ಇತ್ತೀಚಿನ ದಿನಗಳಲ್ಲಿ ಅರ್ಥ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿ (ಆರೋಗ್ಯ ಕೂಡ) ಸರ್ಕಾರದ ಪಾತ್ರ ಕಿರಿದಾಗುತ್ತಾ ಸಾಗಿದೆ. ಸರ್ಕಾರದ ಪಾತ್ರವು ಕುಗ್ಗುತ್ತಿರುವ ಅದೇ ಹೊತ್ತಿನಲ್ಲಿ ಮೀಸಲಾತಿಗಾಗಿ ಬೇಡಿಕೆಯ ಸದ್ದು ಹೆಚ್ಚು ಹೆಚ್ಚು ಜೋರಾಗಿ ಕೇಳಿ ಬರುತ್ತಿದೆ. ಒಳ ಮೀಸಲಾತಿ ಬೇಡಿಕೆಯೂ ಧ್ವನಿ ಪಡೆದುಕೊಂಡಿದೆ. ‘ಒಳ’ಗಿದ್ದವರಿಗೆ ಅವಕಾಶ ಕುಗ್ಗುತ್ತಿರುವ ಆತಂಕ. ಯಾಕೀ ಧಾವಂತ? ಏನಿದರ ಹಿಂದಿನ ಮಜಕೂರು?

ಮೀಸಲಾತಿಯ ವಿಚಾರ ಮತ್ತೆ ಸುದ್ದಿಯಲ್ಲಿದೆ. ಚರ್ಚೆಯ ಮುಖ್ಯ ಲಕ್ಷಣಗಳೇನು ಎಂಬುದನ್ನು ಗುರುತಿಸುವುದು ಮತ್ತು ಜಿಜ್ಞಾಸೆಯ ಮುಂದಿನ ಮಾರ್ಗಗಳೇನು ಎಂಬುದರತ್ತ ಬೆಳಕು ಚೆಲ್ಲುವ ಯತ್ನ ಈ ಕಿರು ಲೇಖನದ ಉದ್ದೇಶ.

ಶಿಕ್ಷಣ ಮತ್ತು ಉದ್ಯೋಗದಲ್ಲಿ ರಕ್ಷಣಾತ್ಮಕ ಅಥವಾ ಗುಣಾತ್ಮಕ ತಾರತಮ್ಯ ಎಂಬುದು ತಾಂತ್ರಿಕ ಭಾಷೆಯಲ್ಲಿ ಮೀಸಲಾತಿಯ ವಿವರಣೆ. ಈ ಸೌಲಭ್ಯವು ಅನ್ವಯ ಆಗುವುದು ಸರ್ಕಾರದ ಸಂಸ್ಥೆಗಳಲ್ಲಿ ಮಾತ್ರ. ಅಂದರೆ, ಅರ್ಥ ವ್ಯವಸ್ಥೆಯ ಬಹುದೊಡ್ಡ ಭಾಗವು ಮೀಸಲಾತಿ ವ್ಯವಸ್ಥೆಯಿಂದ ಹೊರಗೆ ಇದೆ ಎಂದು ಅರ್ಥ. ಅನೌಪಚಾರಿಕ ವಲಯ ಮತ್ತು ಖಾಸಗಿ ಉದ್ಯಮ ವಲಯವೇ ಪ್ರಾಬಲ್ಯ ಹೊಂದಿರುವ ವ್ಯವಸ್ಥೆ ನಮ್ಮದು. ಹಾಗಾಗಿ, ವ್ಯವಸ್ಥೆಯ ಬಹುಭಾಗಕ್ಕೆ ಮೀಸಲಾತಿಯಿಂದ ವಿನಾಯಿತಿ ಇದೆ. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡಬೇಕು ಎಂಬ ಕೂಗು ಆಗೊಮ್ಮೆ ಈಗೊಮ್ಮೆ ಕೇಳಿ ಬರುವುದಿದೆ. ಆದರೆ, ಈ ಕ್ಷೇತ್ರವು ಸಮಾಜದ ಮೇಲೆ ಹೊಂದಿರುವ ಪ್ರಭಾವವನ್ನು ಗಮನಿಸಿದರೆ ಈ ಬೇಡಿಕೆ ಕಾರ್ಯರೂಪಕ್ಕೆ ಬರುವುದು ಅನುಮಾನವೇ.

ಎರಡನೆಯ ಮತ್ತು ಸಂಬಂಧಿತ ಅಂಶವೆಂದರೆ, ಇತ್ತೀಚಿನ ದಿನಗಳಲ್ಲಿ ಅರ್ಥ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿ (ಆರೋಗ್ಯ ಕೂಡ) ಸರ್ಕಾರದ ಪಾತ್ರ ಕಿರಿದಾಗುತ್ತಾ ಸಾಗಿದೆ. ಸರ್ಕಾರದ ಅಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಪೈಕಿ ಹೆಚ್ಚಿನವುಗಳು ಬೋಧನಾ ಸಿಬ್ಬಂದಿಯೇ ಇಲ್ಲದೆ ಸೊರಗಿವೆ; ಇವುಗಳ ಮೂಲಸೌಕರ್ಯದ ವಿಚಾರದಲ್ಲಿ ಮಾತನಾಡದೇ ಇರುವುದು ಲೇಸು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ವೈದ್ಯಕೀಯ ಕ್ಷೇತ್ರದ ವಿಚಾರದಲ್ಲಿಯೂ ಇದುವೇ ನಿಜ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ನಡುವಣ ಅಂತರವು ಸ್ಪಷ್ಟವಾಗಿ ಗೋಚರಿಸುವಂತಿದೆ ಮತ್ತು ಅದು ಇನ್ನೂ ಹಿರಿದಾಗುತ್ತಲೇ ಇದೆ. ಸರ್ಕಾರದ ಪಾತ್ರವು ಕುಗ್ಗುತ್ತಿರುವ ಅದೇ ಹೊತ್ತಿನಲ್ಲಿ ಮೀಸಲಾತಿಗಾಗಿ ಬೇಡಿಕೆಯ ಸದ್ದು ಹೆಚ್ಚು ಹೆಚ್ಚು ಜೋರಾಗಿ ಕೇಳಿ ಬರುತ್ತಿದೆ. ಆದರೆ, ಮೀಸಲಾತಿಯ ಪರ–ವಿರೋಧದ ಚರ್ಚೆಯು ಕೆಲವು ದಶಕಗಳ ಹಿಂದಿನ ನುಡಿಗಟ್ಟಿನಲ್ಲಿಯೇ ಇಂದೂ ನಡೆಯುತ್ತಿದೆ ಎಂಬುದು ಕುತೂಹಲಕರವೂ ದುಗುಡಕಾರಿಯೂ ಆಗಿರುವ ಸತ್ಯ. ಅರ್ಥ ವ್ಯವಸ್ಥೆ, ಸಮಾಜ ಮತ್ತು ಜಾಗತಿಕ ಮಟ್ಟದಲ್ಲಿ ಆಗಿರುವ ಪಲ್ಲಟಗಳನ್ನು ಈ ಚರ್ಚೆಯು ಗಣನೆಗೇ ತೆಗೆದುಕೊಂಡಿಲ್ಲ.

ತೀರಾ ಇತ್ತೀಚಿನ ದಿನಗಳಲ್ಲಿ ಚರ್ಚೆಯು ಮುಖ್ಯವಾಗಿ ಈ ಮುಂದಿನ ವಿಚಾರಗಳತ್ತ ಹೊರಳಿಕೊಂಡಿದೆ: ಹಿಂದುಳಿದ ವರ್ಗಗಳ ಪಟ್ಟಿಗೆ ಇನ್ನಷ್ಟು ಜಾತಿಗಳನ್ನು ಸೇರಿಸಬೇಕು ಮತ್ತು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಕೆಲವು ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಒತ್ತಾಯವು ಅದರಲ್ಲಿ ಮೊದಲನೆಯದು. ಕುರುಬ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂಬುದು ಅಂತಹ ಒಂದು ಅಂಶ. ಪರಿಶಿಷ್ಟ ಪಂಗಡಗಳು ತಮಗಿರುವ ಸೌಲಭ್ಯಗಳನ್ನು ಬಳಸಿಕೊಂಡಿಲ್ಲ ಎಂಬುದು ಇಂತಹ ಬೇಡಿಕೆಯ ಹಿಂದಿನ ಕಾರಣ ಆಗಿರುವ ಸಾಧ್ಯತೆ ಇದೆ.

ಜಾತಿಯ ಬದಲಿಗೆ ಆರ್ಥಿಕ ಹಿಂದುಳಿದಿರುವಿಕೆಯನ್ನು ಮೀಸಲಾತಿಯ ಮಾನದಂಡವಾಗಿಸಬೇಕು ಎಂಬುದು ಆಗಾಗ ಕೇಳಿ ಬರುತ್ತಿರುವ ಇನ್ನೊಂದು ಕೂಗು. ಸಂವಿಧಾನ ತಿದ್ದುಪಡಿಯ ಮೂಲಕ ಈ ಬೇಡಿಕೆಗೆ ಸರ್ಕಾರವು ಸ್ಪಂದಿಸಿದೆ. ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಲು ಜಾತಿ ಎಂಬುದು ಮೂಲಭೂತ ಅಗತ್ಯ ಅಲ್ಲ ಎಂಬುದಕ್ಕೆ ಸ್ಪಷ್ಟ ಮನ್ನಣೆ ತಂದುಕೊಟ್ಟ ನಡೆ ಇದು. ಮೀಸಲಾತಿಯ ಸೌಲಭ್ಯವನ್ನು ಪಡೆದುಕೊಳ್ಳಲು ಜಾತಿಯೊಂದೇ ಮಾನದಂಡ ಆಗಿರಬಾರದು ಎಂಬ ಬಹುದೀರ್ಘ ಕಾಲದಿಂದ ಕೇಳಿ ಬರುತ್ತಿದ್ದ ಧ್ವನಿಗೆ ಮನ್ನಣೆ ಕೊಡುವ ಯತ್ನ ಇದು.

ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡಕ್ಕೆ ಹಲವು ಮಿತಿಗಳಿವೆ ಎಂಬುದನ್ನು ಉಲ್ಲೇಖಿಸಲೇಬೇಕು. ಇಲ್ಲಿನ ಸ್ಥಳಾಭಾವವನ್ನು ಗಣನೆಗೆ ತೆಗೆದುಕೊಂಡು ಚರ್ಚೆಯ ವಿಚಾರವನ್ನು ಒಂದು ಅಂಶಕ್ಕೆ ಸೀಮಿತಗೊಳಿಸಿಕೊಳ್ಳೋಣ. ಈ ಪ್ರಮುಖ ಅಂಶವನ್ನು ‘ಸಾಂಸ್ಕೃತಿಕ ಬಂಡವಾಳ’ ಎಂದು ಕರೆಯಬಹುದು. ಇತರ ಹಲವು ಅಂಶಗಳ ಜತೆಗೆ ಮಕ್ಕಳು ಬೆಳೆಯುವ ವಾತಾವರಣವನ್ನೂ ಇದು ಒಳಗೊಂಡಿದೆ. ಸಾಂಸ್ಕೃತಿಕ ಬಂಡವಾಳ ಕೊರತೆಯಿಂದ ಉಂಟಾಗುವ ಸಂಕಷ್ಟಗಳನ್ನು ಅಲ್ಪಾವಧಿಯೊಳಗೆ ಸರಿಪಡಿಸುವುದು ಸಾಧ್ಯವಿಲ್ಲ. ಶಿಕ್ಷಣದ ಪ್ರಯೋಜನಗಳ ಅಂತರಂಗೀಕರಣ ಅಥವಾ ಅದರ ಗಾಢ ಗ್ರಹಿಕೆಯ ವಿಚಾರದಲ್ಲಿ ಎಲ್ಲ ಸಾಮಾಜಿಕ ಗುಂಪುಗಳು ಒಂದೇ ರೀತಿಯಲ್ಲಿ ಇಲ್ಲ. ಈ ಸ್ಥಿತಿಯು ಬದಲಾಗುತ್ತಿದೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣವು ಮುಂದಿನ ತಲೆಮಾರಿಗೆ ಅವಕಾಶಗಳ ಹೊಸ ದಿಗಂತವನ್ನೇ ತೆರೆದಿಡಲಿದೆ ಎಂಬ ನಂಬಿಕೆ ಇದಕ್ಕೆ ಒಂದು ನಿದರ್ಶನ. ಇದು ಸ್ವಲ್ಪ ಮಟ್ಟಿಗೆ ತಪ್ಪುಗ್ರಹಿಕೆಯಾದರೂ ಪೂರ್ಣವಾಗಿ ತಪ್ಪು ಎಂದು ಹೇಳುವಂತೆಯೂ ಇಲ್ಲ.

ಯಾವ ಜಾತಿಯು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬುದನ್ನು ತೀರ್ಮಾನಿಸುವುದು ಸಮಸ್ಯೆಯ ಮೂಲಗಳಲ್ಲಿ ಒಂದು. ರಾಜಕೀಯವಾಗಿ ಪ್ರಭಾವಿಯಾದ ಮತ್ತು ಆರ್ಥಿಕವಾಗಿ ಸದೃಢವಾದ ಜಾತಿಯೊಂದು ಹಿಂದುಳಿದ ವರ್ಗಕ್ಕೆ ಸೇರ್ಪಡೆಯಾಗುವುದು ಮತ್ತು ಅಲ್ಲಿಯೇ ಮುಂದುವರಿಯುವುದನ್ನು ಸಮರ್ಥಿಸಿಕೊಳ್ಳುವುದು ಹೇಗೆ? ಹಿಂದುಳಿದ ವರ್ಗದೊಳಗೆ ಇರುವ ಜಾತಿಗಳ ನಡುವೆ ಅಸಮಾನತೆ ಇದೆ ಎಂಬುದನ್ನು ಇಲ್ಲಿ ಹೇಳಲೇಬೇಕು. ‘ಕೆನೆಪದರ ನೀತಿ’ ಜಾರಿಯ ಮೂಲಕ ಈ ಸಮಸ್ಯೆ ಪರಿಹರಿಸಲು ಯತ್ನಿಸಲಾಗಿದೆ. ಮೀಸಲಾತಿಗಾಗಿ ಹಕ್ಕು ಮಂಡಿಸುವವರು ಸಲ್ಲಿಸುವ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆಯೂ ಪ್ರಶ್ನೆಗಳು ಇದ್ದೇ ಇವೆ.

‘ಹಿಂದುಳಿದ ವರ್ಗಗಳು’ ಎಂದು ಗುರುತಿಸಲಾದ ಗುಂಪಿನ ಸ್ವರೂಪವೇ ಮಸುಕು ಮತ್ತು ಅಸ್ಪಷ್ಟ. ಹಿಂದುಳಿದ ವರ್ಗಗಳೆಂದು ಗುರುತಿಸಲಾದ ಜಾತಿಗಳ ನಡುವೆ ಆಗಾಗ ಉಂಟಾಗುವ ವಿವಾದಗಳಿಗೆ ಈ ಅಂಶವೇ ಗಣನೀಯ ಮಟ್ಟದ ವಿವರಣೆಯನ್ನೂ ನೀಡುತ್ತದೆ. ಕರ್ನಾಟಕ ಸರ್ಕಾರವು ಕೆಲ ವರ್ಷಗಳ ಹಿಂದೆ ನಡೆಸಿದ ಜಾತಿ ಸಮೀಕ್ಷೆಯ ವರದಿ ಇನ್ನೂ ಬಹಿರಂಗಗೊಂಡಿಲ್ಲ. ವರದಿ ಸಲ್ಲಿಕೆಯಾದ ಬಳಿಕ ರಾಜ್ಯದ ಎಲ್ಲ ಪ್ರಮುಖ ಪಕ್ಷಗಳು ಮತ್ತು ಪಕ್ಷಗಳ ಮೈತ್ರಿಕೂಟಗಳು ಅಧಿಕಾರಕ್ಕೆ ಬಂದಿವೆ. ಹಲವು ಜಾತಿಗಳು ಅದರಲ್ಲೂ ಮುಖ್ಯವಾಗಿ ಪ್ರಬಲ ಜಾತಿಗಳು ದಶಕಗಳಿಂದ ಬಿಂಬಿಸಿಕೊಂಡು ಬಂದಷ್ಟು ಜನಸಂಖ್ಯೆಯನ್ನು ಈ ಗುಂಪುಗಳು ಹೊಂದಿಲ್ಲ, ಹಾಗಾಗಿ, ಈ ಜಾತಿಗಳಿಗೆ ಈ ವರದಿಯು ಅನುಕೂಲಕಾರಿಯಲ್ಲ ಎಂಬ ಕಾರಣಕ್ಕಾಗಿಯೇ ವರದಿಯನ್ನು ಬಹಿರಂಗಪಡಿಸಲು ವಿವಿಧ ಪಕ್ಷಗಳು ಹಿಂದೇಟು ಹಾಕಿವೆ ಎಂಬ ವದಂತಿ ಇದೆ (ಜಾತಿಗಳು ಬಿಂಬಿಸಿಕೊಂಡು ಬಂದ ಜನಸಂಖ್ಯೆಯ ಮಾಹಿತಿಯ ಸತ್ಯಾಸತ್ಯತೆ ಬಗ್ಗೆ ಮೊದಲಿನಿಂದಲೂ ಅನುಮಾನ ಇತ್ತು). ಪ್ರಬಲ ಜಾತಿಗಳ ಪ್ರಭಾವದ ಆಧಾರಸ್ತಂಭಗಳಲ್ಲಿ ಆ ಜಾತಿಗಳ ಜನಸಂಖ್ಯಾ ಬಲವೇ ಮುಖ್ಯವಾದುದು. ಒಂದು ವೇಳೆ, ಈ ಸಂಖ್ಯೆಯೇ ಅನುಮಾನಾಸ್ಪದ ಎಂದು ಬಿಂಬಿತವಾದರೆ, ಪ್ರಬಲ ಜಾತಿಗಳ ಪ್ರಭಾವದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಜಾತಿ ಚರ್ಚೆಯಲ್ಲಿ ಇನ್ನೊಂದು ಕುತೂಹಲಕರ ಅಂಶವೂ ಇದೆ. ಮೀಸಲಾತಿ ನೀತಿಯಿಂದ ನೇರವಾಗಿ ಪ್ರಯೋಜನ ಪಡೆದವರನ್ನು ಮಾತ್ರ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ. ಶಿಕ್ಷಣ ಸಂಸ್ಥೆಯಲ್ಲಿ ಮೀಸಲಾತಿ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿ, ಸರ್ಕಾರಿ ಉದ್ಯೋಗ ಪಡೆಯುವ ವ್ಯಕ್ತಿ ಮಾತ್ರ ಮೀಸಲಾತಿಯ ಫಲಾನುಭವಿಗಳು. ವಿಸ್ತೃತ ದೃಷ್ಟಿಕೋನದಿಂದ ನೋಡುವಾಗ, ಇಷ್ಟೇ ಮಹತ್ವದ್ದಾದ ಇನ್ನೂ ಎರಡು ಆಯಾಮಗಳಿವೆ.

ಕೆಲಸದ ಸ್ಥಳ ಅಥವಾ ತರಗತಿಯ ವೈವಿಧ್ಯಕ್ಕೆ ಮೀಸಲಾತಿ ನೀತಿಯು ನೀಡುವ ಕೊಡುಗೆ ಅದರಲ್ಲಿ ಮೊದಲನೆಯದ್ದು. ಪರಿಣಾಮವಾಗಿ, ಮೀಸಲಾತಿ ಇಲ್ಲದ ಗಂಪುಗಳವರು ವೈವಿಧ್ಯದಲ್ಲಿ ಸಮೃದ್ಧವಾದ ವಾತಾವರಣದಲ್ಲಿ ಕೆಲಸ ಮಾಡುವುದು ಅಥವಾ ಕಲಿಯು ವುದು ಸಾಧ್ಯವಾಗುತ್ತದೆ. ಭಾರತೀಯ ಸಮಾಜದ ವೈವಿಧ್ಯವನ್ನು ಅರ್ಥ ಮಾಡಿಕೊಳ್ಳುವುದರ ಜತೆಗೆ ಭಿನ್ನ ಸಮುದಾಯ ಗುಂಪುಗಳ ಗ್ರಹಿಕೆ
ಗಳನ್ನು ತಮ್ಮೊಳಗೆ ಸೇರಿಸಿಕೊಳ್ಳುವ ಅವಕಾಶ ಅವರಿಗೆ ದೊರಕುತ್ತದೆ. ಇಲ್ಲದೇ ಇದ್ದರೆ, ನಮ್ಮ ಸಮಾಜದಲ್ಲಿ ಯಥೇಚ್ಛವಾಗಿರುವ ಭಿನ್ನ ದೃಷ್ಟಿಕೋನಗಳ ಬಗ್ಗೆ ಅರಿವೇ ಇಲ್ಲದ ಯುವ ತಲೆಮಾರನ್ನು ನಾವು ಎದುರಾಗಬೇಕಾಗುತ್ತಿತ್ತು. ಇದು ಮೀಸಲಾತಿ ನೀತಿಯು ಸಮಾಜಕ್ಕೆ ಕೊಡುವ ಇನ್ನೊಂದು ಕೊಡುಗೆ. ದುರದೃಷ್ಟವೆಂದರೆ, ಮೀಸಲಾತಿಯ ಚರ್ಚೆಯ ಸಂದರ್ಭದಲ್ಲಿ ಈ ಆಯಾಮಗಳ ಬಗ್ಗೆ ಗಮನವೇ ಹರಿಯುವುದಿಲ್ಲ. ಮೀಸಲಾತಿ ಚರ್ಚೆಯಲ್ಲಿ ವಿಸ್ತೃತ ದೃಷ್ಟಿಕೋನವೇ ಮರೆಯಾಗಿದೆ ಎಂಬುದು ದುಗುಡದ ವಿಚಾರ. ಇಡೀ ಸಮಾಜಕ್ಕೆ ದೊರಕುವ ಪ್ರಯೋಜನಗಳನ್ನು ನಿರ್ಲಕ್ಷಿಸಿ ಯಾವುದೋ ಒಂದು ಜಾತಿಗೆ ದೊರೆಯುವ ಪ್ರಯೋಜನವನ್ನು ಮಾತ್ರ ಚರ್ಚೆಯ ಮುನ್ನೆಲೆಗೆ ತರಲಾಗುತ್ತಿದೆ. ಇದರ ಒಂದು ನಕಾರಾತ್ಮಕ ಪರಿಣಾಮವೆಂದರೆ, ಮೀಸಲಾತಿ ಎಂಬುದು ಸಮಾಜದ ಕೆಲವೇ ಗುಂಪುಗಳಿಗೆ ತೋರಲಾಗುವ ದಯೆ ಎಂಬ ದೃಷ್ಟಿಕೋನ.

ಶಿಕ್ಷಣ ಅಥವಾ ಉದ್ಯೋಗಕ್ಕೆ ಅತ್ಯುತ್ತಮ ಅಭ್ಯರ್ಥಿಗಳು ಆಯ್ಕೆಯಾಗುವುದಕ್ಕೆ ಮೀಸಲಾತಿಯು ಅಡ್ಡಿಯಾಗುತ್ತದೆ ಎಂಬುದು ಸಾಮಾನ್ಯವಾಗಿ ಮುಂದಿಡಲಾಗುವ ವಾದ. ಸ್ಪರ್ಧೆಯಲ್ಲಿರುವ ಎಲ್ಲ ಗುಂಪುಗಳ ಹಿನ್ನೆಲೆಯನ್ನು ಬದಿಗಿಟ್ಟು ನೋಡಿದರೆ ಈ ವಾದಕ್ಕೆ ಸ್ವಲ್ಪ ಸಮರ್ಥನೆ ಇದೆ. ಆದರೆ, ಎಲ್ಲ ಸಾಮಾಜಿಕ ನೀತಿಗಳಿಗೂ ಹಿನ್ನೆಲೆಯು ನಿರ್ಣಾಯಕವೇ ಆಗಿರುತ್ತದೆ. ಅತ್ಯುತ್ತಮವಾದುದನ್ನು ಆಯ್ಕೆ ಮಾಡುವ ಸಾಮರ್ಥ್ಯ ಅಥವಾ ತುಡಿತ ನಮ್ಮಲ್ಲಿ ಇಲ್ಲದಿರುವುದೇ ಗುಣಮಟ್ಟದ ಕೊರತೆ ಆಗಲು ಮುಖ್ಯ ಕಾರಣವಾಗಿರುವ ಸಾಧ್ಯತೆಯೇ ಬಹಳ ಹೆಚ್ಚು. ಸಾಮಾನ್ಯ ವರ್ಗದಲ್ಲಿ ಮಾಡಲಾಗುವ ಆಯ್ಕೆಗಳು ಗುಣಮಟ್ಟದ ಸ್ವೀಕೃತ ನಿಯಮಗಳಿಗೆ ಅನುಗುಣವಾಗಿಯೇ ಇವೆ ಎಂದು ಯಾರೂ ಸಾಧಿಸಲು ಸಾಧ್ಯವಿಲ್ಲ.

ಕೊನೆಯ ಮಾತು: ಮೀಸಲಾತಿಯ ಬಗ್ಗೆ ಮಾತನಾಡುವ ಅಥವಾ ಬರೆಯುವ ಹಲವು ಮಂದಿ ಈ ನೀತಿಯನ್ನು ಅಮೆರಿಕದ ‘ಅಫರ್ಮೇಟಿವ್ ಆ್ಯಕ್ಷನ್ ಪಾಲಿಸಿ’ಗೆ (ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಹೆಚ್ಚಿನ ಅವಕಾಶ ನೀಡಿಕೆ) ಪರ್ಯಾಯ ಎಂಬಂತೆ ನೋಡುತ್ತಾರೆ. ಆದರೆ, ಭಾರತದ ನೀತಿಯು, ಒಂದು ಸಿದ್ಧಾಂತವಾಗಿ ಅಮೆರಿಕದ ನೀತಿಗಿಂತ ಬಹಳ ಮುಂದೆ ಇದೆ.

ಕಾನೂನು ಪಂಡಿತರಿಗೆ ಗಣಿ
ಮೀಸಲಾತಿ ಎಂಬುದು ಕಾನೂನು ಪಂಡಿತರಿಗೆ ಗಣಿ ಇದ್ದ ಹಾಗೆ. ವಿವಾದದ ಮುಖ್ಯ ವಿಚಾರಗಳು ಈ ಕೆಳಗಿನಂತಿವೆ:

* ಮೀಸಲಾತಿಯ ಪ್ರಯೋಜನವನ್ನು ಯಾರು ಪಡೆದುಕೊಳ್ಳಬೇಕು ಅಥವಾ ಬೇರೊಂದು ರೀತಿಯಲ್ಲಿ ಹೇಳುವುದಾದರೆ, ಅರ್ಹ ಎಂದು ಪರಿಗಣಿಸಲಾದ ಗುಂಪಿನ ಅರ್ಹತೆಯನ್ನು ಪ್ರಶ್ನಿಸುವುದು

* ಮೀಸಲಾತಿಯ ಪ್ರಮಾಣ

* ಮೀಸಲಾತಿಯ ಗುಂಪುಗಳನ್ನು ಆಯ್ಕೆ ಮಾಡಲು ನಿಗದಿ ಮಾಡಲಾದ ಮಾನದಂಡಗಳನ್ನು ಬದಲಾಯಿಸುವುದು ಅಥವಾ ಪರಿಷ್ಕರಿಸುವುದು

* ಬಡ್ತಿಯಲ್ಲಿ ಮೀಸಲಾತಿಗೆ ಸಮರ್ಥನೆ ಏನು

* ಸಮಾನತೆಯನ್ನು ಸಾಧಿಸುವ ಉದ್ದೇಶದ ನೀತಿಯ ಅನುಷ್ಠಾನದ ಬಗ್ಗೆ ವಿವಾದ ಇರುವುದು ವಿರಳ

ಒಳ ಮೀಸಲಾತಿ ಬೇಕು ಎಂಬುದು ತೀರಾ ಇತ್ತೀಚಿನ ಬೆಳವಣಿಗೆ. ಸದಾಶಿವ ಆಯೋಗವು ಈ ಶಿಫಾರಸು ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಆಯೋಗದ ವರದಿ ಇನ್ನೂ ಬಹಿರಂಗ ಆಗಿಲ್ಲ. ಪರಿಶಿಷ್ಟ ಜಾತಿಯನ್ನು ಒಳಜಾತಿಗಳಾಗಿ ವಿಂಗಡಿಸಲು ಅವಕಾಶ ಇದೆಯೇ ಎಂಬುದು ಈಗ ಚರ್ಚೆಯಾಗುತ್ತಿರುವ ವಿಷಯ. ಹಿಂದುಳಿದ ವರ್ಗವನ್ನು ವಿವಿಧ ಜಾತಿಗಳಾಗಿ ವಿಂಗಡಿಸಬಹುದು ಎಂದಾದರೆ ಪರಿಶಿಷ್ಟ ಜಾತಿಯಲ್ಲಿಯೂ ಅದಕ್ಕೆ ಅವಕಾಶ ಇರಬೇಕು ಎಂಬುದು ಒಂದು ವಾದ. ಈ ನೀತಿ ಸಮರ್ಥನೀಯವೇ ಎಂಬುದು ಇಲ್ಲಿನ ಚರ್ಚೆಯ ವಿಷಯ ಅಲ್ಲ. ಆದರೆ, ಒಳ ವರ್ಗೀಕರಣಕ್ಕೆ ಅವಕಾಶ ಇರಬೇಕು ಎಂಬುದು ಸಲಹೆ. ಮೀಸಲಾತಿಯಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂಬ ತುಡಿತ ಪ್ರತ್ಯೇಕ ಮೀಸಲು ಬೇಕು ಎಂದು ಗುಂಪುಗಳು ಕೇಳುವುದರ ಹಿಂದಿನ ಕಾರಣ. ಆದರೆ, ಅದೊಂದೇ ಕಾರಣ ಅಲ್ಲ, ಅದರ ಹಿಂದೆ ಬೇರೆ ಶಕ್ತಿಗಳೂ ಕೆಲಸ ಮಾಡುತ್ತಿವೆ ಎಂಬ ಅಂಶವನ್ನೂ ಇಲ್ಲಿ ಉಲ್ಲೇಖಿಸಬೇಕಾಗುತ್ತದೆ.

(ಲೇಖಕ: ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ)

ಕನ್ನಡಕ್ಕೆ: ಹಮೀದ್ ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.