ವಾಮಿ ಅಧ್ಯಯನ ಪೀಠದ ವತಿಯಿಂದ ಆ ಕಾವ್ಯವನ್ನು ಪೂರ್ಣವಾಗಿ ಶ್ರವ್ಯ–ದೃಶ್ಯರೂಪದಲ್ಲಿ ಸಂಗ್ರಹಿಸಬೇಕೆಂಬ ಪ್ರಯತ್ನ ನಡೆಯಿತು. ಆಗ ದಿನಕ್ಕೆ ನಾಲ್ಕೈದು ಗಂಟೆಗಳಂತೆ ಜನಪದ ಗಾಯಕ ಮೈಸೂರು ಗುರುರಾಜ್ ಸಹ ಗಾಯಕರೊಡನೆ ಅರಿವು ಶಾಲೆಯಲ್ಲಿ ಹಾಡಿದರು. ಆಗ ಮಂಟೇಸ್ವಾಮಿ ಅಧ್ಯಯನ ಪೀಠದ ಚಟುವಟಿಕೆಗಳೆಲ್ಲ ನಡೆದದ್ದು ಮೈಸೂರು ವಿ. ವಿ ಯ ಭಾಗವೇ ಆಗಿದ್ದ ಚಾಮರಾಜನಗರದ ಸ್ನಾತಕೋತ್ತರ ಕೇಂದ್ರದಲ್ಲಿ.

ಅರಿವು ಕನ್ನಡ ಶಾಲೆಯಲ್ಲಿ ಕೊನೆಯ ದಿನ ಮಂಟೇಸ್ವಾಮಿ ಹಾಡುಗಾರಿಕೆ ಮುಗಿದಾಗ ರಾತ್ರಿ ಎರಡು ಗಂಟೆ. ಗಾಯಕ ಗುರುರಾಜ್ ಮಂಟೇಸ್ವಾಮಿ ಕಂಡಾಯ ತರಿಸಿ, ಪೂಜೆ ಮಾಡಿಸಿ, ಸುತ್ತೆಲ್ಲ ಧೂಪದ ಪರಿಮಳ ಹಬ್ಬಿಸಿ ಎಲ್ಲ ದೈವದ ಸ್ತುತಿಯ ಮಂಗಳ ಪದ ಹಾಡತೊಡಗಿದರು. ಆ ಪದದ ಕೊನೆಯ ವಾಕ್ಯ ‘... ಬಡವನಾ ಮನೆಯ ಮಗನೊಬ್ಬ ಓದಿ ಮೂಜಗವು ಕೊಂಡಾಡುತಿರೆ…’ ಎಂದು ಕೇಳಿಸಿತು. ಸಂಗ್ರಹ ಕಾರ್ಯದಲ್ಲಿದ್ದ ಎಂ.ಸಿ. ಮನೋಹರ್, ಚಲಪತಿ, ಮುಳ್ಳೂರು ರಾಜು ಅವರ ನಿದ್ದೆಯ ಕಣ್ಣು ಅರಳಿಬಿಟ್ಟವು. ಅರೆ 500 ವರ್ಷಗಳ ಹಿಂದಣ ಈ ಕಥನದಲ್ಲಿ ನಿನ್ನೆ ಮೊನ್ನೆಗೆ ಬಂದ ಅಂಬೇಡ್ಕರ್ ಅವರ ಹೆಸರು ಸೇರಿಕೊಂಡದ್ದು ಹೇಗೆ ಅನಿಸಿತು. ಅದಕ್ಕೆ ಗುರುರಾಜ್‌, ‘ನಮ್ಮ ತಂದೆ ಹಾಡುತ್ತಿದ್ದರು, ನಾನೂ ಹಾಡಿದೆ’ ಅಂದರು. ಆಶ್ಚರ್ಯ, ಅಕ್ಷರ ಪರಿಚಯ ಇಲ್ಲದಿದ್ದ ಗುರುರಾಜರ ತಂದೆ ಗುರುಬಸವಯ್ಯ ಈ ವಾಕ್ಯವನ್ನು ಕಟ್ಟಿ ಸೇರಿಸಿಕೊಂಡುಬಿಟ್ಟಿರಬಹುದೇ ಅನ್ನಿಸಿತು.

ಉಳ್ಳವರು ಮತ್ತು ಅಧಿಕಾರ ಮದದವರನ್ನು ಎದುರು ಹಾಕಿಕೊಳ್ಳುತ್ತ; ಇದೆ ಎಂದು ಮೆರೆಯುವವರ ಎದೆ ಮೇಲೆ ಕಂಡಾಯ ಮಡಗಿ ಮೆಟ್ಟಿದ ಮಂಟೇಸ್ವಾಮಿ ಕಲ್ಯಾಣದಲ್ಲಿ ಅಲ್ಲಮನ ರೂಪಾಗಿ ಬಸವಣ್ಣನನ್ನು ಭೇಟಿ ಮಾಡಿದನಂತೆ? 12ನೇ ಶತಮಾನದ ಈ ಮಂಟೇಸ್ವಾಮಿ ಬಸವಣ್ಣನನ್ನು ಎದುರುಗೊಂಡು ಕರಸ್ಥಲ ಇಲ್ಲವೇ ಕಟ್ಟಿಕೊಂಡ ಲಿಂಗಕ್ಕಿಂತ ಆತ್ಮಲಿಂಗವೇ ದೊಡ್ಡದೆಂದು ಹೇಳಿದನಂತೆ. ತನಗಿಂತ 300 ವರ್ಷಗಳ ಅಂತರದ ಬಸವಣ್ಣನನ್ನು ಮಂಟೇಸ್ವಾಮಿ ಭೇಟಿಯಾದದ್ದು ಹೇಗೆಂಬ ಪ್ರಶ್ನೆಯನ್ನು ಓದುಗರು ಕೇಳಿಯೇ ಕೇಳುತ್ತಿದ್ದಾರೆ. ಆದರೆ ನಮ್ಮ ಕವಿಗಳಿಗೆ, ಜನಪದರಿಗೆ ಕಾಲದ ಪರಿಗಣನೆ ಎಂದರೆ ಅದರಲ್ಲಿ ವಿಂಗಡಣೆಯೇ ಇರುವುದಿಲ್ಲವಲ್ಲ! ಎಲ್ಲ ಶತಮಾನದ ಮಹಾ ಪುರುಷರೊಂದಿಗೆ ಆಯಾ ಕಾಲದ ಪ್ರಾಜ್ಞರು, ಸಂತರು ಸಂಭಾಷಿಸುತ್ತಲೇ ಬಂದಿದ್ದಾರೆ. ಕುಮಾರವ್ಯಾಸ, ವ್ಯಾಸಮಹರ್ಷಿಯನ್ನು ತನ್ನ ತಂದೆ ಎಂತಲೇ ಹೇಳಿಕೊಂಡಿದ್ದಾನಲ್ಲ!

ಯಾವ ಘನವಾದುದೂ ಕಳೆದುಹೋಗುವಂಥದ್ದಲ್ಲ, ಅದು ಎಲ್ಲ ಕಾಲಕ್ಕೂ ನಮ್ಮೆದುರು ಇದ್ದೇ ಇರುವಂಥದ್ದು. ಅದರೊಡನೆ ಚರ್ಚೆಗೆ ತೊಡಗದೇ ಹೋದರೆ ಮಾನವಶಾಸ್ತ್ರ,ಇತಿಹಾಸ, ಸಮಾಜಶಾಸ್ತ್ರ ಇವು ಅರ್ಥವಾಗುವುದು ಹೇಗೆ? ಕಾಲ್ಪನಿಕತೆಯಲ್ಲೂ, ಪುರಾಣ ಸಂಗತಿಗಳಲ್ಲೂ, ಪವಾಡಗಳಲ್ಲೂ ಸತ್ಯದ ಬೀಜ ಅಡಗಿಯೇ ಇರುತ್ತದೆ. ಈ ಕ್ರಮದಲ್ಲಿ ಮಂಟೇಸ್ವಾಮಿ ಕಾವ್ಯ 12ನೇ ಶತಮಾನದ ಶರಣರೊಡನೆ 20ನೇ ಶತಮಾನದ ಅಂಬೇಡ್ಕರ್ ಅವರನ್ನೂ ನೆನಪು ಮಾಡಿಕೊಳ್ಳುತ್ತದೆ. ಜನಪದವೆಂಬುದು ಯಾವಾಗಲೂ ತೆರೆದ ಪಠ್ಯ. 20 ಗಂಟೆಗಳ ಇಂಥದೊಂದು ದೀರ್ಘ ನಾಟಕೀಯ ಕಾವ್ಯವನ್ನು ಅದರ ದೃಶ್ಯ–ಶ್ರವ್ಯ ರೂಪದಲ್ಲಿ ಸಂಗ್ರಹಿಸಲಾಗಿದೆ. ಈ ಕಾವ್ಯ ಹಾಡುತ್ತ ಬದುಕಿ ಬಂದ ನೀಲಗಾರರ ಸುಖ ದುಃಖ ಸಂಗತಿಗಳ ಜೀವನ ಕಥನಗಳನ್ನೂ‘ನಾವು ಕೂಗುವಾ ಕೂಗು’ ಎಂಬ ಶೀರ್ಷಿಕೆಯಲ್ಲಿ ಸಂಗ್ರಹಿಸಲಾಯಿತು. ಇದರಲ್ಲಿ ಪ್ರಸಿದ್ದ ಗಾಯಕ ಮಳವಳ್ಳಿ ಮಹದೇವಸ್ವಾಮಿಯವರ ಜೀವನ ಕಥನವೂ ಸೇರಿದೆ. ‘ಧರೆಗೆ ದೊಡ್ಡವರ ಏಳು ಪಠ್ಯಗಳ’ ಕುರಿತಾದ ವಿಶ್ಲೇಷಣಾ ಕೃತಿಯನ್ನೂ ಸಿದ್ಧಗೊಳಿಸಲಾಯಿತು. ಮಂಟೆಸ್ವಾಮಿಯ ನೆಲೆಗಳ 9 ಸುಂದರ ಚಿತ್ರಪಟಗಳೊಂದಿಗೆ, ಕಾವ್ಯದ ವಿಶ್ವಾತ್ಮಕ ಪ್ರಾರ್ಥನಾ ಪದ್ಯವನ್ನೂ ಶಿಲಾಫಲಕದಲ್ಲಿ ಕೆತ್ತಿಸಿ ಇಡಲಾಯಿತು. ಆದರೆ ಪೂರ್ಣ ಪ್ರಮಾಣದಲ್ಲಿ ಕೃತಿಗಳು ಪ್ರಕಟವಾಗದೆ 2 ವರ್ಷಗಳಿಂದ ಈ ಸಂಬಂಧದ ಚಟುವಟಿಕೆಗಳಿಗೆ ಇನ್ನಿತರ ತಾಂತ್ರಿಕ ಕಾರಣಗಳಿಂದ ಮಂಗಳ ಹಾಡಲಾಗಿದೆ. ಪೀಠಕ್ಕೆ ಹೊಸಬರು ನೇಮಕಗೊಂಡಿಲ್ಲ. ಇದರ ಕಾರ್ಯಚಟುವಟಿಕೆಗಳಿಗೆ ಮಳವಳ್ಳಿ ಆದಿ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಮಠದ ಹಿರಿಯರು ಸಹಕರಿಸಲು ಸಿದ್ಧರಿದ್ದಾರೆ. ಇದನ್ನು ಸ್ವೀಕರಿಸುವವರು ಯಾರು?

ಸಂತೋಷದ ಸಂಗತಿ ಎಂದರೆ ಗ್ರಾಮಗಳಲ್ಲಿ ಈ ಹೊತ್ತಿಗೂ ಜನ ತಾವು ಇಷ್ಟಪಡುವ ಗಾಯಕರನ್ನು ಕರೆಸಿ ತಮಗೆ ಬೇಕಾದ ಕಾವ್ಯ ಭಾಗವನ್ನು ಕೇಳುತ್ತ ಬರುತ್ತಿರುವಲ್ಲಿಯೇ, ಶ್ರೀರಂಗಪಟ್ಟಣದ ನಿರ್ದಿಗಂತದ ಕಲಾವಿದೆ ಸನ್ನುತ ಶಾಲೋಮ್ 20 ಗಂಟೆಗಳ ಸಂಗ್ರಹದ ಮೊದಲ ಭಾಗ ಕಲ್ಯಾಣ ಪಟ್ಟಣದ ಸಾಲನ್ನು ಚಾರು ಸಂಸ್ಥೆಯ ವತಿಯಿಂದ ಪೂರ್ಣ ಕಲಿತು ಮೈಸೂರಿನಲ್ಲಿ ಪ್ರದರ್ಶನ ನೀಡುತ್ತಿರುವುದು; ಕೇಳುಗರ ಮುಂದೆ ಪರಂಜ್ಯೋತಿ ಬೆಳಕನ್ನು ಸೂಸಿಬಿಟ್ಟಂತಾಗಿದೆ. ಪ್ರವೇಶ ದರ ಕೊಟ್ಟು ಮಂಟೇಸ್ವಾಮಿಯ ಈ ಕಾವ್ಯ ಪ್ರಯೋಗವನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಕಥನದ ಮಂಗಳ ಪದ ‘ನಾವು ಕೂಗುವಾ ಕೂಗು ನಿಮ್ಮ ಪಾದಕ್ಕರುವಾಗಲಪ್ಪಾ’ ಎಂಬ ವಾಕ್ಯವನ್ನು ‘ನಾವು ಹಾಡುವಾ ಹಾಡು ನಿಮ್ಮ ಪಾದಕ್ಕರುವಾಗಲಪ್ಪಾ’ ಎಂದು ಹಾಡುವಲ್ಲಿ ತಲೆದೂಗುತ್ತಿದ್ದಾರೆ. ಹಳೆ ಬೇರಿನಿಂದ ಹೊಸ ಚಿಗುರು ಪಲ್ಲವಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT