ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ: ಮನ್ನಣೆ ಸಿಗದ ಬರಿಗಾಲು ಯೋಧರು

Published 30 ಸೆಪ್ಟೆಂಬರ್ 2023, 23:30 IST
Last Updated 30 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಮೂಲ ಲೇಖಕರು: ಪಿ ಸಾಯಿನಾಥ್, ಕನ್ನಡಕ್ಕೆ: ಜಿ ಎನ್ ಮೋಹನ್

ದೆಮಾತಿ ಡೆ ಸಬರ್‌ ‘ಸಾಲಿಹಾನ್‌’ ಸ್ವಾತಂತ್ರ್ಯ ಹೋರಾಟಗಾರಳಲ್ಲ. ಭಾರತ ಸರ್ಕಾರಕ್ಕಂತೂ ಅಲ್ಲವೇ ಅಲ್ಲ. ಆದರೂ ಕೇವಲ 16 ವರ್ಷದ ಈ ಆದಿವಾಸಿ ತರುಣಿ ಒಡಿಶಾದ ತನ್ನ ಗ್ರಾಮದ ಮೇಲೆ ದಾಳಿ ಮಾಡಿದ ಬ್ರಿಟಿಷ್‌ ಪೊಲೀಸರ ವಿರುದ್ಧ ಅದ್ಭುತ ಪ್ರತಿದಾಳಿಯನ್ನು ಮುನ್ನಡೆಸಿದಳು. ಈಕೆ ಹಾಗೂ 40 ಇತರ ಬುಡಕಟ್ಟು ಮಹಿಳೆಯರು ಸಶಸ್ತ್ರ ಪೊಲೀಸ್‌ ಪಡೆಯನ್ನು ಕೇವಲ ಲಾಠಿಗಳಿಂದ ಎದುರಿಸಿ ಗೆದ್ದರು.
ಆಕೆ ಜೈಲಿಗೆ ಹೋಗಲಿಲ್ಲ, ಸಂಘಟಿತ ರಾಜಕೀಯದ ಭಾಗವಾಗಿರಲಿಲ್ಲ. ನಾಗರಿಕ ಅಸಹಕಾರ ಅಥವಾ ಕ್ವಿಟ್‌ ಇಂಡಿಯಾದಂತಹ ಚಳವಳಿಯಲ್ಲಿ ಯಾವುದೇ ಪಾತ್ರ ವಹಿಸಿರಲಿಲ್ಲ. ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದ ಆಕೆಯ ಗ್ರಾಮ ಸಾಲಿಹಾದಲ್ಲಿ ಈಗಲೂ ಆ ಶೌರ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಇದೇ ಗ್ರಾಮದಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಪ್ರತಿರೋಧ ತೋರಿದ 17 ಜನರ ಹೆಸರನ್ನು ನಮೂದಿಸಲಾಗಿದೆ. ಆದರೆ, ಆ ಪಟ್ಟಿಯಲ್ಲಿ ಈಕೆಯ ಹೆಸರೇ ಇಲ್ಲ.

ಸಾಲಿಹಾನ್‌ಳಿಗೆ ಭಾರತ ಸರ್ಕಾರ ಎಂದಿಗೂ ಸ್ವಾತ್ರಂತ್ರ್ಯ ಹೋರಾಟಗಾರ್ತಿಯ ಗೌರವವನ್ನು ನೀಡಲಿಲ್ಲ. ಆದರೆ, ಈ ಕೃತಿ ನೀಡಿದೆ.  ಇನ್ನು ಮುಂದಿನ ಐದಾರು ವರ್ಷಗಳಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬರೂ, ಅಂದರೆ ಯಾರೊಬ್ಬರೂ ಬದುಕುಳಿದಿರುವುದಿಲ್ಲ. ಈ ಕೃತಿಯಲ್ಲಿ ಕಾಣಿಸಿಕೊಂಡಿರುವವರ ಪೈಕಿ ಅತಿ ಕಿರಿಯರೆಂದರೆ 92 ವರ್ಷದವರು ಹಾಗೂ ಹಿರಿಯರೆಂದರೆ 104 ವರ್ಷದವರು. ಭಾರತದ ಹೊಸ ತಲೆಮಾರಿನ ಯುವ ಜನರಿಗೆ ಈ ಸ್ವಾತಂತ್ರ್ಯ ಯೋಧರನ್ನು ಎಂದೂ ಭೇಟಿಯಾಗಲು, ನೋಡಲು, ಮಾತನಾಡಲು ಅವಕಾಶವೇ ದೊರೆಯುವುದಿಲ್ಲ. ನಾವು ಯಾರು, ಯಾವ ಕಾರಣಕ್ಕಾಗಿ ಹೋರಾಟ ಮಾಡಿದೆವು ಎಂದು ಅವರೇ ಖುದ್ದಾಗಿ ಹೇಳಲು ಸಿಗುವುದಿಲ್ಲ.
ಭಾರತ ಸ್ವಾತಂತ್ರ್ಯದ ಬಗ್ಗೆ ಇರುವ ಬಹುತೇಕ ಕೃತಿಗಳು, ಅದರಲ್ಲಿಯೂ ಯುವಜನರಿಗಾಗಿ ಇರುವ ಪುಸ್ತಕಗಳು, ಕೆಲವು ಆಯ್ದ ವ್ಯಕ್ತಿಗಳನ್ನು ಮಾತ್ರ ಈ ದೇಶ ಹುಟ್ಟುವುದಕ್ಕೆ ಕಾರಣ ಎನ್ನುವಂತೆ ಚಿತ್ರಿಸಿವೆ. ಇದರ ಮಧ್ಯೆಯೂ ಕೆಲವು ಒಳ್ಳೆಯ ಪಠ್ಯಪುಸ್ತಕಗಳು ಸ್ವಾತಂತ್ರ್ಯ ಹಾಗೂ ಬಿಡುಗಡೆಗಾಗಿ ನಡೆದ ಹೋರಾಟವನ್ನು ವಿವೇಕಯುತವಾಗಿ ಹಾಗೂ ವಿವರವಾಗಿ ನೋಡಿವೆ. ಆದರೆ, ಇಂತಹವುಗಳನ್ನು ಒಂದು ರಾಜ್ಯದ ನಂತರ ಇನ್ನೊಂದು ರಾಜ್ಯವು ಹೊಸಗಿ ಹೊರಗೆ ಹಾಕಿ ಅದರ ಬದಲು ಭಯಾನಕ ಸುಳ್ಳುಗಳಿಂದ ಕೂಡಿದ ಪುಸ್ತಕಗಳನ್ನು ಮುಂದಿಡುತ್ತಿವೆ. ಈ ಪುಸ್ತಕಗಳು ಚರಿತ್ರೆ ಎಂದು ಕರೆಸಿಕೊಳ್ಳುವುದಿರಲಿ, ಪಠ್ಯಪುಸ್ತಕವಾಗಿ ಇರಲೂ ಅರ್ಹತೆ ಇಲ್ಲದ್ದು.

ಇಂದು ನಮ್ಮ ರಾಜಕೀಯ ಮತ್ತು ಸಾರ್ವಜನಿಕ ವಲಯದ ಪ್ರಕಾರ, ನಮ್ಮ ಸ್ವಾತಂತ್ರ್ಯ ಹೋರಾಟ ಆರಂಭವಾಗಿರುವುದು 800 ವರ್ಷಗಳ ಹಿಂದೆಯೇ. ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವನ್ನು ಈ ರೀತಿ ಕಟ್ಟು ಕಥೆಯಾಗಿ ಮಾರ್ಪಡಿಸಿದರೆ ಕಥೆ ಎನ್ನುವ ಪ್ರಕಾರಕ್ಕೇ ಕೆಟ್ಟ ಹೆಸರು ತರುತ್ತವೆ. 

ಕೇಂದ್ರ ಸರ್ಕಾರವು ಮಾಡಿರುವ ‘ಹೆಸರುವಾರು ಹಾಗೂ ರಾಜ್ಯವಾರು ಸ್ವಾತಂತ್ರ್ಯ ಯೋಧರು ಹಾಗೂ ಅರ್ಹ ಅವಲಂಬಿತರ ಪಟ್ಟಿ’ಯಲ್ಲಿ 2022 ಜನವರಿ 31ರವರೆಗೆ 23 ಸಾವಿರ ಹೆಸರುಗಳಿವೆ. ಇದು ‘ಸ್ವತಂತ್ರತಾ ಸೈನಿಕ್‌ ಸಮ್ಮಾನ್‌ ಯೋಜನಾ’ (ಎಸ್‌ಎಸ್‌ಎಸ್‌ವೈ) ಅಡಿ ಪಿಂಚಣಿಯನ್ನು ಪಡೆಯುತ್ತಿರುವವರ ದಾಖಲೆ. ಇವರ ಖಾತೆಗಳಿಗೆ ಪ್ರತಿ ತಿಂಗಳೂ ₹30 ಸಾವಿರ ಮೀರದಂತೆ ಹಣವನ್ನು ಪಾವತಿಸಲಾಗುತ್ತಿದೆ. ರಾಜ್ಯಗಳು ಹಾಗೂ ಕೇಂದ್ರೀಯ ವಲಯಗಳ ಪಿಂಚಣಿ ಪಟ್ಟಿಯಲ್ಲಿ ಇನ್ನೂ ಹಲವರಿದ್ದಾರೆ.

ಮೊದಲನೆಯದಾಗಿ, ಈ ಎಲ್ಲಾ ಪಟ್ಟಿಯಲ್ಲಿ ಮೊದಲಿನಿಂದಲೂ ಇದ್ದ ಬಹುತೇಕ ಮಂದಿ ಈಗ ಬದುಕಿಲ್ಲ. ಅಲ್ಲಿರುವ ಹೆಚ್ಚು ಹೆಸರುಗಳು ನಿಧನರಾಗಿ ಬಹುಕಾಲ ಸಂದಿರುವ ಸ್ವಾತಂತ್ರ್ಯಯೋಧರ ಮೇಲೆ ಅವಲಂಬಿತರಾಗಿರುವವರದ್ದು. ಈ ಹೋರಾಟಗಾರರ ಕುಟುಂಬಗಳವರು ಹಲವು ಪ್ರಕರಣಗಳಲ್ಲಿ ‘ಅರ್ಹ ಅಲವಂಬಿತರ’ ಹೆಸರಿನಲ್ಲಿ ಅರ್ಧದಷ್ಟು ಪಿಂಚಣಿಗೆ ಮಾತ್ರ ಅರ್ಹರು. ಇದು ಒಳ್ಳೆಯದೇ. ಆದರೆ, ಪಟ್ಟಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ನಿಜಸಂಖ್ಯೆಯನ್ನು ಇದು ಗೊಂದಲಗೊಳಿಸುತ್ತದೆ.

ಎರಡನೆಯದಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅತಿದೊಡ್ಡ ಸಂಖ್ಯೆಯ ಹೋರಾಟಗಾರರೆಲ್ಲರೂ ಈ ಅಧಿಕೃತ ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಇದರ ಅರ್ಥ ಸಾವಿರಾರು ಹೋರಾಟಗಾರರು ಈ ಪಟ್ಟಿಯಲ್ಲಿ ಎಂದೂ ಕಾಣಿಸಿಕೊಂಡಿಲ್ಲ.

1980ರ ‘ಸ್ವತಂತ್ರತಾ ಸೈನಿಕ ಸಮ್ಮಾನ ಯೋಜನಾ’ ಇದ್ದುದರಲ್ಲಿಯೇ ಉದಾರವಾಗಿತ್ತು. ಆದರೂ ಈ ಪಿಂಚಣಿಗೆ ಬೇಕಾಗಿದ್ದ ಮೊದಲ ಅರ್ಹತೆಯೇ ‘ಸ್ವಾತಂತ್ರ್ಯಪೂರ್ವದಲ್ಲಿ ಮುಖ್ಯ ಜೈಲಿನಲ್ಲಿ ಕನಿಷ್ಠ ಆರು ತಿಂಗಳು ಸೆರೆವಾಸ ಅನುಭವಿಸಿರಬೇಕು’ ಎನ್ನುವುದು. ಮಹಿಳೆಯರು, ದಲಿತರು ಹಾಗೂ ಆದಿವಾಸಿಗಳಿಗೆ ಇದು ಮೂರು ತಿಂಗಳು.

ನೇತಾಜಿ ಬೋಸ್‌ರ ಇಂಡಿಯನ್‌ ನ್ಯಾಷನಲ್‌ ಆರ್ಮಿಗೆ ಸೇರಿದ ಒಡಿಶಾದ ಮಹಿಳೆ ಲಕ್ಷ್ಮಿ ಪಾಂಡಾ ನನ್ನನ್ನು ಕೇಳಿದಂತೆ–‘ನಾನು ಎಂದಿಗೂ ಜೈಲಿಗೆ ಹೋಗಲಿಲ್ಲ, ನಾನು ಬಂದೂಕು ತರಬೇತಿ ಪಡೆದರೂ ಯಾರಮೇಲೂ ಗುಂಡು ಹಾರಿಸಲಿಲ್ಲ, ಅಂದಮಾತ್ರಕ್ಕೆ ನಾನು ಸ್ವಾತಂತ್ರ್ಯ ಹೋರಾಟಗಾರಳಲ್ಲವಾ? ನಾನು ಕೆಲಸ ಮಾಡಿದ್ದು ಬ್ರಿಟಿಷರ ಬಾಂಬ್‌ಗಳಿಗೆ ಯಾವಾಗಲೂ ಗುರಿಯಾಗಿದ್ದ ಐಎನ್‌ಎಯ ಅರಣ್ಯ ಶಿಬಿರಗಳಲ್ಲಿ. ಇದರ ಅರ್ಥ ನಾನು ಸ್ವಾತಂತ್ರ್ಯ ಚಳವಳಿಗೆ ಯಾವ ರೀತಿಯ ಕೊಡುಗೆಯನ್ನೂ ಕೊಡಲಿಲ್ಲ ಎಂದೇ? ನನ್ನ 13ನೆಯ ವಯಸ್ಸಿನಲ್ಲಿಯೇ ನಾನು ನಮ್ಮ ಕ್ಯಾಂಪ್‌ಗಳಿಂದ ಹೋರಾಟಕ್ಕೆ ಹೋಗುತ್ತಿದ್ದ ಎಲ್ಲರಿಗೂ ಅಡುಗೆ ಬೇಯಿಸಿ ಹಾಕುತ್ತಿದ್ದೆ. ನಾನು ಹೋರಾಟದ ಭಾಗವಲ್ಲವೇನು?’

1980ರ ಪಿಂಚಣಿ ದಾಖಲೆಯಲ್ಲಿ ಇನ್ನೂ ಒಂದು ಸಮಸ್ಯೆ ಇತ್ತು. ಇದು ‘ಸಂಗಾತಿ’ ಎನ್ನುವ ಪದದ ಬದಲು ‘ವಿಧವೆ’ ಎಂಬ ಪದವನ್ನು ಬಳಸಿದೆ. ಇದು ಸ್ವಾತಂತ್ರ್ಯ ಹೋರಾಟಗಾರರೆಲ್ಲ ಪುರುಷರು ಮಾತ್ರ ಎಂದು ಭಾವನೆ ಬರುವಂತೆ ಮಾಡಿದೆ.

ಈ ಕಾಯ್ದೆ ಕಡ್ಡಾಯ ಮಾಡಿರುವ ನಿಯಮಗಳನ್ನು ಮೀರಿ ಹೋರಾಟದಲ್ಲಿ ತೀವ್ರ ಕಷ್ಟಕ್ಕೆ ಗುರಿಯಾದ ಸುಮಾರು ಜನರಿದ್ದರು. ಹಲವರು ಊಹಿಸಿಕೊಳ್ಳಲಾಗದ ಅಪಾಯಗಳನ್ನು ಮೈಮೇಲೆ ಎಳೆದುಕೊಂಡು, ಇತರ ಹಲವಾರು ರೀತಿಯಲ್ಲಿ ತೊಂದರೆ ಅನುಭವಿಸಿದ್ದರು. ಇಷ್ಟೋ ವಿಜಯಗಳು ಇವರಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಅವರ ಕೆಲಸವನ್ನು ಅಷ್ಟು ಮುಖ್ಯವಾಗಿ ಪರಿಗಣಿಸದ ಕಾರಣ ಅಧಿಕಾರಿಗಳ ಕಣ್ಣಲ್ಲಿ ಅವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವ ಮನ್ನಣೆಗೆ ಅರ್ಹರಾಗಲಿಲ್ಲ.

ಈ ಕೃತಿಯಲ್ಲಿ ನೀವು ಕಾಣುವ ಬರಹಗಳಲ್ಲಿರುವ ಯೋಧರಿಗೆ ಹಣವಲ್ಲ, ಮನ್ನಣೆ ಮುಖ್ಯವಾಗಿತ್ತು ಎನ್ನುವುದು ಅರ್ಥವಾಗುತ್ತದೆ. ಹಣವೂ ಮುಖ್ಯವಾಗಿತ್ತು. ಆದರೆ, ಅವರು ಅದು ತಮ್ಮ ರಾಷ್ಟ್ರವು ತಮ್ಮನ್ನು ಪ್ರೀತಿಸುವ ಅರ್ಧದಷ್ಟು ಮುಖ್ಯ ಎಂದುಕೊಂಡಿರಲಿಲ್ಲ. ಹಾಗೆಯೇ ಸ್ವಾತಂತ್ರ್ಯ ಮತ್ತು ಬಿಡುಗಡೆಗಾಗಿ ನಡೆದ ಭಾರತದ ಮಹಾನ್‌ ಹೋರಾಟದಲ್ಲಿ ಈ ಸಾಮಾನ್ಯ ಜನರ ಪಾತ್ರವನ್ನು ನಾವು ಗುರುತಿಸುವುದು ಅಷ್ಟೇ ಮುಖ್ಯವಾಗಿತ್ತು.

ಹಲವರಿಗೆ ಹಣ ಅಗತ್ಯ ಇತ್ತು, ಹಾಗೆಯೇ ಮನ್ನಣೆಯೂ. 1947ರ ನಂತರದ ನಮ್ಮಂತಹ ಪೀಳಿಗೆಗೆ ಅವರ ಬದುಕಿನ ಗಾಥೆಗಳು ಬೇಕಿದ್ದವು; ಅದರಿಂದ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ಅವರು ಅರ್ಥ ಮಾಡಿಕೊಂಡಿದ್ದನ್ನು ತಿಳಿಯಲು, ಸ್ವಾತಂತ್ರ್ಯ ಮತ್ತು ಬಿಡುಗಡೆ ಒಂದೇ ಅಲ್ಲ ಎಂದು ತಿಳಿಯಲು. 

[object Object]
Koneya Herogalu Coverpage

ಕೊನೆಯ ಹೀರೋಗಳು

ಲೇ: ಪಿ ಸಾಯಿನಾಥ್

ಅನು: ಜಿ ಎನ್ ಮೋಹನ್

ಪ್ರ: ಬಹುರೂಪಿ

ಸಂ: 70191 82729

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT