ಹೊಗೆ ಎದ್ದಿರಲಿಲ್ಲ; ಕಿಡಿ ಚಿಮ್ಮುತ್ತಿರಲಿಲ್ಲ. ಸುಟ್ಟ-ಕೆಟ್ಟ ವಾಸನೆ ಇರಲೇ ಇಲ್ಲ. ಪ್ರಾಣಿ- ಪಕ್ಷಿಗಳು ದೂರಕ್ಕೆ ಧಾವಿಸಲು ಚಡಪಡಿಸುತ್ತಿರಲಿಲ್ಲ. ಬದಲಿಗೆ ದೂರದಲ್ಲಿ ಸಂಗೀತ ಇತ್ತು. ಜನಪದ ಹಾಡು, ನಾಟಕ, ನೃತ್ಯಗಳಿದ್ದವು.

ಅಲ್ಲಿನ ಕಾಳ್ಗಿಚ್ಚಿನ ದೃಶ್ಯವನ್ನು ರಂಗಕಲಾ ತಜ್ಞ ಶಶಿಧರ ಅಡಪ ಮತ್ತು ಅವರ ತಂಡದವರು ಸೃಷ್ಟಿಸಿದ್ದರು. ಕಲಾಗ್ರಾಮದ ಬಿದಿರು ಪೊದೆಗಳ ಬುಡದಲ್ಲಿ ಬೆಂಕಿಯ ಬಣ್ಣವನ್ನು ಹೊಮ್ಮಿಸುವ ನಿಯಾನ್ ಫಲಕಗಳನ್ನು ಇಟ್ಟಿದ್ದರು. ಪಕ್ಕದ ರಿಂಗ್ರೋಡ್ನಲ್ಲಿ ಕತ್ತಲನ್ನು ಸೀಳಿ ಸಾಗುವ ವಾಹನ ಸವಾರರಿಗೆ ದಿಗಿಲು ಹುಟ್ಟಿಸುವಷ್ಟು ನೈಜ ಎಂಬಂತೆ ಕಾಡಿನ ಬೆಂಕಿಯ ಚಿತ್ರಣವನ್ನು ಕೊಡುತ್ತಿದ್ದವು.

ಇಲ್ಲೇನೋ ಕಲಾವಿದರ ಕಲ್ಪನೆಯಿಂದಾಗಿ ಹಾಲಿವುಡ್ ಸಿನಿಮಾ ಸೆಟ್ನಂಥ ದೃಶ್ಯ ಇತ್ತು. ಆದರೆ ಕಳೆದ ತಿಂಗಳು ಅಮೆರಿಕದ ಹಾಲಿವುಡ್ನಲ್ಲಿ ಸಹಜ ನೈಸರ್ಗಿಕ ಕಾಳ್ಗಿಚ್ಚಿನಿಂದಾಗಿ ಅನೇಕ ಕಲಾವಿದರ ಮನೆಗಳು ಸುಟ್ಟು ಕರಕಲಾಗಿವೆ. ಅಮೆರಿಕದ ಆಗರ್ಭ ಶ್ರೀಮಂತರಲ್ಲಿ ಅತಿ ಶ್ರೀಮಂತರಾಗಿದ್ದ ಅನೇಕರ ಆಸ್ತಿಪಾಸ್ತಿ ಬೆಂಕಿಗೆ ಆಹುತಿಯಾಗಿವೆ.

ನಮ್ಮಲ್ಲಿ ಸಂಕ್ರಾಂತಿ, ಹೋಳಿ, ಯುಗಾದಿ ಎಂದೆಲ್ಲ ಹಬ್ಬಗಳನ್ನು ಹೆಸರಿಸಿದ ಹಾಗೆ ಅಮೆರಿಕದಲ್ಲಿ ಪಂಚಾಂಗದ ಪ್ರಕಾರ ಬಂದೆರಗುವ ಸುಂಟರಗಾಳಿ (ಸೈಕ್ಲೋನ್, ಟರ್ನಾಡೊ, ಹರಿಕೇನ್)ಗಳಿಗೆ ಹೆಸರುಗಳಿವೆ. ಕಾಳ್ಗಿಚ್ಚಿಗೂ ಹೆಸರುಗಳಿವೆ. ಕೆಲವು ವರ್ಷಗಳಲ್ಲಿ ಅವು ರುದ್ರ, ಇನ್ನು ಕೆಲವು ವರ್ಷಗಳಲ್ಲಿ ಅತಿರುದ್ರ ರೂಪ ತಾಳುತ್ತವೆ. ಈ ವರ್ಷ ದಾಳಿ ಮಾಡಿದ್ದು ‘ಈಟನ್ ಫಾಯರ್’ ಮತ್ತು ‘ಪ್ಯಾಲಿಸೇಡ್ ಫಾಯರ್’ ಹೆಸರಿನ ಕಾಳ್ಗಿಚ್ಚುಗಳು. ಯುರೋಪ್, ಆಸ್ಟ್ರೇಲಿಯಾದಲ್ಲೂ ವಾರ್ಷಿಕ ಬೆಂಕಿಗಳಿಗೆ ನಾಮಕರಣ ಮಾಡಲಾಗಿದೆ.

ಕಾಳ್ಗಿಚ್ಚು ಹೈಜಂಪ್ ಮಾಡುತ್ತವೆ ಗೊತ್ತೆ? ಬೆಂಕಿ ತಾನಿದ್ದ ಸ್ಥಳದಿಂದ 10-15 ಕಿ.ಮೀ. ದೂರಕ್ಕೂ ಕುಪ್ಪಳಿಸುತ್ತದೆ. ಬೆಂಕಿ ಬಂತೆಂದರೆ ಅದರ ಝಳ ತಾಳದೆ ಪ್ರಾಣಿ ಪಕ್ಷಿಗಳು ದೂರ ಧಾವಿಸಲು ಯತ್ನಿಸುತ್ತವೆ. ಅವನ್ನೆಲ್ಲ ಅಟ್ಟಿಸಿಕೊಂಡು ಹೋಗುವ ಹಾಗೆ ಬೆಂಕಿಯ ಕಿಡಿಗಳೂ ಕೆಂಡಗಳೂ ಆ ಭಾರೀ ಗಾಳಿಯೊಂದಿಗೆ ಹಾರುತ್ತ ಹೋಗಿ ದೂರದ ಕಾಡಿಗೂ ಕಿಚ್ಚಿಡುತ್ತವೆ.

ಮಹಾಭಾರತದಲ್ಲಿ ಖಾಂಡವ ವನವನ್ನು ದಹಿಸಲು ಅಗ್ನಿದೇವನಿಗೆ ಅರ್ಜುನ ನೆರವಾಗುತ್ತಿದ್ದ ಕತೆ ಗೊತ್ತಲ್ಲ? ಪ್ರಾಯಶಃ ಆತನೂ ಇದೇ ರೀತಿ ಆಗ್ನೇಯಾಸ್ತ್ರವನ್ನು ದೂರ-ದೂರಕ್ಕೆ ಚಿಮ್ಮಿಸುತ್ತ ಅಲ್ಲೆಲ್ಲ ಕಿಡಿ ಹೊತ್ತಿಸುತ್ತಿದ್ದನೋ ಏನೊ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುವಾಗಲೂ ಅಂಥದ್ದೇ ಅಗುತ್ತಿತ್ತು. ಈ ಊರಿನಲ್ಲಿ ಶೆಲ್ ಸಿಡಿಸಿ ಬೆಂಕಿ ಹಚ್ಚಿದ ಬಾಂಬರ್ಗಳು ಐದೇ ನಿಮಿಷಗಳಲ್ಲಿ 20 ಕಿ.ಮೀ ಆಚೆ ಬಾಂಬ್ ಹಾಕಿ ಮತ್ತೊಂದು ಕಡೆ ಕಿಚ್ಚು ಹಚ್ಚುತ್ತಿದ್ದವು.

ನಿಸರ್ಗದಿಂದ ಮನುಷ್ಯ ಪಾಠ ಕಲಿತನೊ, ಮನುಷ್ಯನಿಂದಲೇ ನಿಸರ್ಗ ಹೊಸ ಹೊಸ ಪಾಠ ಕಲಿಯುತ್ತದೊ ಅಥವಾ ನಾವೆಲ್ಲ ಸೇರಿ ಈ ಪರಿಯ ವಿಧ್ವಂಸಕ ಕೃತ್ಯಗಳನ್ನು ಮಾಡುತ್ತೇವೊ- ಯಾರಿಗೆ ಗೊತ್ತು?

ಅಮರಿಕ ಸುಧಾರಿತ ರಾಷ್ಟ್ರ. ಹಾಗಾಗಿ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚಿನ ದಾಳಿ ಆಗುವ ಮೊದಲೇ ಒಂದೂವರೆ ಲಕ್ಷ ಜನರನ್ನು ಸ್ಥಳಾಂತರ ಮಾಡಿಸಲಾಗಿತ್ತು. 20 ದಿನಗಳ ಅಗ್ನಿಪ್ರಳಯದಲ್ಲಿ ಬೆಂಕಿ ತುತ್ತಾದವರು ಬರೀ 29 ಮಂದಿ. ಆದರೆ ಜ್ವಾಲೆಗೆ ಬಲಿಯಾದ ಜಿಂಕೆಗಳು, ಬಾಬ್ಬೆಕ್ಕುಗಳು, ಬಾವಲಿಗಳು, ಕಾಂಗರೂ, ಹೆಗ್ಗಣಗಳು, ಕಾಂಡೊರ್ ಹದ್ದುಗಳು, ಹಾವು-ಜೇಡಗಳ ಲೆಕ್ಕ ಇಟ್ಟವರಿಲ್ಲ.

ಉತ್ತರ ಗೋಲಾರ್ಧದ ವಿಶೇಷತೆ ಏನೆಂದರೆ ಅಲ್ಲಿನ ಶುಷ್ಕ ಕಾಡುಗಳಲ್ಲಿ ಬೆಂಕಿ ತಾನಾಗಿ ಹೊತ್ತಿಕೊಳ್ಳುತ್ತದೆ. ಆದರೆ ನಮ್ಮ ದಕ್ಷಿಣ ಭಾರತದಲ್ಲಿ ಅಥವಾ ಏಷ್ಯದ ಬಹುಭಾಗದಲ್ಲಿ ತಾನೇತಾನಾಗಿ ಕಾಡಿನಲ್ಲಿ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ತೀರಾ ಅಪರೂಪ. ಇವೆಲ್ಲ ಏನಿದ್ದರೂ ಮನುಷ್ಯನದೇ ಕೈವಾಡ.

ಇನ್ನೇನು ನಮ್ಮಲ್ಲೂ ಕಾಳ್ಗಿಚ್ಚಿನ ಋತು ಆರಂಭವಾಗಲಿದೆ. ಬೆಂಗಳೂರಿನ ಕಲಾಗ್ರಾಮದ ಕೃತಕ ಕಾಳ್ಗಿಚ್ಚಿನ ಫೋಟೊ ತೆಗೆಯುತ್ತಿದ್ದ ಸಂದರ್ಭದಲ್ಲೇ (9 ಫೆಬ್ರುವರಿ) ಚಿಕ್ಕಮಗಳೂರಿನ ಕಳಸದ ಆನೆಗುಡ್ಡದ ಶಿಖರದ ಮೇಲೆ ಅಸಲೀ ಕಾಳ್ಗಿಚ್ಚಿನ ಧಗಧಗ ಆರಂಭವಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಕಾಡಿನ ಬೆಂಕಿಯ ದಾಳಿ ಆಗುತ್ತಲೇ ಅಗ್ನಿಶಾಮಕ ಹೆಲಿಕಾಪ್ಟರ್ಗಳು ಧಾವಿಸಿದವು. ನಮ್ಮಲ್ಲೂ ಆಧುನಿಕ ಟೆಕ್ನಾಲಜಿ ಬಳಕೆಗೆ ಬರುತ್ತಿದೆ. ಹೆಲಿಕಾಪ್ಟರ್ ಅಲ್ಲದಿದ್ದರೂ ಡ್ರೋನ್ ಬಳಸಿ ಫೋಟೊ ತೆಗೆಯುವಷ್ಟು ನಾವು ಸುಧಾರಿಸಿದ್ದೇವೆ. ಆನೆಗುಡ್ಡದ ಆ ಕಾಳ್ಗಿಚ್ಚನ್ನು ನೋಡಿದರೆ ಗುಡ್ಡಕ್ಕೆ ಗುಡ್ಡವೇ ಕೆಂಪಂಚಿನ ಹೊಗೆಯ ಚಾದರವನ್ನು ಹೊದೆದಂತೆ ಕಾಣುತ್ತಿತ್ತು. ಇದೇ ವೇಳೆಗೆ ಶ್ರೀರಂಗಪಟ್ಟಣದ ಪಕ್ಕದ ಕರೀಘಟ್ಟದ ಬಾದೆ ಹುಲ್ಲಿಗೆ ಬೆಂಕಿ ಬಿದ್ದು ಇಡೀ ಗುಡ್ಡಕ್ಕೆ ಕರೀ ಚಾದರ ಹೊದೆಸಿದಂತೆ ಕಾಣುತ್ತದೆ. ಇಲ್ಲಿ ಜಾತ್ರೆಗೆ ಮೂರು ದಿನ ಮೊದಲು ಹರಕೆ ತೀರಿಸಲೆಂದೇ ಭಕ್ತರು ತಾವಾಗಿ ಬೆಂಕಿ ಹಚ್ಚುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

ನಮ್ಮ ರೂಢ ನಂಬಿಕೆಗಳನ್ನೂ ಕಂಡಲ್ಲಿ ಕಡ್ಡಿ ಗೀರುವ ಚಪಲವನ್ನೂ ಮೀರಿಸುವಂತೆ ನಿಸರ್ಗ ನಮಗೆ ಪಾಠ ಹೇಳಲೆಂದು ಧಾವಿಸಿ ಬರುತ್ತಿದೆ. ಚಳಿಗಾಲ ಮುಗಿದೇ ಇಲ್ಲ- ನಗರಗಳಲ್ಲಿ ಧಗೆ ಎದ್ದಿದೆ. ಕಳೆದ ವರ್ಷ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿಸಿ ಭೂಮಿಯ ಸರಾಸರಿ ತಾಪಮಾನ ಮೇಲಕ್ಕೆ ಏರಿದೆ. ಹವಾಮಾನಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಸಂಕಟಗಳೂ ಹೆಚ್ಚುತ್ತಿವೆ. ನಾವು ಅದೃಷ್ಟವಂತರು. ಇಲ್ಲಿ ಹಿಮಕುಸಿತದ, ಚಳಿಪ್ರಳಯದ ಚಂಡಿಪ್ರಕೋಪ ಅಷ್ಟಾಗಿ ಇಲ್ಲ. ಆದರೆ ಇತರ ಎಲ್ಲ ಪ್ರಕೋಪಗಳ ರಂಗಸಮರ ಆರಂಭವಾಗಿದೆ.

ಈಗ ಮತ್ತೆ ಹೊರಟಲ್ಲಿಗೇ ಬರೋಣ. ಕಲಾಗ್ರಾಮದಲ್ಲಿ ಏಳು ದಿನ ರಾಷ್ಟ್ರಮಟ್ಟದ ‘ರಂಗ ಪರಿಷೆ’ ಇತ್ತು. ಕಡಲೆಕಾಯಿ ಪರಿಷೆ, ಚಿತ್ರಸಂತೆ, ಸಾಹಿತ್ಯ ಸಮ್ಮೇಳನ ಎಲ್ಲವನ್ನೂ ನೆನಪಿಸುವಂತೆ, ಎಲ್ಲವನ್ನೂ ಒಳಗೊಂಡ ಮಾದರಿಯಲ್ಲಿ ರಂಗುರಂಗಿನ ಜಾತ್ರೆ ನೆರೆದಿತ್ತು. ನಾಲ್ಕು ವೇದಿಕೆಗಳಲ್ಲಿ ಏಕಕಾಲಕ್ಕೆ ನಾಟಕ, ಡೊಳ್ಳು, ಕಂಸಾಳೆ, ಬೊಂಬೆಯಾಟ ಎಲ್ಲವೂ ಬೊಂಬಾಟಾಗಿದ್ದವು. ದಿನದ, ಜಗದ ಜಂಜಡಗಳನ್ನೆಲ್ಲ ಮರೆತು ಜನಜಾತ್ರೆ ನೆರೆದಿತ್ತು. ವೇದಿಕೆಯ ಎಲ್ಲ ಕಾರ್ಯಕ್ರಮಗಳೂ ನಿನ್ನೆಗಳನ್ನು ನೆನಪಿಸುತ್ತಿದ್ದವು. ‘ಇದೇ ಮೊದಲ ಬಾರಿ ಇಂಥ ರಂಗವೈಭವ ನಡೆದಿದೆ.. ಇನ್ನು ಪ್ರತಿವರ್ಷ ನಡೆಯಲಿದೆ’ ಎಂದು ರಂಗಪರಿಷೆಯ ರೂವಾರಿ, ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಹೇಳಿದರು.

ವೈಭವದ ನಿನ್ನೆಗಳಷ್ಟೇ ರಂಗಕ್ಕೆ ಬಂದರೆ ಸಾಕೆ? ನಮ್ಮ ಭವದ ಇಂದು-ನಾಳೆಗಳೂ ಬರಬೇಡವೆ? ನೋಡೋಣ, ಬರುವ ವರ್ಷಗಳಲ್ಲಿ ಅವೂ ರಂಗಕ್ಕೆ ಬರಬಹುದು, ಕಾಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.