ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ವರ್ತಮಾನದ ಸನ್ನಿವೇಶಗಳ ಚಿತ್ರಣ

Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ಸಮಕಾಲೀನ ವಿದ್ಯಾಮಾನಗಳಿಗೆ ಪ್ರತಿಸ್ಪಂದಿಸುವ ವಿಷಯ ವಸ್ತುಗಳ ಮೇಲೆ ಲೇಖಕರ ಚಿಕಿತ್ಸಕ ನೋಟವೇ ಈ ಪ್ರಬಂಧ ಸಂಕಲನ. ಇಲ್ಲಿರುವ ಇಪ್ಪತ್ತೊಂದು ಬೇರೆ ಬೇರೆ ವಿಷಯಗಳ ಕುರಿತ ಪ್ರಬಂಧಗಳಲ್ಲಿ ತೌಲನಿಕ ದೃಷ್ಟಿಕೋನ ಕಾಣಿಸುತ್ತದೆ. ಇದರಲ್ಲಿ ‘ಐತಿಹಾಸಿಕ ರೈತ ಚಳುವಳಿ: ಒಂದು ನೋಟ’, ‘ಚರಿತ್ರೆಯ ಪುಟ ಸೇರುತ್ತಿರುವ ಜೆಎನ್‌ಯು’, ‘ಅಂಕಿ ಅಂಶಗಳು, ಸರಕಾರ ಮತ್ತು ಪ್ರಜಾಪ್ರಭುತ್ವ’, ‘ಹೆಚ್ಚುತ್ತಿರುವ ಯುದ್ಧೋನ್ಮಾದ’, ‘ಭಾರತಕ್ಕೊಂದು ಭಾಷಾ ನೀತಿ ಏಕಿಲ್ಲ?’ ಹೀಗೆ ಭಿನ್ನ ವಿಷಯಗಳ ಕುರಿತು ಅವುಗಳ ಸಾಧಕ ಬಾಧಕಗಳನ್ನು ವಿವರವಾಗಿ ಚರ್ಚಿಸಿದ್ದಾರೆ. ಲೇಖಕ ಎತ್ತುವ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಮತ್ತು ಅದರ ಅಗತ್ಯವನ್ನು ಈ ಪ್ರಬಂಧಗಳು ವಿವರಿಸುತ್ತವೆ. ನಾಡು, ನುಡಿ, ಲಿಂಗ, ಜಾತಿ, ಜಾನಪದ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಧರ್ಮ, ಸಂಘರ್ಷ, ಉಗ್ರವಾದ ಎಲ್ಲವೂ ಇಲ್ಲಿ ಸೃಜನಶೀಲ ಆಯಾಮ ಪಡೆದಿವೆ.

ಸರ್ಕಾರ 2020ರಲ್ಲಿ ರೂಪಿಸಿದ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಸುದೀರ್ಘ ರೈತ ಚಳವಳಿ ನಡೆಯಿತು. ಅದರ ಮೇಲೆ ರೂಪಿತವಾದ ‘ಐತಿಹಾಸಿಕ ರೈತ ಚಳುವಳಿ: ಒಂದು ನೋಟ’ ಪ್ರಬಂಧ ದೇಶದಲ್ಲಿ ರೈತ ಚಳುವಳಿಯ ಹುಟ್ಟು ಮೊಘಲ್‌ ದೊರೆಗಳ ಕಾಲದಲ್ಲಿಯೇ ಆಗಿತ್ತು. 1767ರಲ್ಲಿ ಜಾರ್ಖಂಡ್‌ನಲ್ಲಿ ಗೇಣಿ ವಿರುದ್ಧ ರೈತರು ಹೋರಾಟ ನಡೆಸಿದ್ದರು. 1781ರಲ್ಲಿ ಬಿಹಾರದಲ್ಲಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ಹೋರಾಟದ ಸಂಗತಿ ಸೇರಿದಂತೆ ಗೋವಾ, ತಮಿಳುನಾಡು, ರಾಜಸ್ಥಾನಗಳಲ್ಲಿ ನಡೆದ ರೈತ ಹೋರಾಟದ ಉಲ್ಲೇಖವನ್ನೂ ಮಾಡುತ್ತಾರೆ. ಕರ್ನಾಟಕದಲ್ಲಿ ಟಿಪ್ಪೂ ರೈತ ಆದಾಯ ಹೆಚ್ಚಿಸಲು ಕ್ರಮಕೈಗೊಂಡಿದ್ದ ಬಗ್ಗೆ ಪ್ರಸ್ತಾಪಿಸುತ್ತಾರೆ. ಹೊಸ ಮೂರು ಕಾಯಿದೆಗಳಿಗೆ ಭಾರತೀಯ ರೈತರು ಒಡ್ಡಿದ ಪ್ರತಿರೋಧದ ವಿವರವನ್ನು ನೀಡುತ್ತಲೇ, ಜಾಗತೀಕರಣದ ಬದಲಾದ ಪರಿಸ್ಥಿತಿಯಲ್ಲಿ ಕೃಷಿಕ್ಷೇತ್ರದ ಸುಧಾರಣೆ ಅಗತ್ಯವನ್ನೂ ಉಲ್ಲೇಖಿಸುತ್ತಾರೆ.

‘ಜೆಎನ್‌ಯು’ ಪ್ರಬಂಧದಲ್ಲಿ ವಿಶ್ವವಿದ್ಯಾಲಯಗಳು ಮುಕ್ತ ಚರ್ಚೆಯ ಕೇಂದ್ರಗಳಾಗಿ ದೇಶವನ್ನು ವೈಜ್ಞಾನಿಕವಾಗಿ ಬೆಳೆಸಬೇಕು. ವಿವಿಗಳಲ್ಲಿ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಿದ್ದರಿಂದ ಜಾತಿ ನುಸುಳಿತು, ಅಲ್ಲಿ ಶೈಕ್ಷಣಿಕ ಆದ್ಯತೆ ಕಡಿಮೆಯಾಗಿದೆ. ಪಠ್ಯವೂ ರಾಜಕೀಯ ಪ್ರೇರಿತವಾಗಿ ರೂಪಿಸುವ ಕ್ರಿಯೆಗೆ ವಿಷಾದವೂ ಇದೆ. ದೆಹಲಿಯಲ್ಲಿರುವ ದೇಶದ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಂಸ್ಥಾಪನೆಯಾದ  ಕಾಲದಿಂದ ಹಿಡಿದು ಇತ್ತೀಚಿನ ಘಟನೆಗಳವರೆಗಿನ ಅವಲೋಕನವನ್ನು ಇಲ್ಲಿ ಕಾಣಬಹುದು.

ಸಂಕಲನದ ಶೀರ್ಷಿಕೆಯೇ ಹೇಳುವಂತೆ ವರ್ತಮಾನದ ಸನ್ನಿವೇಶಗಳೇ ಪ್ರಬಂಧದ ಹೂರಣ. ಪ್ರತಿ ಬರಹವೂ ವರ್ತಮಾನದ ಆಚೆಗೆ ಸತ್ಯ ದರ್ಶನಕ್ಕೆ ತುಡಿಯುತ್ತವೆ. ಅದಕ್ಕಾಗಿ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಸಿಂಹಾವಲೋಕನ ನೋಟವನ್ನು ಬೀರುವ ಲೇಖಕರು ತಮ್ಮ ಓದಿನ ವಿಸ್ತಾರ ಮತ್ತು ಪಾಂಡಿತ್ಯವನ್ನು ಒಂದು ಆಕೃತಿಯಲ್ಲಿ ಕಟ್ಟಿಕೊಟ್ಟಿರುವ ಪ್ರಯೋಗವೇ ಈ ‘ವರ್ತಮಾನ ಭಾರತ’. ⇒v

ವರ್ತಮಾನ ಭಾರತ (ಪ್ರಬಂಧ ಸಂಕಲನ)

ಲೇ: ಪುರುಷೋತ್ತಮ ಬಿಳಿಮಲೆ

ಪ್ರ: ಚಿರಂತ್‌ ಪ್ರಕಾಶನ

ಸಂ: 8660966208

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT