ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಪ್ರತಿಭೆಗಳ ಪುಳಕದಲ್ಲಿ ಶುಭಾ ಮುದ್ಗಲ್

Published 16 ಸೆಪ್ಟೆಂಬರ್ 2023, 23:31 IST
Last Updated 16 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ನಗರದ ಜೆ.ಪಿ.ನಗರದ ಎಂಎಲ್‌ಆರ್ ಕನ್ವೆಷನ್ ಸೆಂಟರ್ ಎಳೆಯ ಪ್ರತಿಭೆಗಳ ಕಂಠಗಳ ರಾಗಾಲಾಪವನ್ನು ಪ್ರತಿಧ್ವನಿಸುತ್ತಾ ಕಂಪನಗಳನ್ನು ಉಂಟುಮಾಡುತ್ತಿದೆ. ಹೆಸರಾಂತ ಗಾಯಕಿ ಶುಭಾ ಮುದ್ಗಲ್ ಅವರು ಎಳೆಯ ಪ್ರತಿಭೆಗಳನ್ನು ತಯಾರು ಮಾಡುತ್ತಿದ್ದಾರೆ. ಇದೇ ಭಾನುವಾರ(ಸೆ.17) ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಾಲಪ್ರತಿಭೆಗಳಾದ ರಾಹುಲ್ ವೆಲ್ಲಾಲ ಕರ್ನಾಟಕ ಸಂಗೀತವನ್ನು, ಧ್ಯಾನೇಶ್ವರಿ ಘಾಡ್ಗೆ ಹಿಂದೂಸ್ತಾನಿ ಸಂಗೀತವನ್ನು, ರೋಹನ್ ದಾಸ್ ಬೆಂಗಾಲಿ ಜಾನಪದ ಸಂಗೀತವನ್ನು ಮತ್ತು ಅತ್ಯಂತ ಕಿರಿಯ ಏಳು ವರ್ಷದ ಛೋಟು ಖಾನ್ ಮಾಂಗಾನಿಯಾರ್ ಸಂಗೀತವನ್ನು ಹಾಡಿ ರಂಜಿಸಲಿದ್ದಾರೆ.

ಗಾಯತ್ರಿ ಕೃಷ್ಣ ಅವರ ಕನಸಿನ ಕೂಸು ‘ಭೂಮಿಜಾ’ ಸಂಗೀತ ಜಗತ್ತಿನಲ್ಲಿ ಪ್ರತಿಭೆಗಳಿಗೆ ವೇದಿಕೆಯನ್ನೊದಗಿಸುವ ಶ್ಲಾಘನಾರ್ಹ ಕೆಲಸದಲ್ಲಿ ತೊಡಗಿದೆ. ‘ಜ್ಯಾಕ್ ಫ್ರೂಟ್ 23’ ಭೂಮಿಜಾದ ಐದನೇ ಸಂಗೀತ ಸಮ್ಮೇಳನ. ಹಲವಾರು ಕಮ್ಮಟಗಳು ಮತ್ತು ಕಾರ್ಯಕ್ರಮಗಳನ್ನು ಒಳಗೊಂಡ ಈ ಸಮ್ಮೇಳನ ಈ ಬಾರಿ ಶುಭಾ ಮುದ್ಗಲ್ ಅವರ ನಿರ್ದೇಶನದಲ್ಲಿ ಬಹಳ ವಿಶಿಷ್ಟವಾಗಿ ರೂಪುಗೊಂಡಿದೆ. ಕಮ್ಮಟದಲ್ಲಿ ತೊಡಗಿಕೊಂಡಿದ್ದ ಶುಭಾ ಮುದ್ಗಲ್ ಅವರು ಬಿಡುವಿನಲ್ಲಿ ಹಂಚಿಕೊಂಡ ಆಲೋಚನೆಗಳಿವು...

ರೋಹನ್ ದಾಸ್
ರೋಹನ್ ದಾಸ್

‘ಅಸಂಖ್ಯಾತ ಬಾಲ ಪ್ರತಿಭೆಗಳು ಶಾಸ್ತ್ರೀಯ ಸಂಗೀತದಲ್ಲಿ ಬಹಳ ಗಂಭೀರವಾಗಿ ತೊಡಗಿಕೊಂಡಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೇ? ಅವರನ್ನು ಯಾರೂ ಬಲವಂತವಾಗಿ ಅದಕ್ಕೆ ತಳ್ಳಿಲ್ಲ, ಬದಲಿಗೆ ತಾವಾಗಿ ಅದಕ್ಕೆ ಒಲಿದಿದ್ದಾರೆ. ಪೂರ್ಣಾವಧಿಯಲ್ಲಿ ಶಾಸ್ತ್ರೀಯ ಸಂಗೀತವನ್ನೇ ವೃತ್ತಿಮಾಡಿಕೊಳ್ಳಲೂ ಅವರು ಬಯಸುತ್ತಾರೆ. ಆದರೆ ನಮ್ಮ ಸಮಾಜದಲ್ಲಿ ಪ್ರಸ್ತುತ ಇರುವ ಪರಿಸ್ಥಿತಿ ನೋಡಿದರೆ ಅದು ಸಾಧ್ಯವೇ ಎನ್ನಿಸುತ್ತಿದೆ. ಪ್ರಾಕ್ಟಿಕಲ್ ಸಮಸ್ಯೆಗಳ ಜೊತೆಗೆ ಅವರ ಮಾನಸಿಕ, ಭಾವನಾತ್ಮಕ ಸಮಸ್ಯೆಗಳೂ ಸೇರಿ ಅವರ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತವೆ. ಶಾಸ್ತ್ರೀಯ ಸಂಗೀತವನ್ನೇ ನಂಬಿ ಅವರು ಅದನ್ನೇ ಜೀವನಾಧಾರ ಮಾಡಿಕೊಳ್ಳಬಹುದೇ?

‘ಎಷ್ಟೋ ವರ್ಷಗಳಿಂದ ಹೆಸರಾಂತ ಕಲಾವಿದರು ಬೇರೆ ವೃತ್ತಿಯಲ್ಲಿ ತೊಡಗಿಕೊಂಡೇ ಹಾಡುಗಾರಿಕೆಯನ್ನೂ ಮಾಡಿದ್ದಾರೆ ನಿಜ. ಆದರೆ ಇವತ್ತು ಪರಿಸ್ಥಿತಿ ಅಷ್ಟು ಸುಲಭವಿಲ್ಲ. ಸಾಧ್ಯ ಎಂದು ವಾದಿಸುವವರಿಗೆ ವಾಸ್ತವದ ಅರಿವಿಲ್ಲ ಎನ್ನಬೇಕಾಗುತ್ತದೆ. ಕೆಲವೇ ಕಲಾವಿದರಿಗೆ ಆ ಅದೃಷ್ಟ ಇರುತ್ತದೆ. ನಾನೂ ಅಂತಹವರಲ್ಲಿ ಒಬ್ಬಳು. ನಮ್ಮ ಮನೆಯವರ ಬೆಂಬಲದ ಜೊತೆಗೇ ಸಂಗೀತದಿಂದಲೇ ಜೀವನೋಪಾಯ ಮಾಡಿಕೊಳ್ಳುವ ಅದೃಷ್ಟ ನನಗೆ ದಕ್ಕಿದೆ. ಎಷ್ಟು ಕಲಾವಿದರು ಹಾಗೆ ಹೇಳಬಲ್ಲರು? ಇವತ್ತು ಜನಪ್ರಿಯ ಕಲೆಯ ಮುಂದೆ ಶಾಸ್ತ್ರೀಯ ಕಲೆಗಳು ಅವಗಣನೆಗೆ ಒಳಗಾಗಿವೆ. ಆಕಾಶವಾಣಿಯಂತಹ ಸರ್ಕಾರಿ ಮಾಧ್ಯಮಗಳಲ್ಲಿ ಹಾಡುವುದು ಗೌರವದ ಮಾತು ಸರಿ, ಆದರೆ ಕಲಾವಿದರಿಗೆ ಸಾವಿರದ ಐನೂರು ಕೊಟ್ಟರೆ ಹೇಗೆ? ಕಲಾವಿದರ ಸಂಭಾವನೆ ಕುರಿತು ಚಿಂತಿಸದೇ ಇದ್ದರೆ ಶಾಸ್ತ್ರೀಯ ಕಲೆಗಳು ಹೇಗೆ ಉಳಿಯುತ್ತವೆ? ಶಾಸ್ತ್ರೀಯ ಸಂಗೀತ ಕಛೇರಿಗೆ ಜನರು ಬರುವುದಿಲ್ಲ, ಫ್ಯೂಷನ್ ಮ್ಯೂಸಿಕ್‌‌ಗಾದರೆ ಬರುತ್ತಾರೆ ಎನ್ನುತ್ತಾರೆ. ಫ್ಯೂಷನ್ ಮ್ಯೂಸಿಕ್ ಬಗ್ಗೆ ನನಗೇನೂ ತಕರಾರಿಲ್ಲ, ನನಗೂ ಅದು ಇಷ್ಟವೇ. ಆದರೆ ಇಷ್ಟಪಟ್ಟು ಮಾಡುವುದು ಬೇರೆ, ಒತ್ತಾಯಪೂರ್ವಕ ಮಾಡುವುದು ಬೇರೆ. ಪ್ರತಿ ಕಲಾವಿದರೂ ತಮ್ಮದೇ ಸ್ವತಂತ್ರ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಈ ಎಳೆಯ ಪ್ರತಿಭೆಗಳು ಇದೇ ತಾನೇ ತಮ್ಮ ಛಾಪು ಮೂಡಿಸಲು ಹೊರಟಿರುವಾಗ ಹೇಗೆ ತಾನೇ ಇಂತಹ ಗಟ್ಟಿ ನಿರ್ಧಾರಗಳನ್ನು ಮಾಡಲು ಸಾಧ್ಯ?

‘ನಮ್ಮ ಸಂಸ್ಕೃತಿ ನಮ್ಮ ಪರಂಪರೆ ಉಳಿಸಬೇಕು ಅಂತ ಬರೀ ತುಟಿಮೇಲಿನ ಬೆಂಬಲ ಕೊಟ್ಟು ವೇದಿಕೆಗಳಲ್ಲಿ ಭಾಷಣ ಮಾಡಿ ಟಿಕೆಟ್ ಖರೀದಿಸಿ ಬರದಿದ್ದರೆ ಹೇಗೆ? ಟಿಕೆಟ್‌ ಭಾರಿ ಬೆಲೆಯದೇನಿಲ್ಲ. ಒಂದು ಸ್ಟ್ಯಾಂಡ್ ಅಪ್ ಕಾಮಿಡಿ ಶೋಗೆ ಇದರ ಆರುಪಟ್ಟು ಹೆಚ್ಚು ಬೆಲೆಯ ಟಿಕೆಟ್ ಇಟ್ಟರೂ ಅರ್ಧಗಂಟೆಯಲ್ಲಿ ಮಾರಾಟವಾಗಿಬಿಡುತ್ತದೆ. ನನಗೆ ಸ್ಟ್ಯಾಂಡ್ ಅಪ್ ಕಾಮಿಡಿ ಕಲಾವಿದರ ಬಗ್ಗೆ ಏನೂ ತಕರಾರಿಲ್ಲ. ನನಗೂ ಇಷ್ಟ. ಆದರೆ ಸಮಾಜ ನಮ್ಮ ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಲ್ಲವೇ? ಎಳೆಯ ಪ್ರತಿಭೆಗಳೇನೋ ತಯಾರಾಗುತ್ತಿದ್ದಾರೆ, ಅವರಿಗೆ ನೀವು ಪ್ರೋತ್ಸಾಹ ಕೊಡಲು ಸಿದ್ಧರಿರುವಿರೆ?’

ಇಷ್ಟು ಹೇಳಿದ ಮೇಲೆ ಶುಭಾ ಅವರಿಗೆ ಹಾಗಾದರೆ ಈ ಎಳೆಯ ಕಲಾವಿದರಿಗೆ ನೀವೇನು ಭರವಸೆ ಕೊಡುತ್ತೀರಿ ಎಂದು ಪ್ರಶ್ನೆ ಹಾಕಿದೆ. ಅದಕ್ಕೆ ಅವರು ಹೀಗೆಂದರು: ‘ಒಬ್ಬ ಗುರುವಾಗಿ ನಾನು ಅವರಿಗೆ ಯಾವುದೇ ಫೀಸು ತೆಗೆದುಕೊಳ್ಳದೇ ಕಲಿಸುತ್ತೇನೆ. ಸಂಗೀತ ಕಲಿಸುವುದರಲ್ಲಿ ನಾನು ಯಾವುದೇ ಮಿತಿ ಹಾಕಿಕೊಳ್ಳುವುದಿಲ್ಲ. ಆದರೆ ಅವರ ಜೀವನಾಧಾರದ ಬಗ್ಗೆ ನಾನು ಭರವಸೆ ಕೊಡಲು ಸಾಧ್ಯವಿಲ್ಲ. ತಂದೆ–ತಾಯಿಗಳು ಮಕ್ಕಳ ವೃತ್ತಿ ಬದುಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದರೆ ಅದನ್ನು ನಾನು ಅಲ್ಲಗಳೆಯಲಾಗುವುದಿಲ್ಲ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ರಿಹರ್ಸಲ್ ಸಮಯದಲ್ಲಿ ನನಗೆ ಗಂಟಲು ಉಬ್ಬಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು (ಈ ಮಾತು ಹೇಳುವಾಗ ಶುಭಾ ಮುದ್ಗಲ್ ಅವರ ಕಣ್ಣಾಲಿಗಳು ನಿಜಕ್ಕೂ ತುಂಬಿಕೊಂಡವು). ಈ ಮಕ್ಕಳಲ್ಲಿ ಕೆಲವರು ತಮ್ಮ ಊರು ಬಿಟ್ಟು ಎಲ್ಲಿಗೂ ಪ್ರಯಾಣ ಮಾಡಿದವರೇ ಅಲ್ಲ. ಈ ಹೊಸ ಊರಿನಲ್ಲಿ ಅಪರಿಚಿತ ವೇದಿಕೆಯಲ್ಲಿ ಅವರು ಮನಸೋ ಸಂಗೀತವನ್ನು ಅಷ್ಟು ಭವ್ಯ ದಿವ್ಯವಾಗಿ ಹಾಡುತ್ತಿದ್ದರೆ ಅವರ ಜನ್ಮಜಾತ ಪ್ರತಿಭೆಗೆ ಪುಳಕಿತಳಾಗುತ್ತಿದ್ದೆ. ಅವರ ಈ ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿ, ಅವರು ಶಾಸ್ತ್ರೀಯ ಸಂಗೀತವನ್ನೇ ಉಸಿರಾಗಿಸಿಕೊಂಡು ಮುಂದುವರಿಯುವ ಅವಕಾಶ ಅವರಿಗೆ ಸಿಗಲಿ ಎಂದು ಪ್ರಾರ್ಥಿಸಿದೆ.’

ಧ್ಯಾನೇಶ್ವರಿ ಘಾಡ್ಗೆ
ಧ್ಯಾನೇಶ್ವರಿ ಘಾಡ್ಗೆ

ಇವರೇ ಬಾಲಪ್ರತಿಭೆಗಳು

*ರಾಹುಲ್ ವೆಲ್ಲಾಲ - ಕರ್ನಾಟಕ ಸಂಗೀತ. ನಾಲ್ಕನೇ ವಯಸ್ಸಿನಿಂದ ಹಾಡುಗಾರಿಕೆಯಲ್ಲಿ ತೊಡಗಿದ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬಾಲಪ್ರತಿಭೆ. ಗ್ಲೋಬಲ್ ಚೈಲ್ಡ್ ಪ್ರಾಡಿಜಿ 2020 ಪ್ರಶಸ್ತಿ, ಷಣ್ಮುಖಾನಂದ ಎಂ ಎಸ್ ಸುಬ್ಬಲಕ್ಷ್ಮಿ ಫೆಲೋಶಿಪ್, ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ 2022 ಪ್ರಶಸ್ತಿ, ಬೈಜೂಸ್ ಯಂಗ್ ಜೀನಿಯಸ್ ಪ್ರಶಸ್ತಿ, ಏಳು ರಾಷ್ಟ್ರಗಳಲ್ಲಿ ಕಛೇರಿ ನೀಡಿರುವ ಅತ್ಯಂತ ಕಿರಿಯ ಹಾಡುಗಾರ ದಾಖಲೆ.

*ಧ್ಯಾನೇಶ್ವರಿ ಘಾಡ್ಗೆ - ಮೂರು ವರ್ಷದವಳಾದಾಗಿನಿಂದ ಹಿಂದೂಸ್ತಾನಿ ಸಂಗೀತ ಕಲಿಕೆ. ‘ಸ ರೆ ಗ ಮಾ ಪ ಲಿಟಲ್ ಚಾಮ್ಪ್ಸ್ 2022’ ಎರಡನೇ ಸ್ಥಾನ, ಸುಪ್ರಸಿದ್ಧ ಆಶಾ ಬೋನ್ಸ್ಲೆ ಅವರು ಸ್ಥಾಪಿಸಿರುವ ಸ್ವರ ಆಶಾ ಪ್ರಶಸ್ತಿ.

*ಛೋಟು ಖಾನ್ - ರಾಜಸ್ಥಾನದ ಪುಟ್ಟ ಕುಂದ ಹಳ್ಳಿಯ ಛೋಟು ಖಾನ್ ಮಾಂಗಾನಿಯಾರ್ ಸಂಗೀತದ ಬಾಲ ಪ್ರತಿಭೆ. ನಾಲ್ಕನೇ ವರ್ಷದಿಂದ ವೇದಿಕೆಗಳಲ್ಲಿ ಹಾಡುತ್ತಿದ್ದಾನೆ.

*ರೋಹನ್ ದಾಸ್ - ಸೂಪರ್ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ದೇಶವನ್ನೇ ದಿಗ್ಭ್ರಮೆಗೊಳಿಸಿದ ಪ್ರತಿಭೆ. ಆಗಲೇ ಬೆಂಗಾಲಿ ಚಲನಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿ ಜನಪ್ರಿಯ. ವೇದಿಕೆ ಕಾರ್ಯಕ್ರಮಗಳಿಗೂ ಹೆಸರುವಾಸಿ.

ರಾಹುಲ್ ವೆಲ್ಲಾಲ
ರಾಹುಲ್ ವೆಲ್ಲಾಲ

ಭೂಮಿಜಾ ಪ್ರಸ್ತುತಪಡಿಸುವ ‘ಭವಿಷ್ಯದ ಹಾಡುಗಾರರು’ 

ದಿನಾಂಕ: ಭಾನುವಾರ 17 ಸೆಪ್ಟೆಂಬರ್ 2023

ಸಮಯ: ಸಂಜೆ 7 ಗಂಟೆಗೆ

ಸ್ಥಳ: ಎಂಎಲ್‌ಆರ್ ಕನ್ವೆನ್ಷನ್ ಸೆಂಟರ್ ಜೆ.ಪಿ. ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT