ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿತಾರ್ ನನ್ನ ಜೀವನದ ಅವಿಭಾಜ್ಯ ಅಂಗ’

Last Updated 21 ಜೂನ್ 2018, 20:13 IST
ಅಕ್ಷರ ಗಾತ್ರ

* ಸಿತಾರ್ ನಂಟು ಬೆಳೆದದ್ದು ಹೇಗೆ
ಆಗ ನನಗೆ ಸುಮಾರು 12 ವರ್ಷ. ರಾಜಾಜಿನಗರದ ರಾಮಮಂದಿರದಲ್ಲಿ ಸಿತಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋದರ ಮಾವ ಅಶ್ವತ್ಥ್ ನಾರಾಯಣ ರಾವ್ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ಸಿತಾರ್ ನುಡಿಸಾಣಿಕೆ, ಅದರ ಸ್ವರ ಆಲಿಸಿದ್ದು ಅದೇ ಮೊದಲು. ಅಲ್ಲಿಯವರೆಗೆ ಸಿತಾರ್ ಬಗ್ಗೆ ಗೊತ್ತೇ ಇರಲಿಲ್ಲ.

ಸಿತಾರ್ ನುಡಿಸಾಣಿಕೆ ನನಗೆ ತುಂಬಾ ಇಷ್ಟವಾಯಿತು. ಕಾಕತಾಳೀಯವೆಂಬಂತೆ ನನ್ನ ಸೋದರ ಮಾವ ಇದ್ದಕ್ಕಿದ್ದಂತೆ ಬಂದುಸಿತಾರ್ ಕಲಿಯುತ್ತೀಯಾ ಎಂದರು. ನಾನು ಹು ಎಂದೆ. ನನ್ನ ಆಸಕ್ತಿಗೆ ತಕ್ಕಂತೆ ನಾದಶ್ರೀ ಎನ್.ವಿ.ಗೋಪಿನಾಥ್ ಅವರು ಗುರುಗಳಾಗಿ ಸಿಕ್ಕರು. ಸಿತಾರ್‌ನ ಬಗ್ಗೆ ಸಂಪೂರ್ಣವಾಗಿ ಅವರು ತಿಳಿಸಿಕೊಟ್ಟರು.ಈ ಕ್ಷೇತ್ರದಲ್ಲಿ ಕಲಿಯುವುದು ಇನ್ನೂ ಸಾಕಷ್ಟಿದೆ. ಹೀಗಾಗಿಯೇ, ಪಂಡಿತ್ ಅರವಿಂದ್ ಪಾರಿಕ್ ಅವರ ಬಳಿ ಈಗಲೂ ಕಲಿಯುತ್ತಿದ್ದೇನೆ.

* ಸಿತಾರ್ ಕಲಿಕೆಯ ಪ್ರಾರಂಭದ ದಿನಗಳು ಹೇಗಿದ್ದವು?
ನನ್ನ ಗುರುಗಳು ನನಗೆ ಹೆಚ್ಚು ಆತ್ಮೀಯವಾಗಿದ್ದರು. ಪ್ರತಿ ತರಗತಿಯನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಅವರೂ ಮಿಸ್‌ ಮಾಡುತ್ತಿರಲಿಲ್ಲ. ಅಮ್ಮ ಸಹ ಕೈ ಹಿಡಿದು ಸಿತಾರ್ ನುಡಿಸುವುದನ್ನು ಕಲಿಸಿದ್ದರು.ಹೀಗಾಗಿ, ನನಗೆ ಹೆಚ್ಚು ಕಷ್ಟವಾಗಲಿಲ್ಲ.

* ನಗರದಲ್ಲಿ ಸಿತಾರ್ ಕಲಿಕೆಯ ಒಲವು ಹೇಗಿದೆ?
ನಮ್ಮ ಕಾಲಕ್ಕೆ ಹೋಲಿಕೆ ಮಾಡಿದರೆ ನಗರದಲ್ಲಿ ಸಿತಾರ್ ಕಲಿಕೆಯ ಒಲವು ಈಗ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಿಂದ ಸಿತಾರ್‌ಗೆ ಈಚೆಗೆ ಪ್ರಾಮುಖ್ಯತೆ ಸಿಕ್ಕಿದೆ. ಸಿತಾರ್ ಕಛೇರಿಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದಾರೆ. ಸಿತಾರ್ ಕಲಿಗೆಯುವಂತೆ ಮಕ್ಕಳನ್ನು ಪೋಷಕರು ಪ್ರೋತ್ಸಾಹಿಸುತ್ತಿದ್ದಾರೆ.

ಹಿಂದೆ ಸಿತಾರ್ ನುಡಿಸುವುದನ್ನು ಹೇಳಿಕೊಡುವವರ ಸಂಖ್ಯೆ ನಗರದಲ್ಲಿ ಕಡಿಮೆ ಇತ್ತು. ಈಗ ಆ ಕಾಲ ಬದಲಾಗಿದ್ದು, ದೇಶದ ಎಲ್ಲೆಡೆಯ ಸಿತಾರ್ ವಾದಕರು ನಗರಕ್ಕೆ ಬಂದು ವಾಸವಿದ್ದು ಸಿತಾರ್ ಹೇಳಿಕೊಡುತ್ತಿದ್ದಾರೆ. ಹೀಗಾಗಿ,ಕಲಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ನಮ್ಮ ಕಾಲದಲ್ಲಿ ಅವಕಾಶ ಇರಲಿಲ್ಲ. ಈಗ ಹೆಚ್ಚೆಚ್ಚು ಅವಕಾಶಗಳಿವೆ.

* ನಿಮ್ಮ ಪ್ರಕಾರ ಸಿತಾರ್ ಎಂದರೆ?
ಸಿತಾರ್ ನನ್ನ ಜೀವನದ ಅವಿಭಾಜ್ಯ ಅಂಗ. ಮಗ್ಗಿ ಕಲಿಯುವ ಹಂತದಲ್ಲಿ ಸಿತಾರ್ ಕಲಿಕೆ ಆರಂಬಿಸಿದೆ. ಅದಿಲ್ಲದ ಜೀವನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರೊಟ್ಟಿಗೆ ಬೆಳೆದು ಬಂದಿದ್ದೇನೆ. ವಿವಾಹದ ಸಂದರ್ಭದಲ್ಲಿ ಸಿತಾರ್‌ನಿಂದ ಸ್ವಲ್ಪ ದೂರ ಉಳಿಯಬೇಕಾಗಿತ್ತು.

* ಸಿತಾರ್‌ನಲ್ಲಿ ಹೊಸ ಪ್ರಯೋಗಗಳೇನು?
ಸಿತಾರ್‌ ಅನ್ನು ಹಿಂದೆ ಸೋರೆಕಾಯಿ ಬುರಡೆಯಿಂದ ಮಾಡಲಾಗುತ್ತಿತ್ತು. ಈಗ ಅದನ್ನು ಮರದಿಂದ ತಯಾರಿಸಲಾಗುತ್ತಿದೆ. ಅದಕ್ಕೆ ಜಿಟಾರ್ ಎಂದು ಕರೆಯುವುದುಂಟು. ಸಿತಾರ್‌ ಕ್ಷೇತ್ರದ ದೊಡ್ಡ ಸಾಧಕರು ಇದನ್ನು ಫ್ಯೂಷನ್‌ ಕಾರ್ಯಕ್ರಮಗಳಲ್ಲಿ ಬಳಸುತ್ತಾರೆ.

* ಸಿತಾರ್‌ನಲ್ಲಿ ಜ್ಯೋತಿ ಶ್ಯಾಮ್‌ ಅವರ ವಿಭಿನ್ನತೆ, ಇಷ್ಟದ ವಾದಕರು?
ಸಿತಾರ್ ವಾದಕರೆಲ್ಲರೂ ಒಂದೊಂದು ವಿಷಯದಲ್ಲಿ ತಮ್ಮ ತನವನ್ನು ಕಾಯ್ದುಕೊಂಡಿದ್ದಾರೆ. ಅದೇ ರೀತಿ ನಾನು, ಗಾಯನಕ್ಕೆ ಹೆಚ್ಚು ಸನಿಹವಾದ ಹಾಗೂ ಆತ್ಮೀಯವಾದ ರೀತಿಯಲ್ಲಿ ಸಿತಾರ್ ನುಡಿಸುತ್ತೇನೆ. ಇದು ನನ್ನ ಶೈಲಿ. ನಿಖಿಲ್ ಬ್ಯಾನರ್ಜಿ, ವಿಲಾಯತ್ ಖಾನ್, ಎನ್.ವಿ.ಗೋಪಿನಾಥ್, ಅರವಿಂದ್ ಪಾರಿಕ್, ಶಾಹೀದ್ ಫರ್ವೇಜ್ ನನ್ನ ನೆಚ್ಚಿನ ಸಿತಾರ್ ವಾದಕರು.

* ಸಿತಾರ್ ಯಾವ ರೀತಿ ಭಿನ್ನವಾದದ್ದು?
ಸಿತಾರ್ ಹಿಡಿದುಕೊಳ್ಳುವ ಶೈಲಿಯೇ ವಿಭಿನ್ನವಾದದ್ದು. ನೆಲದ ಮೇಲೆ ಕುಳಿತುಕೊಂಡು ಪಾದದ ಮೇಲೆ ಸಿತಾರ್ ಇಟ್ಟು, ಎಡಗೈ ಹಾಗೂ ಬಲಗೈ ಮೂಲಕ ಸಿತಾರ್ ನುಡಿಸಬೇಕಾಗುತ್ತದೆ. ಒಂದೇ ಮಾದರಿಯಲ್ಲಿ ಇದನ್ನು ನುಡಿಸಬೇಕು. ಹೀಗಾಗಿ, ಕಲಿಯುವುದು ಹಾಗೂ ಕಲಿಸುವುದು ನನ್ನ ಪ್ರಕಾರ ಕಷ್ಟ. ಕಲಿತರೆ ತುಂಬಾನೇ ಇಷ್ಟ.

* ‘ಸ್ವರ ಸುರಭಿ’: ವಿಶೇಷತೆ ಏನು?

ಹತ್ತಾರು ವರ್ಷಗಳಿಂದ ಆಸಕ್ತರಿಗೆ ಸಿತಾರ್ ಹೇಳಿಕೊಡುತ್ತಿದ್ದೇನೆ. ಇದಕ್ಕೆ ಸ್ವರ ಸುರಭಿ ಎಂದು ಹೆಸರಿಟ್ಟುಕೊಂಡಿದ್ದೇನೆ. ಮಾವ ವಾಸುದೇವ್ ರಾವ್ ಅವರ ನೆನಪಿಗಾಗಿ ‘ವಾಸುದೇವ್ ರಾವ್ ಸ್ವರ ಸುರಭಿ’ ಕಾರ್ಯಕ್ರಮವನ್ನು 10 ವರ್ಷಗಳ ಹಿಂದೆ ಪ್ರಾರಂಭಿಸಿದೆ. ಅದನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದೇನೆ. ಉದಯೋನ್ಮುಖ ಹಾಗೂ ಖ್ಯಾತ ಸಿತಾರ್ ವಾದಕರಿಗೆ ಈ ಕಾರ್ಯಕ್ರಮದಲ್ಲಿ ವೇದಿಕೆ ಕಲ್ಪಿಸಿಕೊಡುತ್ತಿದ್ದೇನೆ.

ಈ ಬಾರಿ ಸ್ವರ ಸುರಭಿ ಕಾರ್ಯಕ್ರಮವನ್ನು ಗವೀಪುರದ ಉದಯಭಾನು ಕಲಾಸಂಘದಲ್ಲಿ ಇದೇ24ರಂದು ಸಂಜೆ 5ಕ್ಕೆ ಸಾರ್ವಜನಿಕವಾಗಿ ಆಯೋಜಿಸಿದ್ದೇನೆ. ವಿದ್ಯಾರ್ಥಿಗಳನ್ನು ಮೂರು ತಂಡಗಳಾಗಿ ವಿಭಜಿಸಿ, ಅವರಿಂದ ಸಮೂಹ ಸಿತಾರ್ ಕಛೇರಿಯನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಅವರ ನುಡಿಸಾಣಿಕೆಯ ಪ್ರತಿಭೆಯ ಅನಾವರಣಕ್ಕೂ ಇದೇ ವೇದಿಕೆಯಾಗಲಿದೆ. ಗುಂಡಾ ಶಾಸ್ತ್ರಿ, ಭಾರತಿ ಪ್ರತಾಪ್ ಹಾಗೂ ಅರುಣ್ ಎಂಬುವರನ್ನು ಈ ಬಾರಿ ಗೌರವಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT