ವಿಧಾನಸಭೆಯಲ್ಲೊಂದು ಹಕ್ಕಿ
ಲೇ: ಎಸ್.ದಿವಾಕರ್
ಪ್ರ: ಅಂಕಿತ ಪುಸ್ತಕ
ಸಂ: 080 2661 7100

ಕವಿತೆಯೊಂದು ಆಲಿಸುವ ಸಂಗೀತ, ನೋಡುವ ಚಿತ್ರ ಮಾತ್ರವಲ್ಲದೆ ಕತೆಯೂ ಆಗುವ ಚಿತ್ರಕ ಗುಣ ‘ವಿಧಾನಸಭೆಯಲ್ಲೊಂದು ಹಕ್ಕಿ’ಯಲ್ಲಿದೆ. ಕತೆಗಾರ-ಅನುವಾದಕ ಎಸ್. ದಿವಾಕರ ಅವರ ಮೂರನೆಯ ಕವನ ಸಂಕಲನವಿದು. ‘ಆತ್ಮಚರಿತ್ರೆಯ ಕೊನೆಯ ಪುಟ’ (1998) ಹಾಗೂ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ (2019) ಸಂಕಲನಗಳಲ್ಲಿ ಕತೆಗಾರ ದಿವಾಕರ್ ‘ಕಾವ್ಯ ಪ್ರಯೋಗ’ ನಡೆಸಿದ್ದರು. ಅವರ ಎರಡನೆಯ ಸಂಕಲನದ ಮುಂದುವರಿಕೆಯಂತಿರುವ ಕವಿತೆಗಳು ‘ವಿಧಾನಸಭೆಯಲ್ಲೊಂದು ಹಕ್ಕಿ’ಯಲ್ಲಿವೆ.

ಕವಿತೆ-ಕವನ ಎಂಬ ಫಾರ್‍ಮಿನ ಹಂಗು ತೊರೆದ, ಹಾರಾಡುವ ಗರಿಗಳು ಸಂಕಲನದುದ್ದಕ್ಕೂ ಹರಡಿಕೊಂಡಿವೆ. ಈ ಸಂಕಲನದ 35 ಕವಿತೆಗಳು ತಮ್ಮ ಅನನ್ಯತೆ ಕಾಪಾಡಿಕೊಂಡಿರುವ ಕಾರಣಕ್ಕೆ ಗಮನ ಸೆಳೆಯುತ್ತವೆ. ಓದಿನ ಖುಷಿಯನ್ನು ಒದಗಿಸುವ ಕವಿತೆಗಳಿವು. ವರ್ತಮಾನವೆನ್ನುವುದು ನಿನ್ನೆಯ ನೆನಪುಗಳ-ಹಳವಂಡಗಳ ಮೆಲುಕಿನ ಜೊತೆಯಲ್ಲಿಯೇ ಸದ್ಯದ ಹಂಗನ್ನು ಮೀರಿ ಚಲಿಸಬೇಕಾದ ದಾರಿಯನ್ನು ಕಂಡುಕೊಳ್ಳಬೇಕಾದ ನೆಲ-ನೆಲೆಯೂ ಹೌದು. ಗ್ರೀಕರ ದಂತಕತೆಯ ‘ಪ್ರೊಕ್ರೂಸ್ಟೆಸ್ ಮಂಚ’, ಅಂಗ್‌ಕೋರ್‌ವಾಟ್ ದೇವಾಲಯದ ಹಿನ್ನೆಲೆಯ ‘ದೇವಾಲಯ- ವಧಾವಲಯ’, ಚೀನಾದ ಕತೆ ಯೊಂದನ್ನು ಕವಿತೆಯಾಗಿಸಿದ ‘ಬಿಡುಗಡೆ’ ಎಲ್ಲವೂ ‘ಕ್ರೌರ್ಯ’ದ ವಿಸ್ತರಣೆಗಳು.

ಚರಿತ್ರೆಯ ಪುಟಗಳಲ್ಲಿ ಅಡಗಿದ ಸಂಗತಿಗಳು, ಘಟನೆಗಳು ರೂಪಕಗಳಾಗಿ, ವರ್ತಮಾನದ ಹಿಂಸೆಯ ಸ್ವರೂಪದ ವ್ಯಾಖ್ಯಾನ-ವಿವರಣೆ ಕಟ್ಟಿಕೊಳ್ಳುವುದಕ್ಕೆ ಕಾರಣವಾಗಿವೆ. ‘ಹಿಂಸೆ’ ಉಂಟು ಮಾಡುವ ಕ್ರೌರ್ಯದ ಪರಮಾವಧಿಯನ್ನೂ ಮೀರಿನಿಂತ ಗಳಿಗೆಗಳನ್ನು ರೂಪಕಗಳಲ್ಲಿ ಕವಿತೆಗಳು ಹಿಡಿದಿಡುತ್ತವೆ. ಮತ್ತು ಅದೇ ಕಾರಣಕ್ಕಾಗಿ ಪ್ರಿಯವಾಗುತ್ತವೆ. ಮೊದಲ ಓದಿಗೆ ಮುದ ನೀಡುವುದರ ಜೊತೆಗೆ ಮತ್ತೊಮ್ಮೆ ಬಂದು-ನಿಂತು ನೋಡಬೇಕು ಎಂಬ ಆಸೆ-ಕನಸುಗಳನ್ನು ಹುಟ್ಟಿಸುವ ಕವಿತೆಗಳಿರುವುದು ವಿಶೇಷ. ಓದುಗನ ಭಾವಕೋಶವನ್ನು ವಿಸ್ತರಿಸುವ ಕವಿತೆಗಳು ಓದಿನ ಸುಖ ಒದಗಿಸುವುದರ ಜೊತೆಯಲ್ಲಿಯೇ ಚಿಂತನೆಗೂ ಹಚ್ಚುತ್ತವೆ. ಈ ಚಿಂತನೆಯು ವೈಚಾರಿಕತೆಯ ಭಾರದಲ್ಲಿ ನಲುಗದ ಹಾಗೆ ಹದವಾಗಿ ಪದಗಳಲಿ ಹೆಣಿಗೆ ಮಾಡಲ್ಪಟ್ಟಿವೆ (ಕರ್ಮಣಿ ಪ್ರಯೋಗ).

‘ಹಿಂಸೆ’ಗೆ ಮುಖಾಮುಖಿಯಾಗುವ ಕವಿತೆಗಳು ಕಟ್ಟಿಕೊಡುವ ಪ್ರತಿಕ್ರಿಯೆಯ ಕುರಿತು ಮುನ್ನುಡಿ ಬರೆದಿರುವ ವಿಮರ್ಶಕ ರಾಜೇಂದ್ರ ಚೆನ್ನಿ ಅವರು, ‘ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯ ಭಾಷೆಯನ್ನು ಶೋಧಿಸಿಕೊಂಡು ಬರೆಯುವುದನ್ನು ದಿವಾಕರರ ಕಾವ್ಯ ಸಾಧಿಸಿದೆ’ ಎಂದಿದ್ದಾರೆ.

ಪ್ರಭುತ್ವದ ಸಂಕೇತವಾದ ವಿಧಾನಸಭೆಯಲ್ಲಿ ಕಾಣಿಸಿಕೊಳ್ಳುವ-ಕಾಣೆಯಾದ ಹಕ್ಕಿ ಒಂದು ರೂಪಕ. ‘ಚಿತ್ರಹಿಂಸೆ’, ‘ಏನರ್ಥವಿದಕೆಲ್ಲ’, ‘ಯಾರೋ ಬಡೀತಿದ್ದಾರೆ ಹುಡುಗಿಯನ್ನ’ ಕವಿತೆಗಳಲ್ಲಿ ಚಿತ್ರಿತವಾಗಿರುವ ಲೋಕ ಕೂಡ ಹಿಂಸೆಯ ವಿಸ್ತರಣೆಯನ್ನು ದಾಖಲಿಸುತ್ತದೆ. ಇಂದು ನಮ್ಮೀ ನಾಡು-2020; ಕವಿತೆಯು ಅಡಿಗರ ಕವಿತೆಯ ವಿಭಿನ್ನ ರೀತಿಯ ವಿಸ್ತರಣೆ ಮಾತ್ರವಲ್ಲದೆ ಬದಲಾದ ಸ್ವರೂಪವನ್ನೂ ಹಿಡಿದಿಡುತ್ತದೆ.

ದಿವಾಕರ್ ಅವರಿಗೆ ಕವಿತೆಯೆಂದರೆ

‘ಫೋಟೋಗೆ ಕೊಟ್ಟ ಪೋಸನ್ನು ತಳ್ಳಿ ಪಕ್ಕಕ್ಕೆ

ಹಾಕಿಸಿದಂಥ ಕಟ್ಟು ನಿಜದೊಂದು ಕ್ಷಣಕ್ಕೆ’.

ಹಾಗೆಯೇ, ಭಾಷೆಯ ನರ್ತನವಾಗಿರುವ ಕವನದಲಿ

‘ಉಸಿರು ಇದ್ದರೆ ಸಾಕು

ಬಂಡೆಗೂ ಜೀವ

ಜೀವವಿರುವಲ್ಲೆಲ್ಲ

ಕಾಣಿಸುವ ದೇವ’

ಇಂತಹ ದೇವನ ಸಾವು ಇರುವುದು ‘ಅನ್ಯಾಯದಲ್ಲಿ’.

ಕವಿತೆಯು ಅಸಹಾಯಕ ಅಲ್ಲ. ಇಡೀ ದೇಶಕ್ಕೆ ದೇಶವೇ ಬೇಸತ್ತ ಭಾಷೆಯಲ್ಲಿ ಮಾತನಾಡುತ್ತಿರುವಾಗ ಹುಟ್ಟಿದ ನಿಟ್ಟುಸಿರು ಹೀಗಿರುತ್ತದೆ-

‘ಮುಲ್ತಾನೀ ರಾಗದೊಂದು ವರ್ಣದ ತಾನು

ಅಳೆದಂತೆ ಸಂಜೆಗತ್ತಲಿನ ದಿಗಂತವನ್ನು ಯಾರೋ ಯಾಕೋ

ಕಿರಿಚಿದರೆಂದು ಕಕ್ಕಿಕೊಂಡಂತೆ ಬಲೂನು

ತನ್ನೊಡಲನ್ನು: ಜೋರುಗಾಳಿಗೆ ಹೆದರಿ ಬೆವರಿಕೊಂಡು

ಕಂಪಿಸಿದಂತೆ ಚಿಟ್ಟೆ; ವಾರಸುದಾರರಿಲ್ಲದ ರುಂಡವೊಂದು

ತಡಕಾಡಿದಂತೆ ತನ್ನ ಜೊತೆಗಿರದ ಮುಂಡಕ್ಕಾಗಿ’ ರೀತಿಯಲ್ಲಿದೆ.

ನೋವು-ಹಿಂಸೆ-ಅಸಹಾಯಕತೆಗಳಿಗೆ ಮುಲಾಮು ಸವರುವ ಸಂಗೀತ ಕುರಿತ ‘ಭೀಮಸೇನ ಗಾನ’ ಮತ್ತು ‘ಪಂ. ಪರಮೇಶ್ವರ ಹೆಗಡೆಯವರ ಮಾರವಾ’ ಕವಿತೆಗಳು ಕಟ್ಟಿಕೊಡುವ ಅನುಭವಲೋಕ ವಿಭಿನ್ನ ಮತ್ತು ವಿಶಿಷ್ಟ. ಅವರ ಹಿಂದಿನ ಸಂಕಲನದಲ್ಲಿದ್ದ ‘ಬಾಲಮುರಳೀಗಾನ’ ಕೂಡ ಇಂತಹುದೇ ಕವಿತೆಯಾಗಿತ್ತು.

‘ಎಲೆ’ ಮತ್ತು ‘ಕೊಲ್ಲುವ ದಿನ’ ಮತ್ತು ‘ಕೋಳಿ’ ಕವಿತೆಗಳು ಕಾವ್ಯರೂಪದಲ್ಲಿರುವ ಕತೆಗಳು ಅಥವಾ ಕಿರುಕತೆಗಳು.

ಈ ಸಂಕಲನದಲ್ಲಿ ವಿಸ್ವಾವಾ ಶಿಂಬೋರ್‌ಸ್ಕ, ಯಾನ್ ಕಪ್ಲಿನ್‌ಸ್ಕಿ, ಏಂಜೆಲ್ ಗೊಂಝಾಲೆಸ್, ಜ್ಬಿಗ್ನೂಫ್ ಹರ್ಬರ್ತ್, ಆಂದ್ರೆಯಿ ಪೋಝ್ನೆಸೆನ್‌ಸ್ಕಿ, ಯೆವ್ಗೆನಿ ಯೆವ್ತುಶೆಂಕೊ ಅವರ ಕವಿತೆ/ಬರಹಗಳಿಂದ ‘ಪ್ರೇರಣೆ’ ಪಡೆದ ಕವಿತೆಗಳಿವೆ. ಅವು ಅನುವಾದಗಳಲ್ಲ. ಕನ್ನಡದ ಕವಿತೆಗಳೇ. ‘ಪ್ರೇರಣೆ’ ಎಂದು ದಾಖಲಿಸಿರುವುದು ಕವಿಯ ಬಗೆಗಿನ ಪ್ರೀತಿ ಹೆಚ್ಚಲು ಕಾರಣವಾಗದೇ ಇರದು. ಆದರೆ, ಓದುಗನ ನೆರವಿಗಾಗಿ ಈ ಕವಿಗಳ/ಕವಿತೆಗಳ ಕುರಿತ ಪರಿಚಯಾತ್ಮಕ ಸಾಲು-ಟಿಪ್ಪಣಿ ನೀಡಬಹುದಿತ್ತು. ಅದು ಕೊರತೆ ಎನ್ನಿಸದೇ ಇರದು.

ದಿವಾಕರ್ ಅವರ ಕವಿತೆಗಳಲ್ಲಿ ಬಳಕೆಯಾಗಿರುವ ಭಾಷೆಯು ‘ರೂಪಕ’ಗಳ ಭಾಷೆ. ಆದರೆ, ಅದು ರೂಪಕಗಳ ಹಿಂದೆ ಅಡಗಿ ಕುಳಿತು ಆಡಿದ ಮಾತಿನಂತಿಲ್ಲ ಎನ್ನುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.