ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Science Gallery Bengaluru | ವಿಜ್ಞಾನ ಮೊಗಸಾಲೆ.. ಕಲಿಕೆಯ ಶಾಲೆ

Published 8 ಜೂನ್ 2024, 23:41 IST
Last Updated 9 ಜೂನ್ 2024, 11:41 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಹೆಚ್ಚು ಹಸಿರಿನಿಂದ ಕೂಡಿರುವ ಸ್ಥಳಗಳಲ್ಲಿ ಒಂದಾದ ಕಬ್ಬನ್‌ ಪಾರ್ಕ್ ಸುತ್ತಮುತ್ತಲ ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಇರಬಹುದು ಎನ್ನುವುದು ನಮ್ಮ ಊಹೆ. ಆದರೆ, ಇದು ನಿಜವಲ್ಲ ಎಂದು ತಿಳಿದರೆ ನಂಬಲು ಕಷ್ಟವೇ. ಎಲೆಕ್ಟ್ರಿಕ್‌ ವಾಹನಗಳಿಂದ ಪರಿಸರ ಹಾನಿ ಕಡಿಮೆ ಎನ್ನುವ ಗ್ರಹಿಕೆಯೂ ತಪ್ಪು ಎಂದು ಹೇಳಿದರೆ ಹತ್ತಾರು ಪ್ರಶ್ನೆಗಳು ಸುರುಳಿ ಸುತ್ತಬಹುದು. ಫೈಲುಗಳನ್ನು ಶೇಖರಿಸಿಟ್ಟುಕೊಳ್ಳಲು ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಬಳಸುವ ‘ಕ್ಲೌಡ್‌’ಗೂ, ಆಗಸದ ಮೋಡಕ್ಕೂ ಹತ್ತಿರದ ಸಂಬಂಧವಿದೆ! ಡಿಜಿಟಲ್ ಕರೆನ್ಸಿಗಳ ‘ಮೈನಿಂಗ್‌’ಗೂ, ಕಲ್ಲಿದ್ದಲು ಗಣಿಗಾರಿಕೆಗೂ ನಂಟಿದೆ ಎಂದರೆ ಮನಸ್ಸು ತರ್ಕಕ್ಕೆ ಇಳಿಯಬಹುದು. ರೇಷ್ಮೆ ನೂಲುಗಳ ಹೊಳಪು ಹಿಗ್ಗಬೇಕಾದರೆ ಹಿಪ್ಪುನೆರಳೆಗೆ ಬೆರಸಬೇಕಾದುದು ಏನು? ಪರಿಸರದಲ್ಲಿ ನಡೆಯುವ ಬದಲಾವಣೆಗೆ ಮನುಷ್ಯನ ಹಾಗೆ ಮರಗಳೂ ಖುಷಿಯಾಗುವ, ವ್ಯಥೆ ಪಡುವ ಬಗೆಯನ್ನು ದೃಶ್ಯರೂಪದಲ್ಲಿ ಮುಂದಿಟ್ಟರೆ ಹೇಗಿರಬಹುದು?.. ಹೀಗೆ ನಮ್ಮ ಹಲವಾರು ಪ್ರಶ್ನೆಗಳು, ಕುತೂಹಲಗಳಿಗೆ ಉತ್ತರ ನೀಡುತ್ತದೆ ‘ಸೈನ್ಸ್ ಗ್ಯಾಲರಿ ಬೆಂಗಳೂರು’.

ಬೆಂಗಳೂರಿನ ಬಳ್ಳಾರಿ ರಸ್ತೆಯ ಸಿಬಿಐ ಬಸ್‌ ನಿಲ್ದಾಣದ ಬಳಿ ಇರುವ ಈ ‘ವಿಜ್ಞಾನ ಮೊಗಸಾಲೆ’ಯು ನಮ್ಮ ಕುತೂಹಲವನ್ನು ತಣಿಸುವ ತಾಣ. ವಿಜ್ಞಾನವನ್ನು ಜನರ ಜೀವನ, ಕಲೆ ಹಾಗೂ ಸಂಸ್ಕೃತಿಯೊಂದಿಗೆ ಬೆಸೆಯುವ ಪ್ರಯತ್ನ ಮಾಡುತ್ತಿದೆ. ಜಾಗತಿಕ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಜನಸಾಮಾನ್ಯರಿಗೂ ವಿಜ್ಞಾನವನ್ನು ದಾಟಿಸುವ, ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವ ಗುರಿ ಹೊಂದಿದೆ. ಅಟ್ಲಾಂಟಾ, ಬರ್ಲಿನ್‌, ಡಬ್ಲಿನ್, ಲಂಡನ್‌, ಮೆಲ್ಬೊರ್ನ್‌, ಮಾಂಟೆರಿ ಹಾಗೂ ರೊಟ್ಟರ್‌ಡ್ಯಾಮ್‌ನಲ್ಲಿ ಶಾಖೆಗಳಿವೆ. ಬೆಂಗಳೂರಿನಲ್ಲಿ ಇರುವುದು ಏಷ್ಯಾದ ಏಕೈಕ ಹಾಗೂ ಅತಿ ದೊಡ್ಡ ಗ್ಯಾಲರಿ. ಬೆಂಗಳೂರು ಮಾಹಿತಿ ತಂತ್ರಜ್ಞಾನ, ಮೂಲ ಸೌಕರ್ಯದಲ್ಲಿ ಮಂಚೂಣಿಯಲ್ಲಿರುವುದರಿಂದ ಇಲ್ಲಿ ಗ್ಯಾಲರಿ ಆರಂಭಿಸಲಾಗಿದೆ. ಒಂದು ವಿಷಯವನ್ನು ‘ಥೀಮ್’ ಆಗಿ ಇಟ್ಟುಕೊಂಡು ಪ್ರದರ್ಶನ ಏರ್ಪಡಿಸಲಾಗುತ್ತದೆ. ಸದ್ಯ ಇಂಗಾಲವನ್ನು (ಕಾರ್ಬನ್‌) ಥೀಮ್‌ ಆಗಿರಿಸಿಕೊಂಡು 36 ಪ್ರದರ್ಶನಗಳಿವೆ. 

‘ಈ ಹಿಂದೆ ಬೆಂಗಳೂರಿನಲ್ಲಿ ಸೈನ್ಸ್ ಗ್ಯಾಲರಿ ಇತ್ತಾದರೂ, ಅದಕ್ಕೊಂದು ಶಾಶ್ವತ ನೆಲೆ ಇರಲಿಲ್ಲ. ದೊಮ್ಮಲೂರಿನ ಇಂಟರ್‌ನ್ಯಾಷನಲ್‌ ಸೆಂಟರ್‌, ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ ಮುಂತಾದ ಸ್ಥಳಗಳಲ್ಲಿ ಪ್ರದರ್ಶನ ನಡೆಯುತ್ತಿತ್ತು. ಈಗ ವಿಸ್ತಾರವಾದ ಕಟ್ಟಡವಿದ್ದು, ಪ್ರದರ್ಶನವನ್ನು ವಿಸ್ತೃತವಾಗಿ, ಯೋಜನಾಬದ್ಧವಾಗಿ ಆಯೋಜಿಲಾಗುತ್ತದೆ. ಪ್ರಪಂಚದಾದ್ಯಂತ ಹಲವು ವಿಜ್ಞಾನಿಗಳನ್ನು ಒಳಗೊಳ್ಳುವಂತೆ ಮಾಡಿ ಪ್ರತಿಯೊಂದು ಪ್ರದರ್ಶನವನ್ನು ನಡೆಸಲಾಗುತ್ತದೆ. ಉನ್ನತ ಸಮಿತಿ ‘ಥೀಮ್’ ನಿರ್ಧರಿಸಿ, ಅದರಲ್ಲಿ ಪಾಲ್ಗೊಳ್ಳುವಂತೆ ಜಾಗತಿಕವಾಗಿ ಮುಕ್ತ ಆಹ್ವಾನ ನೀಡುತ್ತೇವೆ. ಬಂದ ಅರ್ಜಿಗಳನ್ನು ಪರಿಶೀಲಿಸಿ ಅಂತಿಮಗೊಳಿಸುತ್ತೇವೆ. ಪ್ರದರ್ಶನದ ಬಗ್ಗೆ ನಿರ್ಧರಿಸಿ ಪ್ರಸ್ತುತಿ ಪಡಿಸಲು ಸುಮಾರು ಒಂದು ವರ್ಷ ಬೇಕು’ ಎಂದು ಸೈನ್ಸ್ ಗ್ಯಾಲರಿ ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕಿ ಜಾಹ್ನವಿ ಫಾಲ್ಕೆ ಹೇಳುತ್ತಾರೆ.

ಮಾದರಿ ಕುರಿತು ಮಾಹಿತಿ ನೀಡುತ್ತಿರುವ ಗೈಡ್‌
ಮಾದರಿ ಕುರಿತು ಮಾಹಿತಿ ನೀಡುತ್ತಿರುವ ಗೈಡ್‌

 ಚಿತ್ರಗಳು/ಕೃಷ್ಣಕುಮಾರ್ ಪಿ.ಎಸ್

‘ಜನವರಿಯಲ್ಲಿ ಪ್ರಾರಂಭವಾದ ಗ್ಯಾಲರಿ ಈಗ ಯುವಜನರ ಹ್ಯಾಂಗೌಟ್ ತಾಣವಾಗಿ ಮಾರ್ಪಟ್ಟಿದೆ. ಮೊದಲು ಬೆರಳೆಣಿಕೆಯಷ್ಟು ಕುತೂಹಲಿಗರು ಬರುತ್ತಿದ್ದರು. ಈಗ ನಿತ್ಯ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಭೇಟಿ ನೀಡುವವರಲ್ಲಿ ಹೆಚ್ಚಿನವರು 18 ರಿಂದ 40 ವಯೋಮಾನದವರು. ವಿಜ್ಞಾನದ ಬಗ್ಗೆ ಅಭಿರುಚಿ ಇಲ್ಲದವರೂ ಬಂದು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಇಲ್ಲಿನ ಪ್ರಸ್ತುತಿಗಳನ್ನು ಬೆರಗುಗಣ್ಣಿನಿಂದ ನೋಡುತ್ತಾರೆ. ಹಲವು ಪ್ರಶ್ನೆಗಳನ್ನು ಕೇಳಿ ಸಂಶಯ ನಿವಾರಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಗೈಡ್‌ ಆಗಿರುವ ಮೌಂಟ್‌ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ ಅನುಷ್ಕಾ ವಿಜಯ್‌.

ಜುಲೈ 15ರಿಂದ ‘ಕ್ವಾಂಟಮ್‌’ ಅನ್ನು ಥೀಮ್‌ ಆಗಿರಿಸಿಕೊಂಡು ಹೊಸ ಪ್ರದರ್ಶನ ಇರಲಿದೆ. ವೈಜ್ಞಾನಿಕ ವಿಷಯಗಳನ್ನು ಜನರು ವಿಚಾರ ಮಾಡಬೇಕು ಎನ್ನುವ ದೃಷ್ಟಿಯಿಂದ ಪ್ರಸ್ತುತಿಗಳನ್ನು ಸಂಯೋಜಿಸಲಾಗುತ್ತದೆ. ಉದಾಹರಣೆಗೆ, ಹವಾಮಾನ ಬದಲಾವಣೆ ಬಗ್ಗೆ ಪ್ರದರ್ಶನ ಏರ್ಪಡಿಸುವ ಬದಲು, ಅದರ ಬಗೆಗಿನ ಮುಂಜಾಗ್ರತೆ ಹಾಗೂ ಅಪಾಯಗಳನ್ನು ಜನರಿಗೆ ಮನದಟ್ಟು ಮಾಡುವ ಪ್ರದರ್ಶನಗಳು ಆಯೋಜಿಸಲಾಗುತ್ತದೆ. ಅದರ ಬಗ್ಗೆ ಜನರಲ್ಲಿ ಚರ್ಚೆಯನ್ನು ಉತ್ತೇಜಿಸುವುದು, ಅವರಲ್ಲಿ ಅರಿವು ಮೂಡಿಸುವುದು ಇದರ ಧ್ಯೇಯ. ಮುಂದಿನ ದಿನಗಳಲ್ಲಿ ವಿವಿಧ ಕಡೆಗಳಲ್ಲಿ ಏಳು ಪ್ರಾಯೋಗಿಕ ಗ್ಯಾಲರಿಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಫೆಲೋಷಿಪ್ ಮಾದರಿಯಲ್ಲಿ ಅವುಗಳನ್ನು ನಡೆಸಲಾಗುತ್ತದೆ. ಅಲ್ಲಿ ಹಲವು ವಿಭಾಗಗಳು ಇರಲಿದ್ದು, ಜನರು ಭಾಗವಹಿಸಬಹುದು. ಕರ್ನಾಟಕ ಸರ್ಕಾರ ಹಾಗೂ ಹಲವು ಸ್ವಯಂ ಸೇವಾ ಸಂಸ್ಥೆಗಳು ಇದಕ್ಕೆ ಪ್ರಾಯೋಜಕತ್ವ ನೀಡುತ್ತಿವೆ.

ಪ್ರತಿಯೊಂದು ಪ್ರಯೋಗವನ್ನು ಜನರಿಗೆ ಸುಲಭವಾಗಿ ಮನದಟ್ಟಾಗುವಂತೆ ಪ್ರದರ್ಶಿಸಲಾಗುತ್ತದೆ. ಪಡಿಸಲಾಗುತ್ತದೆ. ಪ್ರಸ್ತುತಿ ಬಳಿ ಅವುಗಳ ಹೆಸರು, ಅದರ ವಿಜ್ಞಾನಿ ಹಾಗೂ ಕಲಾವಿದರ ಹೆಸರು ಬರೆಯಲಾಗಿದೆ. ಸಂಕ್ಷಿಪ್ತ ವಿವರಣೆಯೂ ಇದ್ದು, ಸಂಬಂಧಿತ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಬೇಕಿದ್ದರೆ ಕ್ಯೂ ಆರ್‌ ಕೋಡ್ ಸ್ಕ್ಯಾನ್ ಮಾಡಿ ವಿಡಿಯೊ, ಆಡಿಯೊ ಮಾಹಿತಿಯನ್ನೂ ಪಡೆಯಬಹುದು. ವಿಡಿಯೊ ಗೇಮ್‌ ಮೂಲಕ ವಿಷಯವನ್ನು ತಿಳಿದುಕೊಳ್ಳುವ ಪ್ರಸ್ತುತಿ ಬಳಿ ಮಕ್ಕಳು ದಂಡು ಹೆಚ್ಚಿತ್ತು. ವಿಡಿಯೊ, ವಿ.ಆರ್ ಪ್ರಸ್ತುತಿ ಬಳಿ ಯುವಕರು ಕುತೂಹಲಿಗಳಾಗಿ ನಿಂತಿದ್ದರು. ಪ್ರತಿಯೊಂದು ಪ್ರಸ್ತುತಿಯ ಬಳಿ ನಿಮ್ಮನ್ನು ಕರೆದುಕೊಂಡು ಅದರ ಬಗ್ಗೆ ಮಾಹಿತಿ ನೀಡುವ ವಿಷಯ ನಿಪುಣ ಗೈಡ್‌ಗಳಿದ್ದಾರೆ. ಪ್ರಯೋಗದ ಹಿನ್ನೆಲೆ, ಉದ್ದೇಶ, ಅದರ ಹಿಂದಿರುವ ತರ್ಕವನ್ನು ಸೊಗಸಾಗಿ ವಿವರಿಸುತ್ತಾರೆ. ಕನ್ನಡ, ಇಂಗ್ಲಿಷ್ ಹಾಗೂ ಸಂಜ್ಞಾ ಭಾಷೆಯಲ್ಲಿ ವಿವರಿಸುವ ಹತ್ತಾರು ಗೈಡ್‌ಗಳು ಇದ್ದಾರೆ.

ಪ್ರದರ್ಶನದ ಜೊತೆಗೆ ಮೆಂಟರ್‌ಶಿಪ್‌ ಕಾರ್ಯಕ್ರಮಗಳೂ ಇವೆ. ಪಾರ್ಟ್‌ಟೈಮ್‌ ಗೈಡ್‌ ಆಗಿ, ಅಪ್ರೆಂಟಿಸ್‌ ಆಗಿ, ಸಂಶೋಧಕರಾಗಿ ಕೆಲಸ ಮಾಡುವವರಿಗೆ ಮುಕ್ತ ಅವಕಾಶ ಇದೆ. ‘ನಾನು ಇಲ್ಲಿ ಪಾರ್ಟ್‌ಟೈಮ್‌ ಗೈಡ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಸೆಮಿಸ್ಟರ್‌ಗಳು ಮುಗಿದು ಈಗ ಕಾಲೇಜಿಗೆ ಬಿಡುವು. ಕಾಲೇಜು ಇದ್ದ ವೇಳೆ ವಾರಾಂತ್ಯದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ವಾರದ ದಿನಗಳಲ್ಲೂ ಕೆಲಸ ಇದೆ. ಆರು ತಿಂಗಳು ತರಬೇತಿ ಬಳಿಕ ನಮ್ಮನ್ನು ಇಲ್ಲಿ ನಿಯೋಜಿಸಲಾಗಿದೆ. ಬಂದ ಪ್ರತಿಯೊಬ್ಬರಿಗೂ ಪ್ರಯೋಗದ ಬಗ್ಗೆ ಮಾಹಿತಿ ನೀಡುತ್ತೇವೆ. ನಮಗೂ ಹೊಸ ವಿಷಯ ತಿಳಿಯುತ್ತದೆ. ಪ್ರತಿ ದಿನದ ದುಡಿತಕ್ಕೆ ಕೆಲಸಕ್ಕೆ ಸಂಬಳವೂ ಸಿಗುತ್ತದೆ’ ಎನ್ನುತ್ತಾರೆ ಗೈಡ್‌ ಆಗಿರುವ ಮೌಂಟ್‌ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿ ಅಂಜಲಿ ರಾಜನ್‌.

ನೀವು ನಿಮ್ಮ ಮಕ್ಕಳೊಂದಿಗೆ ವಿಜ್ಞಾನ ಮೊಗಸಾಲೆಗೆ ಹೊರಡಲು ಸಿದ್ಧರಾಗಿ. ಏಕೆಂದರೆ, ಇದೊಂದು ವಿಸ್ಮಯ ಲೋಕ.

ವಿಜ್ಞಾನ ಮಾದರಿ ವೀಕ್ಷಿಸುತ್ತಿರುವ ಯುವತಿಯರು .

ವಿಜ್ಞಾನ ಮಾದರಿ ವೀಕ್ಷಿಸುತ್ತಿರುವ ಯುವತಿಯರು .

 ಚಿತ್ರಗಳು/ಕೃಷ್ಣಕುಮಾರ್ ಪಿ.ಎಸ್

ಕಾರ್ಬನ್ ಅನ್ನು ಹೀಗೂ ಪ್ರದರ್ಶಿಸಬಹುದು ಎಂದು ನೋಡಿ ಚಕಿತನಾಗಿದ್ದೇನೆ. ವಿಜ್ಞಾನದ ವಿದ್ಯಾರ್ಥಿಯಾದ ನನಗೆ ಇದು ವಿಶೇಷ ಎನಿಸಿದೆ. ವಿಜ್ಞಾನವಲ್ಲದ ಬೇರೆ ವಿಭಾಗದ ಸ್ನೇಹಿತನೊಬ್ಬ ಇದರ ಬಗ್ಗೆ ಹೇಳಿದ. ನಾವು ಐದು ಮಂದಿ ಬಂದಿದ್ದೇವೆ
ಸುಂದರ್ ಪವನ್ ವಿದ್ಯಾರ್ಥಿ ರಾಮಯ್ಯ ಕಾಲೇಜು

ವಿಭಿನ್ನ ವಿನ್ಯಾಸದ ಕಟ್ಟಡ

ಜನಸಾಮಾನ್ಯರು ಹಾಗೂ ವಿಜ್ಞಾನದ ನಡುವೆ ಇರುವ ಬಹುದೊಡ್ಡ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಈ ‘ವಿಜ್ಞಾನ ಮೊಗಸಾಲೆ’ ಆರಂಭಿಸಲಾಗಿದೆ. ಕಟ್ಟಡವನ್ನೂ ಅದೇ ಉದ್ದೇಶ ಇಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಪ್ರದರ್ಶನ ಸಭಾಂಗಣಗಳು ಹಾಗೂ ಪ್ರಯೋಗಾಲಯಗಳನ್ನು ಪ್ರತ್ಯೇಕಗೊಳಿಸುವ ಯಾವುದೇ ಗೋಡೆಗಳಿಲ್ಲ. ಜನರ ಕಲ್ಪನೆಗಳ ಹರಿವಿನಂತೆ ಕಟ್ಟಡವೂ ಮುಕ್ತವಾಗಿರಬೇಕು ಎನ್ನುವ ದಿಸೆಯಲ್ಲಿ ಹೀಗೆ ವಿನ್ಯಾಸ ಮಾಡಲಾಗಿದೆ ಎಂದರು ಫಾಲ್ಕೆ. ಬೆಂಗಳೂರಿನ ವಾಸ್ತುಶಿಲ್ಪಿಗಳು ಸುಮಾರು 1.6 ಎಕರೆಯಲ್ಲಿ ಕಟ್ಟಡ ವಿನ್ಯಾಸ ಮಾಡಿದ್ದಾರೆ. ತೆರೆದ ಸ್ಟುಡಿಯೊ ವಾಚನಾಲಯ ಚಟುವಟಿಕೆ ಸಭಾಂಗಣ ಪ್ರದರ್ಶನ ಸಭಾಂಗಣಗಳು ಮತ್ತು ಉಪನ್ಯಾಸ ಕಾರ್ಯಾಗಾರ ಮತ್ತು ಚಲನಚಿತ್ರ ಪ್ರದರ್ಶನಗಳಿಗಾಗಿ ಪ್ರತ್ಯೇಕ ಸ್ಥಳಗಳಿವೆ.

ಸಂದರ್ಶನ ಸಮಯ

ಗ್ಯಾಲರಿಯು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಸೋಮವಾರ ಹಾಗೂ ಮಂಗಳವಾರ ರಜಾದಿನ. ಶುಕ್ರವಾರ ಶನಿವಾರ ಹಾಗೂ ಭಾನುವಾರ ರಾತ್ರಿ 8 ರವರೆಗೆ ತೆರೆದಿರುತ್ತದೆ. ಎಲ್ಲಾ ವಯೋಮಾನದವರಿಗೂ ಪ್ರವೇಶ ಉಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT