ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ

Published 13 ಜನವರಿ 2024, 23:30 IST
Last Updated 13 ಜನವರಿ 2024, 23:30 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡದ ವಿಠಲ ರಾಮಮೂರ್ತಿ ಅಮೆರಿಕದ ಅರಿಜೋನಾದಲ್ಲಿ ಪಿಟೀಲು ವಾದನದ ಮೂಲಕ ಮೋಡಿ ಮಾಡಿದ್ದರು. ಅಲ್ಲಿ ಅವರ ಹೆಸರಿನಲ್ಲಿಯೇ ಒಂದು ದಿನ ಸಂಗೀತ ಸಂಭ್ರಮ ಆಯೋಜಿಸುವ ಘೋಷಣೆ ಹೊರಬಿತ್ತು...

*****

ಧೀರ ಶಂಕರಾಭರಣ, ಕರ್ನಾಟಕ ಶಾಸ್ತ್ರೀಯ ಸಂಗೀತದ 29ನೇ ಮೇಳಕರ್ತ ರಾಗ. ಈ ಭಕ್ತಿ ಪ್ರಧಾನ ರಾಗದಲ್ಲಿ ತ್ಯಾಗರಾಜರ ಕೃತಿ ‘ರಾಮ ನಿನ್ನು ವಿನಾ’ ಬಹು ಜನಪ್ರಿಯ. ಕೇಳಲು ಅತ್ಯಂತ ಆಪ್ಯಾಯಮಾನವಾದ ಈ ಕೀರ್ತನೆಯನ್ನು ದಕ್ಷಿಣ ಕನ್ನಡ ಜಿಲ್ಲೆ ನಿಡ್ಲೆ ಸಮೀಪದ ಕರುಂಬಿತ್ತಿಲ್‌ ವಿಠಲ ರಾಮಮೂರ್ತಿ ಅವರು ಪಿಟೀಲಿನಲ್ಲಿ ಪ್ರಸ್ತುತಪಡಿಸಿದರು; ಅದು ಕಳೆದ ವರ್ಷ ಅಮೆರಿಕದ ಅರಿಜೋನಾ ರಾಜ್ಯದ ಪ್ರತಿಷ್ಠಿತ ವೇದಿಕೆಯೊಂದರಲ್ಲಿ. ಸುದೀರ್ಘವಾದ ಆಲಾಪ, ಕೃತಿಯ ಸೊಗಸಾದ ನಿರೂಪಣೆ, ಅದ್ಭುತ ಸ್ವರಪ್ರಸ್ತಾರ, ಪಿಟೀಲು ತನಿಯಲ್ಲಿ ಮಾದಕತೆ, ಮತ್ತೆ ಮತ್ತೆ ಕೇಳಬೇಕೆನಿಸುವ ಚಿಟ್ಟೆಸ್ವರ ನುಡಿಸಿ ಕಛೇರಿ ಸಂಪನ್ನಗೊಂಡಾಗ ಕೇಳುಗರು ಭಾವಪರವಶರಾದರು.

ಈ ಕಛೇರಿ ವಿಠಲ ರಾಮಮೂರ್ತಿ ಅವರನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಮೇಲಕ್ಕೇರುವಂತೆ ಮಾಡಿದ್ದಲ್ಲದೆ ಅರಿಜೋನಾದಲ್ಲಿ ನವೆಂಬರ್‌ 5 ಅನ್ನು ‘ವಿಠಲ ರಾಮಮೂರ್ತಿ ದಿನ’ ಎಂದು ಆಚರಿಸಲು ಘೋಷಿಸಲಾಯಿತು. ಕಲಾವಿದರೊಬ್ಬರಿಗೆ ಜೀವಮಾನದಲ್ಲಿ ಸಿಗುವ ಇಂಥ ಮನ್ನಣೆ ಬಹಳ ಅಪರೂಪದ್ದು.

ಮೊಳೆತು ಹೆಮ್ಮರವಾದ ಹಳ್ಳಿಯ ಸಿರಿ!

ಅರವತ್ತರ ದಶಕದ ಆರಂಭದ ದಿನಗಳವು. ಪ್ರಕೃತಿಯ ಐಸಿರಿ ನಡುವೆ ನಿರ್ಮಲವಾಗಿ ಹರಿಯುವ ಎರಡು ನದಿಗಳ ನಡುವಿನ ನಡುಗಡ್ಡೆಯಂಥ ಭಾಗದಲ್ಲಿ ಒಂದು ಸಣ್ಣ ಮನೆ. ಬೆಳ್ತಂಗಡಿ ತಾಲ್ಲೂಕಿನ ನಿಡ್ಲೆ ಸಮೀಪದ ‘ಕರುಂಬಿತ್ತಿಲ್’ ಎಂಬ ಮನೆಯಲ್ಲಿ ಸಂಗೀತ ಅಂದೇ ನಾದದಲೆಯ ಕಂಪನ್ನು ಹರಡಲಾರಂಭಿಸಿತ್ತು. ಪುಟ್ಟ ಬಾಲಕ ವಿಠಲ, ತನ್ನ ತಾಯಿಯ, ಅಜ್ಜನ ಸಂಗೀತ ನಾದಕ್ಕೆ ಮರುಳಾಗಿದ್ದ. ಮಗನನ್ನು ದೊಡ್ಡ ಸಂಗೀತಗಾರನನ್ನಾಗಿ ರೂಪಿಸಬೇಕು ಎಂಬ ತುಡಿತ ಹೆತ್ತಮ್ಮನಿಗೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಸರಳೆ, ಜಂಟಿಸರಳೆ, ದಾಟುವರಸೆ, ಅಲಂಕಾರಗಳನ್ನು ಉರು ಹೊಡೆಯಲಾರಂಭಿಸಿದ್ದೇ ತಡ, ಬಾಲಕ ವಿಠಲ ತಾಳಬದ್ಧವಾಗಿ ಹಾಡಲಾರಂಭಿಸಿದಾಗ ತಾಯಿಗೆ ಎಲ್ಲಿಲ್ಲದ ಪುಳಕ. ತನ್ನ ಕನಸು ನನಸಾಗುವುದರಲ್ಲಿ ಸಂಶಯವೇ ಇಲ್ಲ ಎಂಬ ಭಾವ ಈ ಹೆಂಗರುಳಿಗೆ. ಹಳ್ಳಿಯಲ್ಲಿ ಹೆಚ್ಚಿನ ಸಂಗೀತಾಭ್ಯಾಸಕ್ಕೆ ಅವಕಾಶವಿಲ್ಲದ ಕಾರಣ ವಿಠಲ, ತನ್ನ ಮಾವನ ಮುಖಾಂತರ ಶಿವಮೊಗ್ಗಕ್ಕೆ ಹೋಗಬೇಕಾಯಿತು. ಅಲ್ಲಿ ಹೊಸಹಳ್ಳಿ ವೆಂಕಟ್ರಾಮ್‌ ಅವರಿಂದ ಪಿಟೀಲು ತಾಲೀಮು ಶುರು. ಪಿಟೀಲಿನ ಎಳೆಎಳೆಯಲ್ಲೂ ಸಂಗೀತದ ರಾಗಾಲಾಪ, ಸ್ವರಪ್ರಸ್ತಾರ, ಚಿಟ್ಟೆಸ್ವರಗಳು ಮಾರ್ದನಿಸಿದ್ದು ನೋಡಿ ಗುರುಗಳಿಗೇ ಅಚ್ಚರಿ. ಇಂಥ ಪ‍್ರತಿಭೆಗೆ ಹೆಚ್ಚಿನ ಸಂಗೀತ ಮಾರ್ಗದರ್ಶನ ಬೇಕು ಎಂದೆನಿಸಿ ಈತನನ್ನು ದಿಗ್ಗಜರಾದ ಆರ್‌.ಆರ್‌. ಕೇಶವಮೂರ್ತಿ, ಟಿ. ರುಕ್ಮಿಣಿ ಅವರ ಬಳಿ ಸಂಗೀತದ ತಾಲೀಮಿಗೆ ಒಡ್ಡಿಕೊಳ್ಳುವಂತೆ ಮಾಡಿದರು.

1987ರಲ್ಲಿ ಒಮ್ಮೆ ಪಿಟೀಲು ವಿದ್ವಾಂಸ ಲಾಲ್‌ಗುಡಿ ಜಯರಾಮನ್‌ ಶಿವಮೊಗ್ಗಕ್ಕೆ ಬಂದಿದ್ದರು. ಅಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ವಿಠಲ ಪಿಟೀಲು ನುಡಿಸಿದ್ದನ್ನು ಈ ವಿದ್ವಾಂಸರು ನೋಡಿ, ಕೇಳಿ ಬಹುಮಾನವನ್ನೂ ನೀಡಿ, ತಮ್ಮ ಶಿಷ್ಯನಾಗಿಸಿಕೊಂಡರು. ನಂತರದ ಪಿಟೀಲು ವಾದನ, ಕಲಿಕೆ ಎಲ್ಲವೂ ಚೆನ್ನೈಗೆ ಸ್ಥಳಾಂತರ. ವಿಠಲ ಅಂತರರಾಷ್ಟ್ರೀಯ ಮಟ್ಟದ ವಯೊಲಿನ್‌ ವಾದಕ, ಬೋಧಕ, ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಂಡದ್ದೇ ಇಲ್ಲಿ.

ಘಟಾನುಘಟಿ ಕಲಾವಿದರಾದ ಎಂ. ಬಾಲಮುರಳಿಕೃಷ್ಣ, ನೈವೇಲಿ ಸಂತಾನಗೋಪಾಲನ್‌, ವಿಜಯಶಿವ, ಒ.ಎಸ್‌. ತ್ಯಾಗರಾಜನ್, ಟಿ.ಎನ್‌. ಶೇಷಗೋಪಾಲನ್, ಆರ್.ಕೆ. ಶ್ರೀಕಂಠನ್ ಮುಂತಾದವರ ಗಾಯನಕ್ಕೆ ಪಿಟೀಲು ಪಕ್ಕವಾದ್ಯ ನುಡಿಸಿದ್ದಲ್ಲದೆ ಈಗಿನ ಕಲಾವಿದರಾದ ಸುಧಾ ರಘುನಾಥನ್, ಟಿ.ಎಂ. ಕೃಷ್ಣನ್, ಸಂಜಯ್‌ ಸುಬ್ರಹ್ಮಣ್ಯ, ಬಾಂಬೆ ಜಯಶ್ರೀ ಮುಂತಾದವರಿಗೂ ಪಿಟೀಲು ಸಹಕಾರ ನೀಡಿದ್ದಾರೆ. ಅಮೆರಿಕ, ಇಂಗ್ಲೆಂಡ್‌, ಸಿಂಗಪುರ, ಮಲೇಷ್ಯಾಗಳಲ್ಲೂ ಇವರ ಪಿಟೀಲು ನಾದ ಅನುರಣಿಸಿದೆ.

ಗುರು–ಶಿಷ್ಯ ಸಂಬಂಧ

‘ಸಂಗೀತದಲ್ಲಿ ಗುರು ಶಿಷ್ಯ ಪರಂಪರೆ ಪರಿಕಲ್ಪನೆ ಬಗ್ಗೆ ನನಗೆ ಅಪಾರ ನಂಬಿಕೆ. ಇದೇ ಪರಂಪರೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿಕೊಡುತ್ತಿದ್ದೇನೆ. ದೇಶ ವಿದೇಶಗಳಲ್ಲಿ ಇವರ ಹಲವಾರು ವಿದ್ಯಾರ್ಥಿಗಳು ಇಂದು ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಯೂರೋಪ್‌, ಅಮರಿಕದಿಂದ ಬಂದ ವಿದ್ಯಾರ್ಥಿಗಳು ಕೂಡ ಪಿಟೀಲಿನಲ್ಲಿ ಸಾಧನೆ ತೋರುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳುತ್ತಾರೆ ಈ ಸಾಧಕ.

‘ನಮ್ಮ ಊರಿಗೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ತಂಗಿ ರಾಜರಾಜೇಶ್ವರಿ ಅವರೊಡಗೂಡಿ ನಿಡ್ಲೆ ಸಮೀಪದ ಕರುಂಬಿತ್ತಿಲ್‌ನಲ್ಲಿ ಸಂಗೀತ ಶಿಬಿರವನ್ನು 20ಕ್ಕೂ ಹೆಚ್ಚು ವರ್ಷಗಳಿಂದ ಏರ್ಪಡಿಸುತ್ತಾ ಬಂದಿದ್ದೇನೆ. ಈಗ 250ಕ್ಕೂ ಹೆಚ್ಚು ಸಂಗೀತ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ. ಹಲವಾರು ಕಲಾವಿದರು ಇಲ್ಲಿ ಸಂಗೀತ ಪ್ರಾತ್ಯಕ್ಷಿಕೆ, ಕಛೇರಿ ನಡೆಸಿಕೊಟ್ಟಿದ್ದಾರೆ. ಹಳ್ಳಿಯ ಸಂಗೀತದ ಕಂಪು ಎಲ್ಲೆಡೆ ಆವರಿಸುತ್ತಿದೆ’ ಎನ್ನುತ್ತಾರೆ ಅವರು.

ಮೈಸೂರಿನ ನಾದಬ್ರಹ್ಮ ಸಂಗೀತ ಸಭಾ ಹಾಗೂ ಪಿಟೀಲು ಚೌಡಯ್ಯ ಸಂಸ್ಮರಣ ವೇದಿಕೆ ಇದೇ ಜನವರಿ 19ರಂದು ವಿಠಲ ರಾಮಮೂರ್ತಿ ಅವರಿಗೆ ‘ಧನುರ್ವೈಣಿಕ ಬ್ರಹ್ಮ’ ಬಿರುದು ನೀಡಿ ಸನ್ಮಾನಿಸಲಿರುವುದು ಹೆಮ್ಮೆಯ ಸಂಗತಿ.

ಸ್ವರ ಸಂಕ್ರಾಂತಿ

ಮಂಗಳೂರಿನ ಸ್ವರಲಯ ಸಾಧನಾ ಪ್ರತಿಷ್ಠಾನ ಜನವರಿ 15ರಂದು ಮಂಗಳೂರಿನ ಟೌನ್‌ ಹಾಲ್‌ನಲ್ಲಿ ‘ಸ್ವರ ಸಂಕ್ರಾಂತಿ’ ಉತ್ಸವ ಆಯೋಜಿಸಿದೆ. ಇದೇ ವೇಳೆ ಪಿಟೀಲಿನಲ್ಲಿ ವಿದ್ವಾನ್‌ ವಿಠಲ ರಾಮಮೂರ್ತಿ ಅವರಿಗೆ ‘ಸ್ವರರತ್ನ ಪ್ರಶಸ್ತಿ’ ನೀಡಿ ಸನ್ಮಾನಿಸಲಿದೆ. ಪಿಟೀಲು ವಿದ್ವಾಂಸರಾದ ಗಣೇಶ್‌–ಕುಮರೇಶ್ ಸಹೋದರರ ಜುಗಲ್‌ಬಂದಿ ನಡೆಯಲಿದೆ. ಮೃದಂಗದಲ್ಲಿ ಅನಂತ ಆರ್‌.ಕೃಷ್ಣನ್‌ ಹಾಗೂ ಖಂಜೀರದಲ್ಲಿ ಸುಂದರ್‌ ಕುಮಾರ್‌ ಸಹಕರಿಸುವರು.

ಸಂಗೀತದ ಪೋಷಣೆ

ಸ್ವರ ಲಯ ಸಾಧನಾ ಸಂಗೀತ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಸಂಕ್ರಾಂತಿಯಂದು ಸಾಧಕರನ್ನು ಸನ್ಮಾನಿಸುವ, ಖ್ಯಾತ ಕಲಾವಿದರಿಂದ ಸಂಗೀತ ಕಛೇರಿ ಆಯೋಜಿಸುವ ಹಾಗೂ ಸಂಸ್ಥೆಯಲ್ಲಿ ಕಲಿಯುವ ಸಂಗೀತ ವಿದ್ಯಾರ್ಥಿಗಳಿಗೆ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸುವ ಮೂಲಕ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿದೆ ಎನ್ನುತ್ತಾರೆ ಸಂಸ್ಥೆಯ ರೂವಾರಿ ವಿದ್ವಾನ್‌ ವಿಶ್ವಾಸ್‌ಕೃಷ್ಣ.

ಸ್ವರ ಸಂಕ್ರಾಂತಿ ಕಾರ್ಯಕ್ರಮದ ಸಮಾರಂಭದಲ್ಲಿ ಸಾಧಕರಾದ ವಿದ್ವಾನ್‌ ನಾಗೇಶ್‌ ಎ. ಬಪ್ಪನಾಡು, ವಿದುಷಿ ಪ್ರತಿಭಾ ಸಾಮಗ, ವಿದ್ವಾನ್‌ ನಾರಾಯಣ ಶರ್ಮ ಯು.ಜಿ. ಇವರನ್ನೂ ಪುರಸ್ಕರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT