ಆಗಸ್ಟ್ 15, ಸುಮಾರು ಒಂದು ದಶಕಕ್ಕೂ ಹಿಂದೆ...

ಮೈಸೂರಿನ ಪಡುವಾರಹಳ್ಳಿಯ ಸರ್ಕಾರಿ ಶಾಲೆ. ಸ್ವಾತಂತ್ರ್ಯ ದಿನಾಚರಣೆಗೆ ಸಂಭ್ರಮದ ಸಿದ್ಧತೆ ನಡೆದಿತ್ತು. ದಿಢೀರನೆ ನಡೆದ ಘಟನೆಯೊಂದು ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿತ್ತು. ರಾಷ್ಟ್ರಧ್ವಜವನ್ನು ಕಟ್ಟಲು ಸುಮಾರು 15 ಅಡಿ ಎತ್ತರದ ಧ್ವಜಸ್ತಂಭವನ್ನು ಏರಿದ್ದ ಬಾಲಕಿಯೊಬ್ಬಳ ಕುತ್ತಿಗೆಗೆ ಧ್ವಜದ ಹಗ್ಗ ಸಿಲುಕಿ ನೇತಾಡತೊಡಗಿದ್ದಳು. ಜೀವ ಬಾಯಿಗೆ ಬಂದಿತ್ತು. ದೇಹ ನೀಲಿ ಬಣ್ಣಕ್ಕೆ ತಿರುಗುತ್ತಿತ್ತು. ಸಿಬ್ಬಂದಿಯ ಚೀರಾಟ ಕೇಳಿ ಶಾಲೆಯ ಹೊರಗಿದ್ದವರೂ ಧಾವಿಸಿ ಬಂದಿದ್ದರು.

ಪಿತೃತ್ವ ರಜೆ ಪಡೆದಿದ್ದ ಆಕಾಶ್ದೀಪ್ ಸಾಗರ್ ಕೆ. ಅವರೂ ಮನೆ ಕಂದಾಯ ಕಟ್ಟಲು ಅಗತ್ಯವಿದ್ದ ದಾಖಲೆ ಪತ್ರಗಳ ಜೆರಾಕ್ಸ್ ಮಾಡಿಸಿಕೊಂಡು ಆ ದಾರಿಯಲ್ಲೇ ಹೊರಟಿದ್ದರು. ವಿಷಯ ತಿಳಿದು ಶಾಲೆಯೊಳಕ್ಕೆ ಹೋಗಿದ್ದರು. ಬಾಲಕಿಯನ್ನು ನೋಡುತ್ತಲೇ ಧ್ವಜಸ್ತಂಭದತ್ತ ಧಾವಿಸಿದ ಅವರು ಅಲ್ಲಿಯೇ ಇದ್ದ ಒಬ್ಬರನ್ನು ತಮ್ಮ ಭುಜದ ಮೇಲೆ ಹತ್ತಿಸಿಕೊಂಡು, ಹಗ್ಗ ಕತ್ತರಿಸುವಂತೆ ಹೇಳಿ ಆಕೆಯನ್ನು ಕೆಳಕ್ಕಿಳಿಸಿದರು.

‘ಬಾಲಕಿಯ ಜೀವ ಹೋಗಿದೆ’ ಎಂದವರೇ ಹೆಚ್ಚು. ಆದರೆ ಆಕಾಶ್, ಆಕೆಯ ಕಣ್ಣ ರೆಪ್ಪೆಗಳ ಸಣ್ಣ ಅದುರುವಿಕೆಯನ್ನು ಗಮನಿಸಿ, ‘ಜೀವವಿದೆ’ ಎಂದರು. ಅವರೊಂದಿಗೇ ಇದ್ದ, ವಿಕ್ರಂ ಆಸ್ಪತ್ರೆಯ ಆಂಬುಲೆನ್ಸ್ ಡ್ರೈವರ್ ಹಾಗೂ ಸಂಬಂಧಿ ರಾಜೇಶ್, ‘ನೀವು ಕೈಜೋಡಿಸಿದರೆ ಕೂಡಲೇ ಆಸ್ಪತ್ರೆಗೆ ಸಾಗಿಸೋಣ’ ಎಂದರು. ಕೂಡಲೇ ಆಕಾಶ್ ಬಾಲಕಿಯನ್ನು ಎತ್ತಿಕೊಂಡರು. ಆಂಬುಲೆನ್ಸ್ ಆಸ್ಪತ್ರೆಯತ್ತ ಧಾವಿಸಿತು. ಆಕೆಯ ಜೀವ ಉಳಿಯಿತು. ಅವರ ಪಿತೃತ್ವ ರಜೆಯೂ ಸಾರ್ಥಕವಾಯಿತು. ಆಕೆ ಈಗ ಗೃಹಿಣಿಯಾಗಿದ್ದಾರೆ.

ಈ ಘಟನೆ ನಡೆದು ಒಂದು ದಶಕ ಮೀರಿದೆ. ಆಗ ಅದು ದೊಡ್ಡ ಸುದ್ದಿಯಾಗಿತ್ತು. ವರ್ಷ ಮರೆತಿರುವ ಆಕಾಶ್ ಒಂದನ್ನು ಮಾತ್ರ ನೆನೆಪಿಟ್ಟುಕೊಂಡಿದ್ದಾರೆ. ಬಾಲಕಿಯನ್ನು ರಕ್ಷಿಸುವಾಗ, ಅವರ ಬೈಕಿನ ಪಾಕೆಟ್ನಲ್ಲಿ ಮನೆಯ ದಾಖಲೆಗಳು ಹಾಗೂ ಸಾವಿರಾರು ರೂಪಾಯಿ ಇತ್ತು. ಆಸ್ಪತ್ರೆಯಿಂದ ವಾಪಸು ಬಂದು ನೋಡಿದಾಗ ಎಲ್ಲವೂ ಇದ್ದಲ್ಲಿಯೇ ಇತ್ತು!

‘ಬಾಲಕಿಯ ಅದೃಷ್ಟ ಚೆನ್ನಾಗಿತ್ತು. ಹುಲ್ಲು ಕತ್ತರಿಸುವ ಕೂಲಿಯಾಳು ಅಲ್ಲೇ ಇದ್ದುದರಿಂದ ಧ್ವಜಸ್ತಂಭದ ಹಗ್ಗ ಕತ್ತರಿಸಲು ಚಾಕು ಹುಡುಕುವ ಸಮಯವೂ ಉಳಿಯಿತು. ಆಂಬುಲೆನ್ಸ್ ಸೈರನ್ ಕೆಟ್ಟಿದ್ದರೂ ನಾನು ಅತಿವೇಗದಲ್ಲಿ ಓಡಿಸಿದೆ. ಪ್ರತಿದಿನ ಊಟಕ್ಕೆ ಹೊರಗೆ ಹೋಗುತ್ತಿದ್ದ ಎಮರ್ಜೆನ್ಸಿ ವಾರ್ಡಿನ ವೈದ್ಯರು ಅಂದು ತಾವಿದ್ದ ಸ್ಥಳಕ್ಕೇ ಊಟ ತರಿಸಿಕೊಂಡು ಊಟ ಮಾಡುತ್ತಿದ್ದರು. ಎಲ್ಲವೂ ಆಕೆಯ ಜೀವ ಉಳಿಸಲೆಂದೇ ಏರ್ಪಾಡು ಮಾಡಿದಂತಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ರಾಜೇಶ್.

2024ರ ಜುಲೈ ತಿಂಗಳ ಒಂದು ದಿನ...

ನಾಗಮಂಗಲದ ಆದಿಚುಂಚನಗಿರಿ ಮಠದಿಂದ ಹೊರಬಂದು ಮೈಸೂರಿನ ಕಡೆಗೆ ತೆರಳಲೆಂದು ಆಕಾಶ್, ಗೆಳೆಯ ಸಂದೀಪ್ ಅರಸ್ ಜೊತೆ ನಿಂತಿದ್ದ ವೇಳೆ ಕಾರೊಂದು ಬಲಕ್ಕೋ ಅಥವಾ ನೇರ ಹೋಗುವುದೋ ಎಂಬ ಗೊಂದಲದಿಂದ ನಿಧಾನವಾಯಿತು. ಹಿಂದೆ ವೇಗವಾಗಿ ಬರುತ್ತಿದ್ದ ಬೈಕ್ ಸವಾರರು, ನಿಯಂತ್ರಣ ತಪ್ಪಿ ಕಾರಿಗೆ ಅಪ್ಪಳಿಸಿ ಬಿದ್ದರು. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಕಾರಿನವನು ಹೆದರಿ ನಿಲ್ಲಿಸದೇ ಪರಾರಿಯಾದ.

ಒಂದು ಕ್ಷಣ ಅವಾಕ್ಕಾದರೂ ಆಕಾಶ್ ಓಡಿ, ಬಿದ್ದವರನ್ನು ಶುಶ್ರೂಷೆ ಮಾಡತೊಡಗಿದರು. ಆಂಬುಲೆನ್ಸ್ಗೆ ಕರೆ ಮಾಡುವಂತೆ ಗೆಳೆಯನಿಗೆ ಹೇಳಿದರು. ಒಬ್ಬರು ಪ್ರಜ್ಞಾಹೀನರಾಗಿದ್ದರು. ಗಾಯಗೊಂಡ ಮತೊಬ್ಬರು ಏಳಲಾಗದೆ ದೂರ ಕುಳಿತಿದ್ದರು. ಅಷ್ಟರಲ್ಲಿ ಆಂಬುಲೆನ್ಸ್ ಬಂತು. ಇಬ್ಬರನ್ನೂ ಅದರೊಳಕ್ಕೆ ಸೇರಿಸಿ ಆಕಾಶ್ ಹೊರಟರು.

‘ಬಹುಶಃ ಆಕಾಶ್ ಕಾಳಜಿ ವಹಿಸಿ ಅವರನ್ನು ಉಪಚರಿಸಲು ಓಡಿರದಿದ್ದರೆ ನಾನೂ ಹೋಗುತ್ತಿರಲಿಲ್ಲ. ಅಪಘಾತದ ಗಾಯಾಳುಗಳನ್ನು ನೋಡಲು ನನಗೆ ತುಂಬಾ ಭಯ ಮತ್ತು ಸಂಕಟ. ನಾವು ಹೋಗಿರಲಿಲ್ಲವೆಂದರೆ ಬೇರೆಯವರೂ ಕೈ ಜೋಡಿಸುತ್ತಿದ್ದುದು ಅನುಮಾನ. ಅದು ಜನನಿಬಿಡ ಪ್ರದೇಶವಲ್ಲ. ಹೀಗೆ ಆಕಾಶ್ ಸಮಯ ಪ್ರಜ್ಞೆಯಿಂದ ಜೀವವೊಂದು (ಅಥವಾ ಎರಡು) ಉಳಿಯಿತು’ ಎಂದು ಅಂದಿನ ಘಟನೆಯನ್ನು ಸಂದೀಪ್ ಸ್ಮರಿಸುತ್ತಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಮೈಸೂರು ವಿಭಾಗದಲ್ಲಿ ಇನ್ಸ್ಪೆಕ್ಟರ್ ಆಗಿರುವ 42ರ ವಯಸ್ಸಿನ ಆಕಾಶ್, ಗೋಕುಲಂ ಬಡಾವಣೆಯ 2ನೇ ಹಂತದ ನಿವಾಸಿ. ಬಹಳ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಅಣ್ಣ ಅರವಿಂದ ಸಾಗರ್ ಅವರನ್ನು ಕಳೆದುಕೊಂಡವರು. ಕಾವೇರಿ ವಿವಾದ ಭುಗಿಲೆದ್ದ ವೇಳೆ, ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ತಂದೆಯನ್ನು ಮಂಡ್ಯದವರೆಗೂ ಕರೆದೊಯ್ಯಲು ಸ್ನೇಹಿತನ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.

‘ಅಪಘಾತದಲ್ಲಿ ಅಣ್ಣನನ್ನು ಕಳೆದುಕೊಂಡ ಸಂಕಟ ಬಾಧಿಸತೊಡಗಿತ್ತು. ಅಂದಿನಿಂದ ಗಾಯಾಳುಗಳಿಗೆ ನೆರವಾಗತೊಡಗಿದೆ. ಹಲವರ ಪ್ರಾಣ ಉಳಿಸಿದ್ದೇನೆ. ರಕ್ಷಿಸಿದ ಗಾಯಾಳುಗಳ ಬಗ್ಗೆ ಲೆಕ್ಕವಿಟ್ಟಿಲ್ಲ. ಹಣ ಪಡೆಯದೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಆಟೊರಿಕ್ಷಾ ಚಾಲಕರ ಬೆಂಬಲವನ್ನು ಮಾತ್ರ ಮರೆಯಲಾರೆ’ ಎನ್ನುತ್ತಾರೆ. ಕಿರಿಯ ಸಹೋದರ, ಸಿನಿಮಾ ನಿರ್ದೇಶಕ ಅಜುರ್ನ್ ಸಾಗರ್ ಅವರನ್ನೂ ಇತ್ತೀಚೆಗೆ ಕಳೆದುಕೊಂಡು, ಇಡೀ ಕುಟುಂಬದ ಹೊಣೆಗಾರಿಕೆ ಹೊತ್ತಿರುವ ಅವರಿಗೂ ಸಾವು, ಅಪಘಾತದ ಭಯ ಇದ್ದೇ ಇದೆ.

ಅನುಕಂಪದ ಆಧಾರದಲ್ಲಿ ತಂದೆಯ ಕೆಲಸವನ್ನು ಪಡೆದಿರುವ ಅವರು ಬಿಕಾಂ. ಎಂಬಿಎ ಪದವೀಧರರು. ರಾತ್ರಿಪಾಳಿಯಲ್ಲಿ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಸಂದರ್ಭದಲ್ಲೂ ಅವರು ಅಪಘಾತದ ಸಂತ್ರಸ್ತರಿಗೆ ನೆರವಾಗಿದ್ದಾರೆ. ನಾಲ್ಕು ವರ್ಷದ ಹಿಂದೆ, ಮಂಡ್ಯದಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ರಕ್ಷಣೆ ಕೋರಿ ಬಂದ ವ್ಯಕ್ತಿಯೊಬ್ಬರಿಗೆ ಅವರು ತಮ್ಮ ಅಧಿಕಾರಿಯ ಸಮ್ಮುಖದಲ್ಲೇ ನೆರವಾಗಿದ್ದರು. ಪೊಲೀಸರಿಗೆ ಕರೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದರು.

ಗರ್ಭಿಣಿಯ ಜೀವ ಉಳಿಸಿದರು...

‘ಕಚೇರಿಗೆ ಬರುವಾಗ ಅಪಘಾತಕ್ಕೊಳಗಾದ ವಿಷಯ ಗೊತ್ತಾಗುತ್ತಲೇ ಸಿಬ್ಬಂದಿಯೊಂದಿಗೆ ಧಾವಿಸಿದ್ದ ಆಕಾಶ್ ಅವರು ಪ್ರಜ್ಞಾಹೀನಳಾಗಿದ್ದ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನನ್ನ ಪತಿಯು ಬರುವವರೆಗೂ ಇದ್ದು, ಆತಂಕಿತರಾಗಿದ್ದ ಅವರಿಗೂ ಧೈರ್ಯ ತುಂಬುವಲ್ಲಿ ನೆರವಾಗಿದ್ದರು. ಆಗ ನಾನು ಏಳೂವರೆ ತಿಂಗಳ ಗರ್ಭಿಣಿಯಾಗಿದ್ದೆ. ಅಪಘಾತವಾದಾಗ ಯಾವ ಬಂಧುವೂ ಇಲ್ಲವೆಂಬ ಅನಾಥಪ್ರಜ್ಞೆಯನ್ನು ನಿವಾರಿಸಿದ ಆಪದ್ಭಾಂಧವ’ ಎಂದು ಆಕಾಶ್ ಅವರ ಸಹೋದ್ಯೋಗಿ ಅಧಿಕಾರಿ ಹೇಳುತ್ತಾರೆ.

ಆಕಾಶ್ ಸಹೋದ್ಯೋಗಿಗಳು, ಸ್ನೇಹಿತರ ನಡುವೆಯೂ ಆಪದ್ಬಾಂಧವನೇ ಆಗಿದ್ದಾರೆ. ಗೆಳೆಯರಿಗೆ ಅನಾರೋಗ್ಯವಾದರೆ, ದಾಂಪತ್ಯದಲ್ಲಿ ಕಲಹ ಬಂದರೆ, ರಕ್ತ ಬೇಕಾದರೆ, ರಾತ್ರಿ ವೇಳೆ ಯಾರದ್ದಾದರೂ ವಾಹನ ಕೆಟ್ಟು ನಿಂತರೂ ಅವರಿಗೆ ಕರೆಗಳು ಬರುತ್ತವೆ. ಬಾಡಿಬಿಲ್ಡರ್ ಆಗಿರುವ ಅವರ ದೇಹ ಉಕ್ಕಿನಂತಿದೆ. ಮನಸು ಮಾತ್ರ ಬೆಣ್ಣೆ.

‘ಹೀಗೆ ಸಹಾಯ ಮಾಡುವುದರಿಂದ ಏನಾದರೂ ತೊಂದರೆಯಾಗಿದೆಯೇ’ ಎಂಬ ಪ್ರಶ್ನೆಗೆ ಅವರು ‘ಇಲ್ಲ’ವೆನ್ನುತ್ತಾರೆ. ‘ಪೊಲೀಸರಿಗೆ, ಆಂಬುಲೆನ್ಸ್ಗೆ ಮಾಹಿತಿ ನೀಡುವುದರಿಂದ ಯಾವ ತೊಂದರೆಯೂ ಆಗದು’ ಎಂಬುದು ಅವರ ಪ್ರತಿಪಾದನೆ.

ಅಪಘಾತದ ಗಾಯಾಳುಗಳನ್ನು ನೋಡುತ್ತಾ ನಿಲ್ಲುವವರೇ ಹೆಚ್ಚು. ಬಹುತೇಕರಿಗೆ ಅಪಘಾತ ಹೇಗಾಯಿತೆಂದು ತಿಳಿದುಕೊಳ್ಳುವ ಕುತೂಹಲ. ಗಾಯಾಳುಗಳ ನರಳಾಟವನ್ನು ಫೋಟೊ, ವಿಡಿಯೊ ಮಾಡಿಕೊಂಡು, ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದರಷ್ಟೇ ಖುಷಿ. ಗಾಯಾಳುಗಳತ್ತ ಗಮನ ಕೊಡುವವರು ತುಂಬಾ ಕಡಿಮೆ. ಪೊಲೀಸರಿಗೆ, ಆಂಬುಲೆನ್ಸ್ಗೆ ಕರೆ ಮಾಡಲಾರರು. ‘ನಮಗೇಕೆ ಇದೆಲ್ಲಾ’ ಎಂಬ ಭಾವನೆಯ ಜೊತೆಗೆ ‘ನೆರವಾದರೆ ಏನು ತೊಂದರೆ ಎದುರಿಸಬೇಕಾಗುತ್ತದೋ’ ಎಂಬ ಭಯ. ಜೀವವನ್ನು ಉಳಿಸಬಹುದಾದ ಮಹತ್ವದ ಕ್ಷಣಗಳು ಹೀಗೆ ಜನರ ಕಣ್ಣಮುಂದೆಯೇ ಜಾರಿ ಹೋಗುತ್ತವೆ. ಎಷ್ಟೋ ಕಡೆ, ಜನ ನೋಡನೋಡುತ್ತಲೇ ಗಾಯಾಳುಗಳು ಕೊನೆಯುಸಿರೆಳೆಯುವುದೂ ಉಂಟು.

ಇದು ಇಂದಿನ ಜನರ ಧೋರಣೆಯಷ್ಟೇ. ಯಾರನ್ನು ದೂಷಿಸುವುದು? ಅದಕ್ಕಿಂತಲೂ ನಾವೇ ಮುಂದೆ ನಡೆದು ಗಾಯಾಳುವಿಗೆ ನಮ್ಮ ಕೈಲಾದಷ್ಟು ನೆರವಾಗುವುದೇ ಸಮಯಪ್ರಜ್ಞೆ, ಮಾನವೀಯತೆ. ಅಂಥ ಮಾನವೀಯತೆಯ ಜೀವಂತ ಸಾಕ್ಷಿಯಂತೆ ಮೈಸೂರಿನ ಆಕಾಶ್ ಕಾಣುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.