ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಈಚೆಗೆ ಹುಲಿ ಮತ್ತು ನಾಲ್ಕು ಮರಿಗಳು ವಿಷಪ್ರಾಷನದಿಂದ ಮೃತಪಟ್ಟವು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಆಯಿತು. ಈ ದುರಂತಕ್ಕೆ ಕಾರಣಗಳೇನು? ಅರಣ್ಯ ಇಲಾಖೆ ರಕ್ಷಣೆಯಲ್ಲಿ ಎಡವಿತೆ? ಹಾಗೆಯೇ ಈ ಘಟನೆ ಹುಲಿ ಸಂರಕ್ಷಣೆಗೆ ಹಿನ್ನಡೆಯೇ? ಈ ಕುರಿತಾದ ವಿಶ್ಲೇಷಣೆ ಇಲ್ಲಿದೆ.

‘ಮಲೆ ಮಹದೇಶ್ವರ ಕಾಡಿನಲ್ಲಿ ಐದು ಹುಲಿಗಳ ಸಾವು’ ಇದೊಂದು ಸೂಕ್ಷ್ಮ ಮನಸ್ಸುಗಳನ್ನು ತೀವ್ರವಾಗಿ ಕಲಕಿದ ಘಟನೆ.

ಮಾಧ್ಯಮಗಳು ರಾಷ್ಟ್ರಮಟ್ಟದಲ್ಲಿ ಈ ಸುದ್ದಿಯನ್ನು ವಿವರವಾಗಿ ಬಿತ್ತರಿಸಿದವು. ಕಾಡಿಗೆ ಸಂಬಂಧಿಸಿದ ವಿಷಯಗಳನ್ನು ಮಾಧ್ಯಮಗಳು ಇಷ್ಟು ಗಂಭೀರವಾಗಿ ಪರಿಗಣಿಸಿದ ಉದಾಹರಣೆಗಳನ್ನು ನಾವು ಕಂಡಿಲ್ಲ.

2004ರಲ್ಲಿ ರಾಜಸ್ಥಾನದ ಸರಿಸ್ಕಾ ಹುಲಿಧಾಮದಲ್ಲಿ ಕಳ್ಳ ಬೇಟೆಗಾರರು ಕಾಡಿನಲ್ಲಿದ್ದ ಎಲ್ಲಾ ಹುಲಿಗಳನ್ನು ನಿರ್ನಾಮ ಮಾಡಿದಾಗ ಕೂಡ ಮಾಧ್ಯಮಗಳು ವಿಷಯವನ್ನು ಇಷ್ಟು ತೀವ್ರವಾಗಿ ಪರಿಗಣಿಸಿರಲಿಲ್ಲ. ಇತ್ತೀಚಿಗೆ ನಿಕೋಬಾರ್ ದ್ವೀಪವೊಂದರಲ್ಲಿ ಅದಾನಿ ಸಂಸ್ಥೆ 33,000 ಎಕರೆ ಕಾಡನ್ನು ನೆಲಸಮಗೊಳಿಸಿ ಅಲ್ಲಿ ನೆಲೆಸಿದ್ದ ‘ಶಾಂಪೆನ್’ ಬುಡಕಟ್ಟು ಜನಾಂಗವನ್ನು ವಿನಾಶದಂಚಿಗೆ ತಳ್ಳಿದಾಗಲೂ ದೊಡ್ಡ ಸುದ್ದಿಯಾಗಲಿಲ್ಲ.

ಆದರೆ, ಈ ಐದು ಹುಲಿಗಳ ಸಾವಿಗೆ ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯರಾಗಿರುವ ಕೋಟಿ ಕೋಟಿ ಜನರ ಪ್ರತಿಕ್ರಿಯೆಗಳು ತೀವ್ರವಾಗಿದ್ದವು.

ಹಂತಕರನ್ನು ಬಂಧಿಸಬೇಕೆಂದು, ವಿಚಾರಣೆ ಇಲ್ಲದೆ ಅವರನ್ನು ಗಲ್ಲಿಗೇರಿಸಬೇಕೆಂಬ ಕಠಿಣ ಮಾತುಗಳು ಎಲ್ಲೆಲ್ಲೂ ಹರಿದಾಡಿದವು. ಆದರೆ ದೂರದಲ್ಲೆಲ್ಲೋ ಕುಳಿತು ಘಟನೆಗಳನ್ನು ನಿಷ್ಠುರವಾಗಿ ಖಂಡಿಸಿ, ಪರಿಹಾರ ಸೂಚಿಸುವ ಈ ಭಾವನಾತ್ಮಕ ಬರಹಗಳಲ್ಲಿ ಲೋಪದೋಷಗಳೇ ಹೆಚ್ಚಾಗಿರುತ್ತವೆ. ಹಾಗಾಗಿ ವಿಶ್ಲೇಷಣೆಗಳು ಬಹಳಷ್ಟು ಬಾರಿ ಅರ್ಥ ಕಳೆದುಕೊಳ್ಳುತ್ತವೆ.

ಮಲೆ ಮಹದೇಶ್ವರ ಕಾಡಿನ ಹುಲಿಗಳ ಸಾವಿನ ಪ್ರಕರಣದಲ್ಲಿ ಸಹ ನಿಜ ಸ್ಥಿತಿ ಏನೆಂದು ಅರಿಯಲೆತ್ನಿಸಿದರೆ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ. ಹುಲಿ ಹಿಡಿದ ದನಕ್ಕೆ ಅಲ್ಲಿ ಮಾಲೀಕನೇ ಇಲ್ಲ! ಮಾಲೀಕರಿಲ್ಲದ ದನಗಳೆಂದರೇನು? ಅವು ಎಲ್ಲಿಂದ ಬಂದವು? ಏಕೆ ಬಂದವು? ಮಾಲೀಕನಿಲ್ಲದ ದನಗಳಿಗೆ ಅರಣ್ಯ ಇಲಾಖೆ ಪರಿಹಾರ ನೀಡುವುದಾದರೂ ಹೇಗೆ? ಹಾಗಾದರೆ ವಿಷ ಹಾಕಿದವರು ಯಾರು? ಅವರ ಹಿನ್ನೆಲೆ ಏನು?

ಅಲ್ಲದೇ, ಕಾಡಿನಲ್ಲಿ ಗಸ್ತು ತಿರುಗುವ ಮಂದಿಯ ಗಮನಕ್ಕೆ, ರಸ್ತೆಗೆ ಕೇವಲ 200–300 ಅಡಿ ದೂರದಲ್ಲಿದ್ದ ಹಸುವಿನ ಕಳೇಬರ ಕಂಡುಬರಲಿಲ್ಲವೆಂದರೆ ಹೇಗೆ? ಇದು ವೃತ್ತಿಪರತೆ ಇಲ್ಲದ ಬೇಜವಾಬ್ದಾರಿತನ ಎಂದು ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಜರಿಯುವುದು ಸಾಮಾನ್ಯವಾಗಿತ್ತು.

ಇಲ್ಲಿ ವಾಸ್ತವತೆಯನ್ನು ಸ್ವಲ್ಪ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಮಲೆ ಮಹದೇಶ್ವರ ಧಾಮದ ವಿಸ್ತೀರ್ಣ 900 ಚದರ ಕಿಲೋಮೀಟರ್. ಕಾಡಿನ ಗಸ್ತು ತಿರುಗುವ ಕೆಲಸಕ್ಕೆ ನೇಮಕಗೊಂಡಿರುವ ನೌಕರರು 195 ಮಂದಿ. ಅಂದರೆ ಇಬ್ಬರು ಜೊತೆಗೂಡಿ ಪ್ರತಿ ದಿನ 2,000 ಎಕರೆ ಕಾಡನ್ನು ಸುತ್ತಬೇಕು. ದಿನಕ್ಕೆ 40–50 ಕಿಲೋಮೀಟರ್ ದೂರವನ್ನು ನಡಿಗೆಯಲ್ಲಿ ಕ್ರಮಿಸ
ಬೇಕಾಗುತ್ತದೆ. ಇದು ಸಾಧ್ಯವಾಗಬಹುದಾದ ಕೆಲಸವೆ? ಈ ಹಿನ್ನೆಲೆಯಲ್ಲಿ, ನಡೆದು ಸಾಗುವಾಗ ಅಕ್ಕಪಕ್ಕ ಸರಿದು ಹುಲ್ಲುಪೊದೆಗಳ ಒಳಗೆ ಪರಿಶೀಲಿಸುವುದು ಆಗದ ಮಾತು. ಅದೃಷ್ಟವಶಾತ್ ಗಾಳಿ ವಿಮುಖವಾಗಿ ಬೀಸುತ್ತಿರುವಾಗ ಕಳೇಬರಗಳು ಕೊಳೆತು ವಾಸನೆ ಬಂದಲ್ಲಿ ಗ್ರಹಿಸಲು ಸಾಧ್ಯ. ಒಂದು ಪಕ್ಷ ರಸ್ತೆಯ ಮೇಲೆ ಘಟನೆ ಸಂಭವಿಸಿ ಯಾವುದಾದರೂ ಗುರುತುಗಳು ದಾಖಲಾಗಿದ್ದಲ್ಲಿ ಮಾತ್ರ ಸಣ್ಣ ಸೂಚನೆ ದೊರಕಬಹುದು. ಆ ವಿವರಗಳನ್ನು ಅರಿಯಲು ಅಗಾಧ ಅನುಭವ ಬೇಕಾಗುತ್ತದೆ.

ಜೊತೆಗೆ ಬೇಟೆಯಾಡಿದ ಪ್ರಾಣಿಯನ್ನು ಹುಲಿ ಚಿರತೆಗಳು ಪೊದೆಯೊಳಗೆ ಅಡಗಿಸಿಡುವುದು ಸಾಮಾನ್ಯ ಸ್ವಭಾವ. ಮುಂಗಾರುವಿನಲ್ಲಿ ಗಿಡಮರಗಳು ಚಿಗುರೊಡೆದು ಪೊದೆಗಳು ಹರಡಿ ಕಾಡು ದಟ್ಟವಾಗಿರುತ್ತದೆ. ಆಗಂತು ಕತ್ತಲು ಕೋಣೆಯಲ್ಲಿ ಕಪ್ಪು ಬೆಕ್ಕು ಹುಡುಕುವ ಕೆಲಸವಾಗಿಬಿಡುತ್ತದೆ. ಕೆಲವೊಮ್ಮೆ ಕಾಡಿನಲ್ಲಿ ದೈತ್ಯಾಕಾರದ ಆನೆ ಸಾವನ್ನಪ್ಪಿದಾಗಲೂ ಕೂಡ ಅದರ ಕುರುಹು ಸುಲಭದಲ್ಲಿ ಸಿಗುವುದಿಲ್ಲ.

ಕಾಗೆಯೋ, ಹಂದಿಯೋ, ಮುಂಗುಸಿಯೋ ಕಳೇಬರವನ್ನು ಮೊದಲಿಗೆ ಪತ್ತೆ ಹಚ್ಚಬೇಕು. ಇವುಗಳ ಮೂಲಕ ರಣಹದ್ದಿಗೆ ಸೂಚನೆ ಸಿಗಬೇಕು. ನಂತರ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಆದಿವಾಸಿಗಳಿಗೋ ಅಥವಾ ಅರಣ್ಯ ಇಲಾಖೆಯ ವಾಚರ್ಗಳಿಗೋ ತಿಳಿಯಬೇಕು.

ಮಲೆ ಮಹದೇಶ್ವರ ಕಾಡಿನೊಳಗೆ ಒಟ್ಟು ಹತ್ತೊಂಬತ್ತು ಹಳ್ಳಿಗಳಿವೆ. ಇಲ್ಲಿ ಐವತ್ತೊಂದು ಸಾವಿರ ಜನ ನೆಲೆಸಿದ್ದಾರೆ. ಅವರ ಬಳಿ 35,000ಕ್ಕೂ ಹೆಚ್ಚು ಜಾನುವಾರುಗಳಿವೆ. (ಇದು ಎಂಟು ವರ್ಷಗಳ ಹಿಂದಿನ ಅಂಕಿಅಂಶ).

ಇದರ ಹೊರತಾಗಿ 30,000ಕ್ಕೂ ಹೆಚ್ಚು ದನಗಳು ನೆರೆಯ ತಮಿಳುನಾಡಿನಿಂದ ಅಕ್ರಮವಾಗಿ ಕಾಡನ್ನು ಪ್ರವೇಶಿಸುತ್ತವೆ. ಈ ದನಗಳೇಕೆ ಇಲ್ಲಿಗೆ ಬರುತ್ತವೆ. ಅವುಗಳ ಆರೈಕೆ ಮೇಲ್ವಿಚಾರಣೆ ನೋಡಿಕೊಳ್ಳುವವರು ಯಾರು? ಈ ಪ್ರಶ್ನೆಗಳು ದೊಡ್ಡ ಜಾಲವನ್ನು ತೆರೆದಿಡುತ್ತವೆ. ಮಲೆ ಮಹದೇಶ್ವರ ಕಾಡಿಗೆ ಸೇರಿದಂತಿರುವ ತಮಿಳುನಾಡಿನ ನೆರೆಯ ಕಾಡುಗಳು ಹುಲಿ ಯೋಜನೆಗಳಾಗಿ
ಘೋಷಿಸಲ್ಪಟ್ಟಿವೆ. ಹುಲಿ ಯೋಜನೆಯಲ್ಲಿ ಜಾನುವಾರು ನಿಷಿದ್ಧ. ಇದರಿಂದಾಗಿ ದನಗಳನ್ನು ಕಳ್ಳ ರಸ್ತೆಗಳ ಮೂಲಕ ಕರ್ನಾಟಕದ ಕಾಡಿನೊಳಗೆ ತರುವುದು ವಾಡಿಕೆ. ಇದನ್ನು ತಡೆಗಟ್ಟಲು ನಮ್ಮ ಅರಣ್ಯ ಇಲಾಖೆಗೆ ಸಿಬ್ಬಂದಿಯ ಕೊರತೆ.

ಹೀಗೆ ಬರುವ ದನಗಳಿಂದ ಮಲೆ ಮಹದೇಶ್ವರ ಕಾಡಿನಲ್ಲಿ ನೆಲೆಸಿರುವ ಕೆಲವು ಮಂದಿಗೆ ಉದ್ಯೋಗ, ವ್ಯಾಪಾರ ತೆರೆದುಕೊಳ್ಳುತ್ತದೆ. ದನಗಳನ್ನು ಕಾಡಿನಲ್ಲಿ ಮೇಯಿಸುವ ಹೊಣೆಗಾರಿಕೆ ಇವರದಾಗಿರುತ್ತದೆ. ಈ ಕೆಲಸಕ್ಕೆ ಅಲ್ಪಸ್ವಲ್ಪ ಹಣ ದಕ್ಕುತ್ತದೆ. ಕಾಡಿನಲ್ಲಿ ಅವುಗಳಿಗೆ ಮೇವು, ನೀರು ಪೂರೈಸುವುದು ಸಮಸ್ಯೆಯಾಗುವುದಿಲ್ಲ. ಮುಂಜಾನೆ ಅವುಗಳನ್ನು ಕಾಡಿಗೆ ಬಿಟ್ಟು ಸಂಜೆಗೆ ಮನೆ ಬಳಿಯ ಕೊಟ್ಟಿಗೆಯ ಆವರಣದಲ್ಲಿ ಕೂಡುವುದಷ್ಟೇ ಅವರ ಕೆಲಸ. ಅಲ್ಲಿ ಬೀಳುವ ಸಗಣಿಯನ್ನು ಗುಡ್ಡೆ ಮಾಡಿ ವರ್ಷಕೊಮ್ಮೆ ತಮಿಳುನಾಡಿನ ರೈತರಿಗೆ ಮಾರಾಟ ಮಾಡುವುದು ಮುಖ್ಯ ಆಕರ್ಷಣೆ. ಈ ವ್ಯವಹಾರದಲ್ಲಿ ತೊಡಗಿದ ಪ್ರತಿ ಕುಟುಂಬ ವಾರ್ಷಿಕವಾಗಿ ಸರಾಸರಿ ಎರಡರಿಂದ ಮೂರು ಲಕ್ಷ ಆದಾಯ ಗಳಿಸುತ್ತದೆ.

ಇದೇ ಹಿನ್ನೆಲೆಯಲ್ಲಿ ಅಲ್ಲಿಯ ಜನ ಮತ್ತು ಜನಪ್ರತಿನಿಧಿಗಳು ಮಲೆ ಮಹದೇಶ್ವರ ಹುಲಿ ಯೋಜನೆ ಅನುಷ್ಠಾನವನ್ನು ವಿರೋಧಿಸಿದರೆಂಬ ಆರೋಪವಿದೆ. ಈ ಯೋಜನೆ ಅನುಷ್ಠಾನಗೊಂಡರೆ ಈ ಕಾರ್ಯಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು ಎಂಬುವುದು ಅವರ ಆಲೋಚನೆ.

ಆದರೆ ಅಲ್ಲಿನ ಅಪ್ಪಟ ರೈತರ ಕಷ್ಟವೆಂದರೆ ಬೆಳೆದ ಬೆಳೆಯನ್ನು ಆನೆ ಮತ್ತು ಕಾಡುಹಂದಿಗಳಿಂದ ರಕ್ಷಿಸಿಕೊಳ್ಳುವುದು. ಇದು ತೀರ ಸವಾಲಿನ ಕೆಲಸ. ಇದರಿಂದಾಗಿ ಚಂಗಡಿ ಗ್ರಾಮದ 150 ಕುಟುಂಬಗಳು ಸೂಕ್ತ ಪರಿಹಾರದೊಂದಿಗೆ ಪರ್ಯಾಯ ಕೃಷಿ ಭೂಮಿ ನೀಡಿ ಸ್ಥಳಾಂತರಿಸುವಂತೆ ಅರ್ಜಿ ಸಲ್ಲಿಸಿದ್ದವು. ಆದರೆ ಎಂಟು ವರ್ಷ ಕಳೆದರೂ ಕಣ್ಣಿಲ್ಲದ, ಕಿವಿ ಕೇಳದ ವ್ಯವಸ್ಥೆ ಇಂದಿಗೂ ಆ ಮನವಿಗೆ ಸ್ಪಂದಿಸಿಲ್ಲ.

ಚಂಗಡಿಯ ಗ್ರಾಮದ ಮಂದಿಗೆ ಸರ್ಕಾರ ರೂಪಿಸಬಹುದಾದ ಪುನರ್ವಸತಿ ಯೋಜನೆಯನ್ನು ಹಲವಾರು ಹಳ್ಳಿಗಳ ಜನ ಕುತೂಹಲದಿಂದ ಎದುರು ನೋಡುತ್ತಿದ್ದರು. ಅದು ಯಶಸ್ವಿಯಾದರೆ ತಾವು ಸಹ ಕಾಡಿನಿಂದ ಹೊರನಡೆದು ಹೊಸ ಬದುಕನ್ನು ಕಟ್ಟಿಕೊಳ್ಳುವ ಭರವಸೆ ಹೊಂದಿದ್ದರು. ಇದು ಕಾರ್ಯರೂಪಕ್ಕೆ ಬಂದಿದ್ದರೆ ಕಾಡುಜೀವಿಗಳ ಬದುಕು ಹಸನಾಗುತ್ತಿತ್ತು. ರೈತರ ಭವಿಷ್ಯ ಉಜ್ವಲವಾಗುತ್ತಿತ್ತೆಂದು ಅಲ್ಲಿಯ ರೈತ ಮುಖಂಡ ಹೊನ್ನೂರು ಪ್ರಕಾಶ್ ನೆನಪಿಸಿದರು.

ಇಂಥ ಯೋಜನೆಗಳು ಕಾರ್ಯಗತವಾಗಬೇಕಾದರೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ನೆರವು ಕೂಡ ಅತ್ಯಗತ್ಯ. ಆದರೆ ಇಂಥ ಕೆಲಸದಲ್ಲಿ ಯಾವ ಸರ್ಕಾರಗಳಿಗೂ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಕಾಡಿನ ಬಗ್ಗೆಯಾಗಲಿ, ಕಾಡು ಜೀವಿಗಳ ಬಗ್ಗೆಯಾಗಲಿ, ಕಲ್ಮಶವಿಲ್ಲದೆ ಹರಿಯುವ ನದಿ ಅಥವಾ ಶುದ್ಧ ಗಾಳಿಯ ಬಗ್ಗೆ ನಂಬಿಕೆ ಇಲ್ಲವಾದಾಗ ಏನು ಮಾಡಲು ಸಾಧ್ಯ? ಹುಲಿ ಯೋಜನೆಗಳ ಕಾಡುಗಳಿಗೆ ಪ್ರತಿ ವರ್ಷ ನೀಡುವ ಅನುದಾನವನ್ನು ಕೇಂದ್ರ ಕ್ರಮೇಣ ಕಡಿತಗೊಳಿಸುತ್ತಿದೆ. ಹುಲಿ ಯೋಜನೆಯೊಳಗಿನ ವ್ಯಾಪ್ತಿಯಲ್ಲಿ ಪುನರ್ವಸತಿ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಆದರೆ ಪ್ರತಿ ವರ್ಷ ವನ್ಯಜೀವಿ ಸಪ್ತಾಹ ಬಂದಾಗ, ತಮ್ಮ ಅವಧಿಯಲ್ಲಿ ವೃದ್ಧಿಯಾದ ಹುಲಿಗಳ ಸಂಖ್ಯೆಯನ್ನು ಪ್ರಸ್ತಾಪಿಸಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತದೆ. ಅಥವಾ ಇಂಥ ದೊಡ್ಡ ದುರಂತಗಳಾದಾಗ ಕೆಲವು ಅಧಿಕಾರಿಗಳನ್ನು ಅಮಾನತುಗೊಳಿಸಿ ಕೈತೊಳೆದುಕೊಳ್ಳುತ್ತದೆ.

ಇಲ್ಲಿ ಸ್ಥಳೀಯರ ಬದುಕು ಸುಧಾರಿಸಿದಾಗಷ್ಟೇ ಕಾಡು ಚಿಗುರುತ್ತದೆ. ಹಕ್ಕಿಗಳು ಹಾಡುತ್ತವೆ. ಕಾಡು ಸಂಭ್ರಮಿಸುತ್ತದೆ. ಆಗ ಕಾಡಿನ ಮೌನ ಮಾತನಾಡುತ್ತದೆ. ಇದು ಸರಳವಾದ ಸತ್ಯ. ಬೆವರು ಸುರಿಸಿ ಬೆಳೆದ ಬೆಳೆಯನ್ನು ಕಳೆದುಕೊಂಡು, ಬದುಕಿಗೆ ಕನಿಷ್ಠ ಸೌಲಭ್ಯ
ಗಳಿಲ್ಲದೆ ರೈತರು ಬದುಕು ನಡೆಸುತ್ತಿರುವುದು ವಾಸ್ತವ ಸ್ಥಿತಿ. ಕಾಡು ಪ್ರಾಣಿಗಳೇ ಅವರ ಪಾಲಿಗೆ ವೈರಿಗಳಾಗಿವೆ.

ಇದರ ಆಧಾರದ ಮೇಲೆ ಮಲೆ ಮಹದೇಶ್ವರ ಕಾಡಿನ ಭವಿಷ್ಯವನ್ನು ರೂಪಿಸಲು ಅಚ್ಚುಕಟ್ಟಾದ ಪುನರ್ವಸತಿ ಯೋಜನೆಯೊಂದೇ ಶಾಶ್ವತ ಪರಿಹಾರ. ಆದರೆ ಇಲ್ಲಿ ಸ್ಥಳೀಯ ರೈತರ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ಇರಬೇಕಾಗುತ್ತದೆ.

ಈ ಚರ್ಚೆಯನ್ನು ಆರಂಭಿಸಿದ ಮೂಲ ಉದ್ದೇಶ ಹುಲಿ ದನವನ್ನು ಬೇಟೆಯಾಡಲು ಕಾರಣಗಳೇನಿರಬಹುದೆಂಬುದನ್ನು ಪ್ರಾಮಾಣಿಕವಾಗಿ ಯೋಚಿಸುವುದು. 900 ಚದರ ಕಿಲೋಮೀಟರ್ ವ್ಯಾಪ್ತಿಯ ಕಾಡಿನಲ್ಲಿ 65 ಸಾವಿರಕ್ಕೂ ಹೆಚ್ಚು ಜಾನುವಾರುಗಳು ದಿನವಿಡೀ ಮೇಯ್ದು ವಾಪಸಾದರೆ, ಜಿಂಕೆ, ಕಡವೆ, ಕಾಡೆಮ್ಮೆಗಳಂತಹ ಸಸ್ಯಹಾರಿ ಪ್ರಾಣಿಗಳಿಗೆ ಆಹಾರವೇ ಉಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವು ಬದುಕಿ ಸಂತಾನ ವೃದ್ಧಿಸುವುದು ಹೇಗೆ? ಇವುಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದಂತೆ ಹುಲಿಗಳ ದೈನಂದಿನ ಬದುಕಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹಾಗಾದಾಗ ಅವು ಜಾನುವಾರುಗಳನ್ನು ಬೇಟೆಯಾಡುವುದು ಅನಿವಾರ್ಯವಾಗುತ್ತದೆ.

ಹುಲಿಗಳ ಈ ಅಸಹಾಯಕತೆಯನ್ನು 2017ರಲ್ಲಿ ಜರುಗಿದ ಅಧ್ಯಯನ ಅನಾವರಣಗೊಳಿಸುತ್ತದೆ. ಆ ವರದಿಯ ಪ್ರಕಾರ ಆ ದಿನಗಳಲ್ಲಿ ಮೂರು ಮರಿಗಳನ್ನು ಸೇರಿದಂತೆ ಇದ್ದ ಹುಲಿಗಳ ಸಂಖ್ಯೆ ಹತ್ತು. ಈಗ ಜೀವಿಸಿರುವ ಹುಲಿಗಳ ಸಂಖ್ಯೆಯೂ ಹತ್ತು. ಎಂಟು ವರ್ಷಗಳ ಅವಧಿಯಲ್ಲಿ ಅವುಗಳ ಸಂತತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಇದು ಕಾಡಿನಲ್ಲಿರುವ ಸಂಪನ್ಮೂಲಗಳ ಸ್ಥಿತಿಗಳನ್ನು ಸ್ಪಷ್ಟವಾಗಿ ಹೇಳುತ್ತದೆ.

ಇದಲ್ಲದೆ ಮಲೆ ಮಹದೇಶ್ವರ ಕಾಡಿಗೆ ತನ್ನದೇ ಆದ ಮಹತ್ವವಿದೆ. ಕಾವೇರಿ ವನ್ಯಧಾಮ, ಬಿಳಿಗಿರಿರಂಗನ ಬೆಟ್ಟ ಮತ್ತು ನೆರೆಯ ತಮಿಳುನಾಡಿನ ಅರಣ್ಯಗಳಿಗೆ ಇದು ಸಂಪರ್ಕ ಕೊಂಡಿ. ಕಾಡುಗಳ ನಡುವೆ ವೈವಿಧ್ಯಮಯ ಹಾಗೂ ಆರೋಗ್ಯಕರ ಜೀನ್ಗಳು ಪರಿಣಾಮಕಾರಿಯಾಗಿ ಹರಿದಾಡಲು ಇದು ಹೆದ್ದಾರಿ.

ಕಾಡು ಚೇತರಿಸಿಕೊಂಡು ಜೀವ ಸಂಕುಲಗಳು ಸಂಭಾಷಿಸಲು ಆರಂಭಿಸಿದಾಗ, 65 ಸಾವಿರ ಜಾನುವಾರುಗಳ ನಿತ್ಯ ಅಲೆದಾಟದಲ್ಲಿ ಬರಡಾದ ಭೂಮಿ ಮೃದುವಾಗುತ್ತದೆ. ಮಳೆಯ ಹನಿಗಳು ಭೂಮಿಯೊಳಗೆ ಇಳಿದು ಜಲಮೂಲಗಳು ವೃದ್ಧಿಗೊಳ್ಳುತ್ತವೆ. ಝರಿಗಳು ಜಿನುಗಿ ಹರಿದು, ಕಾವೇರಿಗೆ ಧುಮುಕಿ ಕಾಡಿಗಷ್ಟೇ ಅಲ್ಲದೆ ತಮಿಳುನಾಡಿನ ಜನರಿಗೂ ನೆಮ್ಮದಿ ತರುತ್ತದೆ.

ಆದರೆ, ಇಂದಿನ ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಅಲ್ಲಿನ ಹುಲಿಗಳು ನಶಿಸಿಹೋಗಿ ಲಕ್ಷಾಂತರ ಅನುಯಾಯಿಗಳಿರುವ ಶಕ್ತಿದೇವ ಮಹಾದೇವನಿಗೆ ಓಡಾಡಲು ವಾಹನವೇ ಇಲ್ಲದಂತಾಗುತ್ತದೆ. ಖಂಡಿತವಾಗಿ ಹೀಗಾಗುವುದು ಬೇಡ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.