ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 | ವರ್ಷದ ಓದಿನ ಖುಷಿ

Published 31 ಡಿಸೆಂಬರ್ 2023, 0:30 IST
Last Updated 31 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಕರ್ನಾಟಕ ಎಂದು ನಾಡು ಹೆಸರಾಗಿ 50 ವಸಂತಗಳು ಕಳೆದ ಈ ಸಂದರ್ಭದಲ್ಲಿ ಸಾಹಿತ್ಯ ಸಮೃದ್ಧಿ ಕಣ್ಣು ಕೋರೈಸುತ್ತದೆ. ಈ ವರ್ಷ ತಮಗೆ ದಕ್ಕ ಓದಿನಲ್ಲಿ ಇಷ್ಟವಾದ ಕೃತಿಗಳು ಯಾವುವು, ಅವುಗಳ ಹೂರಣವೇನು ಎನ್ನುವುದನ್ನು ಭಿನ್ನ ಸಂವೇದನೆಯ ಸಾಹಿತಿಗಳು ಹಂಚಿಕೊಂಡಿದ್ದಾರೆ.

****

ಭಾವಸಾಂದ್ರತೆಯ ಕವನಗಳು

ಗಂಡಸಿಗಿಂತ ಭಿನ್ನವಾದ/ಒಂದು ಹೆಣ್ಣಿನ ಏಕಾಂತ/ಏನೆಂದು ಬಲ್ಲಿರಾ ನೀವು?

ಎಂದು ಕಾವ್ಯ ಶುರುವಾಗುತ್ತದೆ- ನಾನು ಈ ವರ್ಷ ಓದಿದ ಪುಸ್ತಕಗಳಲ್ಲೆ ನನ್ನ ಎದೆ ತುಂಬಿಬಂದ ಕವನ ಸಂಕಲನವಿದು. ಇದರ ಶೀರ್ಷಿಕೆಯೇ ಸೂಚಿಸುವಂತೆ ಈ ಪುಸ್ತಕದಲ್ಲಿ ಒಬ್ಬ ಆದಿವಾಸಿ ಹೆಣ್ಣುಮಗಳು ತನ್ನ ವರ್ಗದವರಿಂದಲೂ ಶೋಷಿತಗೊಂಡು ನಿಜಕ್ಕೂ ತನ್ನ ವಿಳಾಸವನ್ನು, ಭೂಮಿಯನ್ನು, ತನ್ನ ಅಸ್ಮಿತೆಯನ್ನು ಹುಡುಕಿಕೊಳ್ಳಲು ಹವಣಿಸುತ್ತಿರುವ ಗಾಢವಾದ ಕವಿತೆಗಳಿವೆ. ಹಾಗಂತ ಇಲ್ಲಿ ಗೋಗರೆತವಿಲ್ಲ. ವ್ಯಂಗ್ಯ-ವಿಷಾದದ ಮೊನಚುಬಾಣದಂತೆ ಇರಿಯುತ್ತವೆ, ಗಟ್ಟಿದನಿಯಲ್ಲಿ ನಿಮ್ಮನ್ನು ತಟ್ಟಿ ಕುತ್ತಿಗೆಪಟ್ಟಿ ಹಿಡಿದು ಕೇಳುತ್ತವೆ.

ಕವಿ ತನ್ನ ಸಮುದಾಯದ ಸುತ್ತಲಿನ ಎಲ್ಲವನ್ನೂ ಕಾವ್ಯದ ವಸ್ತುವನ್ನಾಗಿ ಬಳಸಿಕೊಂಡು ಹೊಸ ಅರ್ಥ ನೀಡುತ್ತ, ಕರಾಳಹಾಸ್ಯದ ಮೂಲಕ ಓದುಗರಲ್ಲಿ ಭಾವತೀಕ್ಷ್ಣತೆಯನ್ನು ಉಂಟುಮಾಡುತ್ತಾರೆ. ಅನುವಾದವೂ ಅಷ್ಟೇ ಸಶಕ್ತವಾಗಿ ತನ್ನ ಕಾಣ್ಕೆಯನ್ನು ನೀಡಿದೆ.

ಒಂದು ಕಡೆ- ಒಡಿಶಾದ ಆದಿವಾಸಿ ಸಮುದಾಯದಿಂದ ಬಂದು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ದ್ರೌಪದಿ ಮುರ್ಮು ಅವರು; ಮತ್ತೊಂದು ಕಡೆ– ತನ್ನ ಸ್ವಪ್ರತಿಭೆ, ಪರಿಶ್ರಮದಿಂದ ಕುಸ್ತಿಯಲ್ಲಿ ದೊಡ್ಡ ಸಾಧನೆ ಮಾಡಿ ಪದ್ಮಶ್ರೀ ಪಡೆದ ಹರಿಯಾಣದ ಸಾಕ್ಷಿ ಮಲಿಕ್‌ ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸುತ್ತಲೇ ಇರುವ ದಾರುಣತೆ! ಈ ಸಂದರ್ಭದಲ್ಲಿ ಜಾರ್ಖಂಡ್‌ನ ಸಂತಾಲಿಯ ಬುಡಕಟ್ಟಿನ ನಿರ್ಮಲಾ ಪುತುಲ್‌ (ಅನುವಾದ: ರೇಣುಕಾ ನಿಡಗುಂದಿ) ಅವರ ಕವಿತೆಗಳ ಓದು ಹೆಚ್ಚು ಪ್ರಸ್ತುತ ಎನಿಸುತ್ತಿದೆ. 

ಇಲ್ಲಿನ ಎಷ್ಟೋ ಕವಿತೆಗಳನ್ನು ಓದುತ್ತ ಓದುತ್ತ ನಾನು ಕಣ್ಣೀರುಗರೆದಿದ್ದೇನೆ! ರಮ್ಯಕವಿತೆಗಳಂತೆ ಮನಸ್ಸಿನಲ್ಲೇ ಓದಿಕೊಂಡರೆ ಇದರ ಭಾವಸಾಂದ್ರತೆ ದಕ್ಕುವುದಿಲ್ಲ; ಬದಲಾಗಿ ಎದುರು ಕುಳಿತವರಿಗೆ ಅಥವಾ ನೀವೊಬ್ಬರೇ ದನಿತೆರೆದು ಓದಿಕೊಳ್ಳಿ.

-ಮೌನೇಶ ಬಡಿಗೇರ

****

ಹಿಂಸ್ರ ವಾಸ್ತವದ ವಸ್ತುನಿಷ್ಠ ನಿರೂಪಣೆ

ಶ್ರೀಧರ ಬಳಗಾರ ಅವರ ‘ವಿಸರ್ಗ’ ಕಳೆದ ವರ್ಷದ ಅತ್ಯುತ್ತಮ ಕೃತಿಗಳಲ್ಲೊಂದು. ಮನುಷ್ಯರನ್ನು ವ್ಯಕ್ತಿಗಳ ಎನ್ನುವ ಪರಿಧಿಯನ್ನು ಮೀರಿ ಮನುಷ್ಯಾವಸ್ಥೆಯ ಆಳದಲ್ಲಿ ಗ್ರಹಿಸಲು ಇದು ಹವಣಿಸುತ್ತದೆ. ಮನುಷ್ಯ ಬದುಕಿನ ಚಲನೆಗಳನ್ನು ಯಾರು, ಯಾವುದು ನಿರ್ದೇಶಿಸುತ್ತದೆ, ನಿಯಂತ್ರಿಸುತ್ತದೆ ಎನ್ನುವ ಪ್ರಶ್ನೆಯ ಜೊತೆಯಲ್ಲೇ ಬಿಡಿಸಬರದಂತೆ ಹೆಣೆದುಕೊಂಡಿರುವುದು ಬದುಕಿನ ಪರಿಸರ. ಒಂದು ಇನ್ನೊಂದರ ಮೇಲೆ‌  ಸ್ವಾಮ್ಯ ಪಡೆಯಲು ನಡೆಸುವ ಹೋರಾಟದ ಇದನ್ನು ಹೋರಾಟ ಎಂದು ಕರೆಯುವುದೂ ಸರಿಯಲ್ಲವೇನೋ. ಏಕೆಂದರೆ ಮನುಷ್ಯರೇ ಕಟ್ಟಿಕೊಂಡ ಸಾಮಾಜಿಕ ಸಂಸ್ಥೆಗಳು ಕೂಡ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಮನುಷ್ಯರನ್ನೇ ನುಂಗಿ ನೀರು ಕುಡಿಯುವ ವಿಲಕ್ಷಣ ದುರಂತವನ್ನು ಈ ಕೃತಿ ಕಾಣಿಸುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದಲೇ ಇದೊಂದು ಘನವಾದ ಕೃತಿಯಾಗಿದೆ. ಭೀಕರವೆನಿಸುವ ಹಿಂಸ್ರ ವಾಸ್ತವವನ್ನು ಈ ಕೃತಿ ವಸ್ತುನಿಷ್ಠವಾಗಿ ಹೇಳುತ್ತಲೇ ಕಲೆಗೆ ಮಾತ್ರ ಸಾಧ್ಯವಿರುವ ಅಂತಃಕರಣದಲ್ಲಿ ತೋಯ್ದು ನಿರೂಪಿಸುತ್ತದೆ.
ನಟರಾಜ್ ಹುಳಿಯಾರರ ‘ಕಥಾನಂತರ’, ನಾಗ ಹುಬ್ಳಿಯವರ ಅನುವಾದಿತ ಕೃತಿ ‘ವಿದ್ಯಾವಂತ ವೇಶ್ಯೆಯ ಆತ್ಮ ಕಥೆ’, ಕೃಷ್ಣಮೂರ್ತಿ ಹನೂರರ ‘ಕನ್ನ ಮರಿ’, ದಾದಾಪೀರ್ ಜೈಮನ್ ನಿರೂಪಿಸಿರುವ ರೂಮಿ ಹರೀಶ್ ಅವರ ‘ಜೋನ್ಪುರಿ ಖಯಾಲ್’, ರಹಮತ್‌ ತರೀಕೆರೆ ಅವರ ಆತ್ಮಕಥೆ ‘ಕುಲುಮೆ‘... ಇನ್ನೂ ಹಲವು ಕೃತಿಗಳು ನನಗೆ ಬಲು ಪ್ರಿಯವೇ ಆಗಿವೆ.

-ಎಂ.ಎಸ್. ಆಶಾದೇವಿ

****

ಮಹತ್ವಪೂರ್ಣ ಬಹುಮುಖಿ ಇತಿಹಾಸ

ರೂಪ ಹಾಸನ ಅವರು ನಿರೂಪಿಸಿರುವ ‘ಮಹಾಸಂಗ್ರಾಮಿ’ ಕೃತಿಯು ನಮ್ಮ ಕಾಲದ ಮಹತ್ವಪೂರ್ಣ ಬಹುಮುಖಿ ಇತಿಹಾಸವಾಗಿದೆ. ಇದು ಸಾಂಪ್ರದಾಯಿಕ ಅರ್ಥದಲ್ಲಿ ವ್ಯಕ್ತಿ ಚರಿತ್ರೆ ಅಲ್ಲ. ಏಕೆಂದರೆ ಈ ಕೃತಿಯ ಕೇಂದ್ರದಲ್ಲಿರುವುದು ಎಸ್‌.ಆರ್‌.ಹಿರೇಮಠ ಎನ್ನುವ ವ್ಯಕ್ತಿಯಲ್ಲ. ಅಲ್ಲಿರುವುದು ಅರ್ಧಶತಮಾನದ ಅನೇಕ ಮುಖ್ಯ ಚಾರಿತ್ರಿಕ ತಿರುವುಗಳ ಕಥೆ. ಆಧುನಿಕ ಯೂರೋಪು ಮತ್ತು ವಿಶ್ವದ ಬಲಶಾಲಿ ರಾಷ್ಟ್ರವಾಗಿದ್ದ ಅಮೆರಿಕಗಳು, ತಾವು ನೆಚ್ಚಿಕೊಂಡಿದ್ದ ಅಭಿವೃದ್ಧಿ, ಆಧುನಿಕತೆ ಇವುಗಳನ್ನು ತೀವ್ರವಾಗಿ ಪ್ರಶ್ನಿಸಿಕೊಂಡು ಸ್ವಾತಂತ್ರ್ಯ, ಅಸಮಾನತೆ, ವಿಧಿಸಿದ ಮಾನವಹಕ್ಕುಗಳ ಬಗ್ಗೆ ಚಿಂತಿಸಿ ಕ್ರಿಯಾಶೀಲವಾಗಿ ಬದಲಾವಣೆಗೆ ತೊಡಗಿಕೊಂಡಾಗ ಹುಟ್ಟಿದ ಪ್ರಜ್ಞೆ ಹಿರೇಮಠರನ್ನು ರೂಪಿಸುತ್ತದೆ. ಆದ್ದರಿಂದಲೇ ಅವರಿಗೆ ಅಮೆರಿಕದ ಥೋರೋ ಶೂಮಾಕರ್‌ ಇಂಥವರು ಗುರುಗಳಾಗಿ ಕಾಣುತ್ತಾರೆ. ಅಮೆರಿಕದಲ್ಲಿ ಇದ್ದುಕೊಂಡೇ ತುರ್ತು ಪರಿಸ್ಥಿತಿ ಹೇರಿದ್ದ ಶಕ್ತಿಗಳ ವಿರುದ್ಧ ಪ್ರಭಾವಶಾಲಿ ಹೋರಾಟವನ್ನು ನಡೆಸುತ್ತಾರೆ. ಭಾರತಕ್ಕೆ ಮರಳಿ ಬಂದ ಮೇಲೆ ಗಾಂಧಿ ಕನಸಿನ ಗ್ರಾಮ ಸ್ವರಾಜ್ಯವನ್ನು ಮೆಡ್ಲೇರಿಯಲ್ಲಿ ನಿರ್ಮಿಸುತ್ತಾರೆ. ಬಳ್ಳಾರಿ ರಿಪಬ್ಲಿಕ್‌ನ ವಿರುದ್ಧ ಯಶಸ್ವಿ ಹೋರಾಟವನ್ನು ನಡೆಸುತ್ತಾರೆ. ಇವೆಲ್ಲ ಈ ಕೃತಿಯಲ್ಲಿ ಅದ್ಭುತವಾಗಿ ನಿರೂಪಿತವಾಗಿದೆ. ಆದರೆ ಇದರಲ್ಲಿ ನಾಯಕ ಆರಾಧನೆ ಇಲ್ಲ. ಇದು ಯಾವ ವೈಭವೀಕರಣವೂ ಇಲ್ಲದೇ ನಮ್ಮ ಕಾಲದ ಬಹು ದೊಡ್ಡ ಹೋರಾಟಗಾರನ ಅನುಭವಗಳ ಕಥನದ ಮೂಲಕ ಅದೆಷ್ಟು ವಿಷಯಗಳನ್ನು ಚರ್ಚೆಗೆ ತರುತ್ತದೆ ಎಂದರೆ ಇದನ್ನು ರಾಜಕೀಯ–ಸಾಂಸ್ಕೃತಿಕ ಜ್ಞಾನಕೋಶವಾಗಿ ಓದಬಹುದು. ರೂಪ ಹಾಸನ ಅವರ ವಿರಳವೂ–ಸೂಕ್ಷ್ಮವೂ ಆಗಿರುವ ನಿರೂಪಣೆಯಿಂದಾಗಿ ಓದುವವರ ಬದುಕನ್ನು ಬದಲಾಯಿಸಬಲ್ಲ ಶಕ್ತಿ ಅದಕ್ಕಿದೆ.

-ರಾಜೇಂದ್ರ ಚೆನ್ನಿ

****

ಹದವರಿತ ಕಾವ್ಯಧ್ವನಿ

ಭಾಷೆ ಮತ್ತು ಆಕೃತಿಯ ವಿಷಯದಲ್ಲಿ ಸದಾ ಪ್ರಯೋಗಶೀಲರಾದ ಕೆ.ಪಿ.ಮೃತ್ಯುಂಜಯ ಅವರದ್ದು ಸಮಕಾಲೀನ ಸಂದರ್ಭದ ಹದವರಿತ ಕಾವ್ಯಧ್ವನಿ. ಇವರ ‘ಉಳಿದು ಬಿಡು ಒಂದು ಬಿಂದುವಾಗಿ’ ಸಂಕಲನವು ಸಮೃದ್ಧ ಭಾವಲೋಕದ ಪ್ರತೀಕವಾಗಿದೆ. ‘ಹೊಸ ದಿನದಂತೆ ಹೊಸ ಕವಿತೆ’ ಎಂದು ನಂಬಿ, ಅದರಂತೆ ಬರೆಯುತ್ತಿರುವ ಮೃತ್ಯುಂಜಯ ಅವರ ಕಾವ್ಯಭಾಷೆಯ ಶಕ್ತಿಯಿರುವುದು ಅದರ ಅಡಕದ ಗುಣದಲ್ಲಿ: ‘ಕನಸು ತುಂಬಿ ತುಳುಕಿ/ದುಃಖವಳಿದು ಅಳುಕಿ/ಉಕ್ಕಿ ಹರಿವ ಹೊಳೆಯಂತೆ ಮಾತು ಬೆಳೆದು/ಹೊಸದೇನೇ/ಈ ದಿನದಂತೆ/ಗಾಳಿ ಬೆಳಕಿನಂಥ-/ನನ್ನ ಕವಿತೆ’. ‘ನಿಂದ ನೀ ತಿಳುಕೊ’ ಎಂಬುದನ್ನು ಉತ್ಕಟವಾಗಿ ನೆಚ್ಚಿ ಬರೆಯುವ ಕವಿ ಮಾತ್ರ ಹೀಗೆ ತನ್ನ ಕಾವ್ಯಮೀಮಾಂಸೆಯನ್ನು ಕಟ್ಟಬಲ್ಲ/ಳು.
ಅಂತರಂಗ ಮತ್ತು ಬಹಿರಂಗದ ಸೋಜಿಗಗಳನ್ನು ಬೆಸೆದು ಕಥಾಪ್ರಕಾರವನ್ನು ಚೋದ್ಯವಾಗಿಸಿರುವ ಅನುಪಮಾ ಪ್ರಸಾದ್ ಅವರ ‘ಚೋದ್ಯ’ ಕಥಾಸಂಕಲನ; ಭಾಷೆಯ ಬಳಕೆಯನ್ನು ‘ಸರಿ’ಯಾಗಿ ತಿದ್ದುವ ಅಪಾರ ಅವರ ‘ಸರಿಗನ್ನಡಂ ಗೆಲ್ಗೆ; ಹೊಸಕಥನದ ಜಾಡು ಹಿಡಿದಂತಿರುವ ಸ್ವಾಮಿ ಪೊನ್ನಾಚಿಯವರ ‘ದಾರಿ ತಪ್ಪಿಸುವ ಗಿಡ’; ಒಲವಿನ ಹಂಬಲವನ್ನು ಪರೀಕ್ಷಿಸಿಕೊಳ್ಳುವಂತೆ ಮಾಡಿದ ಎಚ್.ಎಸ್.ಶ್ರೀಮತಿ ಅವರ ‘ಸಾಂಗತ್ಯ’ (ಅನುವಾದ) ಕೃತಿಗಳು ನನ್ನ ಅರಿವಿನ ಲೋಕವನ್ನು ಹಿಗ್ಗಿಸಿವೆ.

-ಜ.ನಾ.ತೇಜಶ್ರೀ

****

ದಲಿತ ಅನುಭವದ ಮೂಸೆಯ ಗಟ್ಟಿ ಕೃತಿ

ದು.ಸರಸ್ವತಿಯವರು ಅನುವಾದಿಸಿರುವ ಮರಾಠಿಯ ಶ್ರೇಷ್ಠ ಕತೆಗಾರರಲ್ಲೊಬ್ಬರಾದ ಬಾಬುರಾವ್ ಬಾಗೂಲ್‌ರ ‘When I Hid My Caste’ ಕೃತಿಯ ಕನ್ನಡಾನುವಾದ ‘ಬೀದಿ ಹೆಣ್ಣು’ ಸೃಜನಶೀಲ ಕೃತಿಗಳಲ್ಲಿ ಬಹಳ ಇಷ್ಟವಾಯಿತು. ಬಾಗೂಲ್ ಸ್ವಾತಂತ್ರ್ಯೋತ್ತರ ಭಾರತದ ಮೊದಲ ತಲೆಮಾರಿನ ದಲಿತ ಲೇಖಕರು. ಸುಧಾರಣಾವಾದಿ ಲೇಖಕರು ಕಟ್ಟಿಕೊಡುತ್ತಾ ಬಂದಿದ್ದ ದಲಿತ ಜಗತ್ತನ್ನು ತಮ್ಮ ಕತೆಗಳ ಮೂಲಕ ಹೊಡೆದು ಉರುಳಿಸಿಬಿಟ್ಟವರು. ತಳಸಮುದಾಯಗಳ ಪಾತ್ರಗಳು ಕೇವಲ ದಮನಕ್ಕೊಳಗಾಗುವುದಕ್ಕಷ್ಟೇ ಸೀಮಿತವಾಗದೆ ಸಮಾಜದಲ್ಲಿ ಘನತೆಯಿಂದ ಬದುಕುವುದಕ್ಕಾಗಿ ಹೋರಾಡುತ್ತವೆ ಎನ್ನುವುದನ್ನು ತೋರಿಸಿಕೊಟ್ಟವರು. ದಲಿತ ಅನುಭವದ ಮೂಸೆಯಲ್ಲಿ ಮೂಡಿರುವ ಈ ಕತೆಗಳು ಸಮಕಾಲೀನ ಸಮಾಜಕ್ಕೆ ಕನ್ನಡಿ ಹಿಡಿಯುವಂತಿವೆ.

ಜೊತೆಗೆ ರಾಜೇಂದ್ರ ಚೆನ್ನಿಯವರ ‘ಸಾಂಸ್ಕೃತಿಕ ರಾಜಕಾರಣ’ ಕಳೆದ ಕೆಲವು ವರ್ಷಗಳಿಂದ ಸೃಷ್ಟಿಯಾಗಿರುವ ಸಾಮಾಜಿಕ ಬಿಕ್ಕಟ್ಟುಗಳಿಗೆ ಜವಾಬ್ದಾರಿಯುತ ಚಿಂತಕರೊಬ್ಬರು ಪ್ರತಿಕ್ರಿಯಿಸಬೇಕಾದ ಮಾದರಿ ಯಾವುದೆಂಬುದನ್ನು ತೋರಿಸುವ ಕೃತಿಯಾಗಿದೆ. ಗುರುಪ್ರಸಾದ್ ಕಂಟಲಗೆರೆ ನಿರೂಪಿಸಿರುವ ದಲಿತ ಚಳವಳಿಗಾರ ಕುಂದೂರು ತಿಮ್ಮಯ್ಯನವರ ಆತ್ಮಕಥನ ‘ಅಂಗುಲಿಮಾಲ’ ವಿಶಿಷ್ಟ ಮತ್ತು ಪ್ರಾಮಾಣಿಕ ಕಥನವಾಗಿದೆ. ಶ್ರೀಪಾದಭಟ್ ಅವರ ‘ವಿಷವಟ್ಟಿ ಸುಡುವಲ್ಲಿ’, ಬಂಜಗೆರೆ ಜಯಪ್ರಕಾಶ್ ಅನುವಾದಿಸಿರುವ ಗೇಲ್ ಓಮ್ವೆಡ್ತ್ ಅವರ ‘ಬೇಗಂಪುರ’, ವಿಕಾಸ್ ಮೌರ್ಯ ಅನುವಾದಿಸಿರುವ ಎಲಿನಾರ್ ಝೆಲಿಯಟ್ ಅವರ ‘ಅಂಬೇಡ್ಕರ್ ಜಗತ್ತು’ ಈ ಕಾಲಕ್ಕೆ ಬೇಕಿರುವ ಬೌದ್ಧಿಕ ಹತಾರಗಳನ್ನು ಸೃಷ್ಟಿಸಬಲ್ಲ ಚಿಂತನೆಗಳನ್ನು ಕೊಟ್ಟರೆ, ಸಂವರ್ತ ಸಾಹಿಲ್ ಅನುವಾದಿಸಿರುವ ಜೆಸಿಂತಾ ಕರ್ಕೆಟ್ಟಾ ಅವರ ‘ಗೋರಿಯ ಮೇಲೆ ರಾಗಿಯ ಕೊನರು’ ಆದಿವಾಸಿ ಸಮುದಾಯದ ಸಂವೇದನಾಶೀಲ ಕವಯಿತ್ರಿಯ ದನಿಯನ್ನು ಕನ್ನಡಕ್ಕೆ ಪರಿಚಯಿಸುವ ಮೂಲಕ ಮಹತ್ವದ ಕೃತಿಯಾಗಿ ನಿಲ್ಲುತ್ತದೆ. 

–ವಿ.ಎಲ್. ನರಸಿಂಹಮೂರ್ತಿ

****

ವಿಮರ್ಶಾ ಪ್ರಜ್ಞೆಯ ಬಹುದೊಡ್ಡ ಮಾದರಿ

ಭಾಷೆ, ತತ್ವ, ತರ್ಕಗಳು ಹಿಂದೆ ಸರಿದು ಕಥನವೇ ಮುನ್ನೆಲೆಗೆ ಬರುತ್ತಿರುವ ಈ ಹೊತ್ತಿನಲ್ಲಿ ಸಿ.ಜಿ. ಲಕ್ಷ್ಮೀಪತಿ ಅವರ ‘ಲೋಕದೃಷ್ಟಿ ಮಾರ್ಕ್ಸ್‌ವಾದೋತ್ತರ ಮತ್ತು ಆಧುನಿಕ ಚಿಂತಕರ ಕಥನ’ ಕೃತಿಯು ಅಂತರಶಿಸ್ತೀಯ ಅಧ್ಯಯನಶೀಲರಿಗೆ ಮಹತ್ವದ ಒಳನೋಟಗಳನ್ನು ಒದಗಿಸಿದೆ. ಪಶ್ಚಿಮದ ಜ್ಞಾನಮೀಮಾಂಸೆಯನ್ನು ಕನ್ನಡಕ್ಕೆ ದಕ್ಕಿಸಿಕೊಡುವ ಪ್ರಯತ್ನ ಇಲ್ಲಿದೆ. ಸ್ವವಿಮರ್ಶೆ ಮತ್ತು ಲೋಕವಿಮರ್ಶೆಯೆಂಬ ಎರಡೂ ಮಾದರಿಗಳು ಸಮ್ಮಿಳಿತಗೊಂಡ ಅಕೆಡೆಮಿಕ್‌ ವಿದ್ಯಾರ್ಥಿ ಹೊತ್ತಿಗೆಯಂತೆ ರಚನೆ ಕಾಣಿಸಿದೆ. ಮಾರ್ಕ್ಸ್‌ವಾದೋತ್ತರ ಮತ್ತು ಆಧುನಿಕವೆಂಬ ನೆಲೆಯಲ್ಲಿ ಕೃತಿಯನ್ನು ಎರಡು ಭಾಗವಾಗಿ ವಿಭಾಗಿಸಿದ್ದು, ಓದುಗನಿಗೆ ಅರ್ಥಮಾಡಿಕೊಳ್ಳಲಿರುವ ಸರಳೀಕೃತ ಮಾದರಿಯಂತಿದೆ.

ಮಾನವಿಕದ ಮಾತೃವಾದ ಸಮಾಜಶಾಸ್ತ್ರವನ್ನು ಮೂಲಾಧಾರವಾಗಿಟ್ಟುಕೊಂಡು ಅನ್ಯಜ್ಞಾನಶಿಸ್ತುಗಳ ಹಿನ್ನೆಲೆಯಲ್ಲಿ ಸಮಕಾಲೀನ ಸಮಾಜವನ್ನು ಗ್ರಹಿಸಲು ಇಲ್ಲಿ ಅವಕಾಶವಿದೆ.  ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಮುಖ ತತ್ವಶಾಸ್ತ್ರಜ್ಞರನ್ನು ಪರಿಚಯಿಸುವ; ಕಾರ್ಲ್‌ ಮಾರ್ಕ್ಸ್‌ ನಂತರದ ತೃತೀಯ ಜಗತ್ತಿನಲ್ಲಿ ತತ್ವಶಾಸ್ತ್ರ, ಮಾರ್ಕ್ಸ್‌ವಾದ, ವಸಾಹತ್ತೋತ್ತರ ಚಿಂತನೆಗಳ ಬೆಳವಣಿಗೆಯ ಆಯಾಮಗಳನ್ನು ಪರಿಶೀಲಿಸುವ; ಮಾರ್ಕ್ಸ್‌ ರೂಪಿಸಿದ ಮಾರ್ಕ್ಸ್‌ವಾದದ ಪುನರ್‌ ವಿಮರ್ಶೆಯ ನೆಲೆಗಳನ್ನು ಗ್ರಹಿಸುವ ಕಾರ್ಯವನ್ನು ಈ ಪುಸ್ತಕ ಮಾಡಿದೆ. ಹನ್ನೆರಡು ಮಂದಿ ಚಿಂತಕರಲ್ಲಿ ಹೆಣ್ಣು ಲೋಕದೃಷ್ಟಿಗೆ ಕೃತಿಯೊಳಗೆ ಸಿಮನ್‌ ದುಬುವಾ ಎಂಬ ಏಕೈಕ ಚಿಂತಕಿಗೆ ಮಾತ್ರ ಸ್ಥಾನ ದಕ್ಕಿದೆ ಎಂಬುದೆ ಕೃತಿಯ ಮಿತಿ. ಈ ಕೃತಿಯು ವಿಮರ್ಶಾ ಪ್ರಜ್ಞೆಯ ಬಹುದೊಡ್ಡ ಮಾದರಿಯೇ ಸರಿ. ಇದಲ್ಲದೆ ಸುರೇಶ್‌ ನಾಗಲಮಡಿಕೆ ಅವರ ‘ಮಣ್ಣಿನ ಕಸುವು’ ಕೃತಿಯು ಓದನ್ನು ವಿಸ್ತರಿಸಲು ಸಹಕರಿಸಿದೆ.

–ಮುಸ್ತಫಾ ಕೆ.ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT